Thursday, April 30, 2009

ನಂದಿ ಬೆಟ್ಟ

೦೮-ಸಪ್ಟೆಂಬರ್-೨೦೦೭, ಬೆಂಗಳೂರಿಗರಿಗೆ ತುಂಬಾ ಹತ್ತಿರದ, ಹಾಗೆ ಸುಮ್ಮನೆ ಸಂಜೆಯನ್ನು ಕಳೆಯಲು ಸೂಕ್ತವಾದ, ಪ್ರೇಮಿಗಳ ಸ್ವರ್ಗ ನಂದಿ ಬೆಟ್ಟ ದರ್ಶನಕ್ಕೆ ನಾವು ತಯಾರಾಗಿದ್ದೆವು. ಅಂದು ಶನಿವಾರ ಅರವಿಂದ ನಂದಿ ಬೆಟ್ಟಕ್ಕೆ ಹೋಗೋಣ ಅಂದಾಗ ಮಳೆಯ ನಿರೀಕ್ಷೆಯ ನಡುವೆಯೂ ನಾನು, ಕಿರಣ್, ಸುಹಾಸ್ ಹೊರಡಲು ತಯಾರಾದೆವು. ೨ ಬೈಕ್ ನಲ್ಲಿ, ವಿಜಯನಗರದಿಂದ ಹೊರಟಾಗ ೩ ಗಂಟೆ. ಹೆಬ್ಬಾಳ ದಾಟಿ, ದೇವನಹಳ್ಳಿ ಕ್ರಾಸ್ ಬಳಿ ಎಳನೀರು ಕುಡಿದು ಬೈಕನ್ನ ನಂದಿ ಬೆಟ್ಟದತ್ತ ತಿರುಗಿಸಿದೆವು.


ಇಲ್ಲಿನ ಬೆಟ್ಟದ ರಸ್ತೆಯಲ್ಲಿ ಬೈಕು ಓಡಿಸುವುದು ಒಂದು ಅದ್ಭುತ ಅನುಭವ. ತುಂತುರು ಮಳೆಯಿಂದ ವಾತಾವರಣ ಕೂಡ ತಂಪಾಗಿತ್ತು. ನಾನು "ಶಿರಕವಚ"ವನ್ನು () ತೆಗೆದು ತಂಪಾದ ಗಾಳಿ, ಸುಂದರ ದೃಶ್ಯಗಳು, ಅಂಕು-ಡೊಂಕಾದ ರಸ್ತೆಯಲ್ಲಿ ಬೈಕ್ ಓಡಿಸುವ ಮಜವನ್ನು ಅನುಭವಿಸುತ್ತಿದ್ದೆ.


ಮಾರ್ಗ ಮಧ್ಯೆ ಎದುರಾಗುವ ಸುಂದರ ಸೇವಂತಿಗೆ ಹೂದೋಟ, ದ್ರಾಕ್ಷಿ, ದಾಳಿಂಬೆ ಹಣ್ಣಿನ ತೋಟಗಳು ಮನಸೂರೆಗೊಂಡವು. ಚಂದನೆಯ ಸೇವಂತಿಗೆ ತೋಟವಂತೂ ನಮ್ಮೆಲ್ಲರನ್ನು ಬಹಳವಾಗಿ ಆಕರ್ಷಿಸಿತ್ತು. ನಾವೆಲ್ಲ ಬೇರೆಯದೇ ಲೋಕದಲ್ಲಿದ್ದ ಹಾಗೆ ಅನ್ನಿಸಿತ್ತು. ತೋಟದಲ್ಲಿ ನಿಂತು ಫೋಟೋ ತೆಗೆಸಿಕೊಂಡು, ದ್ರಾಕ್ಷಿ ತೋಟದಲ್ಲಿ ತಾಜಾ ಹಣ್ಣುಗಳನ್ನು ತಿಂದೆವು.ನಂದಿ ಬೆಟ್ಟ ಸದಾ ಕಾಲ ಪ್ರವಾಸಿಗರಿಂದ ತುಂಬಿರುತ್ತದೆ. ಸರ್ವ ಋತುಗಳೂ ಇಲ್ಲಿಗೆ ಭೇಟಿ ನೀಡಲು ಯೋಗ್ಯ. ಸಮುದ್ರ ಮಟ್ಟದಿಂದ ಸುಮಾರು ೧೫೦೦ ಮೀ ಎತ್ತರದಲ್ಲಿರುವ ನಂದಿ ಬೆಟ್ಟಕ್ಕೆ ನಂದಿ ದುರ್ಗ ಅಂತಲೂ ಹೆಸರಿದೆ. ಈ ಹೆಸರಿಗೆ ಕಾರಣ ಇಲ್ಲಿ ಬಂಡೆಗಳ ನಡುವೆ ಕಟ್ಟಲಾದ ಕೋಟೆ. ಅರ್ಕಾವತಿ ಮತ್ತು ಪಾಲಾರ್ ನದಿಗಳ ಉಗಮ ಸ್ಥಾನ.ಟಿಪ್ಪ ಸುಲ್ತಾನನು ತನ್ನ ಬೇಸಿಗೆಯ ದಿನಗಳನ್ನು ಕಳೆಯಲು ಇಲ್ಲಿಗೆ ಬರುತ್ತಿದ್ದ ಎಂದು ಹೇಳಲಾಗುತ್ತದೆ. ಟಿಪ್ಪು ಇಲ್ಲಿ ಅರಮನೆ ಮತ್ತು ಕೋಟೆ ಕಟ್ಟಿಸಿದ. ನಂತರ ಬ್ರಿಟಿಷರ ಕಾಲದಲ್ಲಿ ಇಲ್ಲಿ ಉದ್ಯಾನವನ ಮತ್ತು ಬಂಗಲೆಯನ್ನು ಕಟ್ಟಿಸಲಾಯಿತು. ಇಂದು ಇದೇ ಬಂಗಲೆ ಇಂದು ಸರಕಾರದ ವಸತಿ ಗೃಹವಾಗಿದೆ.


