Tuesday, December 29, 2009

ಸುಂದರ ಸಾಗರ

ಅಂದು ಶುಕ್ರವಾರ ದಿನಾಂಕ ೧೧ ಡಿಸೆಂಬರ್, ನಮ್ಮ ಸಹೋದ್ಯೋಗಿ ಮನೋಜನ ವಿವಾಹ ನಿಮಿತ್ತ ನಾವು ಶಿವಮೊಗ್ಗಕ್ಕೆ ಬಂದಿಳಿದೆವು. ಸಂಭ್ರಮ, ಸಡಗರದ ಮದುವೆಯ ಕಾರ್ಯಕ್ರಮ ಮುಗಿದ ಮೇಲೆ ಸಾಗರದ ಕಡೆ ನಮ್ಮ ಪ್ರಯಾಣ ಬೆಳೆಸಿದೆವು.

ಸಾಗರದ ನಮ್ಮ ಮನೆಯಲ್ಲಿ ಕಾಫೀ ಕುಡಿದು, ಹತ್ತಿರದಲ್ಲೇ ಇರುವ ಕೆಳದಿ ದೇವಸ್ಥಾನ ದರ್ಶನಕ್ಕೆ ಹೋದೆವು. ಸುಮಾರು 500 ವರ್ಷ ಹಳೆಯ ಕಲ್ಲಿನ ಸುಂದರ ದೇವಾಲಯ. "ಕೆಳದಿ" ಇದು ಕೆಳದಿ ಅರಸರ ರಾಜಧಾನಿ. ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮ ಕೆಳದಿ ಸಾಮ್ರಾಜ್ಯವನ್ನು ಆಳಿದರು. ಕೆಳದಿ ದೇವಾಲಯ ಮುಂಭಾಗ ಮರದ ಬೃಹತ್ ಕಂಬ, ನಾಡಹೆಂಚಿನ ಅರಮನೆಯಂತಿದೆ.

ಸುಂದರ ಹುಲ್ಲು ಹಾಸಿನ ಹೂದೋಟವನ್ನು ದಾಟಿ ಒಳಗೆ ಬಂದರೆ ಕಲ್ಲಿನ ಕೆತ್ತನೆಯ ದೇವಾಲಯ ದೃಶ್ಯ ಲಭ್ಯ.

ರಾಮೇಶ್ವರ, ವೀರಭದ್ರ, ಪಾರ್ವತಿ ದೇವಾಲಯ ಒಳಗೊಂಡ ಕೆಳದಿ ಸಂಕೀರ್ಣವೂ ಹೊಯ್ಸಳ ಮತ್ತು ದ್ರಾವಿಡ ಶೈಲಿಯಲ್ಲಿದೆ. ಪಾರ್ವತಿ ದೇವಸ್ಥಾನದ ಮೇಲ್ಛಾವಣಿಯೂ ಮರದ ಅದ್ಭುತ ಕೆತ್ತನೆಯಿಂದ ಒಳಗೊಂಡಿದೆ.

ಹಾಗೆಯೇ ವೀರಭದ್ರ ದೇವಸ್ಥಾನವು ಕಲ್ಲಿನ ಕೆತ್ತನೆಯಿಂದ ಮನಸೂರೆಗೊಳಿಸುತ್ತದೆ. ಇಲ್ಲಿನ ಇನ್ನೊಂದು ವಿಶೇಷ ಎಂದರೆ, ಒಂದೇ ಕಲ್ಲಿನಲ್ಲಿ ಕೆತ್ತಿದ ಸಂಗೀತ ಕಂಬ. ಈ ಕಂಬವನ್ನು ಮೇಲಿನಿಂದ ಕೆಲವರೆಗೆ ತಟ್ಟಿದಾಗ ಸಪ್ತಸ್ವರ ಬರುತ್ತದೆ. ಪ್ರವಾಸಿಗರು ಕಲ್ಲಿನಲ್ಲಿ ಕುಟ್ಟಿ ಕುಟ್ಟಿ ಈ ಕಂಬ ಶಿಥಿಲವಾಗಿದೆ.

ಸುಮಾರು ೧೦೦ ಎಕರೆ ವಿಸ್ತೀರ್ಣದ ಕೆಳದಿ ಕೆರೆಯು ರಾಣಿ ಚೆನ್ನಮ್ಮಾಜಿ ಕಾಲದಲ್ಲಿ ಕಟ್ಟಲ್ಪಟ್ಟಿದ್ದು. ಮಾಲಿನ್ಯದಿಂದ ಮುಕ್ತವಾಗಿರುವ ಸುಂದರ ಕೆರೆಯ ಪರಿಸರ, ಮನಮೋಹಕ ಸೂರ್ಯಾಸ್ತ ದೃಶ್ಯ, ಸಂಜೆಯ ಸೊಬಗನ್ನು ಇಮ್ಮುಡಿಗೊಳಿಸುತ್ತದೆ.

ಇಕ್ಕೇರಿಯ ಅಘೊರೇಶ್ವರ ದೇವಸ್ಥಾನ :- ಸಾಗರದಿಂದ ೩ ಕೀ ಮೀ ದೂರದಲ್ಲಿರುವ ಇಕ್ಕೇರಿ ಕೇಳದಿ ನಾಯಕರ ರಾಜಧಾನಿ ಆಗಿತ್ತು. ಮಣ್ಣು ಮರದಿಂದ ಕಟ್ಟಲ್ಪಟ್ಟ ಅರಮನೆಯಲ್ಲಿ ಕೆಳದಿ ರಾಜರು ರಾಜ್ಯಭಾರ ಮಾಡಿದರು. ಟಿಪ್ಪು ಸುಲ್ತಾನ್ ನಿಂದ ಆಕ್ರಮಣಕ್ಕೆ ಒಳಗಾದ ಮೇಲೆ ಇಕ್ಕೇರಿಯ ಅರಮನೆ ನಾಶವಾಯಿತು. ಈಗ ಉಳಿದಿರುವುದು ಕಲ್ಲಿನ ಕೆತ್ತನೆಯ ಅಘೊರೇಶ್ವರ ದೇವಾಲಯ.

