೨೧ ಸೆಪ್ಟೆಂಬರ್ ೨೦೦೮ ಭಾನುವಾರ, ಇಸ್ರೋ ಲೇಔಟ್ ಗೆ ಬಂದಾಗ ಬೆಳಿಗ್ಗೆ ೬ ಗಂಟೆ. ಅದಾಗಲೇ ಶಿಲ್ಪಾ ೨-೩ ಬಾರಿ ನನಗೆ ಫೋನ್ ಮಾಡಿದ್ದಳು. ನಾನು ಸರಿಯಾದ ಸಮಯಕ್ಕೆ ಅವಳ ಮನೆಗೆ ಬಂದೆ. ನವೀನ ಆಗಲೇ ರೆಡಿ ಆಗಿದ್ದ. ಮಾಮೂಲಾಗಿ ಬೆಳಿಗ್ಗೆ ಅಷ್ಟು ಬೇಗನೆ ಎದ್ದಿದ್ದು ಒಂದು ರೆಕಾರ್ಡ್. ನಾನು, ನವೀನ, ಶಿಲ್ಪಾ, ರೂಪ ನನ್ನ ಕಾರ್ ನಲ್ಲಿ ಇಸ್ರೋ ಲೇಔಟ್ ಬಿಟ್ಟಾಗ ೬.೩೦ ಆಗಿತ್ತು. ನೈಸ್ ರೋಡ್ ಮುಂಜಾನೆಯ ಇಬ್ಬನಿ ಹೊದ್ದು ಮಲಗಿತ್ತು. ನೈಸ್ ರೋಡ್ ನಲ್ಲಿ ಒಂದೆರಡು ಮಾರ್ನಿಂಗ್ ಫೋಟೋ ತೆಗೆದು ಮೈಸೂರ್ ರೋಡ್ ನತ್ತ ನಮ್ಮ ಪ್ರಯಾಣ ಸಾಗಿತು.ಹೊಟ್ಟೆ ಚೂರು ಗುಟ್ಟತೊಡಗಿದಾಗ ಸರಿಯಾಗಿ "ಕಾಮತ್ ಉಪಹಾರ್" ಗೆ ಬಂದಿದ್ದೆವು. ಇಡ್ಲಿ-ವಡ, ಕೇಸರಿಬಾತ್ ತಿಂದು ಕಾಫಿ ಕುಡಿದಾಗ ಸ್ವಲ್ಪ ಸಮಾಧಾನ ಆಯಿತು. ಚಳಿಗಾಲದಲ್ಲಿ ಬೆಳಿಗ್ಗೆ ಒಂದು ಲಾಂಗ್ ಡ್ರೈವ್ ಮಾಡಿ, ಇಬ್ಬನಿ ಚಳಿಯಲ್ಲಿ, ಬಿಸ್ಸಿ ಬಿಸ್ಸಿ ಕಾಫಿ ಕುಡಿಯುವುದೇ ಆನಂದ...!! ನನಗೆ ಅನ್ನಿಸಿದ್ದು "ಜೀವನ ಎಷ್ಟು ಸುಂದರ...!!"ಅಲ್ಲಿಂದ ಹೊರಟು ಕನಕಪುರ ಮಾರ್ಗ ಹಿಡಿದೆವು. ಕಾರು ಸ್ವಲ್ಪ ನಿಧಾನ ಹೋಗುತ್ತಾ ಇರೋ ಹಾಗೆ ಅನ್ನಿಸ್ತ ಇತ್ತು. ಬಹುಶ: ರುಚಿಯಾದ ತಿಂಡಿ ತಿಂದು ೪ ಜನರ ಭಾರ ಜಾಸ್ತಿ ಆಗಿತ್ತೇನೋ..!!ಕನಕಪುರ ದಿಂದ ಮಳವಳ್ಳಿ ತಲುಪಿದಾಗಲೇ ನಮಗೆ ಗೊತ್ತಾಗಿದ್ದು ನಾವು ತಪ್ಪು ಮಾರ್ಗದಲ್ಲಿ ಬಂದಿದ್ದೇವೆ ಎಂದು. ಅಲ್ಲಿಗೆ ಸುಮಾರು ೧೧೦ ಕಿ.