ಅಲ್ಲಿಂದ ನಮ್ಮ ಪ್ರಯಾಣ ಬಸ್ಸಿನಲ್ಲಿ ನಿಗದಿಯಾಗಿತ್ತು. ದೀರ್ಘ ಪ್ರಯಾಣದ ನಂತರ ಮರುದಿನ ಬೆಳಿಗ್ಗೆ ೧೦.೩೦ ಕ್ಕೆ ಗೋಕಾಕ ತಲುಪಿದೆವು. ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ "ಪ್ರಶಾಂತ್" ಲಾಡ್ಜ್ ನಲ್ಲಿ ಒಂದು ರೂಮು ಬುಕ್ ಮಾಡಿ, ಸ್ನಾನ ಕ್ರಿಯೆಯನ್ನು ಮುಗಿಸಿದೆವು. ಲಾಡ್ಜ್ ಮಾಲೀಕರ ನೆರವಿನಿಂದ ಬಾಡಿಗೆಗೆ ಕಾರನ್ನು ಗೊತ್ತುಮಾಡಿದೆವು. ಅಲ್ಲಿನ ನಾಮಫಲಕಗಳು ಸ್ವಲ್ಪ ವಿಚಿತ್ರ ಅನ್ನಿಸುತಿತ್ತು. ಯಥಾವತ್ ಬಯಲುಸೀಮೆ ಭಾಷೆಯಲ್ಲಿ ಉಚ್ಚರಿಸಿದ ಹಾಗೆ ಫಲಕಗಳನ್ನು ಬರೆದಿದ್ದಾರೆ. ಉದಾ - " ಸ್ಯೆಯದ ಸಾಯಿಕಲ ಶಾಪ.....! ಛಾಯ ಹೋಟೆಲ..ದಮ್ಮರಗಿ ಟೆಕ್ಸ್ಟ್ ಟಾಯಿಲ್ಸ..! ಬಜಾಜ ಅಲಿಯೇನ್ಸ ಫೈನಾನ್ಸಿಯಲ...! ಇವುಗಳನ್ನ ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯಿತು.
ಮಹಾಲಿಂಗೇಶ್ವರ ದೇವಸ್ಥಾನ : ಗೋಕಾಕ ಜಲಪಾತದ ಬದಿಯಲ್ಲಿಯೇ ಇರುವ ಪುರಾತನ ಮಹಾಲಿಂಗೇಶ್ವರ ದೇವಸ್ಥಾನವು ಚಾಲುಕ್ಯ ಶೈಲಿಯಲ್ಲಿದ್ದು ೧೦ ನೇ ಶತಮಾನದ್ದೆಂದು ಅಂದಾಜಿಸಲಾಗಿದೆ. ಈ ದೇವಸ್ಥಾನವು ಗರ್ಭಗೃಹ, ಅರ್ಧಮಂಟಪ ಮತ್ತು ವಿಶಾಲ ಮುಖಮಂಟಪ ಹೊಂದಿದೆ. ಸ್ಥಳೀಯರು ಈ ದೇವಸ್ಥಾನವನ್ನು ತಾರಕೇಶ್ವರ ದೇವಸ್ಥಾನ ಅಂತಲೂ ಕರೆಯುತ್ತಾರೆ. ದೇವಸ್ಥಾನದ ಮುಂಭಾಗದಲ್ಲೇ ಜಲಪಾತ ಇರುವುದು.
ಗೋಕಾಕ್ ಜಲಪಾತ ಪಟ್ಟಣದಿಂದ ೭ ಕಿ.ಮೀ ದೂರದಲ್ಲಿದೆ. ನೀರಿನ ಭೋರ್ಗರೆತ ದೂರದವರೆಗೂ ಕೇಳಿಸುತ್ತಿರುತ್ತದೆ. ಈ ಜಲಪಾತವನ್ನು " ಕರ್ನಾಟಕದ ನಯಾಗಾರ" ಎಂತಲೂ ಬ್ರಿಟಿಷರು ಕರೆದಿದ್ದರು.
ಘಟಪ್ರಭಾ ನದಿಯು ೧೮೦ ಮೀ ಎತ್ತರದಿಂದ ಭೋರ್ಗರೆಯುತ್ತಾ ಆಳಕ್ಕೆ ಧುಮುಕುವ ನೋಟವೇ ಭಯಂಕರ..ಮಳೆಗಾಲದ ಕೆಂಪು ನೀರು ಜಲಪಾತದ ರೌದ್ರವನ್ನು ಇನ್ನು ಹೆಚ್ಚಿಸಿತ್ತು.
