Tuesday, January 27, 2009

ವರ್ಷದ ಕೊನೆಯ ಪ್ರವಾಸ...೨೦೦೮

ಈ ವರ್ಷದ ಕೊನೆಯ ಪ್ರವಾಸವನ್ನ ನಾನು ನಿರ್ಧರಿಸಿ ಆಗಿತ್ತು. ಅದರಂತೆ ಕ್ರಿಸ್ಮಸ್ ರಜೆಯ ವೇಳೆ ನಮ್ಮ ಊರಿಗೆ ಹೋಗುವುದು, ಅಲ್ಲಿಂದ ಸಾತೊಡ್ಡಿ ಜಲಪಾತ ವೀಕ್ಷಣೆ ಅಂಥ ಹೇಳಿದ್ದೆ. ಆದರೆ ದೂದ್ ಪೇಡ ಯಾಕೋ ಸಮಾಧಾನ ಆದಂಗೆ ಅನ್ನಿಸಲಿಲ್ಲ...ಅವನಿಗೆ ಪೂರ್ತಿ ೪ ದಿನ ರಜೆಯನ್ನು ಸುಮ್ಮನೆ ಕಳೆಯಲು ಇಷ್ಟವಿರಲಿಲ್ಲ. ಹಾಗಾಗಿ ೪ ದಿನದ ಪ್ರಯಾಣವನ್ನು ರೂಪರೇಷೆಯನ್ನು ಸಿದ್ಧಪಡಿಸಿ, ಹಣಕಾಸಿನ ವ್ಯವಸ್ಠೆ ಮಾಡಿ ಬಿಟ್ಟಿದ್ದ...!! ಜೈ ದೂದ್ ಪೇಡ...!!!

೨೪ ರಾತ್ರಿ ಸಾಗರಕ್ಕೆ ಹೋಗಲು ೪ ಟಿಕೆಟ್ ನ್ನು ಬನವಾಸಿ ಟ್ರೈನ್ ಗೆ ಬುಕ್ ಮಾಡಿ ಮೇಲ್ ಕಳಸಿದ. ಡಿಂಗನ ಮಡದಿಯ
ಅಪ್ಪಣೆ ಯಿಲ್ಲದ ಕಾರಣ ಡಿಂಗ ಈ ಪ್ರವಾಸಕ್ಕೆ ಚಕ್ಕರ್...!

೨೫ ಡಿಸೆಂಬರ್ ಗುರುವಾರ, ಬೆಳಿಗ್ಗೆ ೭.೩೦ ಕ್ಕೆ ಸಾಗರದ ನಮ್ಮ ಮನೆಯಲ್ಲಿ ತಿಂಡಿ ತಿಂದು, ಸ್ವಲ್ಪ ಸ್ನಾನ ಮಾಡಿದ್ವಿ. "ಸ್ವೀಟಿ" ಲಾಂಗ್ ಟ್ರಿಪ್ ಹೊರಡಲು ರೆಡಿಯಿದ್ದಳು....!! ( ನನ್ನ ಝೆನ್ ಕಾರ್ ಗೆ ಇಟ್ಟ ಹೆಸರು ಸ್ವೀಟಿ). ಅವಳಿಗೂ ಹೊಟ್ಟೆಗೆ ತುಂಬಿಸಿ (ಪೆಟ್ರೋಲ್) ಸಾಗರ ಬಿಟ್ಟಾಗ ೧೦.೨೦.

ಸಿರ್ಸಿ ತಲುಪಿದಾಗ ೧೨ ಗಂಟೆ. ಮೊದಲು "ಗಣಪತಿ ದೇವಸ್ಥಾನ" ಕ್ಕೆ ಹೋಗಿ ದರ್ಶನ ಮಾಡಿದೆವು. ಅಲ್ಲಿಂದ ಪ್ರಸಿದ್ಧ "ಮಾರಿಕಾಂಬ ದೇವಸ್ಥಾನ" ಕ್ಕೆ ಹೋದೆವು. ಅರವಿಂದ "ಕೋಣ" ನೋಡಿ ಹೆದರಿಬಿಟ್ಟ...!!ಮಧುವನ ಹೋಟೆಲ್ ನಲ್ಲಿ ಊಟ ಮಾಡಿ "ಸಹಸ್ರಲಿಂಗ" ಕ್ಕೆ ಹೋದ್ವಿ.

