Wednesday, December 15, 2010

ಲಾಲ್ ಬಾಗ್ ನಲ್ಲಿ ಒಂದು ಮುಂಜಾನೆ

ನಮ್ಮ ಬೆಂಗಳೂರಿನ ಹೆಮ್ಮೆಯ ಸಸ್ಯೋಧ್ಯಾನವನ ಲಾಲ್-ಬಾಗ್. ಹಸಿರಿನ ಹುಲ್ಲು ಹಾಸು, ವಿವಿಧ ಬಗೆಯ ಹಕ್ಕಿ ಸಂಕುಲ, ಅಳಿಲು ಮುಂತಾದ ಪುಟ್ಟ ಪ್ರಾಣಿಗಳು, ವಿಶಾಲವಾದ ಕೆರೆ ಎಲ್ಲವನ್ನೂ ಒಳಗೊಂಡ ಸುಂದರ ಪರಿಸರ (ಎಲ್ಲರಿಗೂ ಗೊತ್ತಿರುವ ವಿಚಾರ..!)
ಕಳೆದ ಶನಿವಾರ ಮುಂಜಾನೆ ನಾನು ಮತ್ತು ಕಿರಣ್ ಇಲ್ಲಿಗೆ ಹೋಗಿದ್ದೆವು. ಫೋಟೋ ಕಲಿಕೆಯು ಮುಖ್ಯ ಉದ್ದೇಶ. ಸುಮಾರು ೪ ಗಂಟೆಗಳ ಕಾಲ ಸುತ್ತಾಡಿ ಮನಸ್ಸಿಗೆ ಬಂದಿದ್ದು ಕ್ಲಿಕ್ಕಿಸಿ, ನಮ್ಮ ಫೋಟೋಗ್ರಫಿ ಕಲೆಯನ್ನು ಹೊರಹಾಕಲು ಪ್ರಯತ್ನಿಸಿದೆವು....! ಹತ್ತಿರದಲ್ಲೇ ಇದ್ದರೂ ಇಲ್ಲಿಗೆ ನಾವು ಭೇಟಿಕೊಡುವುದು ವಿರಳ.

ನಮ್ಮ ಪ್ರಯತ್ನದ, ಮನಸ್ಸಿಗೆ ಖುಷಿ ಅನ್ನಿಸಿದ ಒಂದಷ್ಟು ಫೋಟೋಗಳು ಇಲ್ಲಿವೆ.


Wednesday, October 20, 2010

ಹೊಗೆನಕಲ್ ಜಲಪಾತ

ದಿನಾಂಕ : ಸೆಪ್ಟೆಂಬರ್ ೫, ೨೦೧೦
ಕಾರಿನಲ್ಲಿ : ನಾನು, ಅರವಿಂದ, ಸುಹಾಸ್, ದೀಪಕ್
ಕ್ರಮಿಸಿದ ದೂರ : ೨೭೦ ಕಿ.ಮೀ
ದಾರಿ : ಬೆಂಗಳೂರು -> ಎಲೆಕ್ಟ್ರೋನಿಕ್ ಸಿಟಿ -> ಹೊಸೂರು -> ಕೃಷ್ಣಗಿರಿ -> ಧರಂಪುರಿ -> ಹೊಗೆನಕಲ್

ಬೆಂಗಳೂರಿನವರಿಗೆ ತುಂಬಾ ಪರಿಚಯದ ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಜಾಗ ಅಂದರೆ ಥಟ್ಟನೆ ನೆನಪಾಗುವುದು ಹೊಗೆನಕಲ್ ಫಾಲ್ಸ್. ಬೆಂಗಳೂರಿಂದ ಸುಮಾರು ೧೩೦ ಕಿ.ಮೀ ದೂರ ಇರುವ ಈ ಜಲಪಾತಕ್ಕೆ "ಭಾರತದ ನಯಾಗರ" ಅಂತಲೂ ಕರೆಯುತ್ತಾರೆ. ಈ ಜಲಪಾತದ ಬಗ್ಗೆ ಹೆಚ್ಚಿನ ವಿವರ ಬರೆಯುವ ಅಗತ್ಯ ಇಲ್ಲ, ಅಂತರ್ಜಾಲದಲ್ಲಿ ಬೇಕಾದಷ್ಟು ಮಾಹಿತಿ ಸಿಗುತ್ತದೆ.


ಕಾವೇರಿ ನದಿಯು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಗೆನಕಲ್ ಎಂಬಲ್ಲಿ ಸುಂದರ ಜಲಪಾತ ಸೃಷ್ಟಿಸಿದೆ. ಸುಮಾರು ೧ ಕಿ.ಮೀ ಸುತ್ತಳತೆಯಲ್ಲಿ ಎಲ್ಲಿ ನೋಡಿದರೂ ಜಲಪಾತಗಳೇ ಕಾಣಸಿಗುತ್ತದೆ. ಸುಣ್ಣದ ಕಲ್ಲಿನ ಬಂಡೆಗಳ ಮಧ್ಯೆ ರಭಸವಾಗಿ ಧುಮ್ಮಿಕ್ಕುವ ಜಲಪಾತವು "ಹೊಗೆ" ಎದ್ದಂತೆ ಭಾಸವಾಗುವುದರಿಂದ ಹೊಗೆ-ನ-ಕಲ್ಲು ಎಂದು ಹೆಸರು ಬಂದಿರಬಹುದು. ಜಲಪಾತಕ್ಕೂ ಮೊದಲು ನದಿಯು ಕಾಡು, ಗುಡ್ಡಗಳನ್ನು ಬಳಸಿ ಬರುವುದರಿಂದ ಇಲ್ಲಿನ ನೀರು ಔಷಧಿಯುಕ್ತವಾಗಿರುತ್ತದೆ.
ಮಸ್ಸಾಜು ಸ್ನಾನ, ತೆಪ್ಪದಲ್ಲಿ ಜಲಪಾತದ ವೀಕ್ಷಣೆ ಇಲ್ಲಿನ ಪ್ರಮುಖ ಆಕರ್ಷಣೆ.

ಮಳೆಗಾಲದಲ್ಲಿ ಮೈದುಂಬಿಕೊಂಡಿರುವ ಜಲಪಾತದ ಸೌಂದರ್ಯದ ಬಗ್ಗೆ ಎರಡು ಮಾತಿಲ್ಲ. ಆದರೆ ಸುತ್ತಮುತ್ತಲ ಪರಿಸರ ಅಷ್ಟು ಸ್ವಚ್ಚವಾಗಿಲ್ಲ. ವಾರಾಂತ್ಯಗಳಲ್ಲಿ ಪ್ರವಾಸಿಗರಿಂದ ತುಂಬಿರುತ್ತದೆ. ಊರೊಳಗೆ ಒಂದೂ ಸಸ್ಯಾಹಾರಿ ಹೋಟೆಲ್ ಇಲ್ಲ. ಹಾಗಾಗಿ ಪ್ರವಾಸಿಗರು ಮನೆಯಿಂದ ಆಹಾರ ಕಟ್ಟಿಸಿಕೊಂಡು ಹೋಗುವುದು ಉತ್ತಮ.