ತೂಗು ಸೇತುವೆ ಇಲ್ಲಿನ ಪ್ರಮುಖ ಆಕರ್ಷಣೆ. ಊರ ನಾಗರಿಕರಿಗೆ ಅನುಕೂಲ ಆಗಲೆಂದು ಮರ ಮತ್ತು ಕಬ್ಬಿಣದಿಂದ ನಿರ್ಮಾಣವಾದ ಈ ಸೇತುವೆಯ ಮೇಲೆ ನಡೆದುಕೊಂಡು ಹೋಗುವುದು ಅದ್ಭುತ ಅನುಭವ. ಕಾಲ ಕೆಳಗೆ ಘಟಪ್ರಭ ನದಿಯ ರಭಸದ ಅನುಭವ.ತೂಗು ಸೇತುವೆ ಮೇಲೆ ನಡೆಯುವಾಗ ಕುಲುಕಾಟ ಶುರು ಆಗುತ್ತದೆ, ಬಹಳ ಜನ ಪ್ರವಾಸಿಗರು ಅರ್ಧಕ್ಕೇ ವಾಪಾಸು ಹೋಗುತ್ತಾರೆ..ಅಷ್ಟು ಹೆದರಿಕೆ ಆಗುತ್ತದೆ...!!
ಈ ಜಲಪಾತವನ್ನು ಎಲ್ಲ ಬದಿಯಲ್ಲೂ ನಿಂತು ಸೌಂದರ್ಯವನ್ನು ಸವಿಯಬಹುದು. ಅಗಾಧ ಪ್ರಮಾಣದ ನೀರು ಒಮ್ಮೆಲೇ ಧುಮ್ಮಿಕ್ಕುವುದು ನಿಜಕ್ಕೂ ರೋಮಾಂಚನ. ವಿಶಾಲವಾಗಿ ಹರಡಿರುವ, ಒಮ್ಮೆಲೇ ಭೋರ್ಗರೆಯುತ್ತಾ ಎದೆ ನಡುಗಿಸುವ ಗೋಕಾಕ ನಿಜಕ್ಕೂ ಗಂಡು ಮೆಟ್ಟಿದ ನಾಡಿನ ಜಲಪಾತ...!! ಜೂನ್ ನಿಂದ ಅಕ್ಟೋಬರ್ ತಿಂಗಳ ಕಾಲ ಗೋಕಾಕ ಜಲಪಾತದ ವೀಕ್ಷಣೆಗೆ ಉತ್ತಮ ಸಮಯ. ಜಲಪಾತದ ತಳದಲ್ಲಿ ಜಲ-ವಿದ್ಯುತ್ ಸ್ಥಾವರ ಇದೆ. ಹಾಗೆಯೇ ಗೋಕಾಕ ಬಟ್ಟೆ ಮಿಲ್ಲು ಕೂಡ ನೋಡಬೇಕಾದ ಕಟ್ಟಡ. ಇದನ್ನು ೧೮೮೫ ರಲ್ಲಿ ಬ್ರಿಟಿಷರು ಪ್ರಾರಂಭಿಸಿದರು.
ಗೊಡಚಿನಮಲ್ಕಿ ಜಲಪಾತ - ಗೋಕಾಕ ದಿಂದ ಸುಮಾರು 2೦ ಕಿ.ಮೀ ಮಾರ್ಕಂಡೇಯ ನದಿಯು ಈ ಸುಂದರ ಜಲಪಾತವನ್ನು ಸೃಷ್ಟಿಸಿದೆ. ಎಲ್ಲ ಜಲಪಾತದಂತೆ ಇಲ್ಲಿ ಒಮ್ಮೆಲೇ ನೀರು ಆಳಕ್ಕೆ ಬೀಳುವುದಿಲ್ಲ. ಹಂತ ಹಂತವಾಗಿ ವಿವಿಧ ಸ್ಥರಗಳಲ್ಲಿ ನದಿಯು ಹರಿದು, ಸುಂದರ ಜಲಧಾರೆಯನ್ನು ಸೃಷ್ಟಿಸಿದೆ. ಇಲ್ಲಿ ನೀರಿನ ಹತ್ತಿರದವರೆಗೂ ಹೋಗಬಹುದು.