ಮೀ. ಬಂದಾಗಿತ್ತು. ರೆಸಾರ್ಟ್ ನ ಚೆಕ್-ಇನ್ ವೇಳೆ ೧೦ ಗಂಟೆ. ಆಗಲೇ ೯.೩೦ ಆಗಿತ್ತು. ಕಾವೇರಿ ಫಿಶಿಂಗ್ ಕ್ಯಾಂಪ್ ಇರುವುದು ೨ ಕಡೆ. ಒಂದು " ಗಾಲಿಬೋರೆ ಫಿಶಿಂಗ್ ಕ್ಯಾಂಪ್", ಮಳವಳ್ಳಿ ಹತ್ತಿರ, ಮೇಕೆದಾಟು ಬಳಿ. ನಾವು ಹೋಗಬೇಕಿದ್ದದ್ದು "ಭೀಮೇಶ್ವರಿ ಫಿಶಿಂಗ್ ಕ್ಯಾಂಪ್", ಮುತ್ತತ್ತಿ ಹತ್ತಿರ. ಅಲ್ಲಿನ ಒಬ್ಬ ದನಕಾಯುವ ಹುಡುಗನ ಹತ್ತಿರ ಸರಿಯಾದ ದಾರಿ ಕೇಳಿ ಸಾತನೂರು ಮಾರ್ಗವಾಗಿ ಮುತ್ತತ್ತಿ ಗೆ ಹೊರಟೆವು.ಆಗಲೇ ಮನೆಯಿಂದ ಹೊರಟು ೫ ಗಂಟೆ ಆಗಿತ್ತು. ಎಲ್ಲರ ಮುಖದಲ್ಲೂ ಆತಂಕ, ದುಗುಡ, ಏನೋ ಸಂಕಟ...!ಭೀಮೇಶ್ವರಿ ಇನ್ನೂ ೧ ತಾಸಿನ ದಾರಿ....!! ವಿಪರೀತ "ಜಲಬಾಧೆ" .....!! ಎಲ್ಲೂ ಮುಕ್ತವಾಗಿ ಹೋಗುವ ಹಾಗು ಇರಲಿಲ್ಲ...!! ಪ್ರತೀ ನಿಮಿಷವೂ ಸಂಕಟ ಹೆಚ್ಚೆಚ್ಚು ಆಗುತ್ತಾ ಇತ್ತು...!! ಅಲ್ಲಿನ ರಸ್ತೆ ಹೊಂಡ-ಗುಂಡಿ, ತುಂಬಾ ಸ್ಪೀಡ್ ಆಗಿ ಕಾರು ಓಡಿಸುವ ಹಾಗೂ ಇಲ್ಲ...ಆಗಾಗ ದಾರಿಗಡ್ಡ ಸಿಗುತ್ತಿದ್ದ ದನಗಳ ಗುಂಪು...ನನ್ನ ಸಂಕಟ ಹೇಳ ತೀರದು...ನನಗೆ ಅನ್ನಿಸಿದ್ದು "ಜೀವನ ಎಷ್ಟೊಂದು ಕಷ್ಟ...!!!"
ಭೀಮೇಶ್ವರಿ ತಲುಪಿದಾಗ ೧೧ ಗಂಟೆ ಆಗಿತ್ತು. "ಸ್ವಾಗತ-ಪಾನೀಯ" (Welcome-Drink) ಲಿಂಬೆ ಹಣ್ಣಿನ ಶರಬತ್ತು ಕುಡಿದು ಸ್ವಲ್ಪ ದಣಿವಾರಿಸಿಕೊಂಡೆವು. ಅಲ್ಲಿನ ವಿಶ್ರಾಂತಿ ಗೃಹ ಚಿತ್ರ...ಅಲ್ಲಿ ಟ್ರೆಕ್ಕಿಂಗ್ ