Wednesday, August 19, 2009

ಹೈದರಾಬಾದ್

ತಂತ್ರಜ್ಞಾನ ನಗರಿ ಹೈದರಾಬಾದಿಗೆ ಹೋಗುವ ಅವಕಾಶ ಕಳೆದ ವಾರ ಒದಗಿ ಬಂದಿತ್ತು. ಗೆಳೆಯರ ವಾರದಲ್ಲಿ (Friendship week) ನನ್ನ ಆಪ್ತ ಮಿತ್ರರನ್ನು ಭೇಟಿಯಾಗುವುದು ಮುಖ್ಯ ಉದ್ದೇಶ. ಹಾಗೆಯೇ ಹೈದರಾಬಾದು ಊರು ಸುತ್ತುವ ಸಣ್ಣ ಬಯಕೆ ಕೂಡ. ಶುಕ್ರವಾರ ದಿನಾಂಕ ೭ ರಂದು ರಾತ್ರಿ ಬೆಂಗಳೂರು-ಕಾಚಿಗುಡ ಎಕ್ಸಪ್ರೆಸ್ ರೈಲಿನಲ್ಲಿ ಯಶವಂತಪುರದಿಂದ ಹೊರಟಾಗ ರಾತ್ರಿ ೯.೩೦. ಸುಮಾರು ೫ ವರ್ಷಗಳ ನಂತರ ಗೆಳತಿಯ ಭೇಟಿಯಾಗುವ ವಿಚಾರ ಮನಸ್ಸಿಗೆ ಹರುಷ, ತಳಮಳ. ಕಾಲೇಜು ದಿನಗಳನ್ನು ಮೆಲಕು ಹಾಕುತ್ತ ಎಷ್ಟೋ ಹೊತ್ತಿನ ನಂತರ ನಿದ್ದೆಗೆ ಜಾರಿದ್ದೆ.

ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ವಿಳಂಬವಾಗಿ ಹೈದರಾಬಾದು ತಲುಪಿದೆ. ಗೆಳತಿಯ ಮನೆಯಲ್ಲಿ ಲಘು ಉಪಹಾರ, ಸಾಕಷ್ಟು ಮಾತು ಕತೆಯ ನಂತರ ಹೈದರಾಬಾದು ಸುತ್ತಲು ಹೊರಟೆವು. ಹೆಚ್ಚೇನು ವಿಶೇಷತೆ ಇಲ್ಲದ ನಗರದ ಅರ್ಧ ಭಾಗ ಸಾಫ್ಟವೇರ್ ಕಂಪೆನಿಗಳಿಂದ ತುಂಬಿದೆ. "ಬಿರಿಯಾನಿ-ಹೌಸ್" ರುಚಿಕಟ್ಟಾದ ಹೈದರಾಬಾದ್ ಬಿರಿಯಾನಿಗೆ ಫೇಮಸ್, ಪುಲ್ಲರೆಡ್ಡಿ ಅಂಗಡಿ ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯಗಳಿಗೆ ಪ್ರಸಿದ್ಧ. ಇದು ಬಿಟ್ಟರೆ ವರಟು ಜನ, ರಸ್ತೆ ಸಂಚಾರದ ನಿಯಮಗಳು ತಿಳಿದಿದ್ದರೂ ಅನುಸರಿಸುವ ವ್ಯವಧಾನ ಯಾರಿಗೂ ಇದ್ದ ಹಾಗೆ ಕಾಣುವುದಿಲ್ಲ. ಎಲ್ಲೆಂದರಲ್ಲಿ ಕಾಣಿಸುವುದು ಚಿತ್ರಮಂದಿರಗಳು. ಎಲ್ಲವೂ ಭರ್ತಿ..!


