Saturday, October 9, 2010

ಯಾವುದಾದರು ದೊಡ್ಡ ಬಂಡೆ ದೂರದಲ್ಲಿ ಕಂಡರೂ ಸಾಕು ಕಾರು ಗಕ್ಕನೆ ನಿಂತುಬಿಡುತಿತ್ತು

ಮಿಕ್ಕವರ ಸ್ವಾತಂತ್ರ್ಯ ಹರಣ ಮಾಡಿ ಬದುಕುವ ಮಾನವ ಯಾವತ್ತೂ ಸ್ವಾತಂತ್ರ್ಯ ಪ್ರಿಯ. ಕಾಡಿನಲ್ಲಿ ಮುಕ್ತವಾಗಿ ತಿರುಗಿಕೊಂಡಿದ್ದ ಪ್ರಾಣಿಗಳನ್ನೆಲ್ಲ ಕಟ್ಟಿ ಹಾಕಿ ,ಮನಸೋ ಇಚ್ಛೆ ಆನಂದಿಸುವ ಪ್ರಾಣಿ ಮಾನವ. ಸ್ವಾತಂತ್ರ್ಯ ದಿನವನ್ನು ಸುಮ್ಮನೆ ಮನೆಯಲ್ಲಿ ಕುಳಿತು ಕಳೆಯಲು ಮನಸ್ಸಾಗದೆ ವಿಶೇಷವಾಗಿ ಆಚರಿಸಲೇ ಬೇಕೆಂದು ನಮ್ಮ ಗುಂಪು ತೀರ್ಮಾನಿಸಿ ನಾವು, ಸ್ವಾತಂತ್ರ್ಯ ದಿನವನ್ನ ಆಚರಿಸುವ ಸಲುವಾಗೇ ನಾಡಿನಿಂದ ಕಾಡಿಗೆ ತೆರಳಿದ್ದೆವು, ಅದಕ್ಕಾಗಿ ಸಕಲ ಸಿದ್ಧತೆ ಹಿಂದಿನ ದಿನವೇ ಮಾಡಿಕೊಂಡಿದ್ದೆ. ಅದಕ್ಕೆ ಬೇಕಾದ ಶುಭ್ರವಾದ ಹತ್ತಿ ಬಟ್ಟೆಯ ರಾಷ್ಟ್ರ ಧ್ವಜವನ್ನು, ಉದ್ದನೆಯ ಕೋಲು ಸಹ ಖರೀದಿಸಿದ್ದೆ. ಏನೋ ಒಂದು ತರಹದ ಉತ್ಸಾಹ ಮನೆಮಾಡಿತ್ತು . ೧೪ ರ ರಾತ್ರಿ ಸುಮಾರು ೧೦.೩೦ಕ್ಕೆ ೮ ಜನ ಹುಡುಗರು ಕೂಡಿಕೊಂಡು ೨ ಕಾರಲ್ಲಿ ಮೈಸೂರು ಕಡೆ ಹೊರಟೆವು.ಅಲ್ಲಿಯೇ ನಾವು ಭೇಟಿಯಾದದ್ದು ಕಾಡಿನ ರಾಜನನ್ನ.
ಮಾರ್ಗ ಮಧ್ಯೆ ಎಂದಿನ ನಿಯಮದಂತೆ ದಾಹ ಇಂಗಿಸಿಕೊಳ್ಳಲು ಕಾಫಿ-ಡೇ ಗೆ ನಮ್ಮಭೇಟಿ, ಪುಟ್ಟ ಕೇಕ್ ಒಂದನ್ನು ಖರೀದಿಸಿ ಭರ್ಜರಿ ಘೋಷಣೆ, ಜೈ ಭಾರತ್,ಮೇರಾ ಭಾರತ್ ಮಹಾನ್ ಎಂಬೆಲ್ಲಾ ಜೈಕಾರ ದೊಂದಿಗೆ, ಖರೀದಿಸಿದ ಕೇಕ್ ಕತ್ತರಿಸಿ ಬಾಯಿ ಸಿಹಿಮಾಡಿದೆವು. ಹಿತವಾದ ಕಾಪ್ಪಿಚಿನೋ ಕುಡಿದು ನಮ್ಮ ತಂಡ ಅಲ್ಲಿಂದ ಮುಂದೆ ಹೊರಟಿದ್ದು ನಿಜ. ಉತ್ತಮ ರಸ್ತೆ, ತಣ್ಣನೆಯ ಗಾಳಿ, ಇಂಪಾದ ಸಂಗೀತ, ಮೋಜು ಮಸ್ತಿ, ಮಾತು ಹರಟೆಗಳಿಂದ ನಮ್ಮ ಪ್ರಯಾಣ ಕಳೆಗಟ್ಟಿತ್ತು.