ಇದು ಕರ್ನಾಟಕದಲ್ಲೇ ಅತೀ ಎತ್ತರ ಮೇಲ್ಛಾವಣಿಯ ಶಿವನ ದೇವಸ್ಥಾನ. ಇಲ್ಲಿನ ಶಿಲ್ಪಕಲೆಯು ಹೊಯ್ಸಳ ಮತ್ತು ವಿಜಯನಗರ ಮಾದರಿಯಲ್ಲಿದೆ. ಒಂದೇ ಕಲ್ಲಿನ ಬೃಹತ್ ನಂದಿ ವಿಗ್ರಹ ಅತೀ ಸುಂದರವಾಗಿದೆ.

ದ್ವಾರಪಾಲಕರು, ಕಂಬದ ಕೆತ್ತನೆ, ವಿಗ್ರಹ ಎಲ್ಲವೂ ಮನಮೋಹಕ. ಎತ್ತರದ ೧೬ ಕೈಗಳ ಶಿವನ ವಿಗ್ರಹ ಇಲ್ಲಿ ಇತ್ತು ಹಾಗೂ ಬಿಜಾಪುರ ಸುಲ್ತಾನರ ಆಕ್ರಮಣದಿಂದ ಆ ಸುಂದರ ವಿಗ್ರಹ ನಾಶವಾಗಿದೆ ಎಂದು ಅರ್ಚಕರು ವಿವರಿಸಿದರು.

ದೇವಸ್ಥಾನದ ಆವರಣದಲ್ಲಿ ಸುಂದರ ಪರಿಸರ, ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗಿದೆ.

ಹೊಳೆಬಾಗಿಲು :- ಸಾಗರದಿಂದ ೩೦ ಕೀ. ಮೀ ದೂರದ ಶರಾವತಿ ಹಿನ್ನೀರಿನ ಪ್ರದೇಶ. ಸಾಗರ ಮತ್ತು ತುಮರಿ ಪ್ರಾಂತ್ಯಕ್ಕೆ ಹೊಳೆಬಾಗಿಲು ಸಂಪರ್ಕ ಕೊಂಡಿ, ಪ್ರವಾಸಿ ತಾಣ.

ಒಂದು ದಡದಿಂದ ಇನ್ನೊಂದು ದಡಕ್ಕೆ ಪ್ರಯಾಣಿಕರನ್ನು, ವಾಹನಗಳನ್ನು ಸಾಗಿಸಲು ಸರಕಾರ ಲಾಂಚ್ನ ವ್ಯವಸ್ಥೆ ಮಾಡಿದೆ. ಒಂದು ಸಲಕ್ಕೆ ಒಂದು ಬಸ್ಸು, ೪-೫ ಕಾರು, ಸುಮಾರು ೧೦೦ ಜನರನ್ನು ಇದು ಸಾಗಿಸುತ್ತದೆ. ೩ ಕೀ. ಮೀ ನೀರಲ್ಲಿ ಲಾಂಚಿನ ಮೇಲೆ ಪ್ರಯಾಣಿಸುವುದು ಖುಷಿಯ ಅನುಭವ.

ಆಚೆಯ ದಡದಿಂದ ಸುಮಾರು ೩ ಕೀ. ಮೀ ದೂರದಲ್ಲಿ ಪ್ರಸಿದ್ಧ ಸಿಗಂದುರೇಶ್ವರಿ ದೇವಾಲಯ ಇದೆ.
ಕಲುಷಿತ ಬೆಂಗಳೂರಿಂದ ದೂರ, ಸುಂದರ ಎರಡು ದಿನಗಳನ್ನು ಕಳೆದ ಖುಷಿ ಸಹೋದ್ಯೋಗಿಗಳಿಗೆ.

