Tuesday, April 7, 2009

ಮಳೆಗಾಲದಲ್ಲಿ ಮಲೆನಾಡು - ಸುಂದರ ಜಲಪಾತ.

"ಮಳೆಗಾಲ" ಅಂದೊಡನೆ ನೆನಪಾಗುವುದು ರಚ್ಚೆ ಹಿಡಿದಂತೆ ಸುರಿಯುವ ಮಳೆ, ಎಲ್ಲೆಲ್ಲೂ ಕೆಂಪು ನೀರು, ತುಂಬಿ ಹರಿಯುವ ಹಳ್ಳ, ಹೊಳೆ, ಹಚ್ಚ ಹಸಿರಿನ ಕಾಡು, ಮರ ಗಿಡಗಳು, ಜಲಪಾತ, ಹಿತವಾದ ಚಳಿ. ಇದು ನಮ್ಮೂರಿನ ಮಳೆಗಾಲದ ನಿತ್ಯ ಬದುಕು. ಪ್ರತಿ ವರ್ಷ ಮಳೆಗಾಲದಲ್ಲಿ ಒಂದೆರಡು ದಿನ ಕೆಲಸಕ್ಕೆ ರಜ ಹಾಕಿ, ಊರಲ್ಲಿ ಮಳೆಯ ಮಜ ಅನುಭವಿಸುವುದು ನನಗೆ ತುಂಬಾ ಇಷ್ಟ. ನಿಜವಾದ ಪ್ರಕೃತಿ ಸೌಂದರ್ಯ ಅಲ್ಲಿದೆ. ಚಿಕ್ಕವನಿದ್ದಾಗಿಂದ ಕಳೆದ ಮಳೆಗಾಲದ ದಿನಗಳು ಎಂದಿಗೂ ಮರೆಯಲು ಸಾಧ್ಯ ಇಲ್ಲ. ದಿನಗಟ್ಟಲೆ ಸುರಿಯುವ ಮಳೆಯಲ್ಲಿ ಛತ್ರಿ ಇದ್ದರೂ ಬೇಕಂತಲೇ ನೆನೆಯುತ್ತಿದ್ದಿದ್ದು, ಬಿಳಿ ಅಂಗಿಗೆ (ಯುನಿಫಾರ್ಮ್) ಎಷ್ಟು ಸಾಧ್ಯವೋ ಅಷ್ಟು ಕೆಸರು ಮೆತ್ತಿಕೊಂಡಿದ್ದು, ಅಪ್ಪನಿಂದ ಯಥೆಶ್ಚ ಬೈಗುಳ... (ಬಂಡೆ ಮೇಲೆ ಮಳೆ ಸುರಿದ ಹಾಗೆ..!!) ತುಂಬಿದ ಹೊಳೆ ನೋಡಲು ಹೋಗಿ, ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದು, ಸೀತಾಲಿ-ದಂಡೆ ಹೂವು, ಬಿಕ್ಕೆ ಹಣ್ಣು, ಚಳ್ಳೆ ಹಣ್ಣು, ಪಿಳ್ಳೆ ಹಣ್ಣು, ವಾರಗಟ್ಟಲೆ ಕರೆಂಟು ಇಲ್ಲದೆ ಕಳೆದ ದಿನಗಳು ಎಲ್ಲವು ಹಸಿರಾಗಿದೆ. ಈಗಲೂ ಮನೆಗೆ ಹೋದಾಗ ಸುಮ್ಮನೆ ದಿನಗಟ್ಟಲೆ ಮಳೆಯನ್ನೇ ನೋಡುತ್ತಾ ಕುಳಿತು ಬಿಡುತ್ತೇನೆ.ಇವೆಲ್ಲವನ್ನೂ ನಾನು ಅಗಾಗ ನನ್ನ ಸ್ನೇಹಿತರಲ್ಲಿ ಕೊರೆಯುತ್ತೇನೆ. ಹಾಗಾಗಿ ಕಳೆದ ಸಲ ಅವರನ್ನು ಊರಿಗೆ ಕರೆದೊಯ್ಯುವುದು ಅನಿವಾರ್ಯ ಆಗಿತ್ತು. ಹಾಗೆಯೆ ಅಲ್ಲಿನ ಸುತ್ತಮುತ್ತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಎಂದು ನಿರ್ಧರಿಸಿ ಜೂನ್ ೨೨ ಕ್ಕೆ ಊರಿಗೆ ಹೊರಟೆವು. ಮನೆಯಲ್ಲಿ ಬೆಳಗಿನ ಉಪಹಾರ ಮುಗಿಸಿ, ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಸಿದ್ದಾಪುರ ತಲುಪಿದೆವು. ಗೆಳೆಯ ಮಂಜು ನಮಗಾಗಿ ಮಾರುತಿ-ಒಮ್ನಿ ಯನ್ನು ಗೊತ್ತುಮಾಡಿದ್ದ. ಸಿದ್ದಾಪುರದಲ್ಲಿ ಸ್ವಲ್ಪ ಹಣ್ಣು, ಬಿಸ್ಕೆಟ್, ಕುರುಕುಲು, ಮಳೆಯಿಂದ ತಲೆಗೆ ರಕ್ಷಣೆ ಪಡೆಯಲು ಪ್ಲಾಸ್ಟಿಕ್ ಟೋಪಿ ಖರೀದಿಸಿದೆವು. ಅಲ್ಲಿಂದ ಹೊರಟು ಹೆಗ್ಗರಣಿ ಮಾರ್ಗವಾಗಿ ಉಂಚಳ್ಳಿ ಜಲಪಾತ ನೋಡಲು ಹೊರಟೆವು. ಬಿಡದೆ ಸುರಿಯುತ್ತಿದ್ದ ಮಳೆ, ತಂಪಾದ ವಾತಾವರಣ, ಹಸಿರು ಗದ್ದೆಗಳನ್ನು ನೋಡಿ ದೂದ್ ಉತ್ಸಾಹದಲ್ಲಿದ್ದ. ದಾರಿಯ ಮಧ್ಯೆ ಅಘನಾಶಿನಿ ನದಿಯ ಬ್ರಿಡ್ಜ್ ಸಿಗುತ್ತದೆ. ಹೆಚ್ಚಿನ ಮಳೆಯಿಂದಾಗಿ ಬ್ರಿಡ್ಜ್ ನ ಮೇಲೆ ನೀರು ಬಂದಿತ್ತು. ಕೆಂಪು ನೀರಿನ ತುಂಬಿ ಹರಿಯುವ ಅಘನಾಶಿನಿ ನಿಜಕ್ಕೂ ಭಯ ಹುಟ್ಟಿಸುತ್ತೆ. ಇಲ್ಲಿ ಹರಿಯುವ ನೀರು ಮುಂದೆ ಉಂಚಳ್ಳಿ ಜಲಪಾತವನ್ನು ಸ್ರಷ್ಟಿಸುವುದು. ಅಗಾಧ ನೀರು ಚಿಕ್ಕ ಕಣಿವೆ ಮೂಲಕ ಧುಮ್ಮಿಕ್ಕುವುದು ನಿಜಕ್ಕೂ ನಂಬಲಸಾಧ್ಯ...!!ಉಂಚಳ್ಳಿ ಜಲಪಾತ : ಇದಕ್ಕೆ "ಕೆಪ್-ಜೋಗ" ಅಂತಲೂ ಕರೆಯುತ್ತಾರೆ. ೧೦೦ ಅಡಿ ಆಳಕ್ಕೆ ಭೋರ್ಗರೆಯುತ್ತಾ ಹೆಚ್ಚಿನ ಶಬ್ದ ಮಾಡುವುದರಿಂದ ಈ ಹೆಸರು . ಮಳೆಗಾಲದಲ್ಲಿ ನೀರಿನ ಪ್ರಮಾಣ ಜಾಸ್ತಿ ಇರುವುದರಿಂದ ಕೆಳಗೆ ಇಳಿಯುವುದು ಅಸಾಧ್ಯ. ಹಾಗೆ ಭಯಾನಕ ಉಂಬಳ ಕಾಟ ಬೇರೆ... ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಜಲಪಾತ ವೀಕ್ಷಣೆ ಸೂಕ್ತ ಸಮಯ. ಉಂಚಳ್ಳಿ ಇಂದ ಹೊರಟು ಹೆಗ್ಗರಣಿ ಗೆ ಬಂದು ಸಂಜೆಯ ಲಘು-ಉಪಹಾರ ಮಾಡಿದೆವು. "ಮಿಸಳ್-ಬಾಜಿ" ಇಲ್ಲಿ ಫೇಮಸ್ ತಿಂಡಿ. ಆಗಲೇ ಕತ್ತಲಾಗುತ್ತಾ ಇದ್ದರಿಂದ ಅಲ್ಲಿಂದ ಹೊರಟು ಗೆಳೆಯ ಮಂಜು ನ ಮನೆಗೆ ಬಂದು ಉಳಿದೆವು. ಮರುದಿನ ಬೆಳಿಗ್ಗೆ ತಿಂಡಿಗೆ "ತೆಳ್ಳವು", ಚಟ್ನಿ, ಜೇನುತುಪ್ಪ, ತುಪ್ಪ. ಲೆಕ್ಕವಿಲ್ಲದಷ್ಟು ಬ್ಯಾಟ್ಟಿಂಗ್ ಮಾಡಿ ಅವರ ಮನೆಯಿಂದ ಹೊರಟಾಗ ಮಳೆ ತನ್ನ ಪ್ರಭಾವ ಹೆಚ್ಚಿಸಿತ್ತು. ಬೆಚ್ಚನೆಯ ರೈನ್-ಕೋಟ್ ಧರಿಸಿ, ಛತ್ರಿ ಹಿಡಿದು, ತಲೆಗೆ ಟೋಪಿ ಹಾಕಿಕೊಂಡು ಅರವಿಂದ ಮುಂದಿನ ಪ್ರಯಾಣಕ್ಕೆ ರೆಡಿ ಆಗಿದ್ದ. ನಮಗೆ ಗೈಡ್ ಆಗಿ ಮಂಜು ನ ತಮ್ಮ ವಿಶ್ವನಾಥ ನನ್ನು ಕರೆದುಕೊಂಡು ಅಲ್ಲಿಂದ ಹೊರಟು ಮಂಜಗುಣಿಗೆ ಹೋದೆವು. ಸಿರಸಿ-ಕುಮಟಾ ಹೆದ್ದಾರಿಯಲ್ಲಿ, ಸಿರ್ಸಿಯಿಂದ ಸುಮಾರು ೨೨ ಕಿ.ಮೀ ಹೋದರೆ "ಕೂರ್ಸೆ" ಎಂಬ ಊರು ಸಿಗುತ್ತದೆ. ಅಲ್ಲಿಂದ ಬಲಗಡೆಗೆ ತಿರುಗಿ ೫ ಕಿ.