ಗುಂಡ್ಲುಪೇಟೆ ದಾಟಿ, ಗೋಪಾಲ ಸ್ವಾಮಿ ಬೆಟ್ಟದ ಚೆಕ್ ಪೋಸ್ಟ್ ತಲುಪಿದಾಗ ಬೆಳಗಿನ ಜಾವ ೫ ಗಂಟೆಯ ಮಂದ ಬೆಳಕು ನಮ್ಮನ್ನ ಸ್ವಾಗತಿಸಿತ್ತು. ಕಾಡು ಪ್ರಾಣಿಗಳು, ಆನೆಗಳು ಇಲ್ಲಿ ಸಂಚರಿಸುವುದು ಸಾಮಾನ್ಯ. ಸಂಜೆ ೬ ರಿಂದ ಬೆಳಿಗ್ಗೆ ೬ ರ ವರೆಗೆ ಚೆಕ್ ಪೋಸ್ಟ್ ನಿಂದ ಬೆಟ್ಟಕ್ಕೆ ಪ್ರಯಾಣ ನಿಷೇಧಿಸಲಾಗಿದೆ. ಅವುಗಳ ರಕ್ಷಣೆಗೆ ಮಾತ್ರ ಅಲ್ಲ, ಅವುಗಳಿಂದ ನಮಗೂ ರಕ್ಷಣೆ ಬೇಕಲ್ಲ, ಅದಕ್ಕೆ ಈ ನಿರ್ಬಂಧ. ನಾವು ಗೇಟಿನ ಮುಂದೆ ಕಾದೆವು.


ಸುಮಾರು ಅರ್ಧ ಕಿ.ಮೀ ಹೋಗುವಷ್ಟರಲ್ಲೇ, ರಸ್ತೆ ತುಂಬಾ ಮುರಿದ ಮರದ ಕೊಂಬೆಗಳು, ಅಲ್ಲಲ್ಲಿ ರಸ್ತೆ ಬದಿಯ ಮಣ್ಣನ್ನು ಎತ್ತಿ ಹಾಕಿದ ಗುರುತು, ಹಸೀ ಹಸೀ ಲದ್ದಿ..! ನಮ್ಮ ಧೈರ್ಯ ಅರ್ಧ ಕಡಿಮೆ ಆಯಿತಿರಬೇಕು, ನಮ್ಮ ಕಾರು ಮುಂದಕ್ಕೆ ಹೋಗುತ್ತಲೇ ಇರಲಿಲ್ಲ...!! ಹಿಂತಿರುಗಿ ಹೋಗುವಂತೆಯೂ ಇರಲಿಲ್ಲ..ಕಾರನ್ನು ತಿರುಗಿಸುವುದು ಕಷ್ಟ ಆಗಿತ್ತು..! ಏನಾದರೂ ಒಂದು ಕೈ ನೋಡಿಯೇ ಬಿಡೋಣ ಎಂದು ಮುಂದೆ ಹೊರಟೆವು. ಯಾವುದಾದರು ದೊಡ್ಡ ಬಂಡೆ ದೂರದಲ್ಲಿ ಕಂಡರೂ ಸಾಕು ಕಾರು ಗಕ್ಕನೆ ನಿಂತುಬಿಡುತಿತ್ತು...:-)