ಚೋಳ ಶೈಲಿಯ ಯೋಗ ನಂದೀಶ್ವರ ದೇವಸ್ಥಾನ, ಮಂಟಪ, ನಂದಿ, ನೆಹರು ಬಂಗಲೆ ಟಿಪ್ಪು ಡ್ರಾಪ್ ಇಲ್ಲಿನ ವಿಶೇಷತೆಗಳು.ಟಿಪ್ಪು ಸುಲ್ತಾನನು, ೬೦೦ ಅಡಿ ಎತ್ತರದಲ್ಲಿರುವ ಅಪಾಯ ಕಣಿವೆಯಿಂದ ಸೆರೆಹಿಡಿದ ಸೈನಿಕರನ್ನು ಕೆಳಕ್ಕೆ ತಳ್ಳಿ ಕೊಲ್ಲಿಸುತಿದ್ದ..ಅದಕ್ಕೆ ಟಿಪ್ಪು ಡ್ರಾಪ್ ಅಂತ ಹೆಸರು. ಕರ್ನಾಟಕ ತೋಟಗಾರಿಕೆ ಇಲಾಖೆಯು ಸುಂದರವಾದ ಉದ್ಯಾನವನ ಮತ್ತು ಮಕ್ಕಳ ಆಟದ ಮೈದಾನವನ್ನು ನಿರ್ಮಿಸಿದೆ.


ಟಿಪ್ಪು ಡ್ರಾಪ್ ಬಳಿ ಹೋದಾಗ ಸಂಜೆಯಾಗುತ್ತಲಿತ್ತು. ಮೋಡ ಮುಸುಕಿದ್ದರಿಂದ ಸೂರ್ಯ ಕಣ್ಣುಮುಚ್ಚಾಲೆ ಆಡುತ್ತಲಿದ್ದ. ಅಲ್ಲಿನ ಸುಂದರ ಪರಿಸರ, ದೂರ ದೂರದವರೆಗಿನ ದೃಶ್ಯ, ತಣ್ಣಗಿನ ಗಾಳಿ ಎಲ್ಲವೂ ಹಿತವಾಗಿತ್ತು.. ಬಂಡೆಯ ಮೇಲೆ ಕುಳಿತು ಸೂರ್ಯಾಸ್ತವನ್ನು ವೀಕ್ಷಿಸಿದೆವು. ಅಲ್ಲಿ ಹೊತ್ತು ಕಳೆದಿದ್ದೆ ಗೊತ್ತಾಗಲಿಲ್ಲ.
ಬೆಟ್ಟದ ಮೇಲಿದ್ದ ಹೋಟೆಲಿನಲ್ಲಿ ಕಾಫಿ ಕುಡಿದು, ಉದ್ಯಾನವನವನ್ನು ಒಂದು ರೌಂಡು ಹಾಕಿದೆವು. ಒಲ್ಲದ ಮನಸ್ಸಿಂದ ಬೆಟ್ಟದಿಂದ ಇಳಿದು ಬೆಂಗಳೂರಿನತ್ತ, ಟ್ರಾಫಿಕ್ ಮಧ್ಯೆ ಬೈಕ್ ಓಡಿಸಿದೆ.!

Tuesday, April 28, 2009

ಮಡಿಕೇರಿ ಪ್ರವಾಸ

೩೧ ಡಿಸೆಂಬರ್ ೨೦೦೭ ಇಡೀ ಬೆಂಗಳೂರು ಹೊಸ ವರ್ಷದ ಸ್ವಾಗತಕ್ಕೆ ಸಿದ್ಧವಾಗುತ್ತ ಇತ್ತು. ಮರುದಿನ ನಮ್ಮ ಆಫೀಸ್ ಗೆ ಕೂಡ ರಜ ಘೋಷಿಸಿದ್ದರು. ಸಂಜೆ ಸುಮಾರು ೮ ಗಂಟೆಗೆ ಆನಂದ ಆಫೀಸ್ ನಿಂದ ಫೋನ್ ಮಾಡಿದ್ದ, ಅವನ server ಮ್ಯಾನೇಜರ್ ಹತ್ರ ಹೊಡೆದಾಡಿ ಬೇಗ ಮನೆಗೆ ಬರ್ತೀನಿ, ನೀವು ರೆಡಿ ಇರಿ, ಮೈಸೂರ್ ಗೆ ಹೋಗೋಣ ಅಂತ ಹೇಳಿದ. ನಾನು ಅರವಿಂದನಿಗೆ ಫೋನ್ ಮಾಡಿ ನಮ್ಮ ಮನೆಗೆ ಬರಲು ಹೇಳಿದೆ. ಆನಂದ ಮತ್ತು ಅವನ ಗೆಳೆಯ ಸುಧೀರ ಮನೆಗೆ ಬಂದಾಗ ೧೦ ಗಂಟೆ ಆಗಿತ್ತು. ಎಲ್ಲರು ರೆಡಿ ಆಗಿ, ಬೇಕರಿಯಲ್ಲಿ ಕೇಕು ಖರೀದಿಸಿ, ವಿಜಯನಗರ ಬಿಟ್ಟಾಗ ರಾತ್ರಿ ೧೧ ಗಂಟೆ.