ನಗರದ ಮಧ್ಯ ಭಾಗದಲ್ಲಿರುವ ಮಹಾವಿಷ್ಟುವಿನ "ಬಿರ್ಲಾ ಮಂದಿರ" ಸುಂದರವಾದ ದೇವಾಲಯ. ಸಂಪೂರ್ಣ ಮಾರ್ಬಲ್ ನಿಂದ ಕಟ್ಟಿದ ದೇವಾಲಯದಲ್ಲಿ ಕ್ಯಾಮೆರಾ ಮತ್ತು ಮೊಬೈಲ್ ಫೋನುಗಳು ನಿಷಿದ್ಧ.


ಜನರಲ್ ಬಜಾರು ಹೆಣ್ಣು ಮಕ್ಕಳಿಗೆ ಪ್ರಿಯವಾದ ಜಾಗ. ಇಲ್ಲಿ ಅತಿ ಕಡಿಮೆ ಬೆಲೆಗೆ ಗುಣಮಟ್ಟದ ಡ್ರೆಸ್ ಮೆಟೀರಿಯಲ್ ಸಿಗುತ್ತದೆ.


ಚಾರ್-ಮಿನಾರ್ ಒಂದು ಅದ್ಭುತ ಶಿಲ್ಪಕಲೆ. ಇಸ್ಲಾಂ ಶೈಲಿಯ ಸುಂದರ ಕೆತ್ತನೆಗಳು, ೪ ಜನ ಪ್ರವಾದಿಗಳ ನೆನಪಿಗೋಸ್ಕರ ಕಟ್ಟಿದ ೪ ಕಂಬಗಳು ವಿಶಿಷ್ಟತೆಯನ್ನು ಸಾರುತ್ತವೆ.


ಮೊಹಮ್ಮದ್ ಕುತುಬ್ ಷಾ ಎಂಬುವನು ೧೫೯೧ ನೇ ಇಸವಿಯಲ್ಲಿ ಕಟ್ಟಿದ ಚಾರ್-ಮಿನಾರ್ ನ ಒಂದೊಂದು ಕಂಬಗಳು ಸುಮಾರು ೪೮.೭ ಮೀ ಎತ್ತರ ಇದೆ.


ಚಾರ್-ಮಿನಾರಿನ ಸುತ್ತಲು ಇರುವ ಬೀದಿಗಳು ಹೈದರಾಬಾದ್ ಮುತ್ತಿಗೆ ಪ್ರಸಿದ್ಧ. ಅತಿ ಸುಂದರ ಮುತ್ತಿನ ಹಾರ, ಕಿವಿಯೋಲೆ ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ. ೧೫೦೦ ರೂಪಾಯಿ ಹಾರ ಚೌಕಾಸಿ ನಂತರ ೩೦೦ ಕ್ಕೆ ದೊರಕಿತು.

ಹೈದರಾಬಾದಿನ ಪ್ರಮುಖ ಆಕರ್ಷಣೆ "ರಾಮೋಜಿ ಫಿಲಂ ಸಿಟಿ". ನಗರದಿಂದ ೩೦ ಕಿ. ಮೀ ದೂರ ವಿಶಾಲವಾದ ೨೦೦೦ ಎಕರೆ ಪ್ರದೇಶದಲ್ಲಿ ಇರುವ ರಾಮೋಜಿ ಫಿಲಂ ಸಿಟಿಯು ಊಹೆಗೂ ನಿಲುಕದ ವಿಶಿಷ್ಟತೆಗಳ ಪ್ರಪಂಚ. ರಾಮೋಜಿ ರಾವ್ ಎಂಬ ದೂರದೃಷ್ಟಿಯ, ಪಕ್ಕಾ ವ್ಯವಹಾರಸ್ಥನ ಬುದ್ಧಿಯಿಂದ ಅರಳಿದ ಕಲಾಗಾರ. ಚಿತ್ರರಂಗಕ್ಕೆ ಏನೇನು ಬೇಕೋ ಅದೆಲ್ಲ ಇಲ್ಲಿ ಲಭ್ಯ. ಅರಮನೆಯಿಂದ ಹಿಡಿದು ಗುಡಿಸಲು ತನಕ , ವಿಮಾನ, ರೈಲ್ವೆ ನಿಲ್ದಾಣ, ಮೈಸೂರು ಬೃಂದಾವನ, ಜೈಲು, ವಿವಿಧ ತಂತ್ರಜ್ಞಾನ ಪಂಚತಾರಾ ಹೋಟೆಲು, ವಸತಿ ಗೃಹ, ಮಕ್ಕಳ ಆಟದ ಮೈದಾನ ಎಲ್ಲವೂ ಒಂದೇ ಸ್ಥಳದಲ್ಲಿ ಲಭ್ಯ.
ಮುಖದ್ವಾರ
ಕೃತಕ ಅರಮನೆಕಾರಂಜಿ ಮಧ್ಯೆ ನೃತ್ಯ ಮಾಡುವ ಹುಡುಗಿ