ಮೀ. ಹೋದರೆ "ಮಂಜಗುಣಿ" ವೆಂಕಟರಮಣ ಸ್ವಾಮಿ ದೇವಸ್ಥಾನ ಸಿಗುತ್ತದೆ. ಕಲ್ಲಿನ ದೇವಸ್ಥಾನ, ರಥ, ಸುಂದರ ಪುಷ್ಕರಣಿ ಇಲ್ಲಿನ ವಿಶೇಷ. ದೇವರ ಪ್ರಸಾದ "ಅತ್ರಾಸ" ತುಂಬಾ ಸವಿಯಾದುದು. ಸುಂದರ ಪುಷ್ಕರಣಿ ದಡದಲ್ಲಿ ಸುಮಾರು ಹೊತ್ತು ಕುಳಿತಿದ್ದೆವು. ಅಲ್ಲಿಂದ ಹೊರಟು "ಹೆಗಡೆಕಟ್ಟಾ" ಮಾರ್ಗವಾಗಿ " ಯಾಣ" ಕ್ಕೆ ಹೋದೆವು.
ಯಾಣ : ಯಾಣ ಸಿರಸಿ ಯಿಂದ ೨೫ ಕಿ.ಮೀ ದೂರದಲ್ಲಿದ್ದು ದಟ್ಟ ಪಶ್ಚಿಮ ಘಟ್ಟದ ಮಧ್ಯದಲ್ಲಿದೆ. ಇಲ್ಲಿನ ಭೈರವೇಶ್ವರ ಶಿಖರ ನೆಲದಿಂದ ೧೨೦ ಮೀಟರ್ ಹಾಗೂ ಮೋಹಿನಿ ಶಿಖರ ೯೦ ಮೀಟರ್ ಎತ್ತರದಲ್ಲಿದೆ. ಈ ಶಿಖರಗಳು ಕಪ್ಪು ಸುಣ್ಣದ ಕಲ್ಲಿಂದ ಮಾಡಲ್ಪಟ್ಟಿದ್ದು ಪುರಾಣದ ಕಥೆಯನ್ನು ಸಾರುತ್ತವೆ. ಸುಮಾರು ೩ ಮೀಟರ್ ಎತ್ತರದ ಗುಹೆಯ ಒಳಗಡೆ ಶಿವಲಿಂಗ ಇದೆ. ಶಿವನ ತಲೆಯಮೇಲೆ ಸದಾಕಾಲ ನೀರು ಬೀಳುತ್ತಾ ಇರುವುದರಿಂದ "ಗಂಗೊಧ್ಭವ" ಎಂದೂ ಪ್ರಸಿದ್ದಿಯಾಗಿದೆ. "ಭಸ್ಮಾಸುರ -ಮೋಹಿನಿ" ಪುರಾಣ ಪ್ರಸಿದ್ಧ ಕಥೆಯನ್ನು ಇಲ್ಲಿನ ಶಿಖರ ಸಾರುತ್ತದೆ. ಇಲ್ಲಿಂದಲೇ "ಚಂಡೀಹೊಳೆ" ಉಗಮವಾಗಿ ಮುಂದೆ ಅಘನಾಶಿನಿ ನದಿಯನ್ನು ಸೇರುತ್ತದೆ. ಇದು ಒಂದು ಅದ್ಭುತ ನಿಸರ್ಗ ವಿಸ್ಮಯಗಳಲ್ಲೊಂದು. ಯಾಣದ ಸೌಂದರ್ಯವನ್ನು ಕಣ್ಣು ತುಂಬಿಕೊಂಡು, ಭೈರವೇಶ್ವರ ನ ದರ್ಶನ ಮಾಡಿ, ಅಲ್ಲಿಂದ ಘಟ್ಟದ ಮಧ್ಯೆ ಸಾಗುವ ದಾರಿಯಲ್ಲಿ "ವಿಭೂತಿ" ಜಲಪಾತಕ್ಕೆ ಹೊರಟೆವು. ಯಾಣದಿಂದ ನೇರವಾಗಿ ಕುಮಟಕ್ಕೆ ಹೋಗುವ ದಾರಿಯಲ್ಲಿ ಸಾಗಿದರೆ " ವಿಭೂತಿ" ಜಲಪಾತ ಸಿಗುತ್ತದೆ. ಪಶ್ಚಿಮ ಘಟ್ಟವು ಜಲಪಾತಗಳಿಗೆ ಪ್ರಸಿದ್ದಿ. ಎಷ್ಟೋ ಜಲಪಾತಗಳು ಜನರಿಗೆ ಗೊತ್ತಾಗದೆ ದಟ್ಟ ಕಾನನದ ಮಧ್ಯೆ ಹುದುಗಿ ಹೋಗಿವೆ. ಇನ್ನು ಕೆಲವು ಕೇವಲ ಮಳೆಗಾಲಕ್ಕೆ ಮಾತ್ರ ಸೀಮಿತ. ಅಂತವುಗಳಲ್ಲಿ " ಬೆಳ್ಳುಳ್ಳಿ " ಜಲಪಾತವು ಒಂದು. ಬಳಕುವ ಜಲಪಾತದ ಸೌಂದರ್ಯವನ್ನು ನೋಡಿ ಅರವಿಂದ ಚಳಿಯನ್ನೂ ಲೆಕ್ಕಿಸದೆ ನೀರಿಗೆ ಇಳಿದು ಬಿಟ್ಟ. ತುಂಬಾ ಹೊತ್ತು ಧುಮುಕುವ ನೀರಲ್ಲಿ ಆಟ ವಾಡಿದ ನಂತರ ಸ್ವಲ್ಪ ಸಮಾಧಾನ ಆಗಿದ್ದ.ಮಳೆಗಾಲದಲ್ಲಿ ಬೆಟ್ಟದ ನೀರು ಕಲ್ಲಿನ ಮಧ್ಯೆ ಹರಿದು ಬಂದು ಸುಂದರ ಜಲಪಾತ ಸೃಷ್ಟಿಸುತ್ತೆ. ಬೆಳ್ಳನೆ ಹಾಲಿನ ಹಾಗೆ ಸುಂದರವಾಗಿ ಮೆಲ್ಲನೆ ಧುಮುಕುವ ಈ ಜಲಪಾತ ನಮಗೆಲ್ಲ ತುಂಬಾ ಇಷ್ಟವಾಯಿತು.ಇಲ್ಲಿನ ಸೌಂದರ್ಯಕ್ಕೆ ಮನಸೋತ ಕಿರಣ್ ನ ಹರ್ಷೋದ್ಘಾರ...!!!
ಎಲ್ಲರೂ ನೀರಲ್ಲಿ ಆಟ ಆಡಿ ಮುಂದೆ ಸಾಗಿದೆವು. ಕಿರಣ ಅರವಿಂದ ಮತ್ತು ಸುಹಾಸ - ಮಳೆಗೆ ಸಿದ್ಧವಾಗಿ ನಿಂತಿರುವುದು.ಯಾಣದಿಂದ ಸುಮಾರು ೧೦ ಕಿ ಮೀ. ವಡ್ಡಿ ಘಾಟ್ ಮೂಲಕ ಹೋದರೆ "ಮಾಬಗಿ" ಎಂಬ ಊರು ಸಿಗುತ್ತದೆ. ಅಲ್ಲಿ ವಾಹನವನ್ನು ನಿಲ್ಲಿಸಿ, ಅಲ್ಲಿಂದ ಮುಂದೆ ಕಾಲುನಡಿಗೆಯಲ್ಲಿ ವಿಭೂತಿ ಜಲಪಾತಕ್ಕೆ ಹೋಗಬೇಕು. ಇಲ್ಲಿಯೇ ನಮಗೆಲ್ಲ ಉಂಬಳದ ನಿಜವಾದ ಮಹಿಮೆ ಅರ್ಥ ಆಗಿದ್ದು. ಅಲ್ಲಿಯ ವರೆಗೆ ಉಂಬಳದ ಬಗ್ಗೆ ಅಷ್ತೊದ್ದು ತಲೆಕೆಡಿಸಿಕೊಂಡಿರದ ಎಲ್ಲರೂ ನಿಧಾನವಾಗಿ ನಡಿಯುತ್ತ ಇದ್ದೆವು. ಜಲಪಾತವನ್ನು ಸಮೀಪಿಸಿದಾಗ ವಿಶ್ವ ಒಂದು ಸಲ ಕಾಲನ್ನು ನೋಡಿಕೊಳ್ಳಿ ಅಂದ. ಅಯ್ಯೋ...!! ಒಬ್ಬಬ್ಬರ ಕಾಲಲ್ಲಿ ಬರೋಬ್ಬರಿ ೪೦-೫೦ ಉಂಬಳ ಇದ್ದವು. ಎಲ್ಲಿ ನೋಡಿದರೂ ಉಂಬಳ..