ಅಂದು ಮೈಸೂರು ರಸ್ತೆ ವಾಹನಗಳಿಂದ ತುಂಬಿತ್ತು...ಎಲ್ಲರೂ ಹೊಸ ವರ್ಷದ ಆಚರಣೆಯಲ್ಲಿ ತೇಲುತಿದ್ದರು. ಕಾರುಗಳು ವೇಗದ ಮಿತಿಯನ್ನು ಮೀರಿ ಹೋಗುತ್ತಿದ್ದವು. ರಾಮನಗರದ ಸಮೀಪ ಹೋಗುವಷ್ಟರಲ್ಲಿ ೧೨ ಗಂಟೆ ಆಗಿತ್ತು. ಅಲ್ಲೇ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ, ದೀಪ ಬೆಳಗಿಸಿ, ಕೇಕ್ ಕತ್ತರಿಸಿ, ಅಪ್ಪುಗೆಯ ಹಾರೈಕೆಗಳೊಂದಿಗೆ ಹೊಸವರ್ಷವನ್ನು ಸ್ವಾಗತಿಸಿದೆವು. ಮದ್ದೂರಿನ ಕಾಫೀ-ಡೇ ಗೆ ನುಗ್ಗಿ ಅರವಿಂದನಿಗೆ ಪ್ರಿಯವಾದ ಕೆಪೆಚಿನೋ ಕುಡಿದು, ಬನ್ ತಿಂದು ಮೈಸೂರಿನತ್ತ ಹೊರಟಾಗ ರಾತ್ರಿ ೨.೩೦.


ಮೈಸೂರಿನಲ್ಲಿ ನನ್ನ ಭಾವ-ಗೆಳೆಯ ರಂಗನಾಥ ನಿಗೆ ಫೋನ್ ಮಾಡಿ ಅವನ ಮನೆಗೆ ಬರುತ್ತಿದ್ದೇವೆ ಎಂದು ಹೇಳಿದೆ. ಶ್ರೀರಂಗಪಟ್ಟಣದ ಹತ್ತಿರ ಎದುರಾದ ವೇಗನಿಯಂತ್ರಕ (hump) ಗಮನಿಸದೆ ಆನಂದ ವೇಗವಾಗಿ ಕಾರನ್ನು ಹತ್ತಿಸಿದ...!! ಒಂದು ಸಲ ಭೂಕಂಪ ಆದ ಹಾಗಾಯಿತು..!! ಸಧ್ಯ ಕಾರಿಗೆ ಹೆಚ್ಚೇನು ತೊಂದರೆ ಆಗಿರಲಿಲ್ಲ...! ಮರಳಿ ಬಂದು ಕಾರನ್ನು ಸರ್ವಿಸ್ ಗೆ ಕೊಟ್ಟಾಗಲೇ ಗೊತ್ತಾಗಿದ್ದು..ಅದರ (suspension) ಹೋಗಿತ್ತು...!!!ಮೈಸೂರಿನಲ್ಲಿ ನಮ್ಮ ಪ್ಲಾನ್ ಬದಲಾವಣೆ ಆಯಿತು. ಸೀದಾ ಮಡಿಕೇರಿಗೆ ಹೋಗುವುದೆಂದು ತೀರ್ಮಾನಿಸಿದೇವು. ಆನಂದ ಮಡಿಕೇರಿಯ ರಾಜ-ಸೀಟ್ ನಲ್ಲಿ ಸೂರ್ಯೋದಯವನ್ನು ನೋಡಲೇ ಬೇಕೆಂದು ಹೇಳಿದ...!! ಮೈಸೂರಿನಲ್ಲಿ ಮಡಿಕೇರಿಯ ದಾರಿ ಹುಡುಕುತ್ತ ೫ ರೌಂಡು ಹೊಡೆದು, ಹುಣಸೂರು ರಸ್ತೆಗೆ ಸೇರಿದಾಗ ಬೆಳಗಿನ ಜಾವ ೩.೩೦ ಆಗಿತ್ತು. ನಾನು, ಅರವಿಂದ, ಸುಧೀರ ನಿಧಾನವಾಗಿ ನಿದ್ದೆಗೆ ಜಾರಿದ್ದೆವು.