Sunday, September 13, 2009

ಮತ್ತೊಮ್ಮೆ ಮಂಚನಬೆಲೆಗೆ

ನಾವು ಬೈಕ್ ನಲ್ಲಿ ಪ್ರವಾಸ ಹೋಗದೆ ವರ್ಷಗಳೇ ಕಳೆದಿತ್ತು. ಹಾಗಾಗಿ ಈ ವಾರ ಎಲ್ಲಿಗಾದರೂ ಸರಿ ಬೈಕ್ ನಲ್ಲೆ ಹೋಗುವುದೆಂದು ತೀರ್ಮಾನಿಸಿ ಬೆಂಗಳೂರಿಗೆ ಹತ್ತಿರದ ಮಂಚನಬೆಲೆ ಡ್ಯಾಮ್ ಕಡೆಗೆ ಹೊರಟೆವು. ಭಾನುವಾರ (೨೧ ನವೆಂಬರ್ ೨೦೦೯) ಅದೂ ಇದು ಸಣ್ಣ ಪುಟ್ಟ ಕೆಲಸ ಮುಗಿಸಿ ಮೈಸೂರ್ ರೋಡ್ ಸೇರಿಕೊಂಡಾಗ ೧೦.೩೦ ಆಗಿತ್ತು.
ಅಷ್ಟೇನೂ ಟ್ರಾಫಿಕ್ ಇಲ್ಲದ, ಸೂರ್ಯ ಇನ್ನೂ ಕಣ್ಣು ಬಿಡಲೋ ಬೇಡವೋ ಅನ್ನುವಂತಿದ್ದ ವಾತಾವರಣ, ಸ್ವಲ್ಪ ಹುರುಪಿನಿಂದಲೇ ಆಕ್ಸೀಲರೆಟರ್ ಸ್ವಲ್ಪ ಜೋರಾಗಿಯೇ ತಿರುವಿದೆ..ಇನ್ನೇನು ಕೆಂಗೇರಿ ಬಂದೇ ಬಿಟ್ಟಿತು ಅನ್ನುವಷ್ಟರಲ್ಲಿ "ಮಾಮ" ಕೈ ಅಡ್ಡ ತೋರಿಸಿದ...!! ಅಯ್ಯಪ್ಪ ಇದೇನು "ಮಾವಂದಿರು" ಇಷ್ಟು ಬೆಳಗಿನ ಹೊತ್ತಲ್ಲಿ ಅಂದುಕೊಂಡು ಬೈಕ್ ನ ಸೈಡ್ ಗೆ ನಿಲ್ಲಿಸಿದೆ. ನನ್ನ ಹತ್ತಿರ ಎಲ್ಲ ರೆಕಾರ್ಡು ಸರಿಯಾಗಿ ಇದ್ದರಿಂದ ಧೈರ್ಯವಾಗಿ ಮುನ್ನುಗ್ಗಿ ಅವರ ಮುಂದೆ ತೋರಿಸಿದೆ..ಅದರೂ ಮಾಮ ೩೦೦ ರೂಪಾಯಿ ದಂಡ ಕಟ್ಟು ಅಂಥ ಹೇಳಿದರು...ನೋಡಿದರೆ ನಾನು ಓವರ್ ಸ್ಪೀಡ್ ನಲ್ಲಿ ಗಾಡಿ ಓಡಿಸ್ತ ಇದ್ದೆ. ಆರ್ವೀ ಕಾಲೇಜ್ ನಿಂದ ಕೆಂಗೇರಿ ವರೆಗೆ ವೇಗ ಮಿತಿ ೬೦ ಕಿಮೀ. ನಾನು ೬೨ ಕಿಮೀ ವೇಗದಲ್ಲಿದ್ದೆ..!! ತೆಪ್ಪಗೆ ದಂಡ ಕಟ್ಟಿ ಮನಸ್ಸಿನಲ್ಲಿಯೇ ಬೈದು ಕೊಂಡು ಪ್ರಯಾಣ ಮುಂದುವರೆಸಿದೆ.ಮಂಚನಬೆಲೆಯ ಸುಂದರ ಪರಿಸರ ಸಹಜವಾಗಿಯೇ ಇಷ್ಟ ಆಯಿತು. ಕಳೆದ ಬಾರಿ ಇದ್ದಕ್ಕೂ ಜಾಸ್ತಿ ಪ್ರಮಾಣ ನೀರಿತ್ತು. ಇನ್ನೊಂದು ಮುಖ್ಯ ಅಂಶ ಎಂದರೆ ಸುತ್ತಲಿನ ಪರಿಸರ ಪ್ಲಾಸ್ಟಿಕ್ ಮುಕ್ತವಾಗಿತ್ತು...! ಪಕ್ಕದಲ್ಲಿಯೇ ಮಿಲಿಟರೀ ಕ್ಯಾಂಪ್ ಇರುವುದರಿಂದ ಹೆಚ್ಚಿನ ಗಲಾಟೆ ಇರಲಿಲ್ಲ. ಬೈಕ್ ನಿಲ್ಲಿಸಿ ಸುತ್ತಲೂ ಓಡಾಡಿದೆವು. ಚಿಕ್ಕದಾಗಿ ಚೊಕ್ಕವಾಗಿರುವ ಮಂಚಾನಬೆಲೆ ಪರಿಸರ ವಾರಾಂತ್ಯ ಕಳೆಯಲಿಕ್ಕೆ ಅತ್ಯಂತ ಸೂಕ್ತ.
ಮಂಚನಬೆಲೆ ಇಂದ ಹೊರಟು ರಾಮನಗರ ತಲುಪಿ ಅಲ್ಲಿಂದ ಮುಂದೆ ಮೈಸೂರು ಹೆದ್ದಾರಿ ಹಿಡಿದೆವು. ಕಾಮತ್ ಲೋಕರುಚಿ ನಲ್ಲಿ ಊಟಕ್ಕೆಂದು ನಿಲ್ಲಿಸಿದೆವು. ಕರಾವಳಿ ಮಾದರಿಯ ಅಕ್ಕಿರೊಟ್ಟಿ, ಮತ್ತು ಜೋಳದ ರೊಟ್ಟಿ, ಪತ್ರೊಡೇ, ರಾಗಿಮುದ್ದೆ ಊಟ ಗಡದ್ದಾಗಿ ಹೊಡೆದು, ಸಣ್ಣದಾಗಿ ಬೀಡಾ ಜಗಿದು ಸ್ವಲ್ಪ ಹೊತ್ತು ವಿರಮಿಸಿದೆವು. ಅಲ್ಲಿಂದ ಮುಂದೆ ೧೦ ಕೀ ಮೀ ಹೋದರೆ ಕಣ್ವ ಜಲಾಶಯ ಸಿಗುತ್ತದೆ. ಸ್ವಲ್ಪ ಮಟ್ಟಿಗೆ ಕಚ್ಚ ರಸ್ತೆಯಾದರೂ ಬೈಕ್ ಓಡಿಸಲು ಅಡ್ಡಿಯಿಲ್ಲ.