ಉಂಬಳ...!!ಹೊಳೆಯ ಮಧ್ಯೆ ನೀರಿನ ರಭಸಕ್ಕೆ ನಿಂತು ಒಂದೊಂದಾಗಿ ಉಂಬಳ ತೆಗೆದು ನೀರಲ್ಲಿ ಬಿಡುತ್ತಿದ್ದೆವು.. ಅಂತೂ ಅವೆಲ್ಲವನೂ ತೆಗೆದು ಸಾಕಾಗಿ ಹೋಯಿತು... ಜಲಪಾತವನ್ನು ನೋಡುವ ಆಸೆ ಯಾರಿಗೂ ಉಳಿದಿರಲಿಲ್ಲ...!!
ವಿಭೂತಿ ಜಲಪಾತ : ಸಿರ್ಸಿ ಇಂದ ದೇವನಹಳ್ಳಿ, ಹೆಗಡೆಕಟ್ಟ ಮಾರ್ಗವಾಗಿ ಮತ್ತಿಘಟ್ಟ ತಲುಪಿ ಅಲ್ಲಿಂದ ವಡ್ಡಿ ಘಾಟ್ ಮೂಲಕ ೧೦ ಕಿ.ಮೀ. ಸಾಗಿದರೆ ಮಾಬಗೆ ಎಂಬ ಊರು ಸಿಗುತ್ತದೆ. ಮಾಬಗೆಯಲ್ಲೇ ಮಣ್ಣಿನ ರಸ್ತೆಯಲ್ಲಿ ೨ ಕಿಮಿ ಚಲಿಸಿ ನಂತರ ೨೦ನಿಮಿಷ ನಡೆದರೆ ಸುಂದರ ವಿಭೂತಿ ಜಲಧಾರೆಯ ದರ್ಶನ.ಸುಮಾರು ೧೦೦ ಅಡಿ ಎತ್ತರವಿರುವ ಜಲಧಾರೆ ಸಮೀಪ ತೆರಳುವುದು ಮಳೆಗಾಲದಲ್ಲಿ ಕಷ್ಟ. ಸ್ವಲ್ಪ ದೂರ ನಿಂತೇ ನೋಡಬೇಕಾಗಬಹುದು. ನೀರು ಧುಮುಕುವಲ್ಲಿ ನೀರಿಗಿಳಿಯುವುದು ಅಪಾಯ. ಸುತ್ತಮುತ್ತ ಸುಣ್ಣದ ಕಲ್ಲು ಇರುವುದರಿಂದ ಜಲಪಾತಕ್ಕೆ ಈ ಹೆಸರು. ಇಲ್ಲಿ ವರ್ಷಪೂರ್ತಿ ನೀರು ಇರುತ್ತದೆ. ಅರ್ಧ ಗಂಟೆ ಜಲಪಾತದ ಸೌಂದರ್ಯವನ್ನು ಸವಿದು ಅಲ್ಲಿಂದ ವಾಪಾಸ್ ಹೊರಟೆವು. ಹೋಗುವಾಗ ಒಂದೇ ಉಸಿರಿಗೆ ೧ ಕಿ.ಮೀ ಓಡಿ ಕಾರ್ ನ ಬಳಿ ಬಂದೆವು. ಅಷ್ಟು ವೇಗವಾಗಿ ಓಡಿದರು ೧೦ ಉಂಬಳ ಆಗಲೇ ನಮ್ಮ ಪಾದ ಸೇರಿದ್ದವು...!!ಗೆಳೆಯರೆಲ್ಲರಿಗೂ ಮಳೆಗಾಲದ ಅನುಭವ ಸ್ವಲ್ಪ ಹೆಚ್ಚಾಗಿಯೇ ಆಗಿತ್ತು..!!