ಸಹಸ್ರಲಿಂಗ ಹೆಸರೇ ಹೇಳುವಂತೆ ನದಿಯ ಮಧ್ಯದಲ್ಲಿ ನೂರಾರು ಲಿಂಗ, ಬಸವನ ವಿಗ್ರಹಗಳು ಇವೆ. ಹಚ್ಚ ಹಸಿರಿನ ಕಾಡಿನ ಮಧ್ಯೆಯಿರುವ ನದಿಯಲ್ಲಿ ತುಂಬ ಸಮಯ ಆಟ ಆಡಿದೆವು. ಬನವಾಸಿ ವಿವಿಧ ಭಂಗಿ ಯಲ್ಲಿ ನಿಂತು ಫೋಟೋಕ್ಕೆ ಪೋಸು ಕೊಟ್ಟ.ಅಲ್ಲಿಂದ ಹೊರಟಿದ್ದು "ಗಣೇಶ್ ಫಾಲ್" ಗೆ. ಯಿನ್ನು ೨ ಕಿ. ಮೀ. ಯಿರುವಾಗ ನನ್ನ ಅಜಾಗರೂಕತೆ ಯಿಂದಾಗಿ ನಮ್ಮ ಕಾರು ಚರಂಡಿ ಗೆ ಬಿತ್ತು. ಅಕ್ಕ ಪಕ್ಕ ಯಿದ್ದವರನ್ನು ಸಹಾಯಕ್ಕೆ ಕರೆದು ಅಂತು ಕಾರನ್ನು ರಸ್ತೆ ಗೆ ಎತ್ತಿ ಇಟ್ತ್ವಿ. ಸಧ್ಯ ನಮಗೂ ಕಾರಿಗೂ ಏನೂ ಆಗಿರಲಿಲ್ಲ...!!!!ಮುಂದಿನ ಪ್ರಯಾಣವನ್ನು ಅಲ್ಲಿಗೆ ಮೊಟಕುಗೊಳಿಸಿ ಸೀದಾ "ಯಲ್ಲಾಪುರ" ಕ್ಕೆ ಹೊರಟೆವು. ಸಿಹಿಯಾದ ಸೌತೆಕಾಯಿ ತಿನ್ನುತ್ತಾ ಯಲ್ಲಾಪುರ ತಲುಪಿದಾಗ ಸಂಜೆ ೫.೩೦.ಅಲ್ಲಿ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿ "ಕವಡಿ ಕೆರೆ" ಗೆ ಪ್ರಯಾಣ ಮಾಡಿದ್ವಿ. ಕವಡಿಕೆರೆ ಸುಮಾರು ೬೦ ಎಕರೆ ದೊಡ್ಡದಾದ ಕೆರೆ. ದಡದಲ್ಲಿ "ಕವಡಿಯಮ್ಮ" ದೇವಸ್ಥಾನ. ಸುಂದರ, ಶಾಂತವಾದ, ನಯನ ಮನೋಹರ ಮುಸ್ಸಂಜೆ, ವಾಪಸ್ಸು ಹೊರಡಲು ಮನಸ್ಸೇಯಿರಲಿಲ್ಲ... ಎಲ್ಲರಿಗೂ ತುಂಬ ಯಿಷ್ಟವಾದ ಜಾಗ....!!

೨೬ ಶುಕ್ರವಾರ ಬೆಳಿಗ್ಗೆ ಬೇಗನೆ ಎದ್ದು "ಜೇನುಕಲ್ಲು" ಗುಡ್ಡಕ್ಕೆ ಹೋದೆವು. ದೂದ್ ಪೇಡ ತುಂಬಾ ಜೋಶ್ ನಲ್ಲಿ ಯಿದ್ದ.....ಗುಡ್ಡ ಅವನ ಫೇವರಿಟ್..!!!ಕಾಳಿ ನದಿ ಕಣಿವೆ, ನಿತ್ಯಹರಿದ್ವರ್ಣದ ಕಾಡು, ಸುಂದರ ಸೂರ್ಯೋದಯ - ಜೇನುಕಲ್ಲು ಗುಡ್ಡದ ವಿಶೇಷ.

ಅಲ್ಲಿಂದ "ಮಾಗೋಡು ಜಲಪಾತ"ಕ್ಕೆ ಪಯಣ. ಜಲಪಾತದಲ್ಲಿ ನೀರು ಸ್ವಲ್ಪ ಕಡಿಮೆಯೇ ಯಿತ್ತು. ಮುಂಜಾನೆ ಹೋಗಿದ್ದರಿಂದ ಜನರು ಸಹ ಯಿರಲಿಲ್ಲ. ಪ್ರಕೃತಿ ಯಾ ನಿಜವಾದ ಸೌಂದರ್ಯ ಅಲ್ಲಿ ನೋಡಿ ವಾಪಾಸ್ ಯಲ್ಲಾಪುರಕ್ಕೆ ಬಂದೆವು.

"ಸಾತೊಡ್ಡಿ ಜಲಪಾತಕ್ಕೆ" ಹೋಗುವ ದಾರಿ ಸ್ವಲ್ಪ ಕಠಿಣ, ಕಚ್ಚಾ ರಸ್ತೆ, ಎಷ್ಟು ಹೋದರು ಜಲಪಾತದ ಸುಳಿವೇಯಿಲ್ಲ. ಯಾವ ವಾಹನದ ಸುಳಿವೂ ಯಿಲ್ಲ. ಇನ್ನೇನು ವಾಪಾಸ್ ಹೋಗುವುದು ಅಂಥ ನಾವು ಹೇಳಿದೆ. ಬನವಾಸಿ ಏನಾದ್ರು ಆಗ್ಲಿ ಮುಂದೆ ಹೋಗಿ ನೋಡಿಯೇ ಬಿಡೋಣ ಅಂಥ ಧೈರ್ಯ ತುಂಬಿದ. ಸ್ವಲ್ಪ ದೂರ ಹೋದಾಗ ಒಂದು ಹಿಂದೂ ಹುಡುಗರು ನೀರಲ್ಲಿ ಆಟ ಆಡ್ತಾ ಯಿರೋದು ಕಾಣಿಸ್ತು. ಸಧ್ಯ ಅವರ ಬಳಿ ಕೇಳೋಣ ಅಂಥ ಹೋದ್ರೆ, ಅವರಿಗೂ ಗೊತ್ತಿಲ್ಲ...ಅವರು ಕೂಡ ಬೇರೆಯವರು ಬರಲಿ ಅಂಥ ಕಾಯುತ್ತ ಯಿದ್ರು....!! "ಕಾಳಿ ನದಿ ಹಿನ್ನೀರು ಪ್ರದೇಶ" ನಿಜಕ್ಕೂ ಅದ್ಬುತ. ಅಲ್ಲಿ ಸ್ವಲ್ಪ ಹೊತ್ತು ತಣ್ಣನೆಯ ಗಾಳಿ ಸೇವಿಸ್ತ ಯಿದ್ವಿ, ದೂದ್ ಆಗಲೇ ಸ್ವಲ್ಪ ದೂರ ಹೋಗಿ ಆಗಿತ್ತು....ಅದು ಅವನ ಚಟ..!! ಒಂದು ಕಡೆ ಸುಮ್ಮನೆ ನಿಲ್ಲಲಿಕ್ಕೆ ಆಗೋಲ್ಲ ಅವನಿಗೆ..!!ಅಲ್ಲಿಂದ ಸಾತೊಡ್ಡಿ ಜಲಪಾತಕ್ಕೆ ಬಂದಾಗ ಗಂಟೆ ೧. ಅಬ್ಭಾ!!! ನಿಜಕ್ಕೂ ರಮಣೀಯ ಜಲಪಾತ. ಕರ್ನಾಟಕದ ನಯಾಗರ ಅಂತಲೂ ಹೇಳಬಹುದು. ಹುಡುಗರು ತುಂಬ ಖುಷಿ ಆದರು.. ಸೀದಾ ಜಲಪಾತದ ಬುಡದ ತನಕ ಹೋದ್ವಿ...ನೀರಿನ ರಭಸಕ್ಕೆ ಬೆನ್ನು ಕೊಟ್ಟು ನಿಂತು ಸ್ನಾನ ಮಾಡುವುದು ಅತ್ಯಂತ ಯಿಷ್ಟ ಅರವಿಂದ ನಿಗೆ. ಈ ಸಲ ದೂದ್ ಅರವಿಂದ ನ್ನು ಕರೆದುಕೊಂಡು ಜಲಪಾತದ ಒಂದು ಸುತ್ತು ಹಾಕಿದ....!! ಸಧ್ಯ "ಇಷ್ಟೇನಾ.....?" ಅಂಥ ದೂದ್ ಹೇಳಲಿಲ್ಲ....!! ಅಲ್ಲಿಗೆ ಹೋಗಿದ್ದು ಸಾರ್ಥಕ...!!ಅಲ್ಲಿಂದ ವಾಪಾಸ್ ಬರಲು ನನಗೂ ಇಷ್ಟ ಯಿರಲಿಲ್ಲ...ಅಷ್ಟು ಸುಂದರ ಜಲಪಾತ..!!