ಕುಶಾಲನಗರದ ಬಳಿ ಜೋರಾಗಿ ಬೀಸಿದ ಗಾಳಿ, ಮಳೆಗೆ ಮರವೊಂದು ಮುರಿದು, ಸೀದಾ ಕರೆಂಟು ಕಂಬದ ಮೇಲೆಯೇ ಬಿದ್ದಿತ್ತು. ಕರೆಂಟು ಲೈನುಗಳು ರಸ್ತೆಯ ಮೇಲೆ..!! ಎಲ್ಲ ವಾಹನಗಳೂ ಮುಂದೆ ಸಾಗುವ ಧೈರ್ಯವಿಲ್ಲದೆ ನಿಂತಿದ್ದವು..ಸುಮಾರು ದೂರದವರೆಗೂ ಟ್ರಾಫಿಕ್ ಜಾಮ್ ಆಗಿತ್ತು...ನಾವೂ ಸ್ವಲ್ಪ ಹೊತ್ತು ಕಾದೆವು. ಆಗ ಒಂದು ಟ್ರಕ್ ನವನು ತಂತಿಗಳ ಮೇಲೆ ಹತ್ತಿಸಿಕೊಂಡು ಹೋದ....ನಾವೂ ಅವನನ್ನ ಹಿಂಬಾಲಿಸಿ, ಸ್ವಲ್ಪ ರಿಸ್ಕ್ ತಗೊಂಡು ತಂತಿಗಳನ್ನು ಹಾದು ಹೋದೆವು...!! ಮಡಿಕೇರಿಯ ಚುಮು ಚುಮು ಚಳಿಯ ಅನುಭವ ಆಗುತ್ತ ಇತ್ತು...ಕುಶಾಲನಗರ ದಾಟಿದ ನಂತರ ರಸ್ತೆ ಪಕ್ಕದ ಟೀ ಅಂಗಡಿಯಲ್ಲಿ ಬಿಸಿ ಬಿಸಿ ಟೀ ಕುಡಿದು ಚಳಿಯನ್ನು ದೂರ ತಳ್ಳಿ, ಹುರುಪಿನಲ್ಲಿದ್ದ ಆನಂದ ಮತ್ತು ರಂಗನನ್ನು ಕಾರು ಓಡಿಸಲು ಹೇಳಿ ನಾವು ಮತ್ತೆ ನಿದ್ದೆಗೆ ಶರಣು... ಮಡಿಕೇರಿ ರಾಜ-ಸೀಟ್ ಗೆ ತಲುಪಿದಾಗ ಸಮಯ ೫.೪೫.


ತಂಪಾದ ಗಾಳಿ, ಚುಮು ಚುಮು ಚಳಿ, ಮಡಿಕೇರಿಯ ನಿಸರ್ಗ ಸೌಂದರ್ಯ...ನಿಧಾನಕ್ಕೆ ಉದಯಿಸುತಿದ್ದ ಸೂರ್ಯ.. ಮನಸ್ಸಿಗೆ ಹಿತವಾಗಿತ್ತು...ಪ್ರಯಾಣದ ಆಯಾಸ ಗಮನಕ್ಕೆ ಬರಲೇ ಇಲ್ಲ.


ಅಲ್ಲಿಯವರೆಗೂ ಒಂದೂ ಶಬ್ದಕೂಡ ಆಡದ ಸುಧೀರ, ಮಡಿಕೇರಿಯ ಇಬ್ಬನಿ, ಸುಂದರ ದೃಶ್ಯಗಳನ್ನು ನೋಡಿ ಜಿಗಿದಾಡಿಬಿಟ್ಟ. ಎಲ್ಲಿಂದಲೋ ಹೊಸ ಹುರುಪು ಬಂದಿತ್ತು ಅವನಿಗೆ...ಒಳ್ಳೊಳ್ಳೆ ಜೋಕ್ ಮಾಡುತ್ತ..ಸಕತ್ ಡೈಲಾಗ್ ಹೊಡೆಯುತ್ತ, ನಮ್ಮೆಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಲು ಪ್ರಾರಂಭಿಸಿದ...ಅವನ ಟ್ಯಾಲೆಂಟ್ ಗೊತ್ತಾಗಿದ್ದೆ ಆವಾಗ..!


ತುಂಬಾ ಮೋಡ ಕವಿದಿದ್ದರಿಂದ ಚಂದದ ಸೂರ್ಯೋದಯದ ಭಾಗ್ಯ ನಮಗೆ ಆಗಲಿಲ್ಲ..! ಸೂರ್ಯ ಮರೆ ಮರೆಯಾಗಿ ಕಾಣಿಸುತ್ತಿದ್ದ..

ರಾಜ-ಸೀಟ್ ಬಗ್ಗೆ : ಕೊಡಗಿನ ಮಹಾರಾಜರು ತಮ್ಮ ಪರಿವಾರದವರೊಂದಿಗೆ ಇಲ್ಲಿಗೆ ಸಂಜೆಯನ್ನು ಕಳೆಯಲು ಬರುತಿದ್ದರು ಎಂಬ ಪ್ರತೀತಿ ಇದೆ. ಹಸಿರಿನ ಉದ್ಯಾನವನ, ಸುತ್ತಲಿನ ಪರ್ವತ ಶ್ರೇಣಿಗಳ ದೃಶ್ಯ, ವಿಶಾಲವಾದ ಹಸಿರು ಗದ್ದೆಗಳು, ಕಾಫಿ ತೋಟ ನೋಡುಗರನ್ನ ತಕ್ಷಣಕ್ಕೆ ಇಷ್ಟವಾಗುವ ಹಾಗೆ ಮಾಡುತ್ತವೆ. ಹಿತವಾದ ತಂಗಾಳಿ, ಮನಮೋಹಕ ಸೂರ್ಯೋದಯದ ದೃಶ್ಯ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಮನೆಮೂಡುತ್ತದೆ.