9 comments:

Shweta said...

Prashanthaaaa....
I am the first to coment !!
Bellulli jalapatha,Vibhuti false . ..wow I have not even heard of it....
Thanks for a nice write up and nice pics!!

ಪಾಚು-ಪ್ರಪಂಚ said...

Hi Shweta,

Thanks for your comment..! Bellulli falls ( as told by localite) can be view only in mansoon. In Western ghat, lots of such hidden falls are waiting for explorers.

plan to visit this mansoon. its few hrs journey from ur place.

ರಾಜೇಶ್ ನಾಯ್ಕ said...

ಓ, ಇದಕ್ಕೆ ಬೆಳ್ಳುಳ್ಳಿ ಜಲಧಾರೆ ಎನ್ನುತ್ತಾರೋ! ಗೊತ್ತಿರಲಿಲ್ಲ ನೋಡಿ. ವಡ್ಡಿ ಫಾಲ್ಸ್ ಎಂದೇ ಹೆಸರಿಟ್ಟುಕೊಂಡಿದ್ದೆ.

ಪಾಚು-ಪ್ರಪಂಚ said...

ರಾಜೇಶ್ ಅವರೇ,
ಪಾಚು-ಪ್ರಪಂಚಕ್ಕೆ ಸ್ವಾಗತ...!
ಆ ಹೆಸರು ನಮಗೆ ತಿಳಿದಿದ್ದು ಅಲ್ಲಿನ ಹಳ್ಳಿಯವನಿಂದ. ವಿಭೂತಿ ಜಲಪಾತಕ್ಕೆ ವಡ್ಡಿ ಜಲಪಾತ ಅಂತಲೂ ಕರೆಯುತ್ತಾರಂತೆ.
ನಿಮ್ಮ ಬ್ಲಾಗ್ ನ ಅಭಿಮಾನಿ ನಾನು. ಎಷ್ಟೊಂದು ಪ್ರವಾಸಕ್ಕೆ ನಿಮ್ಮ ಬ್ಲಾಗ್ ನ ರೆಫರ್ ಮಾಡಿದ್ದಿದೆ.

ವಂದನೆಗಳು
ಪ್ರಶಾಂತ್ ಭಟ್

Ittigecement said...

ಪ್ರಾಶಾಂತ್...

ಎಷ್ಟು ಸುಂದರ ಮನಮೋಹಕ ಫೋಟೊಗಳು...

ಒಂದಕ್ಕಿಂತ ಒಂದು ಸುಂದರ...

"ಉಂಬಳ" ನೋಡಿ ಖುಷಿಯಾಯಿತು...

ಬಹಳ ವರ್ಷಗಳ ನಂತರ ನೋಡಿದ ಹಾಗಾಯಿತು...

ಅಂದದ ಚಿತ್ರ ಲೇಖನಕ್ಕೆ

ಅಭಿನಂದನೆಗಳು...

ಪಾಚು-ಪ್ರಪಂಚ said...

ಪ್ರಕಾಶಣ್ಣ..

ನಿಮ್ಮ ಪ್ರತಿಕ್ರಿಯೆ ನೋಡಿ ನನಗೂ ಖುಷಿಯಾಯಿತು...
ಪ್ರತಿವರ್ಷ ಒಂದು ಬಾರಿಯಾದರೂ "ಉಂಬಳ" ಕಚ್ಚಿಸಿಕೊಳ್ಳದಿದ್ರೆ ಸಮಾಧಾನ ಇಲ್ಲ...
ಚಿತ್ರ, ಲೇಖನ ಇಷ್ಟ ಆಗಿದ್ದಕ್ಕೆ ಥ್ಯಾಂಕ್ಸ್..!

ವಂದನೆಗಳು
ಪ್ರಶಾಂತ್ ಭಟ್

shivu.k said...

ಪ್ರಶಾಂತ್ ಭಟ್,

ಉಂಚುಳ್ಳಿ, ಬೆಳ್ಳುಳ್ಳಿ ಜಲಪಾತಗಳನ್ನು ನೋಡಿ ನನಗೂ ಹೋಗುವ ಆಸೆಯಾಯಿತು...ಪೋಟೊಗಳು ತುಂಬಾ ಚೆನ್ನಾಗಿವೆ...ಉಂಬಳದ ಅನುಭವ ನನಗೆ ಕೊಡಚಾದ್ರಿಯಲ್ಲಿ ಮತ್ತು ಮುನ್ನಾರಿನಲ್ಲಿ ಆಗಿದೆ...

ಶಿವು.ಕೆ ARPS

ಪಾಚು-ಪ್ರಪಂಚ said...

ಶಿವೂ ಅವರೇ,

ಮಲೆನಾಡಿನಲ್ಲಿ ಇಂತಹ ಪುಟ ಪುಟ್ಟ ಜಲಪಾತಗಳು ಸಹಜವಾಗಿ ಇಷ್ಟ ಆಗಿಬಿಡುತ್ತವೆ. ನಿಮ್ಮ ಕ್ಯಾಮೆರಾ ಕಣ್ಣಲ್ಲಿ ಇದಕ್ಕೂ ಅದ್ಭುತವಾಗಿ ಚಿತ್ರಗಳನ್ನು ಸೆರೆಹಿಡಿಯಬಹುದಿತ್ತು ಅನ್ನಿಸುತ್ತೆ.
ಓಹೋ ತಮಿಳುನಾಡಿನ ಉಂಬಳದ ಅನುಭವ..!! :-)

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

-ಪ್ರಶಾಂತ್ ಭಟ್

kaarthik said...

Mr. Paachu i have seen best photos in my life