ಅಷ್ಟರಲ್ಲೇ, ಪಕ್ಕದ ಕುರುಚಲು ಕಾಡಿನಿಂದ ಹುಲಿಯೊಂದು ಚಂಗನೆ ಜಿಗಿದು ರಸ್ತೆ ಅಡ್ಡಲಾಗಿ ಹೋಗಿ ಕಾಡಲ್ಲಿ ಮತ್ತೆ ಮರೆಯಾಯಿತು, ಅದೊಂದು ಅದ್ಭುತ ಅನುಭವ; ಹೀಗೆ ಹುಲಿಯೊಂದನ್ನು ನಾನು ಮೊದಲು ನೋಡಿದ್ದಿಲ್ಲ..! ಆದರೂ, ಆಗಲೇ ಹೆದರುತ್ತಲೇ ಬಂದದ್ದು ಕೂಡ ಸಾರ್ಥಕ ಅನ್ನಿಸಿದ್ದು. ಮುಂದೆ ಸ್ವಲ್ಪ ದೂರದಲ್ಲಿ "ಸೂಚನ ಫಲಕ" ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು, ರೆಂಬೆ ಕೊಂಬೆಗಳು ಸುತ್ತಲೂ ಮುರಿದಿದ್ದವು , ನಮ್ಮನ್ನ ಆವರಿಸಿದ್ದ ಭಯ ಮತ್ತು ಹೆಚ್ಚಿತು, ಹತ್ತಿರದಲ್ಲಿ ಆನೆಗಳ ಗುಂಪು ಇದೆ ಎಂಬ ಸೂಚನೆಯಿಂದಾಗಿ ಮುಂದೆ ಹೋಗುವ ಧೈರ್ಯ ಯಾರಿಗೂ ಇರಲಿಲ್ಲ, ಮುಂಜಾನೆಯ ಚಳಿಯಲ್ಲೂ ನಿಧಾನಕ್ಕೆ ಬೆವರಿಳಿಯತೊಡಗಿತು..! ಮುಂದೆ ಹೋಗುವಂತೆಯೂ ಇಲ್ಲ..ಹಿಂತಿರುಗುವಹಾಗು ಇಲ್ಲ! ಉಳಿದವರ ಧೈರ್ಯದ ಮೇಲೆ ಅಂತೂ ಮುಂದೆ ಹೊರಟರು ಚಿಕ್ಕ ಭಯ ಬಿಟ್ಟಿರಲಿಲ್ಲ; ಪುಣ್ಯಕ್ಕೆ ಆನೆಗಳ ಹಿಂಡು ದಾರಿಯಲ್ಲೆಲ್ಲೂ ಸಿಗಲಿಲ್ಲ.

ಸಾಮಾನ್ಯವಾಗಿ ಕಾಡಿನಲ್ಲಿ ಪ್ರಯಾಣಿಸುವಾಗ ಎಲ್ಲಾದರೂ ಆನೆಗಳ ಹಿಂಡು ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಆದರೆ, ನಮ್ಮ ಪರಿಸ್ಥಿತಿ ಉಲ್ಟಾ..ಆನೆಗಳು ಎದುರಾಗದಿರಲಿ ಎಂದು ಪ್ರಾರ್ಥಿಸುವದಾಗಿತ್ತು ನಮ್ಮ ಕೆಲಸ.

ಮುಕ್ಕಾಲು ಗಂಟೆಯ ಪ್ರಯಾಣದ ನಂತರ ದೇವಸ್ಥಾನದ ಸಮೀಪವಾಗಿತ್ತು . ಮುಂಜಾನೆಯ ದೃಶ್ಯ ನಿಜಕ್ಕೂ ಬಹಳ ಅದ್ಭುತ. ಹಕ್ಕಿಗಳ ಚಿಲಿಪಿಲಿ, ತಣ್ಣನೆಯ ಗಾಳಿ, ಸುಂದರ ದೇವಸ್ಥಾನ, ಕೆಂಪಾಗುತ್ತಿರುವ ಮೂಡಣ..! ಒಂದಕ್ಕಿಂತ ಒಂದು ಹೆಚ್ಚು ಇಂಪು. ಕಣ್ಣಿಗೆ ಮನಕ್ಕೆ ತಂಪು ತಂದಿದ್ದವು, ಸಾರ್ಥಕತೆಯ ಖುಷಿಯಿಂದ ಕುಣಿದಾಡಿದೆವು. ಅವ ಬೆಳಿಗ್ಗೆ ನಮಗೆ ಉಚಿತ ಬಿಸಿ ಬಿಸಿ ಚಹಾ ಕೂಡ ಮಾಡಿಕೊಟ್ಟ.
ಪುನಃ ಅವನಿಗೆ ಕೇಳಿದೆವು ಇಲ್ಲಿ ಆನೆಗಳನ್ನು ನೋಡಬೇಕು ಎಲ್ಲಿ ಇರುತ್ತವೆ ತೋರಿಸು ಅಂತ, ಅದಕ್ಕೆ ಆತ ಸ್ವಾಮಿ ದೇವಸ್ಥಾನದ ಹಿಂಬಾಗ ನೋಡಿ ಆನೆಗಳ ಗುಂಪೇ ಇದೆ ಅಂದ. ನಾವು ಓಡಿ ಹೋಗಿ ನೋಡಿದರೆ ೧೦-೧೨ ಆನೆಗಳ ಗುಂಪೇ ಅಲ್ಲಿತ್ತು! ಆನೆಗಳಿಗೆ ತೊಂದರೆ ಆಗದಂತೆ ತಾಸುಗಟ್ಟಲೆ ದೂರದಲ್ಲಿ ನಿಂತು, ಅವುಗಳನ್ನು ಅತೀ ಹತ್ತಿರದಿಂದ ನಿಂತು ನೋಡಿದೆವು. ಬೆಳಕು ಹರಿಯುತ್ತಲೇ ಅವು ಬೆಟ್ಟದ ಕಣಿವೆಯಲ್ಲಿ ಮರೆಯಾಗತೊಡಗಿದವು, ಅಂತೆಯೇ ಪ್ರವಾಸಿಗರ ವಾಹನಗಳು ಹೆಚ್ಚಿದವು.