ಮಡಿಕೇರಿಯಲ್ಲಿ ಒಂದು ರೂಮು ಮಾಡಿ ೧೦ ಗಂಟೆಯ ತನಕ ಗಡದ್ದಾಗಿ ನಿದ್ದೆ ಮಾಡಿದೆವು. ಫೋನು ಬಡಿದುಕೊಳ್ಳ ಲಾರಂಭಿಸಿದಾಗಲೇ ಎಚ್ಚರ ಆಗಿದ್ದು. ಸ್ನಾನ ಕರ್ಮಾದಿಗಳನ್ನು ಮುಗಿಸಿ, ಹೊಸ ವರ್ಷದ ದಿನ "ಓಂಕಾರೇಶ್ವರ ದೇವಸ್ಥಾನಕ್ಕೆ" ಬಂದು ಶಿವನ ದರ್ಶನ ಮಾಡಿದೆವು.

ಓಂಕಾರೇಶ್ವರ ದೇವಸ್ಥಾನದ ಬಗ್ಗೆ: ಮಡಿಕೇರಿಯ ಹೃದಯ ಭಾಗದಲ್ಲಿರುವ ಈ ದೇವಸ್ಥಾನವನ್ನ ೧೮೨೦ ರಲ್ಲಿ ರಾಜ 'ಲಿಂಗರಾಜೇಂದ್ರ' ರಿಂದ ಕಟ್ಟಲ್ಪಟ್ಟಿದ್ದು. ತನ್ನ ರಾಜಕೀಯ ಹಿತಕ್ಕೋಸ್ಕರ ಬ್ರಾಹ್ಮಣ ಪುರೋಹಿತರೋಬ್ಬರನ್ನ ರಾಜನು ಕೊಲ್ಲಿಸಿದ. ಆ ಬ್ರಾಹ್ಮಣ ಮರಣದ ನಂತರ "ಬ್ರಹ್ಮರಾಕ್ಷಸ" ಆಗಿ ರಾಜನನ್ನು ಕಾಡಲು ಶುರುಮಾಡಿದ. ಇದರಿಂದ ಬೇಸತ್ತ ರಾಜನು ಕಾಶಿಯಿಂದ ಶಿವಲಿಂಗವನ್ನು ತಂದು ಇಲ್ಲಿ ಪ್ರತಿಷ್ಟಾಪಿಸಿ ದೇವಸ್ಥಾನವನ್ನು ಕಟ್ಟಿಸಿದ ನಂತರ ರಾಕ್ಷಸನ ಸಂಹಾರವಾಗಿ, ಅವನ ಕಾಟದಿಂದ ರಾಜನು ಮುಕ್ತನಾದನು ಎನ್ನುವ ಕಥೆ ಇದೆ.


ದೇವಸ್ಥಾವವು ಇಸ್ಲಾಮಿಕ್ ಮತ್ತು ಕೇರಳ ಮಾದರಿಯಲ್ಲಿ ಕಟ್ಟಲ್ಪಟ್ಟಿದ್ದು, ಕಿಟಕಿಯ ಸರಳುಗಳನ್ನ ಪಂಚಲೋಹದಿಂದ ಮಾಡಲಾಗಿದೆ.
ಮುಂಭಾಗದಲ್ಲಿ ವಿಶಾಲವಾದ ಪುಷ್ಕರಣಿ ಇದ್ದು, ಮಧ್ಯದಲ್ಲಿ ಮಂಟಪ ಇದೆ. ಗೋಡೆಗಳಲ್ಲಿ ಸುಂದರವಾದ ಚಿತ್ರಗಳನ್ನು ಬಿಡಿಸಲಾಗಿದ್ದು, ಇವು ಇತಿಹಾಸವನ್ನು ಸಾರುತ್ತವೆ.


ಅಬ್ಬೆ ಜಲಪಾತ ಅಥವಾ ಅಬ್ಬಿ ಜಲಪಾತ : ಮಡಿಕೇರಿಯಿಂದ ಸುಮಾರು ೮ ಕಿ.ಮೀ ದೂರದಲ್ಲಿರುವ ಕಾಫಿ ತೋಟದ ಮಧ್ಯೆ, ಕಾವೇರಿ ನದಿಯು ಕಪ್ಪು ಬಂಡೆಗಳ ಮೇಲೆ ಹರಡಿಕೊಂಡು, ಸುಮಾರು ೫೦ ಅಡಿ ಎತ್ತರದಿಂದ ಧುಮ್ಮಿಕ್ಕಿ ಅಬ್ಬಿ ಸುಂದರ ಜಲಪಾತವನ್ನು ಸೃಷ್ಟಿಸಿದೆ. ಸುತ್ತಲಿನ ಹಸಿರು ಪರಿಸರ, ನಯನ ಮನೋಹರ ಜಲಪಾತ ಕಣ್ಣಿಗೆ ಹಬ್ಬ. ಜಲಪಾತಕ್ಕೆ ಎದುರಾಗಿ ತೂಗುಸೇತುವೆ ಕಟ್ಟಲಾಗಿದ್ದು, ಜಲಪಾತದ ಉತ್ತಮ ವೀಕ್ಷಣೆಗೆ ಅನುಕೂಲವಾಗಿದೆ. ಇಲ್ಲಿ ನೀರಿನಲ್ಲಿ ಇಳಿಯುವುದನ್ನು ನಿಷೇಧಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗುತ್ತಿದೆ.ಮಡಿಕೇರಿಯಲ್ಲಿ ಊಟ ಮಾಡಿ, ಕಾವೇರಿ ನಿಸರ್ಗ ಧಾಮಕ್ಕೆ ಹೋದೆವು.