ಊರಿನಲ್ಲಿ ವಾಹನವನ್ನು ನಿಲ್ಲಿಸಿ, ಸುಮಾರು ೨ ಕಿ.ಮೀ ನಡೆಯಬೇಕು. ಹಸಿರು ಹೊಲ ಗದ್ದೆಗಳು ನಮ್ಮನ್ನ ಸ್ವಾಗತಿಸುತ್ತವೆ.
ಮಳೆ ಬಂದಾಗ ಕಪ್ಪು ಮಣ್ಣಿನಲ್ಲಿ ನಡೆಯುವುದು ಸ್ವಲ್ಪ ಕಷ್ಟ...ಜಿಡ್ಡು ಮಣ್ಣು, ಬೇಗನೆ ಕಾಲು ಜಾರುತ್ತದೆ. ಮೊದಲು ೫೦ ಮೀ ನಂತರ ೨೫ ಮೀ ಎತ್ತರದಿಂದ ಇಳಿಜಾರಿನಂತೆ ಹರಿವ ನದಿಯು ಕೆಂಪನೆಯ ಜಲಪಾತದ ಸೊಬಗನ್ನು ಉಣಿಸುತ್ತದೆ.
ಮಂಟಪದಂತೆ ಇರುವ ಕಲ್ಲಿನ ಮೇಲೆ ಕುಳಿತು ಸುಂದರ ಜಲಪಾತವನ್ನು ವೀಕ್ಷಿಸಬಹುದು. ತನ್ನದೇ ವಿಶಿಷ್ಟ ಸೌಂದರ್ಯವನ್ನು ಹೊಂದಿರುವ ಈ ಜಲಪಾತದ ಬಳಿ ಹೆಚ್ಚಿನ ಸಮಯ ಕಳೆದೆವು..!
ಹಿಡಕಲ್ ಡ್ಯಾಮ್ : ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಹಿಡಕಲ್ ಡ್ಯಾಮ್ ಶ್ರೀಯುತ ಜೀ. ಎಸ್ ಬಾಳೆಕುಂದ್ರಿ ಅವರ ಕನಸಿನ ಕೂಸು. ಸುಮಾರು ೧೩೪೦೦ ಹೆಕ್ಟೇರು ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಿರುವ ಈ ಜಲಾಶಯವನ್ನು ೧೯೭೭ ರಲ್ಲಿ ಅಂದಾಜು ೯.೪೭ ಕೋಟಿ ವೆಚ್ಚದಲ್ಲಿ ಕಟ್ಟಲಾಗಿದೆ. ಸಧ್ಯಕ್ಕೆ ಭದ್ರತೆಯ ಕಾರಣ ಪ್ರವಾಸಿಗರ ವೀಕ್ಷಣೆಗೆ ಅನುಮತಿ ನೀಡುತ್ತಿಲ್ಲ.
ಹಿಡಕಲ್ ನಿಂದ ಹೊರಟು, ಗೋಕಾಕ್ ತಲುಪಿದಾಗ ಸಂಜೆ ೫ ಗಂಟೆ ಆಗಿತ್ತು. ಮಧ್ಯಾನ್ನ ಊಟ ಎಲ್ಲೂ ದೊರೆಯದ ಕಾರಣ ಗೋಕಾಕ್ ನಲ್ಲಿ ತಿಂಡಿ ತಿಂದು ಬೆಳಗಾವಿಗೆ ಬಸ್ ಹಿಡಿದೆವು. ದಿನಪೂರ್ತಿ ನಮಗೆ ಮಳೆಯ ಅಡಚಣೆ ಉಂಟಾಗಲಿಲ್ಲ. ಬೆಳಗಾವಿ ತಲುಪಿದಾಗ ಮಳೆಯು ರಚ್ಚೆ ಹಿಡಿದಂತೆ ಸುರಿಯುತ್ತಿತ್ತು. ಸಂತೋಷ್ ಬಾವ ಮೊದಲೇ ಸನ್ಮಾನ್ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಅದಿಲ್ಲದಿದ್ದರೆ ನಾವು ಬಹಳ ಪರದಾಡಬೇಕಾಗಿತ್ತು. ಅದೇ ಹೋಟೆಲಿನಲ್ಲಿ ರಾತ್ರಿಯ ಊಟ ಮುಗಿಸಿ ಬೇಗನೆ ನಿದ್ರೆಗೆ ಜಾರಿದೆವು.