ಬೆಳಗ್ಗೆ, ಪಕ್ಕದ ಗಿಡಗಂಬಹಿರ್ದೆಸೆಗೆಂದುಟಿಯ ಹಿಂಬಾಗಕ್ಕೆ ಮರೆಯಾಗಿ ಹೋದ ಗೆಳೆಯ ರವಿ, ಒಂದೇ ನಿಮಿಷದಲ್ಲಿ ಏದುಸಿರು ಬಿಡುತ್ತ ಓಡಿ ಬಂದ.ಏನಾಯಿತು ಅಂತ ಕೇಳಿದರೆ, ಆ ಪೊದೆಯ ಹಿಂದೆ ಒಂದು ಕಾಡೆಮ್ಮೆ ಇತ್ತು, ಅವನನ್ನ ನೋಡಿ ಒಂದು ಸಲ ಗುಟುರು ಹಾಕಿತ್ತು. ಆತ ಪ್ಯಾಂಟಿನ ಜಿಪ್ ಹಾಕುವುದು ಮರೆತು ಓಡಿಬಂದಿದ್ದ..:-)
ಪೂರ್ತಿ ಬೆಳಗಾದಾಗ ಪ್ರವಾಸಿಗರು, ಭಕ್ತರು ಬಂದು ದೇವಸ್ಥಾನದ ಹಿಂಬಾಗದ ಬೆಟ್ಟದ ತುಂಬೆಲ್ಲಾ ಓಡಾಡಿ ಗಲಾಟೆ ಜಾಸ್ತಿ ಆಗಿದ್ದರಿಂದ ಎಲ್ಲ ಆನೆಗಳು ಮರೆಯಾದವು.


ಗೋಪಾಲ ಸ್ವಾಮಿ ಬೆಟ್ಟದ ಸುತ್ತಲಿನ ಪ್ರದೇಶ ಸುಂದರವಾಗಿದೆ. ಹಸಿರು ಕಣಿವೆ, ಬಂಡೀಪುರ ಕಾಡಿನ ಸಾಲು, ಮೋಡಗಳು, ದೂರದಲ್ಲಿ ಕಾಣುವ ಆನೆಗಳ ಹಿಂಡು, ಶಾಂತವಾದ ವಾತಾವರಣ ಮನಸ್ಸಿಗೆ ಹಿತ ನೀಡಿತ್ತು. ಯಾಂತ್ರಿಕ ಜೀವನದ ಮಧ್ಯೆ ಸುಂದರ ದಿನ ಕಳೆಯಲು ಇದು ಸೂಕ್ತ ಜಾಗ. ಬೇಸಿಗೆಯ ಕಾಲದಲ್ಲೂ ಇಲ್ಲಿ ಮೋಡ ಸುತ್ತುವರಿದಿರುತ್ತದೆ. ಹಾಗಾಗಿ ಇದಕ್ಕೆ "ಹಿಮವದ್ ಗೋಪಾಲ ಸ್ವಾಮಿ ಬೆಟ್ಟ" ಅಂತ ಕರೆಯುತ್ತಾರೆ. ಸದಾ ಕಾಲ ಗರ್ಭಗುಡಿಯ ಮೇಲ್ಭಾಗದಲ್ಲಿ ನೀರು ಜಿನುಗುತ್ತಿರುತ್ತದೆ..!

ನಂತರ ಒಂದಷ್ಟು ಫೋಟೋಗಳನ್ನೂ ತೆಗೆದು, ಗಾರ್ಡ್ ನನ್ನು ಮತ್ತೊಮ್ಮೆ ಮಾತನಾಡಿಸಿ ಬೆಂಗಳೂರಿನತ್ತ ಹೊರಟಾಗ ಮತ್ತೆ ಮುಸ್ಸಂಜೆ..!

6 comments:

Ambika said...