ಬೆಳಗಿನ ಉಪಹಾರ ಕೃಷ್ಣಗಿರಿ ಹೆದ್ದಾರಿಯಲ್ಲಿನ ಕಾಮತ್ ಹೋಟೆಲಿನಲ್ಲಿ ಮುಗಿಸಿದೆವು. ಹೊಸೂರು ಹೆದ್ದಾರಿಯು ಡ್ರೈವಿಂಗ್ ಗೆ ಉತ್ತಮವಾಗಿದ್ದು, ಡ್ರೈವಿಂಗ್ ಮಜಾ ಅನುಭವಿಸುತ್ತ ಹೊಗೆನಕಲ್ ತಲುಪಿದಾಗ ೧೦ ಗಂಟೆ. ಜಲಪಾತ ವೀಕ್ಷಣೆಗೆ ತೆಪ್ಪ ಅಗತ್ಯ ಇರುವುದರಿಂದ ತೆಪ್ಪದ ಮಾಲೀಕರಿಗೆ ಕೇಳಿದಷ್ಟು ಹಣ ಕೊಡುವುದು ಅನಿವಾರ್ಯ. ಹೇಗಿದ್ದರೂ ಪ್ರವಾಸಿಗರು ಇಲ್ಲಿಗೆ ಬಂದಮೇಲೆ ಜಲಪಾತ ನೋಡದೆ ಹಿಂದಿರುಗುವದಿಲ್ಲ ಎಂಬ ವಿಶ್ವಾಸ ಅವರದ್ದು. ತುಂಬಾ ಹೊತ್ತಿನ ಚೌಕಾಸಿಯ ನಂತರ ೧೩೦೦ ರುಪಾಯಿ ಇಂದ ೧೦೦೦ ರುಪಾಯಿಗೆ ಇಳಿಸಿದೆವು. ಬರಿಯ ಜಲಪಾತ ವೀಕ್ಷಣೆಗೆ ಒಂದು ಚಾರ್ಜು, ಅಲ್ಲಿ ಸ್ನಾನ ಸ್ವಲ್ಪ ಬಿಡುವಿಗೆ ಬೇರೆ ಚಾರ್ಜು..:-) ತುಸು ದುಬಾರಿ ಎನಿಸಿದರೂ ಜಲಪಾತದ ಅದ್ಭುತ ಸೌಂದರ್ಯ ಅದನ್ನು ಮರೆಸಿತು.

ಮೊದಲು ಕರ್ನಾಟಕ ಗಡಿಯಲ್ಲಿರುವ ಜಲಪಾತ ವೀಕ್ಷಿಸಿದೆವು, ಕಲ್ಲನ್ನು ಸೀಳಿಕೊಂಡು ವಿಸ್ತಾರವಾಗಿ ಧುಮುಕುವ ಈ ಜಲಪಾತ ಕಣ್ಣಿಗೆ ಹಬ್ಬ. ಮಳೆಗಾಲದ ನಂತರ ಸೌಂದರ್ಯ ಇಮ್ಮುಡಿಯಾಗಿತ್ತು. ನೀರಿನ ರಭಸ ಮೈ ಜುಮ್ಮೆನ್ನುವಂತಿತ್ತು. ಅನುಭವಿ ಮೀನುಗಾರರು ಈ ಜಲಪಾತದ ಕೊರಕಲಿನಲ್ಲಿ ಮೀನು ಹಿಡಿಯಲು ಇಳಿಯುತ್ತಾರೆ...!!!

ನಾವು ಅಲ್ಲಿಂದ ಹೊರಡುವ ಸೂಚನೆ ಕಾಣದಿದ್ದಾಗ, ತೆಪ್ಪದವ ಬಂದು ಹೊರಡುವಂತೆ ಸೂಚಿಸಿದ. ನದಿಯ ಆಳ ಕಡಿಮೆ ಇರುವಲ್ಲಿ, ಸ್ವಚ್ಛ ನೀರಿನ ಜಾಗದಲ್ಲಿ ನಾವು ಸ್ನಾನ ಮುಗಿಸಿದೆವು.

ಅಲ್ಲಿಂದ ಹೊರತು ತಮಿಳುನಾಡಿನ ಭಾಗದಲ್ಲಿರುವ ಜಲಪಾತಕ್ಕೆ ಬಂದೆವು. ನೀರು ಮೈಮೇಲೆ ಉಕ್ಕಿ ಬಂದಂತೆ ಭಾಸವಾಗುವ ಈ ಜಲಪಾತವನ್ನು ಹತ್ತಿರದಿಂದ ವೀಕ್ಷಿಸಬಹುದು. ಸುತ್ತಲೂ ಸಣ್ಣ ಸಣ್ಣ ಜಲಪಾತಗಳು, ನೀರಿನ ಅಗಾಧತೆ ಇಲ್ಲಿನ ವಿಶೇಷ. ಜಲಪಾತ ವೀಕ್ಷಣೆಗೆ ಸರಕಾರ ತೂಗುಸೇತುವೆ ಕೂಡ ನಿರ್ಮಿಸಿದೆ. ಬೇಸಿಗೆ ಕಾಲದಲ್ಲಿ ನೀರಿನ ಹರಿವು ಕಡಿಮೆ ಇದ್ದಾಗ ತೆಪ್ಪದಲ್ಲಿ ಜಲಪಾತದ ಬುಡಕ್ಕೆ ಹೋಗಲು ಸಾಧ್ಯ. ನೀರಿನ ರಭಸಕ್ಕೆ ವಿರುದ್ಧ ೫-೬ ಜನರನ್ನು ಕೂಡಿಸಿಕೊಂಡು ತೆಪ್ಪ ನಡೆಸುವನ ಚಾಕ-ಚಕ್ಯತೆ ಮೆಚ್ಚುವಂತದ್ದು.ಗಂಟೆಗಳ ಕಾಲ ಜಲಧಾರೆಯನ್ನು ನೋಡಿ, ನಮ್ಮನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದ ತೆಪ್ಪದವನಿಗೆ ಧನ್ಯವಾದ ತಿಳಿಸಿ ನಾವು ವಾಪಸು ಹೊರಟೆವು.

ಅತಿ ಕಡಿಮೆ ಸಮಯದಲ್ಲಿ, ಆಯಾಸವಿಲ್ಲದೆ ಸುಂದರ ದಿನವನ್ನು ಕಳೆದ ನೆನಪಿನೊಂದಿಗೆ ಹೊಸೂರು ಹೆದ್ದಾರಿಯ ವಾಹನಗಳ ನಡುವೆ ನಾವೂ ತೂರಿಕೊಂಡೆವು.