ಭಾನುವಾರ ಮುಂಜಾನೆ ೬.೨೦ ಕ್ಕೆ ಡ್ರೈವರ್ ಅರುಣ ಸಂತೋಷ್ ಬಾವನ ಸಾಂಟ್ರೋ ಕಾರಿನಲ್ಲಿ ಹಾಜರ್. ನಾವು ಬೇಗ ಬೇಗನೆ ರೆಡಿ ಆಗಿ, ಹೋಟೆಲ್ ಗ್ರಾಂಡ್ ನಲ್ಲಿ ಇಡ್ಲಿ-ವಡ ತಿಂದು ಅಂಬೋಲಿ ಕಡೆಗೆ ಹೊರಟೆವು.ಆಗಲೇ ಮಳೆಯಿಂದಾಗಿ ವಾತಾವರಣ ಮುಸುಕು ಮುಸುಕಾಗಿತ್ತು. ಹಿತವಾದ ಛಳಿ, ಮಂಜು ನಮಗೆ ಎಲ್ಲಿಲ್ಲದ ಉತ್ಸಾಹವನ್ನು ತಂದಿತ್ತು. ಬೆಳಗಾವಿ ಅಂದರೆ ಬಯಲುಸೀಮೆ ಅಂತಾನೆ ಅಂದುಕೊಂಡಿದ್ದ ನಮಗೆ ಬೇರೆಯದೇ ಪ್ರಪಂಚವನ್ನು ತೆರೆದಿತ್ತು. ಇದು ಅಪ್ಪಟ ಮಲೆನಾಡಿನ ಸೆರಗಿನ ಊರು. ಹಚ್ಚ ಹಸಿರಿನ ಮರಗಳು, ಕಬ್ಬು, ಭತ್ತದ ಗದ್ದೆ, ಬಿಡದೆ ಸುರಿಯುತ್ತಿದ್ದ ಮಳೆ..ಆಹಾ ಪ್ರವಾಸಕ್ಕೆ ಹೇಳಿಮಾಡಿಸಿದ ಊರು.. ಸಿಂಪ್ಲಿ ಸೂಪರ್..!
ಅನುಭವಿ ಅರುಣ ನಮ್ಮನ್ನು ಮೊದಲು ಕರೆದೊಯ್ದಿದ್ದು " ನನ್ಗರ್ತ ಜಲಪಾತಕ್ಕೆ.." ಹಿಂದಿನ ದಿನ ಕೆಂಪು ನೀರನ್ನು ಕಂಡಿದ್ದ ನಮಗೆ ಇಂದು ಸ್ವಚ್ಛ ಗುಡ್ಡಗಾಡಿನ ಮಳೆಯ ನೀರು.
ಕಡಿದಾದ ಚಿಕ್ಕ ಸುರಂಗದ ಮಧ್ಯೆ ಅತ್ಯಂತ ರಭಸವಾಗಿ ಧುಮ್ಮಿಕ್ಕುವ ಈ ಜಲಪಾತ ನಾನು ನೋಡಿದ ಈ ವರೆಗಿನ ಎಲ್ಲ ಜಲಪಾತಗಳಿಗಿಂತ ವಿಭಿನ್ನ. ಇದರ ಆಳ ಇದುವರೆಗೂ ತಿಳಿದಿಲ್ಲ. ಮೇಲ್ನೋಟಕ್ಕೆ ಸಹಜವಾಗಿಯೇ ಕಾಣುವ ಕಂದಕ, ಹತ್ತಿರದಿಂದ ಬಗ್ಗಿ ನೋಡಿದಾಗಲೇ ಉಸಿರು ನಿಲ್ಲುವಂತಾಗಿದ್ದು. ಇದರ ಸಂಪೂರ್ಣ ಚಿತ್ರವನ್ನು ತೆಗೆಯಲು ಸಾಧ್ಯವಾಗಲಿಲ್ಲ..!
ಹಿರಣ್ಯಕೆಷಿ : ಮಾರ್ಕಂಡೇಯ ನದಿಯ ಉಗಮ ಸ್ಥಾನ. ಚಿಕ್ಕದಾದ ಗುಹೆಯ ಒಳಗಿಂದ ಉದ್ಭವಿಸಿ ಬರುವ ಮಾರ್ಕಂಡೇಯ ನದಿಯು ಮುಂದೆ ಗೊಡಚಿನಮಲ್ಕಿ ಜಲಪಾತವನ್ನು ಸೃಷ್ಟಿಸುತ್ತದೆ.
ಶಿವ ಪಾರ್ವತಿಯರ ಪ್ರತಿಮೆಯ ಸುತ್ತಲೂ ಸದಾ ಕಾಲ ನೀರು ಹರಿಯುತ್ತಿರುತ್ತದೆ. ವಾಹನವನ್ನು ನಿಲ್ಲಿಸಿ ೧/೨ ಕಿ,ಮೀ ಗುಡ್ಡದ ಮಧ್ಯೆ ನಡೆಯಬೇಕು. ಪ್ರವಾಸಿಗರಿಗೆ ಅನುಕೂಲಕ್ಕಾಗಿ ಅಚ್ಚುಕಟ್ಟಾದ ಮೆಟ್ಟಿಲು ವ್ಯವಸ್ಥೆ ಇದೆ.
ಅಂಬೋಲಿ: ಬೆಳಗಾವಿ ಗೋವಾ ನಡುವಿನ ಸಹ್ಯಾದ್ರಿ ಘಟ್ಟದ ರಸ್ತೆ ಮಧ್ಯದಲ್ಲಿ ಸಿಗುವ ಸುಂದರ ಜಲಪಾತ. ಅಂಬೋಲಿ ಘಟ್ಟದ ದಾರಿಯುದ್ದಕ್ಕೂ ಚಿಕ್ಕಪುಟ್ಟ, ಸುಂದರ ಜಲಪಾತಗಳು. ವ್ಯೂ ಪಾಯಿಂಟ್, ಎಲ್ಲವೂ ಪ್ರಕೃತಿಯ ಸುಂದರ ದೃಶ್ಯಗಳು.
ಬೆಳಗಾವಿಯಿಂದ ೮೦ ಕಿ.ಮೀ ದೂರ. ಇದಕ್ಕೆ ಗ್ರೀನ್ ವ್ಯಾಲಿ ಅಂತಲೇ ಹೆಸರು. ರಸ್ತೆಯ ಪಕ್ಕದಲ್ಲಿಯೇ ಇರುವ ಅಂಬೋಲಿ ಜಲಪಾತವು ಅತ್ಯಂತ ಸುಂದರವಾಗಿದೆ. ಬಿಳುಪಿನ ಜಲಧಾರೆ ನಯನ ಮನೋಹರ. ೨೦೦ ಅಡಿ ಎತ್ತರದಿಂದ ಕವಲಾಗಿ ಧುಮ್ಮಿಕ್ಕುವ ಈ ಜಲಪಾತ ಪ್ರವಾಸಿಗರಿಗೆ ಹಬ್ಬ.
ಮಳೆಯ ಪ್ರಮಾಣ ಜಾಸ್ತಿ ಇದ್ದರಿಂದ ಪ್ರವಾಸಿಗರು ಕೂಡ ಹೆಚ್ಚಿದ್ದರು. ಜಲಪಾತದ ಅಂದವನ್ನು ಎಷ್ಟು ಹೊತ್ತು ನೋಡಿದರೂ ತೃಪ್ತಿ ಆಗುತ್ತಿರಲಿಲ್ಲ..ಹಾಗೆ ಸುಮ್ಮನೆ ನೋಡುತ್ತಲೇ ಇದ್ದೆವು. ಹೆಚ್ಚಿನ ಮಳೆ ಮತ್ತು ಮಂಜು ಮುಸುಕಿದ್ದರಿಂದ ಹೆಚ್ಚಿನ ಚಿತ್ರಗಳನ್ನು ತೆಗೆಯಲಾಗಲಿಲ್ಲ. ಮೈ-ಮನ ತೃಪ್ತಿ ಆಗುವಷ್ಟು ಕಾಲ ಸ್ನಾನ ಮಾಡಿ, ಜಲಪಾತದ ಬುಡದವರೆಗೆ ಹೋಗಿ ಅದರ ಸೌಂದರ್ಯವನ್ನು ಕಣ್ತುಂಬಿಕೊಂಡೆವು.