ಸು೦ದರವಾದ ಲೇಖನ.
ನಿಮ್ಮ ಸಾಹಸ ಕಥೆ ಮೈ ನವಿರೇಳಿಸಿತು.
ದೇಶಭಕ್ತಿ ಸ೦ತಸವನ್ನು೦ಟು ಮಾಡಿತು.
ಫೋಟೋಸ್ ಬೇಗ ಬರಲಿ..

ಪಾಚು-ಪ್ರಪಂಚ said...

ಕವಿತಾ ಅವರೇ,

ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್ :-)
ನಿಮ್ಮ ಚುಟುಕಗಳನ್ನು ಓದಿದೆ, ಇಷ್ಟವಾದವು.

-ಪ್ರಶಾಂತ್ ಭಟ್

ಶರಶ್ಚಂದ್ರ ಕಲ್ಮನೆ said...

ಪ್ರಶಾಂತ್,
ಫೋಟೋಸ್ ಸುಪರ್ಬ್... ಹುಲಿ ನೋಡಿದ್ದು ಅದ್ಭುತ ಅನುಭವ. ನಾನು ನಾಲ್ಕು ವರ್ಷದ ಹಿಂದೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋದಾಗ ಹತ್ತಿರದಲ್ಲೇ ಆನೆ ನೋಡಿದ್ದಿ, ಆದರೆ ಹುಲಿ ನೋಡಕ್ಕೆ ಸಿಗಲ್ಲೇ. ನಿನ್ನ ಅನುಭವ ಕೇಳಿ ಮತ್ತೆ ಹೋಗಕ್ಕು ಅನ್ಸ್ತಾ ಇದ್ದು :) once again, photography is just too good. ಬಹಳಾ ತಿಂಗಳುಗಳು ಆದ್ಮೇಲೆ ಬರದ್ದೆ, ಬೇರೆ ಎಲ್ಲೂ ತಿರ್ಗಲೇ ಹೋಗಲ್ಯ ಎಂತು? :)

ಪಾಚು-ಪ್ರಪಂಚ said...

ಥ್ಯಾಂಕ್ಸ್ ಶರತ್.

ಈಗ ತುಂಬಾ ಚಂದ ಇದ್ದು ಗೋಪಾಲಸ್ವಾಮಿ ಬೆಟ್ಟ, ಫುಲ್ ಗ್ರೀನ್. ಒಂದು ಸಲ ಹೋಗು.

ಸುಮಾರು ಸುತ್ತಾಟ ನಡೀತಾ ಇದ್ದು..ಮಧ್ಯೆ ಬರಿಯಲೇ ಅಗಲ್ಲೇ,ಇನ್ಮೇಲೆ ಅಪ್ಡೇಟ್ ಮಾಡ್ತಾ ಇರ್ತಿ.

Thanks for liking the photos :-)

Prashant GY said...

Thanks for making changes in your blog, also we request you to write something about the rules and regulations of the place you visited along with the DO's and DONT's as this help educate people who are educated and unaware of the safety measures.

Thanks, in a hurry to criticise your blog, I forgot to tell you that the PHOTOGRAPHS are awesome. :)

Guru said...

ಭಲೆ... ತಪ್ಪು ಮಾಡೋದು ಮನುಷ್ಯ ಸಹಜ ಗುಣ.. ಅದನ್ನು ಒಪ್ಪಿ ಸರಿಪಡಿಸಿಕೊಳ್ಳೋದು ದೈವ ಗುಣ. ನಿಮ್ಮ ಲೇಖನಗಳನ್ನು ನೋಡಿದರೆ, ನೀವೊಬ್ಬ ಪ್ರಕೃತಿ ಪ್ರೇಮಿ, ದೇಶ ಪ್ರೇಮಿ ಹಾಗು ಒಳ್ಳೆ ಛಾಯಾಗ್ರಾಹಕ ಅಂತ ಗೊತ್ತಾಗುತ್ತದೆ, ಇದರ ಜೊತೆಗೆ ನಮ್ಮ ದೇಶದ ಹೊಲಸು ವ್ಯವಸ್ಠೆಯನ್ನು ಶುಚಿ ಮಾಡಲು ಕೆಲವು ಸಣ್ಣ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.. ನಿಜಕ್ಕೂ ಅವು ತುಂಬಾ ಆತ್ಮ-ಸಂತೃಪ್ತಿಯನ್ನು ಕೊಡುತ್ತವೆ. ಪ್ರಯತ್ನಿಸಿ ನೋಡಿ :)

ಹಳೆ ಅನಿಸಿಕೆಯಲ್ಲಿ ಸ್ವಲ್ಪ ಖಾರವಾಗಿ ಬರೆದಿದ್ದರೆ ಕ್ಷಮಿಸಿ..