Saturday, October 9, 2010

ಯಾವುದಾದರು ದೊಡ್ಡ ಬಂಡೆ ದೂರದಲ್ಲಿ ಕಂಡರೂ ಸಾಕು ಕಾರು ಗಕ್ಕನೆ ನಿಂತುಬಿಡುತಿತ್ತು

ಮಿಕ್ಕವರ ಸ್ವಾತಂತ್ರ್ಯ ಹರಣ ಮಾಡಿ ಬದುಕುವ ಮಾನವ ಯಾವತ್ತೂ ಸ್ವಾತಂತ್ರ್ಯ ಪ್ರಿಯ. ಕಾಡಿನಲ್ಲಿ ಮುಕ್ತವಾಗಿ ತಿರುಗಿಕೊಂಡಿದ್ದ ಪ್ರಾಣಿಗಳನ್ನೆಲ್ಲ ಕಟ್ಟಿ ಹಾಕಿ ,ಮನಸೋ ಇಚ್ಛೆ ಆನಂದಿಸುವ ಪ್ರಾಣಿ ಮಾನವ. ಸ್ವಾತಂತ್ರ್ಯ ದಿನವನ್ನು ಸುಮ್ಮನೆ ಮನೆಯಲ್ಲಿ ಕುಳಿತು ಕಳೆಯಲು ಮನಸ್ಸಾಗದೆ ವಿಶೇಷವಾಗಿ ಆಚರಿಸಲೇ ಬೇಕೆಂದು ನಮ್ಮ ಗುಂಪು ತೀರ್ಮಾನಿಸಿ ನಾವು, ಸ್ವಾತಂತ್ರ್ಯ ದಿನವನ್ನ ಆಚರಿಸುವ ಸಲುವಾಗೇ ನಾಡಿನಿಂದ ಕಾಡಿಗೆ ತೆರಳಿದ್ದೆವು, ಅದಕ್ಕಾಗಿ ಸಕಲ ಸಿದ್ಧತೆ ಹಿಂದಿನ ದಿನವೇ ಮಾಡಿಕೊಂಡಿದ್ದೆ. ಅದಕ್ಕೆ ಬೇಕಾದ ಶುಭ್ರವಾದ ಹತ್ತಿ ಬಟ್ಟೆಯ ರಾಷ್ಟ್ರ ಧ್ವಜವನ್ನು, ಉದ್ದನೆಯ ಕೋಲು ಸಹ ಖರೀದಿಸಿದ್ದೆ. ಏನೋ ಒಂದು ತರಹದ ಉತ್ಸಾಹ ಮನೆಮಾಡಿತ್ತು . ೧೪ ರ ರಾತ್ರಿ ಸುಮಾರು ೧೦.೩೦ಕ್ಕೆ ೮ ಜನ ಹುಡುಗರು ಕೂಡಿಕೊಂಡು ೨ ಕಾರಲ್ಲಿ ಮೈಸೂರು ಕಡೆ ಹೊರಟೆವು.ಅಲ್ಲಿಯೇ ನಾವು ಭೇಟಿಯಾದದ್ದು ಕಾಡಿನ ರಾಜನನ್ನ.
ಮಾರ್ಗ ಮಧ್ಯೆ ಎಂದಿನ ನಿಯಮದಂತೆ ದಾಹ ಇಂಗಿಸಿಕೊಳ್ಳಲು ಕಾಫಿ-ಡೇ ಗೆ ನಮ್ಮಭೇಟಿ, ಪುಟ್ಟ ಕೇಕ್ ಒಂದನ್ನು ಖರೀದಿಸಿ ಭರ್ಜರಿ ಘೋಷಣೆ, ಜೈ ಭಾರತ್,ಮೇರಾ ಭಾರತ್ ಮಹಾನ್ ಎಂಬೆಲ್ಲಾ ಜೈಕಾರ ದೊಂದಿಗೆ, ಖರೀದಿಸಿದ ಕೇಕ್ ಕತ್ತರಿಸಿ ಬಾಯಿ ಸಿಹಿಮಾಡಿದೆವು. ಹಿತವಾದ ಕಾಪ್ಪಿಚಿನೋ ಕುಡಿದು ನಮ್ಮ ತಂಡ ಅಲ್ಲಿಂದ ಮುಂದೆ ಹೊರಟಿದ್ದು ನಿಜ. ಉತ್ತಮ ರಸ್ತೆ, ತಣ್ಣನೆಯ ಗಾಳಿ, ಇಂಪಾದ ಸಂಗೀತ, ಮೋಜು ಮಸ್ತಿ, ಮಾತು ಹರಟೆಗಳಿಂದ ನಮ್ಮ ಪ್ರಯಾಣ ಕಳೆಗಟ್ಟಿತ್ತು.

ಗುಂಡ್ಲುಪೇಟೆ ದಾಟಿ, ಗೋಪಾಲ ಸ್ವಾಮಿ ಬೆಟ್ಟದ ಚೆಕ್ ಪೋಸ್ಟ್ ತಲುಪಿದಾಗ ಬೆಳಗಿನ ಜಾವ ೫ ಗಂಟೆಯ ಮಂದ ಬೆಳಕು ನಮ್ಮನ್ನ ಸ್ವಾಗತಿಸಿತ್ತು. ಕಾಡು ಪ್ರಾಣಿಗಳು, ಆನೆಗಳು ಇಲ್ಲಿ ಸಂಚರಿಸುವುದು ಸಾಮಾನ್ಯ. ಸಂಜೆ ೬ ರಿಂದ ಬೆಳಿಗ್ಗೆ ೬ ರ ವರೆಗೆ ಚೆಕ್ ಪೋಸ್ಟ್ ನಿಂದ ಬೆಟ್ಟಕ್ಕೆ ಪ್ರಯಾಣ ನಿಷೇಧಿಸಲಾಗಿದೆ. ಅವುಗಳ ರಕ್ಷಣೆಗೆ ಮಾತ್ರ ಅಲ್ಲ, ಅವುಗಳಿಂದ ನಮಗೂ ರಕ್ಷಣೆ ಬೇಕಲ್ಲ, ಅದಕ್ಕೆ ಈ ನಿರ್ಬಂಧ. ನಾವು ಗೇಟಿನ ಮುಂದೆ ಕಾದೆವು.


ಸುಮಾರು ಅರ್ಧ ಕಿ.ಮೀ ಹೋಗುವಷ್ಟರಲ್ಲೇ, ರಸ್ತೆ ತುಂಬಾ ಮುರಿದ ಮರದ ಕೊಂಬೆಗಳು, ಅಲ್ಲಲ್ಲಿ ರಸ್ತೆ ಬದಿಯ ಮಣ್ಣನ್ನು ಎತ್ತಿ ಹಾಕಿದ ಗುರುತು, ಹಸೀ ಹಸೀ ಲದ್ದಿ..! ನಮ್ಮ ಧೈರ್ಯ ಅರ್ಧ ಕಡಿಮೆ ಆಯಿತಿರಬೇಕು, ನಮ್ಮ ಕಾರು ಮುಂದಕ್ಕೆ ಹೋಗುತ್ತಲೇ ಇರಲಿಲ್ಲ...!! ಹಿಂತಿರುಗಿ ಹೋಗುವಂತೆಯೂ ಇರಲಿಲ್ಲ..ಕಾರನ್ನು ತಿರುಗಿಸುವುದು ಕಷ್ಟ ಆಗಿತ್ತು..! ಏನಾದರೂ ಒಂದು ಕೈ ನೋಡಿಯೇ ಬಿಡೋಣ ಎಂದು ಮುಂದೆ ಹೊರಟೆವು. ಯಾವುದಾದರು ದೊಡ್ಡ ಬಂಡೆ ದೂರದಲ್ಲಿ ಕಂಡರೂ ಸಾಕು ಕಾರು ಗಕ್ಕನೆ ನಿಂತುಬಿಡುತಿತ್ತು...:-)


ಅಷ್ಟರಲ್ಲೇ, ಪಕ್ಕದ ಕುರುಚಲು ಕಾಡಿನಿಂದ ಹುಲಿಯೊಂದು ಚಂಗನೆ ಜಿಗಿದು ರಸ್ತೆ ಅಡ್ಡಲಾಗಿ ಹೋಗಿ ಕಾಡಲ್ಲಿ ಮತ್ತೆ ಮರೆಯಾಯಿತು, ಅದೊಂದು ಅದ್ಭುತ ಅನುಭವ; ಹೀಗೆ ಹುಲಿಯೊಂದನ್ನು ನಾನು ಮೊದಲು ನೋಡಿದ್ದಿಲ್ಲ..! ಆದರೂ, ಆಗಲೇ ಹೆದರುತ್ತಲೇ ಬಂದದ್ದು ಕೂಡ ಸಾರ್ಥಕ ಅನ್ನಿಸಿದ್ದು. ಮುಂದೆ ಸ್ವಲ್ಪ ದೂರದಲ್ಲಿ "ಸೂಚನ ಫಲಕ" ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು, ರೆಂಬೆ ಕೊಂಬೆಗಳು ಸುತ್ತಲೂ ಮುರಿದಿದ್ದವು , ನಮ್ಮನ್ನ ಆವರಿಸಿದ್ದ ಭಯ ಮತ್ತು ಹೆಚ್ಚಿತು, ಹತ್ತಿರದಲ್ಲಿ ಆನೆಗಳ ಗುಂಪು ಇದೆ ಎಂಬ ಸೂಚನೆಯಿಂದಾಗಿ ಮುಂದೆ ಹೋಗುವ ಧೈರ್ಯ ಯಾರಿಗೂ ಇರಲಿಲ್ಲ, ಮುಂಜಾನೆಯ ಚಳಿಯಲ್ಲೂ ನಿಧಾನಕ್ಕೆ ಬೆವರಿಳಿಯತೊಡಗಿತು..! ಮುಂದೆ ಹೋಗುವಂತೆಯೂ ಇಲ್ಲ..ಹಿಂತಿರುಗುವಹಾಗು ಇಲ್ಲ! ಉಳಿದವರ ಧೈರ್ಯದ ಮೇಲೆ ಅಂತೂ ಮುಂದೆ ಹೊರಟರು ಚಿಕ್ಕ ಭಯ ಬಿಟ್ಟಿರಲಿಲ್ಲ; ಪುಣ್ಯಕ್ಕೆ ಆನೆಗಳ ಹಿಂಡು ದಾರಿಯಲ್ಲೆಲ್ಲೂ ಸಿಗಲಿಲ್ಲ.

ಸಾಮಾನ್ಯವಾಗಿ ಕಾಡಿನಲ್ಲಿ ಪ್ರಯಾಣಿಸುವಾಗ ಎಲ್ಲಾದರೂ ಆನೆಗಳ ಹಿಂಡು ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಆದರೆ, ನಮ್ಮ ಪರಿಸ್ಥಿತಿ ಉಲ್ಟಾ..ಆನೆಗಳು ಎದುರಾಗದಿರಲಿ ಎಂದು ಪ್ರಾರ್ಥಿಸುವದಾಗಿತ್ತು ನಮ್ಮ ಕೆಲಸ.

ಮುಕ್ಕಾಲು ಗಂಟೆಯ ಪ್ರಯಾಣದ ನಂತರ ದೇವಸ್ಥಾನದ ಸಮೀಪವಾಗಿತ್ತು . ಮುಂಜಾನೆಯ ದೃಶ್ಯ ನಿಜಕ್ಕೂ ಬಹಳ ಅದ್ಭುತ. ಹಕ್ಕಿಗಳ ಚಿಲಿಪಿಲಿ, ತಣ್ಣನೆಯ ಗಾಳಿ, ಸುಂದರ ದೇವಸ್ಥಾನ, ಕೆಂಪಾಗುತ್ತಿರುವ ಮೂಡಣ..! ಒಂದಕ್ಕಿಂತ ಒಂದು ಹೆಚ್ಚು ಇಂಪು. ಕಣ್ಣಿಗೆ ಮನಕ್ಕೆ ತಂಪು ತಂದಿದ್ದವು, ಸಾರ್ಥಕತೆಯ ಖುಷಿಯಿಂದ ಕುಣಿದಾಡಿದೆವು. ಅವ ಬೆಳಿಗ್ಗೆ ನಮಗೆ ಉಚಿತ ಬಿಸಿ ಬಿಸಿ ಚಹಾ ಕೂಡ ಮಾಡಿಕೊಟ್ಟ.
ಪುನಃ ಅವನಿಗೆ ಕೇಳಿದೆವು ಇಲ್ಲಿ ಆನೆಗಳನ್ನು ನೋಡಬೇಕು ಎಲ್ಲಿ ಇರುತ್ತವೆ ತೋರಿಸು ಅಂತ, ಅದಕ್ಕೆ ಆತ ಸ್ವಾಮಿ ದೇವಸ್ಥಾನದ ಹಿಂಬಾಗ ನೋಡಿ ಆನೆಗಳ ಗುಂಪೇ ಇದೆ ಅಂದ. ನಾವು ಓಡಿ ಹೋಗಿ ನೋಡಿದರೆ ೧೦-೧೨ ಆನೆಗಳ ಗುಂಪೇ ಅಲ್ಲಿತ್ತು! ಆನೆಗಳಿಗೆ ತೊಂದರೆ ಆಗದಂತೆ ತಾಸುಗಟ್ಟಲೆ ದೂರದಲ್ಲಿ ನಿಂತು, ಅವುಗಳನ್ನು ಅತೀ ಹತ್ತಿರದಿಂದ ನಿಂತು ನೋಡಿದೆವು. ಬೆಳಕು ಹರಿಯುತ್ತಲೇ ಅವು ಬೆಟ್ಟದ ಕಣಿವೆಯಲ್ಲಿ ಮರೆಯಾಗತೊಡಗಿದವು, ಅಂತೆಯೇ ಪ್ರವಾಸಿಗರ ವಾಹನಗಳು ಹೆಚ್ಚಿದವು.

ಬೆಳಗ್ಗೆ, ಪಕ್ಕದ ಗಿಡಗಂಬಹಿರ್ದೆಸೆಗೆಂದುಟಿಯ ಹಿಂಬಾಗಕ್ಕೆ ಮರೆಯಾಗಿ ಹೋದ ಗೆಳೆಯ ರವಿ, ಒಂದೇ ನಿಮಿಷದಲ್ಲಿ ಏದುಸಿರು ಬಿಡುತ್ತ ಓಡಿ ಬಂದ.ಏನಾಯಿತು ಅಂತ ಕೇಳಿದರೆ, ಆ ಪೊದೆಯ ಹಿಂದೆ ಒಂದು ಕಾಡೆಮ್ಮೆ ಇತ್ತು, ಅವನನ್ನ ನೋಡಿ ಒಂದು ಸಲ ಗುಟುರು ಹಾಕಿತ್ತು. ಆತ ಪ್ಯಾಂಟಿನ ಜಿಪ್ ಹಾಕುವುದು ಮರೆತು ಓಡಿಬಂದಿದ್ದ..:-)
ಪೂರ್ತಿ ಬೆಳಗಾದಾಗ ಪ್ರವಾಸಿಗರು, ಭಕ್ತರು ಬಂದು ದೇವಸ್ಥಾನದ ಹಿಂಬಾಗದ ಬೆಟ್ಟದ ತುಂಬೆಲ್ಲಾ ಓಡಾಡಿ ಗಲಾಟೆ ಜಾಸ್ತಿ ಆಗಿದ್ದರಿಂದ ಎಲ್ಲ ಆನೆಗಳು ಮರೆಯಾದವು.


ಗೋಪಾಲ ಸ್ವಾಮಿ ಬೆಟ್ಟದ ಸುತ್ತಲಿನ ಪ್ರದೇಶ ಸುಂದರವಾಗಿದೆ. ಹಸಿರು ಕಣಿವೆ, ಬಂಡೀಪುರ ಕಾಡಿನ ಸಾಲು, ಮೋಡಗಳು, ದೂರದಲ್ಲಿ ಕಾಣುವ ಆನೆಗಳ ಹಿಂಡು, ಶಾಂತವಾದ ವಾತಾವರಣ ಮನಸ್ಸಿಗೆ ಹಿತ ನೀಡಿತ್ತು. ಯಾಂತ್ರಿಕ ಜೀವನದ ಮಧ್ಯೆ ಸುಂದರ ದಿನ ಕಳೆಯಲು ಇದು ಸೂಕ್ತ ಜಾಗ. ಬೇಸಿಗೆಯ ಕಾಲದಲ್ಲೂ ಇಲ್ಲಿ ಮೋಡ ಸುತ್ತುವರಿದಿರುತ್ತದೆ. ಹಾಗಾಗಿ ಇದಕ್ಕೆ "ಹಿಮವದ್ ಗೋಪಾಲ ಸ್ವಾಮಿ ಬೆಟ್ಟ" ಅಂತ ಕರೆಯುತ್ತಾರೆ. ಸದಾ ಕಾಲ ಗರ್ಭಗುಡಿಯ ಮೇಲ್ಭಾಗದಲ್ಲಿ ನೀರು ಜಿನುಗುತ್ತಿರುತ್ತದೆ..!