ಮುಂದೆ ವ್ಯೂ ಪಾಯಿಂಟ್ ನಲ್ಲಿ ನಿಂತು ನೋಡಿದರೆ ಸುತ್ತ ಮುತ್ತ ಜಲಪಾತಗಳೇ ಕಾಣಿಸುತಿದ್ದವು. ಇಂತಹ ಒಂದು ಅದ್ಭುತ ದೃಶ್ಯವನ್ನು ನಾನು ನೋಡಿರಲಿಲ್ಲ. ಮೋಡಗಳ ಅಡಚಣೆ ಇಲ್ಲದಿದ್ದರೆ ಅದ್ಭುತವಾದ ವೀಕ್ಷಣೆ ಸಾಧ್ಯ. ಮನಸ್ಸಿಗೆ ಅಂತ್ಯಂತ ಖುಷಿ ಕೊಡುವ ತಾಣ.ಹಸಿರಿನ ದಟ್ಟ ಕಾನನ, ಬೆಳ್ಳಿ ಗೆರೆಯಂತೆ ಕಾಣಿಸುವ ಜಲಧಾರೆಗಳು, ಹಿತವಾದ ಮಳೆ, ಸ್ವರ್ಗವೇನೂ ಅಂತ ಅನ್ನಿಸುತ್ತಿತ್ತು.
ಸಾವಂತವಾಡಿ: ಸಾವಂತವಾಡಿ ಭೋಂಸಲೇ ಅರಸರ ರಾಜಧಾನಿ. ಸುಂದರ ಕೆರೆ, ಕೋಟೆ, ರಾಜಮಹಲ್, ದರ್ಬಾರ್ ಹಾಲ್, ಅರಮನೆ ಇನ್ನೂ ರಾಜಮನೆತನದ ಜೀವಂತಿಕೆಯನ್ನು ಉಳಿಸಿವೆ. ಮರದ ಗೊಂಬೆಗಳು, ಸುಂದರ ಕೆತ್ತನೆಗಳು, ಗಂಜಿಫಾ (ಮೊಘಲ್ ) ಮಾದರಿಯ ಚಿತ್ರಕಲೆ ಇಲ್ಲಿನ ವಿಶೇಷ.
ಚಿತ್ರಕಲೆಯನ್ನು ರಾಜಮಾತೆ ಸತ್ವಶೀಲ ದೇವಿ ಇಂದಿಗೂ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಅರಮನೆಯ ಸಂಗ್ರಹಾಲಯದಲ್ಲಿ ರಾಜಮನೆತನದ ಚಿತ್ರಪಟಗಳು, ಆಯುಧ, ನಿತ್ಯೋಪಯೋಗಿ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಸಾವಂತವಾಡಿಯಲ್ಲಿ ಊಟ ಮುಗಿಸಿ, ವಾಪಾಸು ಬೆಳಗಾವಿಯತ್ತ ಹೊರಟೆವು. ಹೆಚ್ಚಿನ ಪ್ರವಾಸಿಗರು, ವಾಹನ ದಟ್ಟಣೆಯಿಂದಾಗಿ ಬೆಳಗಾವಿ ತಲುಪಿದಾಗ ಸಂಜೆ ೬ ಗಂಟೆ ಆಗಿತ್ತು. ನನ್ನ ಅನುಭವದ ಪ್ರಕಾರ, ಅಂಬೋಲಿಗೆ ವಾರದ ದಿನಗಳಂದು ಹೋಗುವುದು ಉತ್ತಮ. ಅಥವಾ ಮುಂಜಾನೆ ಬೇಗನೆ ಅಲ್ಲಿಗೆ ತಲುಪುವುದು ಉತ್ತಮ. ಅದಿಲ್ಲದಿದ್ದರೆ ವಾರದ ಕೊನೆಯ ದಿನಗಳು, ರಜಾ ದಿನಗಳಂದು ವಿಪರೀತ ಜನ ದಟ್ಟನೆ, ವಾಹನ ದಟ್ಟನೆ ಇರುತ್ತದೆ. ಜಲಪಾತದ ತುಂಬೆಲ್ಲ ಪ್ರವಾಸಿಗರು ಗಿಜಿಗುಟ್ಟುತ್ತಿರುತ್ತಾರೆ. ನಮಗಂತೂ ವಾಪಾಸು ಬರುವಾಗ ಸಾಕಾಗಿ ಹೋಗಿತ್ತು...!!
ಸಂಜೆ ಸಂತೋಷ್ ಬಾವನ ಮನೆಯಲ್ಲಿ ಕರದಂಟು ಸವಿದು, ಚಹಾ ಕುಡಿದು, ಅವರ ಸಹಕಾರಕ್ಕಾಗಿ ಥ್ಯಾಂಕ್ಸ್ ಹೇಳಿ, ಬೆಂಗಳೂರಿಗೆ ಹೋಗುವ VRL ಬಸ್ಸಿನಲ್ಲಿ ವಾಪಾಸು ಹೊರಟೆವು.