ಕಣ್ವ ಜಲಾಶಯದ ಬಗ್ಗೆ :ಕಣ್ವ ನದಿಗೆ ಅಡ್ಡಲಾಗಿ ೧೯೪೬ ರಲ್ಲಿ ಕಟ್ಟಲಾಯಿತು. ನೀರಾವರಿ ಮತ್ತು ಮೀನುಗಾರಿಕೆ, ತರಬೇತಿ ಇದರ ಮುಖ್ಯ ಉದ್ದೇಶ. ಇದು ಸುಮಾರು ೭೭೫ ಹೆಕ್ಟೇರು ಪ್ರದೇಶವನ್ನು ಆಕ್ರಮಿಸಿದೆ. ಕಣ್ವ ಋಷಿ ಈ ಪ್ರದೇಶದಲ್ಲಿ ತಪ್ಪಸ್ಸು ಮಾಡಿದ್ದರಿಂದ ಕಣ್ವ ನದಿ ಅಂತ ಹೆಸರು ಬಂತು. ಕಣ್ವ ನದಿಯು ಕಾವೇರಿ ನದಿಯ ಉಪನದಿ. ಸುಂದರ ಪ್ರವಾಸಿ ತಾಣ ಹಾಗೂ ಪಕ್ಷಿ ವೀಕ್ಷಕರ ತಾಣ.

ಸಂಜೆಯ ತಂಪಾದ ಗಾಳಿ, ಜನ ದಟ್ಟನೆ ಇಲ್ಲದ ಸುಂದರ ಕಣ್ವ ಜಲಾಶಯ, ನಮ್ಮಲ್ಲಿ ಹಳೆಯ ನೆನಪೆಲ್ಲವನ್ನು ಮತ್ತೆ ಮರಳುವಂತೆ ಮಾಡಿತ್ತು. ಮೊಗೆದಷ್ಟೂ ಮಾತನಾಡುವಷ್ಟು ವಿಷಯಗಳು ನಮ್ಮಲ್ಲಿ ಸುಳಿದಾಡಿದವು. ಎಷ್ಟೋ ಹೊತ್ತು ನಮ್ಮೆಲ್ಲ ಜಂಜಾಟವನ್ನು ಮರೆತು, ಹರಟೆ ನಗುವಿನಲ್ಲಿ ಮುಳುಗಿದ್ದೆವು.

Wednesday, September 9, 2009

ಕುದುರೆಮುಖ ಚಾರಣ

ನಮ್ಮ ಬಹುದಿನಗಳ ಕುದುರೆಮುಖ ಚಾರಣ ಕನಸಿಗೆ ಚಾಲನೆ ಕೊಟ್ಟಿದ್ದು ಆನಂದ. ಹೆಂಡತಿ ಮತ್ತೆ ಮಗನನ್ನು ಊರಿಗೆ ಕಳುಹಿಸಿದ ತಕ್ಷಣ ನಮಗೆಲ್ಲಾ ಫೋನ್ ಮಾಡಿ, ಚಾರಣಕ್ಕೆ ಹೋಗೋಣ ಅಂತ ಹುರುಪಿಸಿದ. ಅನುಭವಿ ಕಿರಣ್ ಕುದುರೆಮುಖ ಚಾರಣದ ರೂಪು ರೇಷೆ ತಯಾರಿಸಿ, ಅಗತ್ಯ ಸಿದ್ಧತೆ ಮಾಡಿಕೊಂಡ. ಆಗಸ್ಟ್ ೨೮, ಶುಕ್ರವಾರ ರಾತ್ರಿ, ಟಾಟಾ ಸುಮೋದಲ್ಲಿ ಹಾಸ್ಯ, ಮಾತು, ಚೇಷ್ಟೆಯೊಂದಿಗೆ ನಮ್ಮ ಪ್ರಯಾಣ ಶುರುವಾಯಿತು.

ಅತ್ಯಂತ ಅನುಭವಿ ಡ್ರೈವರ್ 'ಶಫಿ' ಪ್ರಯಾಣದ ಆಯಾಸ ತಿಳಿಯದಂತೆ ನಮ್ಮನ್ನ ಶನಿವಾರ ಬೆಳಿಗ್ಗೆ ೬ ಗಂಟೆಗೆ "ಶ್ರಿಂಗೇರಿ" ಗೆ ಮುಟ್ಟಿಸಿದರು. ಅಗಾಗ ಬರುತ್ತಿದ್ದ ಮಳೆ, ಸಣ್ಣಗೆ ಚಳಿಗೆ, ಹಿತವಾದ ಕಾಫೀ ಬೆಚ್ಚನೆಯ ಅನುಭವ ನೀಡಿತ್ತು.ದೇವಸ್ಥಾನದ ವಸತಿ ಗೃಹದಲ್ಲಿ, ಸ್ನಾನ ಮುಗಿಸಿ, ಶಾರದಾಂಬೆಯ ದರ್ಶನಕ್ಕೆ ನಡೆದೆವು.

ಶಕ್ತಿ ದೇವತೆ ಶಾರದಾಂಬೆ, ಭಕ್ತಿ ಪೂರಕ ತೋರಣ ಗಣಪತಿ, ಪರಮ ಪೂಜ್ಯ ಗುರುಗಳ ದರ್ಶನ ಪಡೆದು, ಪ್ರಶಾಂತತೆಯ ತುಂಗೆಯ ತೀರದಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು.

ರಥಬೀದಿಯಲ್ಲಿನ ಹೋಟೆಲೊಂದರಲ್ಲಿ ಬಾಳೆ ಎಲೆಯಲ್ಲಿ ಬಡಿಸಿದ ಇಡ್ಲಿ-ವಡ, ಚಟ್ನಿ ತಿಂದು, ಇನ್ನೊದು ರೌಂಡು ಕಾಫಿ ಕುಡಿದು ಸಿರಿಮನೆ (ಕಿಗ್ಗ) ಜಲಪಾತಕ್ಕೆ ಹೊರಟೆವು.