ನಂತರ ಒಂದಷ್ಟು ಫೋಟೋಗಳನ್ನೂ ತೆಗೆದು, ಗಾರ್ಡ್ ನನ್ನು ಮತ್ತೊಮ್ಮೆ ಮಾತನಾಡಿಸಿ ಬೆಂಗಳೂರಿನತ್ತ ಹೊರಟಾಗ ಮತ್ತೆ ಮುಸ್ಸಂಜೆ..!

Monday, May 24, 2010

ವಾರಾಂತ್ಯಕ್ಕೆ ವಯನಾಡು

ತುಂಬಾ ದಿನಗಳ ನಂತರ ಬ್ಲಾಗ್ ಕಡೆಗೆ ತಲೆ ಹಾಕಿದ್ದೇನೆ, ಆಫೀಸ್ ಕೆಲಸ, ಗೆಳೆಯರ ಮದುವೆ, ಅಣ್ಣನ ಮಗಳ ನಿಶ್ಚಿತಾರ್ತ, ನೆಂಟರಿಷ್ಟರ ಮನೆ ಓಡಾಟ, ಅದು ಇದು ಅಂತಾನೆ ದಿನಗಳು ಕಳೆದು ಹೋದವು. ವರ್ಷದ ಆರಂಭದಲ್ಲಿ ಯೋಜಿಸಿದಂತೆ ತಿಂಗಳಿಗೆ ಕಡಿಮೆ ಎಂದರೂ ಒಂದಾದರೂ ಚಾರಣ ಮಾಡಬೇಕು ಅನ್ನುವ ಬಯಕೆ ಕಳೆದ ಮೂರು ತಿಂಗಳಿಂದ ಹಾಗೆಯೇ ಉಳಿದಿದೆ. ಪ್ರತೀ ವಾರಾಂತ್ಯವು ಏನಾದರು ಕೆಲಸ ನಿಗದಿಯಾಗಿರುತ್ತದೆ...! ಕಳೆದೊಂದು ವಾರದಿಂದ ಕೆಲಸದ ಒತ್ತಡ ಸ್ವಲ್ಪ ಕಡಿಮೆ ಆದಂತಿದೆ...! ಬ್ಲಾಗ್ ಕಡೆಗೆ ತಲೆ ಹಾಕಿ ನೆಮ್ಮದಿಯಾಗಿ ಎಲ್ಲರ ಪೋಸ್ಟುಗಳನ್ನು ಓದಲು ಸಾಧ್ಯವಾಗಿದೆ...! ಬೆಂಗಳೂರಿನಲ್ಲಿ ಕಳೆದೆರಡು ದಿನದಿಂದ ನಿರಂತರ ಮಳೆಯಾಗುತ್ತಿದೆ. ಹವಾಮಾನ, ತಂಪಾದ ವಾತಾವರಣ ಮತ್ತೆ ತಿರುಗಾಟಕ್ಕೆ ಹುರುಪು ನೀಡುತ್ತಿದೆ. ಹಾಗೆಯೇ ಹಿಂದಿನ ಪ್ರವಾಸದ ಅನುಭವ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಪ್ರೋತ್ಸಾಹ ಎಂದಿನಂತೆಯೇ ಇರಲಿ.

ಈ ವರ್ಷ ಬೇಸಿಗೆಯಲ್ಲಿ "ನಮ್ಮ ಬೆಂಗಳೂರು" ಅತೀ ಹೆಚ್ಚಿನ ಬಿಸಿಲು, ಸೆಖೆಗೆ ಬೆಂಡಾಗಿದೆ. ಈ ಬೇಸಿಗೆಯ ದಿನಗಳಲ್ಲಿ ವಾರಾಂತ್ಯ ಕಳೆಯುವುದು ಸ್ವಲ್ಪ ಕಷ್ಟ. ಹೊರಗಡೆ ಸುತ್ತಾಡಲು ಮನಸ್ಸು ಬಾರದು, ಮನೆಯೊಳಗಿದ್ದರೆ ತಾಳಲಾರದ ಸೆಖೆ, ಕರೆಂಟು ಕೂಡ ಇರುವುದಿಲ್ಲ. ಇಂತಹ ದಿನಗಳಲ್ಲಿ ಜಲಪಾತಕ್ಕೆ ಮೈಯೊಡ್ಡಿ ನಿಂತು ದಿನವಿಡೀ ಕಳೆಯುವುದು ಸ್ವರ್ಗದಷ್ಟು ಸುಖ. ಇಂತಹುದೇ ಆಲೋಚನೆಗಳೊಂದಿಗೆ ಕೇರಳದ 'ವಯನಾಡ್' ನತ್ತ ಮಾರ್ಚ್ ೧೩ ಬೆಳಗಿನ ಜಾವ ಸುಮಾರು ೬ ಗಂಟೆಯ ವೇಳೆ ಅರವಿಂದನ ಹೊಚ್ಚ ಹೊಸ ಸ್ವಿಫ್ಟ್ ಕಾರಿನಲ್ಲಿ ಹೊರಟೆವು. ದೂರದ ಪ್ರಯಾಣವು ಅಲ್ಲದ, ರಸ್ತೆ ಸಂಪರ್ಕವು ಉತ್ತಮವಾಗಿರುವ ವಯನಾಡ್ ವಾರಾಂತ್ಯಕ್ಕೆ ಅತೀ ಸೂಕ್ತವಾದ ಸ್ಥಳ.

ವಯನಾಡ್ ಬಗ್ಗೆ ಒಂದಿಷ್ಟು :
ಕೇರಳ ರಾಜ್ಯದ ಉತ್ತರಕ್ಕಿದೆ ವಯನಾಡ್ ಜಿಲ್ಲೆ. ಮಲೆಯಾಳಂ ನಲ್ಲಿ "ವಯಲ್(ಅಕ್ಕಿ)" + "ನಾಡ್(ಪ್ರದೇಶ)", ಅಕ್ಕಿಯ ತವರೂರು ಎಂದರ್ಥ. ಪಶ್ಚಿಮ ಘಟ್ಟಗಳ ಸಾಲಿನ ತಪ್ಪಲಿನಲ್ಲಿ ಈ ಸುಂದರ ನಾಡಿದೆ. ಇಲ್ಲಿನ ಜಲಪಾತಗಳು, ಕಣಿವೆ, ಬೆಟ್ಟಗುಡ್ಡಗಳು, ಹಸಿರು ಕಾನನ ಎಲ್ಲವು ವಯನಾಡನ್ನು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಿದೆ. ಕಾಫಿ ಮತ್ತು ಟೀ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ. ಇಲ್ಲಿ ಕಾಫಿ ಮತ್ತು ಟೀ ಎಸ್ಟೇಟ್ ಗಳನ್ನೂ ಅಕ್ಕ-ಪಕ್ಕದಲ್ಲಿಯೇ ಕಾಣಬಹುದು. ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳೆಂದರೆ ಎಡಕಲ್ಲು ಗುಡ್ಡ, ಕುರ್ವ ದ್ವೀಪ, ದೇವಸ್ಥಾನಗಳು, ಬಾಣಸುರ ಆಣೆಕಟ್ಟು, ಮಾತುಂಗ & ವಯನಾಡ್ ಸಂರಕ್ಷಿತ ಅರಣ್ಯ, ಚಂಬ್ರ ಗುಡ್ಡ ಮತ್ತು ಇನ್ನು ಅನೇಕ..!