ಕಾವೇರಿ ನಿಸರ್ಗ ಧಾಮ : ಮಡಿಕೇರಿಯಿಂದ ೩೫ ಕಿ.ಮೀ, ಕುಶಾಲನಗರದಿಂದ ೨ ಕಿ.ಮೀ ದೂರ ಇರುವ ನಿಸರ್ಗ ಧಾಮವನ್ನು ೧೯೮೮ ರಲ್ಲಿ ಕಟ್ಟಲಾಗಿದೆ. ೩೫ ಎಕರೆ ಸುಂದರ ಪರಿಸರದಲ್ಲಿರುವ ನಿಸರ್ಗ ಧಾಮ ಸುತ್ತಲೂ ಕಾವೇರಿ ನದಿಯಿದೆ. ಬಿದಿರಿನ ಮರಗಳ ಮೇಲೆ ಕಟ್ಟಿದ ಮನೆಗಳು, ಆನೆ ಸವಾರಿ, ಜಿಂಕೆ ವನ, ಕಾಡಿನಲ್ಲಿ ನಡಿಗೆ, ದೋಣಿ ವಿಹಾರ ಇಲ್ಲಿನ ವಿಶೇಷ.ಕುಟುಂಬ ಸಮೇತ ಒಂದು ದಿನದ ರಜೆಯನ್ನು ಕಳೆಯಲು ಸೂಕ್ತ ಸ್ಥಳ. ಇಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿ, ಸುಮಾರು ಹೊತ್ತು ನೀರಲ್ಲಿ ಆಟ ಆಡಿದೆವು. ನಿಸರ್ಗ ಧಾಮದಲ್ಲಿ ಒಂದು ರೌಂಡು ಹಾಕಿ, ಜಿಂಕೆಗಳನ್ನು ಮಾತಾಡಿಸಿ, ಹೊರಟಾಗ ಸಂಜೆ ಆಗುತ್ತಲಿತ್ತು.


ಮೈಸೂರಿನಲ್ಲಿ ರಾತ್ರಿಯ ಊಟ ಮಾಡಿ, ರಂಗನನ್ನು ಮನೆಗೆ ಬಿಟ್ಟು ಬೆಂಗಳೂರಿನತ್ತ ಸಾಗಿದೆವು.

Tuesday, April 21, 2009

ನಾಗರಹೊಳೆ ಮತ್ತು ಇರ್ಪು ಜಲಪಾತ

ನಾಗರಹೊಳೆ ಮತ್ತು ಇರ್ಪು ಜಲಪಾತ - ೨೦ ಏಪ್ರಿಲ್ ೨೦೦೮ ಭಾನುವಾರ
ಶನಿವಾರ ತುಂಬಾ ಬೋರ್ ಆಗಿ ಕಳೆದ ನಮಗೆ ಭಾನುವಾರವನ್ನೂ ವೇಸ್ಟು ಮಾಡಲು ಮನಸ್ಸಿರಲಿಲ್ಲ. ಇಂಟರ್ನೆಟ್ ನಲ್ಲಿ ಅಲ್ಪ ಸ್ವಲ್ಪ ತಡಕಾಡಿ ನಾಗರಹೊಳೆ ಒಂದು ದಿನದ ಪ್ರವಾಸಕ್ಕೆ ಯೋಗ್ಯವಾಗಿದ್ದು, ಅಲ್ಲಿ ಕಾಡುಪ್ರಾಣಿಗಳು ನೋಡಲು ಸಿಗುವುದೆಂದು ತಿಳಿದು ಅಲ್ಲಿಗೇ ಹೋಗುವುದೆಂದು ತೀರ್ಮಾನಿಸಿದೆವು. ಸಂತು, ಅರವಿಂದ, ಬನವಾಸಿ ಶನಿವಾರ ನಮ್ಮ ರೂಮಿನಲ್ಲಿ ಉಳಿದರು.

ಭಾನುವಾರ ಮುಂಜಾನೆ ೬ ಗಂಟೆಗೆ ಡಿಂಗನ ಕಾರಿನಲ್ಲಿ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣ ನಂತರ ಬಲಗಡೆ ತಿರುಗಿ ಹುಣಸೂರು ತಲುಪಿದೆವು. ಅಲ್ಲಿ ಹೋಟೆಲೊಂದರಲ್ಲಿ ಬೆಳಗಿನ ಉಪಾಹಾರ ಮುಗಿಸಿದೆವು. ಪ್ಲೈನ್-ದೋಸೆ ಮತ್ತು ಕಾಫಿ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಹಸಿವಾಗಿದ್ದರಿಂದ ಬೇರೆ ವಿಧಿ ಇಲ್ಲದೆ ತಿಂದು ಮುಗಿಸಿದೆವು. ನಾಗರಹೊಳೆ ಅಭಯಾರಣ್ಯ ಭಾಗದಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ರಸ್ತೆಯ ಪಕ್ಕ ಹಸಿರು ಕಂಗೊಳಿಸುತ್ತಿತ್ತು. ಅಂದಿನ ವಾತಾವರಣವೂ ತಣ್ಣಗಿದ್ದು, ಬಿಸಿಲಿನ ಧಗೆಯ ಬೆಂಗಳೂರಿಂದ ಹೋಗಿದ್ದ ನಮಗೆ ಹಸಿರಿನ ತಣ್ಣನೆಯ ಪರಿಸರ ಆಹ್ಲಾದಕರವಾಗಿತ್ತು.