ಶ್ರಿಂಗೇರಿಯಿಂದ ೮ ಕೀ.ಮೀ. ದೂರದ ಕಿಗ್ಗ ಊರಿನ, ಕಾನನದ ಮಧ್ಯೆ ಸುಂದರ ಸಿರಿಮನೆ ಜಲಪಾತ ಇದೆ. ಸುತ್ತಮುತ್ತಲಿನ ಭಾಗದಲ್ಲಿ ಚೆನ್ನಾಗಿ ಮಳೆಯಾಗಿದ್ದರಿಂದ ಜಲಪಾತ ಮೈದುಂಬಿ, ಸೌಂದರ್ಯ ಇಮ್ಮುಡಿಯಾಗಿತ್ತು.


ಗ್ರಾಮ ಪಂಚಾಯತಿಯವರು ಇಲ್ಲಿ ಪ್ರವೇಶ ಶುಲ್ಕವನ್ನು ವಸೂಲಿ ಮಾಡುತ್ತಾರೆ. ಹಾಗೆಯೇ ಜಲಪಾತಕ್ಕೆ ಹೋಗಲು ಮೆಟ್ಟಿಲಿನ ಅನುಕೂಲ, ವೀಕ್ಷಣಾ ಗೋಪುರ, ಬಟ್ಟೆ ಬದಲಾಯಿಸಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಮಾಡಿದ್ದಾರೆ. ಅತೀ ಕಡಿಮೆ ಅಪಾಯದ ಈ ಜಲಪಾತದಲ್ಲಿ ನೀರಿನ ಹತ್ತಿರದವರೆಗೂ ಹೋಗಬಹುದು. ಸಾಕಷ್ಟು ಫೋಟೋ ತೆಗೆದು, ಜಲಪಾತದ ಸೌಂದರ್ಯವನ್ನು ನಾನಾ ವಿಧಗಳಲ್ಲಿ ಕಣ್ತುಂಬಿಕೊಂಡು, ನಾವೆಲ್ಲ ಮಳೆ-ಚಳಿಯನ್ನು ಲೆಕ್ಕಿಸದೆ ನೀರಿಗಿಳಿದೆವು.

ಜಲಪಾತಗಳ ನಿಜವಾದ ಸೌಂದರ್ಯ, ನೀರಿನ ಅಗಾಧತೆ ಗೋಚರಿಸುವುದೇ ಮಳೆಗಾಲದಲ್ಲಿ. ಸುತ್ತಲೂ ಕಾನನದ ಅಚ್ಚ ಬಿಳುಪಿನ ಸಿರಿಮನೆ ಜಲಪಾತ ಮನಸ್ಸನ್ನ ಸೂರೆಗೊಳಿಸುತ್ತದೆ.


ಧುಮ್ಮಿಕ್ಕುತ್ತಿದ್ದ ನೀರಿಗೆ ಬೆನ್ನು ಕೊಟ್ಟು ನಿಂತು, ಉಚಿತ ಮಸಾಜಿನ ಆನಂದ ಅನುಭವಿಸಿದೆವು. ನೀರಲ್ಲಿ ಆಟ ಆಡುತ್ತಿದ್ದವರಿಗೆ ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ಹಸಿವಿನಿಂದ ಕಂಗಾಲಾಗಿದ್ದ ಸುಹಾಸ್ ಆಗಲೇ ತಲೆನೋವು ಎಂದು ಸುಮೋದಲ್ಲಿ ಮಲಗಿಯಾಗಿತ್ತು. ಬೆಳಗಿನ ಉಪಹಾರವು ಅವನಿಗೆ ಸರಿಯಾಗಿರಲಿಲ್ಲ. ೨ ಗಂಟೆಯ ಹೊತ್ತಿಗೆ ಶ್ರಿಂಗೇರಿಗೆ ಬಂದು ಪಂಚೆ ಉಟ್ಟು, ಮಠದಲ್ಲಿ ಪ್ರಸಾದ ಭೋಜನ ಮುಗಿಸಿದೆವು.

ಮರುದಿನದ ಚಾರಣಕ್ಕೆಂದು ಸ್ವಲ್ಪ ಹಣ್ಣು, ಬ್ರೆಡ್, ಒಣ ದ್ರಾಕ್ಷಿ, ಗ್ಲೂಕೋಸ್ ಖರೀದಿಸಿ, ಕಳಸದ ಕಡೆಗೆ ಪ್ರಯಾಣ ಬೆಳೆಸಿದೆವು.

ಶೃಂಗೇರಿ-ಕಳಸದ ಮಾರ್ಗ ಅತ್ಯಂತ ಸುಂದರ. ಭದ್ರ ಮೀಸಲು ಅರಣ್ಯದಲ್ಲಿ ಈ ದಾರಿ ಸಾಗುತ್ತದೆ. ಸುತ್ತಲೂ ದಟ್ಟ ಹಸಿರು ಕಾಡು, ಬಿಟ್ಟೂ ಬಿಡದೆ ಸುರಿಯುವ ಮಳೆ, ಹಸಿರು ಹಾಸಿದಂತೆ ಕಾಣಿಸುವ ಗುಡ್ಡ, ದಾರಿಗುಂಟ ಸಾಗುವ ಭದ್ರ ನದಿ ನಮ್ಮನ್ನ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.