ಎಂದಿನಂತೆ ಮೈಸೂರು ರಸ್ತೆಯ ಕಾಮತ್ ಹೋಟೆಲಿನಲ್ಲಿ ರುಚಿಯಾದ ಉಪಹಾರ ಮುಗಿಸಿದೆವು. ಮೈಸೂರು - ನಂಜನಗೂಡು - ಗುಂಡ್ಲುಪೇಟೆ ಮಾರ್ಗವಾಗಿ ಸುಲ್ತಾನ್-ಭತೆರಿ ಕಡೆ ಸಾಗಿದೆವು. ಹಸಿರು ಮರೆಯಾಗಿದ್ದರು ತಂಪಾದ ಅರಣ್ಯ ಪ್ರದೇಶ, ಚಂದದ ದಾರಿ, ಯಾವುದಾದರು ಕಾಡು ಪ್ರಾಣಿ ಎದುರಾಗುವುದೆಂಬ ಕುತೂಹಲ. ಎಂದಿನಂತೆಯೇ ಈ ಸಲವೂ ನಿರಾಶೆ. ಸುಲ್ತಾನ್ ಭತೆರಿ ತಲುಪಿದಾಗ ೧೧ ಗಂಟೆ ಆಗಿತ್ತು. ಇದು ವಯನಾಡಿನ ಪ್ರಮುಖ ಪಟ್ಟಣ. ಪ್ರವಾಸಿಗರಿಗೆ ಬೇಕಾದ ಎಲ್ಲ ಅನುಕೂಲಗಳು ಇವೆ, ಇಲ್ಲಿಂದ ಸುತ್ತಮುತ್ತಲ ಪ್ರದೇಶಗಳಿಗೆ ಸುಲಭವಾಗಿ ಹೋಗಿಬರಬಹುದು. ಮೊದಲೇ ನಿರ್ಧರಿಸಿದಂತೆ ನೇರವಾಗಿ "ಮೀನಮಟ್ಟಿ" ಜಲಪಾತಕ್ಕೆ ತೆರಳಿದೆವು. ಇದು 'ಮೆಪ್ಪಾಡಿ' ಎಂಬ ಊರಿನ ಹತ್ತಿರ ಇದೆ.

ಮೀನಮಟ್ಟಿ ಜಲಪಾತದ ಬಗ್ಗೆ : Meppaadi ಇಂದ ಊಟಿಗೆ ಹೋಗುವ ಮಾರ್ಗದಲ್ಲಿ ಈ ಜಲಪಾತ ಇದೆ. ಜಲಪಾತ ಇರುವ ಸ್ಥಳ ಕೇರಳ ಮತ್ತು ತಮಿಳುನಾಡು ಗಡಿ ಭಾಗ. ಕೇರಳದ ಅತೀ ದೊಡ್ಡ ಜಲಪಾತಗಳಲ್ಲಿ ಇದು ಒಂದು. ಸುಮಾರು ೩೦೦ ಮೀ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಮೀನಮಟ್ಟಿ ಅಂದರೆ "ಮೀನು ಈಜಲಾರದು" ಎಂದರ್ಥ. ಇಲ್ಲಿನ ನೀರಿನ ರಭಸಕ್ಕೆ ಮೀನುಗಳು ನೀರಿನ ವಿರುದ್ಧ ದಿಕ್ಕಿನಲ್ಲಿ ಈಜಲಾರವು. ಸುತ್ತಲೂ ಟೀ ಎಸ್ಟೇಟ್, ಹಸಿರಿನ ಕಣಿವೆ ಈ ಜಲಪಾತದ ಸೌಂದರ್ಯ ಇಮ್ಮುಡಿಗೊಳಿಸಿವೆ. ಜಲಪಾತದ ಸನಿಹ ಹೋಗಲು ಸ್ವಲ್ಪ ಕಷ್ಟದ ದಾರಿ ಆದ್ದರಿಂದ ಪ್ರವಾಸಿಗರು ಸ್ವಲ್ಪ ಕಡಿಮೆ.ಪ್ರವೇಶ ಶುಲ್ಕ ನಿಗದಿತ ೩೦೦ ರೂಪಾಯಿ ಪಾವತಿಸಿ, ಒಬ್ಬ ಅನುಭವಿ ಮಾರ್ಗದರ್ಶಕನ ಜೊತೆ ಎಸ್ಟೇಟ್ ಮಧ್ಯೆ ಹೊರಟೆವು. ಹಚ್ಚ ಹಸಿರಿನ ಸಮತಟ್ಟಾದ ಟೀ ಎಸ್ಟೇಟ್ ಸೊಬಗನ್ನು ಸವಿಯುತ್ತ, ಅಲ್ಲಲ್ಲಿ ಫೋಟೋ ಕ್ಲಿಕ್ಕಿಸುತ್ತ ನಡೆದೆವು. ಸುಮಾರು ೧೦ ನಿಮಿಷ ನಡೆದ ಮೇಲೆ ಅಲ್ಲಿನ ನಿಜವಾದ ಕಷ್ಟದ ಅರಿವಾದದ್ದು. ಮುಂದಕ್ಕೆ ಒಮ್ಮೆಲೇ ಪ್ರಪಾತ, ಸಣ್ಣ ಕಾಲುದಾರಿ, ಇಳಿಜಾರು..! ಅಲ್ಲಲ್ಲಿ ಹಗ್ಗದ ಸಹಾಯದಿಂದ ಜಾಗರೂಕತೆಯಿಂದ ಇಳಿಯಬೇಕು.! ಸ್ವಲ್ಪ ಎಚ್ಚರ ತಪ್ಪಿದರೂ ಬದುಕುಳಿಯುವುದು ಕಷ್ಟ..! ಸಣ್ಣ ಮಟ್ಟಿನ ಸಾಹಸ ಚಾರಣವೇ ಸೈ. ಆದರೆ ಅಷ್ಟೇ ಮಜಾ ಬಂತು..!!


ಜಲಪಾತ ನೋಡಿದಾಗ ನಮ್ಮೆಲ್ಲ ಕಷ್ಟವು ಸಾರ್ಥಕ ಅನ್ನಿಸಿತು. ನಾವು ಏನನ್ನು ನಿರೀಕ್ಷಿಸಿದ್ದೆವೋ ಅದಕ್ಕಿಂತಲೂ ಹೆಚ್ಚಿನ ಸೌಂದರ್ಯದ ಜಲಪಾತ ಇದಾಗಿತ್ತು. ಬೇಸಿಗೆ ಕಾಲದಲ್ಲಿಯೂ ಇಷ್ಟರ ಮಟ್ಟಿನ ನೀರನ್ನು ನಿರೀಕ್ಷಿರಲಿಲ್ಲ..! ಹಾಲು ಬಿಳುಪಿನ ಸುಂದರ ಜಲಧಾರೆ ನಮ್ಮನ್ನ ಕಳೆದು ಹೋಗುವಂತೆ ಮಾಡಿತು. ಸುತ್ತಲೂ ಓಡಾಡಿಕೊಂಡು ಎಲ್ಲ ರೀತಿಯಲ್ಲೂ ಜಲಪಾತದ ಸೊಬಗನ್ನು ಕಣ್ಣತುಂಬಿಕೊಂಡೆವು. ಹೆಚ್ಚಿನ ತಡಮಾಡದೆ ನೀರಿಗೆ ಜಿಗಿದು ಮೈ-ಮನ ಹಗುರಾಗಿಸಿಕೊಂಡೆವು. ಮಧ್ಯಾನ್ನದ ಊಟದ ಹಸಿವನ್ನು ಮರೆತು ಸಾಯಂಕಾಲದ ತನಕ ನೀರಲ್ಲಿ ಆಟ ಆಡಿಕೊಂಡಿದ್ದೆವು. ಜಲಪಾತದ ಸೌಂದರ್ಯದ ಬಗ್ಗೆ ನಾನು ಹೆಚ್ಚಿಗೆ ಹೇಳಬೇಕಾಗಿಲ್ಲ.. ಈ ಕೆಳಗಿನ ಚಿತ್ರಗಳೇ ಅದನ್ನ ವರ್ಣಿಸುತ್ತವೆ..!