ನಾಗರಹೊಳೆಯ ಆನೆ ಖೆಡ್ಡದಲ್ಲಿ ಒಂದು ವಾರದ ಹಿಂದೆ ಹಾಸನದಿಂದ ಹಿಡಿದು ತಂದಿದ್ದ ಸಲಗವನ್ನು ಕೂಡಿ ಹಾಕಿದ್ದರು. ನೋಡಿದರೆ ಭಯವೆನಿಸುತಿದ್ದ ಈ ಸಲಗ ಹಾಸನದ ಸುತ್ತಮುತ್ತ ೪ ಜನರನ್ನು ಬಲಿ ತೆಗೆದುಕೊಂಡಿತ್ತು. ಬಂಧನದಲ್ಲಿದ್ದ ಅದರ ಘೀಳಿಡುವಿಕೆ ಎದೆಯಲ್ಲಿ ನಡುಕ ಹುಟ್ಟಿಸಿತ್ತು.


ರಸ್ತೆಯ ಪಕ್ಕದಲ್ಲಿ ಜಿಂಕೆಗಳ ಹಿಂಡು ಕಾಣಿಸುತ್ತದೆ. ಇದು ಇಲ್ಲಿ ಸಾಮಾನ್ಯ. ಅವು ಕಾಡಿನ ಮಧ್ಯಭಾಗಕ್ಕೆ ಹೋಗುವುದಿಲ್ಲವಂತೆ. ಅಲ್ಲಿನ ಅರಣ್ಯ ಸಿಬ್ಬಂಧಿಯ ಮನೆಗಳ ಪಕ್ಕದಲ್ಲಿಯೇ ತಿರುಗಾಡಿಕೊಂಡಿದ್ದವು.

ನಾಗರಹೊಳೆ ಸಫಾರಿ ಯ ಬಳಿ ಬಂದಾಗ ಮಧ್ಯಾನ್ನ ೧೧ ಗಂಟೆ ಆಗಿತ್ತು. ಅಲ್ಲಿ ಕಾಡಿನ ಸಫಾರಿಯ ಬಗ್ಗೆ ವಿಚಾರಿಸಿದಾಗ ಆ ಸಮಯದಲ್ಲಿ ಹೆಚ್ಚು ಕಾಡುಪ್ರಾಣಿಗಳು ಕಾಣಸಿಗುವುದಿಲ್ಲ ಅಂತ ಗೊತ್ತಾಯಿತು. ಅಲ್ಲಿನ ಸಿಬ್ಬಂದಿ ಬಳಿ ಹತ್ತಿರದ ಬೇರೆ ಸ್ಥಳ ಬಗ್ಗೆ ಕೇಳಿದಾಗ, ಇರ್ಪು ಜಲಪಾತದ ಬಗ್ಗೆ ಹೇಳಿದರು. ನಾಗರಹೊಳೆಯಿಂದ ಸುಮಾರು ೩೦ ಕಿ.ಮೀ. ದೂರದ "ಕುಟ್ಟ" ಊರ ಬಳಿ ಬಂದಾಗ ೧ ಗಂಟೆ ಆಗಿತ್ತು. ಅಲ್ಲಿ ಇರ್ಪುಗೆ ಹೋಗುವ ದಾರಿ ಕೇಳಿ ಮುಂದೆ ಹೊರಟೆವು. ದಾರಿಯುದ್ದಕ್ಕೂ ಕಾಫೀ ತೋಟ ಸಿಗುತ್ತದೆ. ಅಲ್ಲಿ ಮರದ ನೆರಳಿನಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು.

ಕಾರಿನ ಸ್ಟೀರಿಯೋದಿಂದ ಹಾಡು ಕೇಳಿ ಬರುತ್ತಾ ಇತ್ತು....'ಹಾಡು ಸಂತೋಷಕ್ಕೆ.......!!' ಸಂತು, ಡಿಂಗ ಅಲ್ಲೇ ಹಾಡಿಗೆ ಸ್ಟೆಪ್ ಹಾಕಲು ಶುರು ಮಾಡಿದ್ದರು...!!!


ಅದೇ ಹುರುಪಿನಲ್ಲಿ ಅಲ್ಲಿಂದ ಹೊರಟಾಗ, ಡಿಂಗ ಕಾರಿನ ಗ್ಲಾಸ್ ತೆಗೆದು, ಬಾಗಿಲ ಮೇಲೆ ಕುಳಿತುಕೊಂಡ...!

ಉಳಿದವರೂ ಹಾಗೆ ಕಾರಿನ ಮೇಲೆ ಹತ್ತಿ ಕುಣಿದಾಡಿದರು...ಜೋರಾಗಿ ಹಾಡು ಹೇಳುತ್ತಾ..ಸಾಗಿದ್ದೆವು....ಫುಲ್ ಜೋಶ್...!!

ಸ್ವಲ್ಪ ದೂರ ಹೋಗುವಷ್ಟರಲ್ಲಿ ಕಾರಿನ ಹಿಂಭಾಗದ ಟೈರ್ ಪಂಕ್ಚರ್ ಆಯಿತು...!! ಎಲ್ಲರ ಜೋಶ್ ಕಡಿಮೆ ಆಯಿತು...!!ಟೈರ್ ಬದಲಿಸಿ, ತೆಪ್ಪಗೆ ಕಾರಿನ ಒಳಗಡೆ ಕುಳಿತು ಇರ್ಪುಗೆ ಹೋದಾಗ ಗಂಟೆ ೧.೩೦ ಆಗಿತ್ತು.
ಇರ್ಪು ಜಲಪಾತ : ಇರ್ಪು ಅಥವಾ ಇರುಪ್ಪು ಜಲಪಾತವು ದಕ್ಷಿಣ ಕೊಡಗು, ಬ್ರಹ್ಮಗಿರಿ ಪರ್ವತ ಸರಣಿಯಲ್ಲಿ ಇದೆ.