ಅಲ್ಲಿಂದ "ಅರಬೈಲ್" ಘಾಟಿ ಮುಖಾಂತರ "ಗೋಕರ್ಣ" ಕ್ಕೆ ಹೋದಾಗ ಸಂಜೆ ೭ ಗಂಟೆ ಆಗಿತ್ತು. ಬೀಚ್ ಪಕ್ಕ ಗುಡಿಸಲಿನಲ್ಲಿ ರಾತ್ರಿ ಕಳೆಯುವ ಬಗ್ಗೆ ಬನವಾಸಿ ಆಲೋಚನೆ ಮಾಡಿದ..ಓಂ ಬೀಚ್ ಒಂದು ರೌಂಡು ಹಾಕಿ ಬಂದ್ರು ಒಂದೇ ಒಂದು ಗುಡಿಸಲು ಸಿಗಲಿಲ್ಲ. ಲಾಡ್ಜ್ ಮಾಡಿ ರಾತ್ರಿ ಕಳೆಯುವ ನಿರ್ಧಾರ ಮಾಡಿದೆವು. ಗೋಕರ್ಣದಲ್ಲಿ ಯಾವುದೇ ಲಾಡ್ಜ್ ಸಿಗದೇ ಪರದಾಡಿ ಸುಸ್ತಾದಾಗ ಬನವಾಸಿ ಯಾ ಗೆಳೆಯನ ಗೆಳೆಯ ಆಪಧ್ಬಂದವನಂತೆ ಬಂದು ಸಹಾಯ ಮಾಡಿ ಒಂದು ಲಾಡ್ಜ್ ಕೊಡಿಸಿದ. ಅಲ್ಲಿ ಹೊದೆಯಲು ಏನೂ ಕೊಡಲಿಲ್ಲ....ನಾನು ಅರವಿಂದ ನ ಪಂಚೆಯನ್ನೇ ಹೊದ್ದು ಮಲಗಿದೆ...ಪಾಪ ದೂದ್ ಗೆ ನಿದ್ದೆ ಬರಲಿಲ್ಲ...!!!