ಸಂಚಾರಕ್ಕೆ, ಫಿಲಂ ಸಿಟಿಯ ದರ್ಶನಕ್ಕೆ ವಿಶೇಷವಾಗಿ ನಿರ್ಮಿಸಿದ ಬಸ್ಸು.

ಸುಂದರ ಶ್ರೀಮಂತಿಕೆಯ ನಗರದ ಬೀದಿ.
ಇಲ್ಲಿರುವ ಎಲ್ಲ ಮನೆಗಳೂ ಕೃತಕ, ಪ್ಯಾರಿಸ್ ಆಫ್ ಪ್ಲಾಸ್ಟರ್ ನಿಂದ ನಿರ್ಮಿಸಿದ ಮನೆಗಳು.
ಈ-ಟಿವಿ ಕಾರ್ಯವಾಹಿನಿಯ ಕೇಂದ್ರ ಕಚೇರಿ, ಇದು ನಿಜವಾದದ್ದು..!!ರಾಮೋಜಿ ರಾವ್ ಬಳಸುತಿದ್ದ ಕಾರು

ಗಾರ್ದನ್ನು, ಇಲ್ಲಿನ ಹುಲ್ಲು, ಗಿಡಗಳು ಕೃತಕವಲ್ಲ.. :-)

ದರ್ಪಣ ಸುಂದರಿಫಿಲಂ ಸಿಟಿಯನ್ನು ಪೂರ್ತಿ ನೋಡಲು ೨ ದಿನ ಬೇಕು. ಇಲ್ಲಿನ ಪ್ರಮುಖವಾದವುಗಳನ್ನು ನೋಡಿ, ವಾಪಾಸು ನಗರಕ್ಕೆ ಬಂದೆವು.

ಹುಸ್ಸೇನ್ ಸಾಗರ ಕೆರೆ. ಕೃತಕವಾಗಿ ನಿರ್ಮಿಸಿದ ಈ ಕೆರೆಯ ಮಧ್ಯದಲ್ಲಿ ಬುದ್ಧನ ವಿಗ್ರಹ ಇದೆ. ಇಲ್ಲಿ ಬೋಟಿಂಗ್ ವ್ಯವಸ್ಥೆಯೂ ಇದೆ. ಕೆರೆಯ ಸುತ್ತಲೂ ಇರುವ ಸುಂದರವಾದ ಉದ್ಯಾನವನವನ ಸಂಜೆಯ ವೇಳೆ ಕಳೆಯಲು ಸೂಕ್ತವಾದ ಜಾಗ.

ಅನೇಕ ವರ್ಷದ ನಂತರ ಮತ್ತೆ ಸಿಕ್ಕಿದ ನಾವು ಮನಸ್ಸು ತೃಪ್ತಿಯಾಗುವಷ್ಟು ಹರಟೆ ಹೊಡೆದೆವು. ಹಳೆಯ ನೆನಪುಗಳನ್ನು ಒಂದೊಂದಾಗಿ ಕೆದಕುತ್ತ, ಸುಂದರ ಸಂಜೆಯನ್ನು ಕಳೆದೆವು.