8 comments:
ಪ್ರಶಾಂತ್,
ಗೋಕಾಕ್ ಮತ್ತು ಅಂಬೋಲಿ ಪ್ರವಾಸ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಫೋಟೊಗಳೆಲ್ಲಾ ತುಂಬಾ ಚೆನ್ನಾಗಿವೆ. ನಮಗೂ ಹೋಗಬೇಕೆನ್ನುವ ಆಸೆಯಾಗುತ್ತಿದೆ...
ಧನ್ಯವಾದಗಳು.
ಪ್ರಶಾಂತ್,
ನಿಮ್ಮೊಂದಿಗೆ ನಮಗೂ ಗೋಕಾಕ್ ಹಾಗು ಅಂಬೋಲಿ ಜಲಪಾತಗಳ ಪ್ರವಾಸ ಮಾಡಿಸಿದಿರಿ... ಉಪಯುಕ್ತ ಮಾಹಿತಿಗಳು ಪ್ರವಾಸಿಗರಿಗೆ... ಫೋಟೋಗಳು ಚಂದವಾಗಿವೆ.
ಬರಹ ಚೆನ್ನಾಗಿದ್ದು. But looks like u missed 1 amazing place. Its something "kavalshet view point", don't know exact name, nowhere written. ಅಲ್ಲಿ ಚಹಾ ದ ಅಂಗಡಿಯವನು ಅವನ ಮರಾಠಿ ಭಾಷೆಯಲ್ಲಿ ಹೇಳಿದ್ದು. Somewhere u have to take right turn between ನನ್ಗರ್ತ ಜಲಪಾತ and ಹಿರಣ್ಯಕೆಷಿ .ನಾವ್ ನೋಡಿರೋದ್ರಲ್ಲಿ ulti place ಇದೇನೇ. ನಂತರದ್ದು ಅಂಬೋಲಿ.
ಶಿವೂ ಅವರೇ,
ನಿಮ್ಮ ಮೆಚ್ಚುಗೆಯ ಪ್ರೋತ್ಸಾಹಕ್ಕೆ ಧನ್ಯವಾದಗಳು.ಮಳೆಗಾಲದಲ್ಲಿ ಜಲಪಾತದ ಅದ್ಭುತ ದೃಶ್ಯ ನೋಡಲು ಚಂದ. ಆದಷ್ಟು ಬೇಗ ಒಮ್ಮೆ ಹೋಗಿ ಬನ್ನಿ.
ಹಾಯ್ ಶರತ್,
ಈ ವರ್ಷದ ಮಳೆಗಾಲದ ಪ್ರವಾಸದಲ್ಲಿ ಇದು ಅತ್ಯಂತ ಸುಂದರ ಪ್ರವಾಸ. ಬೆಳಗಾವಿಯ ಸುತ್ತಲಿನ ಎಲ್ಲ ಸ್ಥಳಗಳೂ ತುಂಬಾ ಸುಂದರವಾಗಿವೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಶ್ರೀ,
ಹೌದು ನೀನು ಹೇಳಿದ್ದು ನಿಜ, ಆ ವ್ಯೂ ಪಾಯಿಂಟ್ ನ ನಾನು ಮಿಸ್ ಮಾಡ್ಕಂಡಿ. ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಅಲ್ಲಿಗೆ ಹೊಪಲೆ ಆಗಲ್ಲೆ. ಇನ್ನು ಒಳ್ಳೆ ಪ್ಲಾನ್ ಮಾಡಿದ್ದರೆ ಸಾಧ್ಯ ಆಗ್ತ ಇತ್ತು ಅನ್ನಿಸ್ತು.
wow..super photos..& nice explanations too...
Thank you Vanitha. :-)
nanna tavarurina sobhagannu chennagi vivarisiddiri...
Dhanyavadagalu
"ಅದ್ಭುತ" ಮನ ಮನಸ್ಸಿನ ತನುವ ತನಿಸಿದ ನಿಮ್ಮ ಬರಹ ಪ್ರಕೃತಿಯ ಸೌಂದರ್ಯದ ರಸದೌತಣ ಉಣ ಬಡಿಸಿದೆ ತಮಗೆ ಶುಭ ನಮನಗಳು.
Post a Comment