ಸಾಯಂಕಾಲ ೫ ಗಂಟೆಯ ವರೆಗೆ ತೃಪ್ತಿಯಾಗುವಷ್ಟು ಸಮಯ ಕಳೆದು, ಅಲ್ಲಿಯೇ ಇದ್ದ ಮೆಸ್ ಒಂದರಲ್ಲಿ ಊಟ ಮುಗಿಸಿದೆವು. ಅಲ್ಲಿನ ಮಸಾಲೆ ಮಜ್ಜಿಗೆ ಇನ್ನು ನೆನಪಿನಲ್ಲಿದೆ..ಅಷ್ಟು ರುಚಿಯಾಗಿತ್ತು. ಜಲಪಾತಕ್ಕೆ ಹೋಗುವ ಮುನ್ನ ಇಂತಿಷ್ಟು ಜನರಿಗೆ ಊಟ ಅಂತ ತಿಳಿಸಿ ಹೋದರೆ ವಾಪಾಸು ಬಂದಾಗ ಬಿಸಿ ಬಿಸಿ ಊಟ ತಯಾರಿಸಿ ಇಡುತ್ತಾರೆ. ಪ್ರವಾಸಿಗರೇ ಇಲ್ಲಿನವರಿಗೆ ಆದಾಯದ ಮೂಲ. ವಯನಾಡಿನಲ್ಲಿ 'WAIST ಬಿನ್'..!! ಕೂಡ ಇದೆ, ಯಾರಾದರು ಸೊಂಟ ಮುರಿದವರು ಇದನ್ನ ಉಪಯೋಗಿಸಬಹುದೇನೋ..!!

ಅಲ್ಲಿಂದ ಸುಮಾರು ೮ ಕಿ.ಮೀ ದೂರ ಇರುವ 'ಸನ್ಸೆಟ್ ಪಾಯಿಂಟ್' ಗೆ ತೆರಳಿದೆವು. ರಸ್ತೆಯ ಪರಿಸ್ಥಿತಿ ತುಂಬಾ ಹದಗೆಟ್ಟಿರುವುದರಿಂದ ಮತ್ತು ಎಲ್ಲಿಯೂ ಮಾರ್ಗಸೂಚಿ ಫಲಕ ಇಲ್ಲದಿರುವ ಕಾರಣ ೮ ಕಿ.ಮೀ ತಲುಪಲು ಮುಕ್ಕಾಲು ಗಂಟೆಯೇ ಬೇಕಾಯಿತು. ಪಶ್ಚಿಮ ಘಟ್ಟ ಬೆಟ್ಟಗಳು, ಹಸಿರು ಕಾನನ, ಕಡಿದಾಗ ಕಣಿವೆ, ಅಲ್ಲಿಯೇ ಹರಿಯುವ ನದಿ ಎಲ್ಲವೂ ನಯನಮನೋಹರ.

ಸೂರ್ಯಾಸ್ತದ ದೃಶ್ಯದ ಸೊಬಗು, ನಿಶ್ಯಬ್ದ ವಾತಾವರಣ, ಹಕ್ಕಿಗಳ ಕಲರವ, ಒಂದು ಸುಂದರ ಸಂಜೆಯನ್ನು ಕಳೆದು ಕಲ್ಪೆಟ್ಟ ಎಂಬ ಪಟ್ಟಣಕ್ಕೆ ಬಂದು ಒಂದು ಲಾಡ್ಜ್ ಬುಕ್ ಮಾಡಿ, ಊಟ ಮುಗಿಸಿ ನಿದ್ದೆಗೆ ಶರಣಾದೆವು. ಭಾನುವಾರ ಬೇಗನೆ ಎದ್ದು, ಸ್ನಾನ ಕರ್ಮಾದಿಗಳನ್ನ ಮುಗಿಸಿ ತಿಂಡಿ ತಿಂದು ಚಂಬರ ಪರ್ವತ ಚಾರಣಕ್ಕೆ ಅಣಿಯಾದೆವು.

ಚಂಬರ ಪರ್ವತ ಬಗ್ಗೆ : ಸಮುದ್ರ ಮಟ್ಟಕ್ಕಿಂತ ೬೯೮೦ ಅಡಿ ಎತ್ತರ ಇರುವ ಚಬ್ಮರ ಪರ್ವತ ವಯನಾಡಿನ ಎತ್ತರದ ಪರ್ವತ. ಇದು ಮೆಪ್ಪಾಡಿ ಹತ್ತಿರ ಇದೆ. ಚಂಬರ ತುದಿಯವರೆಗಿನ ಚಾರಣಕ್ಕೆ ಪೂರ್ತಿ ೧ ದಿನ ಬೇಕು. ಚಾರಣಕ್ಕೆ ಇಲ್ಲಿನ ಅರಣ್ಯಾಧಿಕಾರಿಗಳ ವಿಶೇಷ ಪರವಾನಿಗೆ ಬೇಕು. ಪರವಾನಿಗೆ ಫೀಜು ಮತ್ತು ಒಬ್ಬ ಮಾರ್ಗದರ್ಶಿ ಸೇರಿ ಒಬ್ಬರಿಗೆ ೧೦೦ ರೂಪಾಯಿ. ಸಂಪೂರ್ಣ ವಯನಾಡು ಜಿಲ್ಲೆಯ ಸುಂದರ ದೃಶ್ಯಾವಳಿ ಇಲ್ಲಿನ ವಿಶೇಷತೆ. ಪರವಾನಿಗೆ ಪಡೆದು ರಾತ್ರಿ ಸಮಯ ಪರ್ವತದ ತುದಿಯಲ್ಲಿ ತಂಗಬಹುದು.

ಬೆಳಿಗ್ಗೆ ೯ ಗಂಟೆ ವೇಳೆಗೆ ಚಾರಣ ಪ್ರಾರಂಭಿಸಿದೆವು, ಇಲ್ಲಿನ ಚಾರಣದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಎಷ್ಟು ದೂರ ಪ್ರಯಾಣ, ಎಷ್ಟು ತಾಸು ಚಾರಣ ಎಂದು ಕೇಳಿದ್ದಕ್ಕೆ ಅಧಿಕಾರಿಯೊಬ್ಬರು ಕೇವಲ ೩ ತಾಸು ಅಂದಿದ್ದರು. ನೀರಿನ ಬಾಟಲಿ ಬಿಟ್ಟು ಬೇರಿನ್ನೇನೂ ಒಯ್ಯಲಿಲ್ಲ. ಹೇಗಿದ್ದರೂ ಮಧ್ಯಾನ್ನ ಒಳಗಡೆ ತಿರುಗಿ ಬರುವ ವಿಚಾರ ನಮ್ಮದು. ಎಲ್ಲೆಲ್ಲೂ ಹಸಿರಿನ ಎಸ್ಟೇಟ್ ಗಳು ಕಂಗೋಳಿಸುತಿದ್ದವು. ಬಿಸಿಲಿನ ಝಳ ಕೂಡ ಕಡಿಮೆ ಇತ್ತು. ಮಧ್ಯೆ ಮಧ್ಯೆ ನೀರಿನ ಝರಿ ಇದ್ದರಿಂದ ಅನುಕೂಲವಾಗಿತ್ತು. ಕಾಲುಗಳು ಬೇಗ ಬೇಗನೆ ಹೆಜ್ಜೆ ಹಾಕುತಿದ್ದವು. ೧೨ ಗಂಟೆ ವೇಳೆಗೆ ನಾವು ಸುಮಾರು ೫ ಕಿ ಮೀ ದೂರ ಚಾರಣ ಗೈದಿದ್ದೆವು. ಆಗಲೇ ಬಿಸಿಲು ನೆತ್ತಿಗೇರಿತ್ತು, ಕೈಕಾಲು ಸುಸ್ತಾಗತೊಡಗಿತ್ತು. ನಮ್ಮ ಗೈಡ್ ನ ಕೇಳಿದ್ದಕ್ಕೆ ತುದಿವರೆಗೆ ತಲುಪಲು ಇನ್ನು ೪ ಗಂಟೆ ನಡೆಯಬೇಕೆಂದು ಹೇಳಿದ.