ಸೊಗಸಾದ ಊಟವಾದ ಮೇಲೂ ನಾವೆಲ್ಲಾ ಸ್ವಲ್ಪವೂ ಕಣ್ಣು ಮುಚ್ಚದೇ ಪ್ರಕೃತಿಯ ಸೊಬಗನ್ನ ಕಣ್ತುಂಬಿಕೊಳ್ಳುತ್ತಿದ್ದೆವು. ಎಸ್-ಕೆ ಬಾರ್ಡರ್ ನಲ್ಲಿ ಚಹಾ ಕುಡಿಯಲು ನಿಲ್ಲಿಸಿದೆವು. ಅಲ್ಲಿನ ವಾತಾವರಣ ಸಂಪೂರ್ಣ ಮಂಜಿನಿಂದ ಮುಚ್ಚಿತ್ತು.


ಹನುಮನಗುಂಡಿ ಜಲಪಾತವನ್ನು ನೋಡಲಾಗದೆ ನಿರಾಸೆ ಆಗಿದ್ದ ನಮಗೆ, ಮುಂದೆ ರಸ್ತೆ ಅಂಚಿನಲ್ಲಿ ಸಿಕ್ಕ ಜಲಪಾತ ಸ್ವಲ್ಪ ಸಮಾಧಾನ ನೀಡಿತ್ತು.


ಬಾಳೆಕಲ್ಲಿನ "ವಜ್ರ" ಹೋಟೆಲೊಂದರಲ್ಲಿ ಮರುದಿನಕ್ಕೆ ಬೇಕಾಗುವಷ್ಟು ಚಪಾತಿ, ಚಟ್ನಿಪುಡಿ ಕಟ್ಟಿಸಿಕೊಂಡೆವು. ಹಾಗೆಯೇ ಉಂಬಳ ಕಾಟ ನಿಗ್ರಹಿಸಲು ನಶ್ಯ, ತಂಬಾಕಿನ ಎಲೆ, ಸುಣ್ಣ, ಬೇವಿನ ಎಣ್ಣೆ, ಮಳೆಯ ರಕ್ಷಣೆಗೆಂದು ಪ್ಲಾಸ್ಟಿಕ್ ಖರೀದಿಸಿದೆವು. ಸಮಯಕ್ಕೆ ಸರಿಯಾಗಿ ಜಗದೀಶ ತನ್ನ ಜೀಪಿನಲ್ಲಿ ಹಾಜರಾದ. ಬಾಳೆಕಲ್ಲಿಂದ ಮುಂದೆ ಮುಳ್ಳಾಡಿಗೆ ಜೀಪು ಬಿಟ್ಟರೆ ಬೇರೆ ಯಾವುದೇ ವಾಹನ ಹೋಗಲು ಸಾಧ್ಯವೇ ಇಲ್ಲ. ಅಲ್ಲಿನ ರಸ್ತೆಯಲ್ಲಿ ಜೀಪು ಓಡಿಸುವುದು ಒಂದು ಕಲೆಯೇ ಸರಿ. ಇನ್ನೇನು ಮಗುಚಿ ಬಿಟ್ಟಿತು ಅನ್ನುವಷ್ಟು ವಾಲುತಿತ್ತು. ನಮ್ಮಲ್ಲಿ ಯಾರೊಬ್ಬರಿಗೂ ಮಾತು ಹೊರಡುತ್ತಿರಲಿಲ್ಲ. ಅಕ್ಕ ಪಕ್ಕದಲ್ಲಿ ಪ್ರಪಾತ, ಮಧ್ಯೆ ಮಳೆಯಿಂದ ಕೆಸರಾದ ರಸ್ತೆ. ದೊಡ್ಡ ದೊಡ್ಡ ಕಲ್ಲುಗಳು..! ಅಕ್ಷರ ಉಸಿರು ಹಿಡಿದುಕೊಂಡು ಕುಳಿತಿದ್ದೆವು..!

ಮಂಜಪ್ಪ ಗೌಡರ ಆತ್ಮೀಯ ಆಥಿತ್ಯ ನಿಜಕ್ಕೂ ನೆನಪಲ್ಲಿ ಉಳಿಯುವಂತದ್ದು. ಸೊಗಸಾದ ಊಟ, ಬೆಂಕಿಯ ಸುತ್ತಲೂ ಕುಳಿತು ಹರಟೆ, ಗೌಡರ ಮಾತು, ಮತ್ತೊಂದು ಮಧುರವಾದ ಸಂಜೆ ನಮ್ಮದಾಗಿತ್ತು. ಹತ್ತಿರದಲ್ಲೆಲ್ಲೋ ಜಲಪಾತ ಇದೆ ಅಂತ ಅನ್ನಿಸುವಷ್ಟು ಜೋರಾಗಿ ಗೊರಕೆ ಹೊಡೆಯುತ್ತಿದ್ದ ಆನಂದ. ಅದು ಬಿಟ್ಟರೆ ನೆಮ್ಮದಿಯ ನಿದ್ರೆ..!