ಲಕ್ಷ್ಮಣ ತೀರ್ಥ ನದಿಯು ಸುಮಾರು ೫೦ ಮೀ. ಎತ್ತರದಿಂದ ೨ ಸ್ಥರದಲ್ಲಿ ಧುಮುಕುತ್ತದೆ.

ಇಲ್ಲಿಯೇ ಶ್ರೀ ರಾಮನ ದೇವಸ್ಥಾನ ಕೂಡ ಇದೆ. ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುವ ಸಮಯದಲ್ಲಿ ಈ ಕಾಡಿನ ಭಾಗದಲ್ಲಿ ಸಂಚರಿಸುತ್ತಿದ್ದರು...ರಾಮನ ಬಾಯಾರಿಕೆಯನ್ನು ತಣಿಸಲು ಲಕ್ಷ್ಮಣನು ನೆಲಕ್ಕೆ ಬಾಣವನ್ನು ಹೊಡೆದು ನೀರನ್ನು ಚಿಮ್ಮಿಸಿದನು...ಆಗ ಹುಟ್ಟಿದ ನದಿಯು ಲಕ್ಷ್ಮಣ ತೀರ್ಥವಾಗಿ ಇರ್ಪು ಜಲಪಾತವನ್ನು ಸೃಷ್ಟಿಸಿತೆಂಬ ಪ್ರತೀತಿ ಇದೆ..!


ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯ ನೀರು ಬೇಸಿಗೆಯಲ್ಲಿ ಕಡಿಮೆ ಇರುತ್ತಾದರೂ, ಸಂಪೂರ್ಣ ಬತ್ತುವುದಿಲ್ಲ. ಸುತ್ತಲೂ ಹಸಿರಿನ ಕಾಡು, ಕಾಫೀ ತೋಟ, ಚಂದದ ಮಲೆನಾಡಿನ ದೃಶ್ಯಗಳು ಒಂದು ದಿನದ ಪ್ರವಾಸಕ್ಕೆ ಯೋಗ್ಯವಾಗಿದೆ. ಇರ್ಪು ಬೆಂಗಳೂರಿಂದ ಸುಮಾರು ೨೮೦ ಕಿ.ಮೀ ದೂರ, ಕೊಡಗಿನ "ಕುಟ್ಟ" ಊರಿಂದ ೭ ಕಿ. ಮೀ ಅಂತರ. ನಾಗರಹೊಳೆಯವರೆಗೂ ರಸ್ತೆ ಉತ್ತಮವಾಗಿದ್ದು, ಅಭಯಾರಣ್ಯದಲ್ಲಿ ಆನೆ, ಕಾಡುಹಂದಿ, ಮಂಗಗಳು, ಜಿಂಕೆ ವೀಕ್ಷಣೆ ಪ್ರಯಾಣಕ್ಕೆ ಉತ್ಸಾಹ ಮತ್ತೆ ಅಷ್ಟೇ ರೋಮಾಂಚನವಾಗಿರುತ್ತೆ...ಕೆಲವರಿಗೆ ಹುಲಿ ಕೂಡ ಸಿಕ್ಕ ಅನುಭವ ಆಗಿದೆ....! ಸಂಜೆ ೬ ಗಂಟೆಯ ನಂತರ ವಾಹನ ಓಡಾಟವನ್ನು ನಿಲ್ಲಿಸಲಾಗುತ್ತದೆ. ಇರ್ಪುನಲ್ಲಿ ಒಂದೇ ಹೋಟೆಲ್ ಇದ್ದು, ಊಟಕ್ಕೆ ಮುಂಚಿತವಾಗಿ ತಿಳಿಸಿರಬೇಕಾಗುತ್ತದೆ..
ಜಲಪಾತದಲ್ಲಿ ಸುಮಾರು ೨ ತಾಸು ಸ್ನಾನ ಮಾಡಿ, ಮೈ -ಮನವನ್ನು ಹಗುರಾಗಿಸಿಕೊಂಡೆವು.

ರುಚಿಯಾದ ಊಟ ಮಾಡಿ ಅಲ್ಲಿಂದ ವಾಪಾಸು ಹೊರಟೆವು. ನಾಗರಹೊಳೆಯಲ್ಲಿ ಟೀ ಕುಡಿದು ಸ್ವಲ್ಪ ಹೊತ್ತು ವಿರಮಿಸಿದೆವು. ವಾಪಸು ಬರುವಾಗ ಕಾಡಾನೆಗಳ ದರ್ಶನ ಭಾಗ್ಯ ಸಿಕ್ಕಿತು.


ಮೈಸೂರ್-ಬೆಂಗಳೂರು ಹೆದ್ದಾರಿಯಲ್ಲಿನ ಧಾಭ ಒಂದರಲ್ಲಿ ರಾತ್ರಿಯ ಊಟ ಮುಗಿಸಿ, ಸುಂದರ ನೆನಪುಗಳೊಂದಿಗೆ ಮನೆಗೆ ವಾಪಸಾದೆವು.