೨೭ ಶನಿವಾರ ಬೆಳಿಗ್ಗೆ ತಣ್ಣೀರು ಸ್ನಾನ ಮಾಡಿ " ಮಹಾಭಲೇಶ್ವರ ದೇವಸ್ಥಾನ" "ಆತ್ಮಲಿಂಗ" ದರ್ಶನ ಮಾಡಿದೆವು. ಹಾಗೆ ಒಂದು ರೌಂಡು ರಥ ಬೀದಿ, ಬೀಚ್, ಪುಣ್ಯಕೋಟಿ ಪುಷ್ಕರಣಿ ಸುತ್ತಾಡಿ ಓಂ ಬೀಚ್ ಗೆ ಹೊರಟೆವು.

ಓಂ ಬೀಚ್ ನಲ್ಲಿ ಸನ್ ಬಾತ್ ಮಾಡಿ, ಸ್ವಲ್ಪ ಹೊತ್ತು ಸಮುದ್ರ ಸ್ನಾನ ಮಾಡಿದ್ವಿ. ದೂದ್ ಸಮುದ್ರಕ್ಕೆ ಯಿಳಿಯಲಿಲ್ಲ.....ಉದ್ದಕ್ಕೆ ರೌಂಡು ಹೋಗಿ ಹಿಪ್ಪಿಗಳ ದರ್ಶನ ಭಾಗ್ಯ ಪಡೆದ....!!! ಉರಿ ಬಿಸಿಲಿನಲ್ಲೂ ತಂಪು ಕನ್ನಡಕ ಹಾಕಿಕೊಂಡು ಹಿಪ್ಪಿಗಳನ್ನು ನೋಡಿ ಮತ್ತಷ್ಟು ತಣ್ಣಗಾದ...!!ಮಧ್ಯಾನ್ನ ಅಲ್ಲಿಂದ ಹೊರಟು "ಇಡಗುಂಜಿ" ಗೆ ಬಂದು "ಮಹಾಗಣಪತಿ" ದೇವರ ದರ್ಶನ, ಅರ್ಚನೆ ಮಾಡಿಸಿ ಸ್ವಲ್ಪ ಶಾಪಿಂಗ್ ಮಾಡಿದ್ವಿ.

ಸಂಜೆ ಸೂರ್ಯಾಸ್ತ ನೋಡಲು "ಮುರುಡೇಶ್ವರ" ಕ್ಕೆ ಹೋಗಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕೊಂಡು ಸ್ವಲ್ಪ ಬೇಜಾರು ಆಯ್ತು. ಆದ್ರೆ ಅಲ್ಲಿನ ಮೋಹಕ ಸಮುದ್ರ, ಎತ್ತರದ ಗೋಪುರ, ಶಿವನ ವಿಗ್ರಹ ಎಲ್ಲವೂ ಮನಸೂರೆಗೊಂಡವು. ಅಲ್ಲಿವರೆಗಿನ ಆಯಾಸ ದಣಿವು ಎಲ್ಲ ಮಾಯಾ...!! ಗೋಪುರ, ವಿಗ್ರಹ ದ ಕೆತ್ತನೆ ಎಲ್ಲದಕ್ಕೂ ಹ್ಯಾಟ್ಸ್ ಆಪ್...!! ಸಂಜೆ ಅಲ್ಲೇ ಊಟ ಮಾಡಿ ಸ್ವೀಟಿ ಗು ಸ್ವಲ್ಪ ಹೊಟ್ಟೆಗೆ ಹಾಕಿಸಿ ಅಲ್ಲಿಂದ ಗೇರುಸೊಪ್ಪ ಮಾರ್ಗವಾಗಿ ಸಾಗರ ತಲುಪಿದಾಗ ರಾತ್ರಿ ೧೧ ಗಂಟೆ....!!

ಒಂದು ನೆನಪಿನಲ್ಲಿ ಉಳಿಯುವಂಥ ಪ್ರವಾಸ....ಸಕತ್ ಮಜ ಬಂತು...ದೂದ್ ಖುಷಿ ಆದ...!!

ಒಟ್ಟು ಪ್ರಯಾಣ - ೫೬೦ ಕಿ. ಮೀ.

1 comment:

Atticus said...

Great blog. Very interesting. Greetings from Spain