ಭಾನುವಾರ ೫.೩೦ ಕ್ಕೆ ಎದ್ದು ನಾವು ಚಾರಣಕ್ಕೆ ರೆಡಿ ಆದೆವು. ಗೌಡ್ರು ತಿಂಡಿಗೆಂದು ಅಕ್ಕಿಯ ಕಡಬು, ಕಾಯಿ ಚಟ್ನಿ ಮಾಡಿದ್ದರು. ತಂದಿಟ್ಟಿದ್ದ ಅಷ್ಟೂ ಕಡಬನ್ನು ಖಾಲಿ ಮಾಡಿ, ಒಳ್ಳೆ ಕಾಫಿ ಕುಡಿದು ಮಾರ್ಗದರ್ಶಕ (ಗೈಡ್) ಜೊತೆ ಚಾರಣ ಪ್ರಾರಂಭ ಮಾಡಿದೆವುಮನೆಯ ಹಿಂಬದಿಯ ಚಿಕ್ಕ ಗುಡ್ಡವನ್ನು ಹತ್ತಿ ಇಳಿದಾಗಲೇ ಪಶ್ಚಿಮ ಘಟ್ಟಗಳ ಸಾಲು ಸಾಲು ಗೋಚರಿಸುತ್ತಿತ್ತು. ಕಣ್ಣಳತೆ ಉದ್ದಕ್ಕೂ ಎಲ್ಲೆಲ್ಲೊ ಹಸಿರೆ ಹಸಿರು. ಆಗ ತಾನೇ ಚಿಗುರುತಿದ್ದ ಹುಲ್ಲು ಹಾಸು, ಗುಡ್ಡಗಳನ್ನು ಬಾಚಿ ತಬ್ಬಿಕೊಂಡಂತೆ ಅನ್ನಿಸುತಿತ್ತು. ಪ್ರಕೃತಿಯನ್ನ ಅವಳ ಮಡಿಲಿನಲ್ಲಿಯೇ ಅನುಭವಿಸಿ ತೀರಬೇಕು..!! ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯ.

ಮಳೆಯು ಅಷ್ಟೇನೂ ತೊಂದರೆ ಕೊಡದ ಕಾರಣ ನಾವೆಲ್ಲ ಹುರುಪಿನಿಂದಲೇ ಹಳ್ಳ ಕೊಳ್ಳಗಳನ್ನು ದಾಟಿ, ಚಿಕ್ಕ ಚಿಕ್ಕ ಕಾಡನ್ನು ಬಳಸಿಕೊಂಡು ಮುಂದುವರೆದೆವು. ಅಲ್ಲಲ್ಲಿ ಹಾಳು ಬಿದ್ದ ಮನೆಗಳು, ಗದ್ದೆ ಮಾಡಲು ಹದ ಮಾಡಿದ ಜಾಗ ಎದುರಾಗುತ್ತದೆ. ಕಾಡುಪ್ರಾಣಿಗಳ ವಿಪರೀತ ಕಾಟ, ನಕ್ಸಲರ ಹಾವಳಿ, ಸಂಪರ್ಕಕ್ಕೆ ತುಂಬಾನೇ ದೂರವಾಗಿದ್ದ ಈ ಪ್ರದೇಶಗಳಲ್ಲಿ ವಾಸ ಮಾಡಲು ಬಂದವರು ಹಾಗೆಯೇ ತಿರುಗಿ ಹೋಗಿದ್ದಾರೆ ಎಂದು ನಮ್ಮ ಗೈಡ್ ತಿಳಿಸಿದ. ಅಷ್ಟರ ಮಟ್ಟಿಗೆ ಇಲ್ಲಿನ ಕಾಡು, ಗುಡ್ಡ, ವನ್ಯ ಸಂಪತ್ತು ಸುರಕ್ಷಿತವಾಗಿದೆ.

ಪ್ರಕೃತಿಯಲ್ಲಿ ಮುಳುಗಿ ಹೋಗಿದ್ದ ನಮಗೆ ವಿಪರೀತ ತುರಿಕೆ ಶುರು ಆದಾಗಲೇ ಉಂಬಳದ ನೆನಪಾಗಿದ್ದು. ಆಗ ಕಾಲನ್ನು ನೋಡಿಕೊಂಡಾಗ ಗೊತ್ತಾಗಿದ್ದು ಬರೋಬ್ಬರಿ ೨೦-೩೦ ಉಂಬಳ ಪ್ರತಿಯೊಬ್ಬರ ಕಾಲಿನಲ್ಲಿ. ಅದೆಷ್ಟು ರಕ್ತ ಹೀರಿ ಮಧ್ಯದಲ್ಲೇ ಉದುರಿ ಬಿದ್ದವೋ..? ಒಂದನ್ನು ತೆಗೆಯಲು ನಿಂತರೆ ಮತ್ತೆ ನಾಲ್ಕು ಹತ್ತುತ್ತಿದ್ದವು. ನಶ್ಯ, ತಂಬಾಕು ಹಚ್ಚಿ ನೋಡಿದ್ದಾಯಿತು, ಉಹುಂ.. ಹತ್ತಿದ್ದು ಬೇಗನೆ ಉದುರುತ್ತಿದವೇ ವಿನಃ ಹತ್ತದಂತೆ ತಡೆಯಲು ನಮ್ಮಿಂದಾಗಲಿಲ್ಲ.

ವಿಶೇಷ ಅಂದರೆ ಅಲ್ಲಿಯವನಾದ ನಮ್ಮ ಗೈಡ್ ಗೆ ಅವು ಹತ್ತುತ್ತಿರಲಿಲ್ಲ..! ಅವನ ರಕ್ತ ಅವಕ್ಕೆ ಹಳೆಯದ್ದಾಗಿರಬೇಕು. ಕೊನೆಗೆ ಅದೆಷ್ಟು ಹತ್ತುತ್ತವೋ ಹತ್ತಲಿ ಎಂದು ನಿರ್ಧರಿಸಿ ನಮ್ಮ ಪಾಡಿಗೆ ನಾವು ಚಾರಣ ಮುಂದುವರೆಸಿದೆವು.