ತಿಂಡಿ ತಿನಿಸನ್ನು ಕೂಡ ಕೊಂಡೊಯ್ದಿರಲಿಲ್ಲ. ಹೊಟ್ಟೆ ಬೇರೆ ತಾಳ ಹಾಕಲು ಶುರು ಆಯಿತು. ಎಲ್ಲರಲ್ಲೂ ತುದಿಯವರೆಗೆ ಚಾರಣ ಮುಂದುವರೆಸುವ ಯಾವುದೇ ಆಸಕ್ತಿ ಇರಲಿಲ್ಲ. ನಮ್ಮ ಗೈಡ್ ಗೆ ಬೇರೆ ಮಲಯಾಳಂ ಬಿಟ್ಟು ಬೇರೆ ಯಾವುದೇ ಭಾಷೆಯ ಗಂಧ ಗಾಳಿ ತಿಳಿದಿರಲಿಲ್ಲ. ಅವನಿಗೆ ಹೇಗೋ ಅರ್ಥ ಮಾಡಿಸಿದೆವು, ಚಾರಣ ಮೊಟಕುಗೊಳಿಸಿ ಹಿಂತಿರುಗೋಣ ಅಂತ. ಆದರೆ ಅವನು ಏನೋ ಹೇಳುತ್ತಲಿದ್ದ, ನಮಗೆ ಅರ್ಥ ಆಗಿದ್ದು ಇಷ್ಟೇ, ಮುಂದೆ ಸನಿಹದಲ್ಲಿ ಏನೋ ಇದೆ ಅದನ್ನು ನೋಡಿ ಹಿಂತಿರುಗಬಹುದು ಎಂದು.


ನಿಜಕ್ಕೂ ನಾವು ಹಿಂತಿರುಗಿದ್ದಾರೆ ಅದ್ಭುತವಾದ ದೃಶ್ಯವನ್ನು ಕಳೆದುಕೊಳ್ಳುತ್ತಿದ್ದೆವು. ಪ್ರಕೃತಿಯ ಸೋಜಿಗ ' ಹೃದಯ ಆಕಾರದ ಕೆರೆ', ಅದೂ ಸುಮಾರು ೬೫೦೦ ಅಡಿ ಎತ್ತರದಲ್ಲಿ ..!! ಕೆರೆಯ ನೀರು ಯಾವತ್ತಿಗೂ ಬತ್ತುವುದಿಲ್ಲ, ಇದು ಇಲ್ಲಿನ ಕಾಡು ಪ್ರಾಣಿಗಳಿಗೆ ಆಸರೆ ಅಂತ ಆತ ವಿವರಿಸಿದ.

ಸುತ್ತಲಿನ ದೃಶ್ಯವಂತೂ ಮನೋಹರವಾಗಿತ್ತು. ಅಲ್ಲಿಗೆ ಸ್ವಲ್ಪ ಹೊತ್ತು ವಿರಮಿಸಿಕೊಂಡು, ಮತ್ತೊಂದು ದಿನ ಪೂರ್ಣ ತಯಾರಿಯೊಂದಿಗೆ ತುದಿಯ ತನಕ ಚಾರಣಕ್ಕೆ ಬರುವುದೆಂದು ತೀರ್ಮಾನಿಸಿ ನಾವು ಹಿಂತಿರುಗಿದೆವು. ಮೆಪ್ಪಡಿ ಯಲ್ಲಿ ಕೇರಳ ಪರೋಟ ತಿಂದು, ಕಂಥನಪರ ಜಲಪಾತದತ್ತ ತೆರಳಿದೆವು.

ಕಂಥನಪರ ಜಲಪಾತ : ಉಳಿದೆಲ್ಲ ಜಲಪಾತಕ್ಕೆ ಹೋಲಿಸಿದರೆ ಇದು ಚಿಕ್ಕದು. ಮುಖ್ಯ ರಸ್ತೆಗೆ ತುಂಬಾ ಹತ್ತಿರದಲ್ಲಿರುವ ಈ ಜಲಪಾತ ಸುತ್ತ ಮುತ್ತಲ ಕಾಡು, ಬಂಡೆಗಲ್ಲಿನಿಂದ ಸುಂದರವಾಗಿ ಕಾಣಿಸುತ್ತದೆ. ಸುಮಾರು ೩೦ ಅಡಿ ಎತ್ತರದ ಜಲಪಾತ ಒಂದು ಸುಂದರ ಪಿಕ್ನಿಕ್ ತಾಣ.


ಚಾರಣದಿಂದ ಬೆಂಡಾಗಿದ್ದ ನಮಗೆ ಈ ಜಲಪಾತ ಹೆಚ್ಚಿನ ಖುಷಿ ಕೊಟ್ಟಿತು, ನೀರಲ್ಲಿ ಈಜಾಡಿ, ನೀರಿನ ರಭಸಕ್ಕೆ ಮೈಯೊಡ್ಡಿ ನಿಂತು ಆಹ್ಲಾದಕರ ಅನುಭವ ಪಡೆದೆವು. ಜನ ಜಂಗುಳಿ ಕಡಿಮೆ ಇದ್ದರಿಂದ ನಮಗೆ ಹೆಚ್ಚಿನ ಸಮಯ ಯಾವುದೇ ಅಡಚಣೆ ಇಲ್ಲದೆ ನೀರಲ್ಲಿ ಕಾಲ ಕಳೆಯುವುದು ಸಾಧ್ಯವಾಯಿತು.

ಸಂಜೆ ೫ ಗಂಟೆಯ ವರೆಗೆ ಇಲ್ಲಿದ್ದು ನಂತರ ಸುಲ್ತಾನ್ ಭಾತೆರಿಗೆ ಬಂದು ಟೀ ಕುಡಿದು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆವು. ಕೇರಳ ಕರ್ನಾಟಕ ಗಡಿಯನ್ನು ರಾತ್ರಿ ೮ ಗಂಟೆ ಇಂದ ಬೆಳಿಗಿನ ೬ ಗಂಟೆಯ ವರೆಗೆ ಕಾಡು ಪ್ರಾಣಿಗಳ ಸುರಕ್ಷತೆಗೋಸ್ಕರ ಮುಚ್ಚಲಾಗುತ್ತದೆ.

ಅಂತೂ ಎರಡು ದಿನ ಹೆಚ್ಚಿನ ಸಮಯ ನೀರಲ್ಲಿ ಕಳೆದು ಪೂರ್ತಿ ಫ್ರೆಶ್ ಆಗಿ, ಸುಂದರ ವಾರಾಂತ್ಯದ ನೆನಪುಗಳೊಂದಿಗೆ ಬೆಂಗಳೂರು ತಲುಪಿದಾಗ ಮಧ್ಯರಾತ್ರಿ. ಮರುದಿನದ ಕೆಲಸದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತ ನಿದ್ರೆಗೆ ಶರಣಾದೆವು.