ಇಳಿಜಾರಿನಲ್ಲಿ ಇದ್ದ, ತುಂಬಾನೇ ಜಾರುತ್ತಲಿದ್ದ ಕಲ್ಲಿನ ಮೇಲೆ ತಿಳಿಯದೆ ಕಾಲು ಇಟ್ಟ ಕಿರಣ ಪ್ರಪಾತಕ್ಕೆ ಬೀಳುತ್ತಲಿದ್ದ...! ಅವನ ಪುಣ್ಯ..ಮಧ್ಯೆ ಸಿಕ್ಕ ಮರಕ್ಕೆ ಅಡ್ಡಲಾಗಿ ಕಾಲು ಕೊಟ್ಟು, ಒಂದು ಬಂಡೆಯನ್ನು ಗಟ್ಟಿಯಾಗಿ ಹಿಡಿದುಕೊಂಡ. ನಮ್ಮಂತೆ ಚಾರಣಕ್ಕೆ ಬಂದಿದ್ದ ಇನ್ನೊದು ಗುಂಪಿನಲ್ಲಿದ್ದ ಅನುಭವಿಯೊಬ್ಬರು ಅತ್ಯಂತ ಜಾಗರೂಕತೆಯಿಂದ ಅವನನ್ನು ಮೇಲಕ್ಕೆತ್ತಿದರು..ಇಲ್ಲವಾದರೆ ಕುದುರೆಮುಖ ಕರಾಳ ಚಾರಣ ಆಗುತ್ತಿತ್ತು..


ಸತತ ಚಾರಣದ ನಂತರ ಕುದುರೆಮುಖ ಬೆಟ್ಟದ ತುತ್ತ ತುದಿ ತಲುಪಿದಾಗ ಮಧ್ಯಾನ್ನ ೧ ಗಂಟೆ ಆಗಿತ್ತು. ಅಲ್ಲಿನ ಸೊಬಗು ನಮ್ಮ ಎಲ್ಲ ನೋವನ್ನು ಮರೆಮಾಡಿತ್ತು. ಅದೊಂದು ಮರೆಯಲಾಗದ, ಅವಿಸ್ಮರಣೀಯ ಕ್ಷಣ. ಹುಚ್ಚರಂತೆ ಕುಣಿದಾಡಿದೆವು. ಎಲ್ಲರ ಬಾಯಲ್ಲೂ ಒಂದೇ ಉದ್ಘಾರ ''' ಅಬ್ಭಾ..ವಾಹ್..."

ಇಲ್ಲಿ ಮೋಡವು ಕೈಗೆ ಸಿಗುತ್ತಿತ್ತು. ಏನನ್ನೋ ಸಾಧಿಸಿದ ಸಮಾಧಾನ..! ಯಾರೊಬ್ಬರಿಗೂ ಅಲ್ಲಿಂದ ಹೊರಡಲು ಮನಸ್ಸೇ ಇರಲಿಲ್ಲ.

ಅಲ್ಲಿ ಉಗಮವಾಗಿದ್ದ ಸಣ್ಣ ಝರಿಯ ಬಳಿ ತಂದಿದ್ದ ಚಪಾತಿ, ಹಣ್ಣು ತಿಂದು ಸ್ವಲ್ಪ ಹೊತ್ತು ವಿರಮಿಸಿ ಇಳಿಯಲು ತೊಡಗಿದೆವು.ಮಳೆಗಾಲದಲ್ಲಿ ಚಾರಣದ ಸಮಯ ಹತ್ತುವುದಕ್ಕಿಂತ ಇಳಿಯುವುದೇ ಹೆಚ್ಚು ಕಷ್ಟ. ಇಳಿಯುವಾಗ ಒಬ್ಬಿಬ್ಬರ ಹೊರತಾಗಿ ಉಳಿದವರು ಅಲ್ಲಲ್ಲಿ ಬೀಳುತ್ತಲೇ ಇದ್ದರು..! ನಾವು ಕ್ರಮಿಸಿದ ಒಟ್ಟೂ ದೂರ ೨೨ ಕಿ,ಮೀ. ತೆಗೆದುಕೊಂಡ ಸಮಯ ೧೧ ಗಂಟೆಗಳು. ನಡೆದು ನಡೆದು ನಾವೆಷ್ಟು ಸುಸ್ತಾಗಿದ್ದೆವೆಂದರೆ, ಮನೆ ಬಂದು ನಾವು ನಿಂತರೂ ನಮ್ಮ ಕಾಲು ನಿಲ್ಲುತ್ತಲಿರಲಿಲ್ಲ...

ಗೌಡರ ಮನೆಯಲ್ಲಿ ಬಿಸಿನೀರಿನ ಸ್ನಾನದ ನಂತರ ಸ್ವಲ್ಪ ಸಮಾಧಾನ ಎನಿಸಿತು. ಗೌಡರ ಸಹಕಾರಕ್ಕೆ ಆತ್ಮೀಯವಾಗಿ ಧನ್ಯವಾದ ತಿಳಿಸಿ, ಅಲ್ಲಿಂದ ಮತ್ತೆ ಜೀಪಿನಲ್ಲಿ ಬಾಳೆಕಲ್ಲಿಗೆ ಬಂದು, ಸುಮೋದಲ್ಲಿ ಬೆಂಗಳೂರಿನತ್ತ ಹೊರಟೆವು.

ಚಾರಣಿಗರು - (ನಿಂತವರು - ಎಡದಿಂದ ಬಲಕ್ಕೆ) ಆನಂದ, ಕಿರಣ್, ಅರವಿಂದ, ನಾನು, ಸುಹಾಸ್.

(ಕುಳಿತವರು) ಆದರ್ಶ, ಪ್ರಮೋದ, ಅಭಿರಾಮ್.

ತುಂಬಾ ದಿನಗಳ ನಂತರ ಇಂಥದ್ದೊಂದು ಸುಂದರ ಚಾರಣಕ್ಕೆ ಹೋದ ಖುಷಿ ಮನಸ್ಸಲ್ಲಿ ಮೂಡಿತು...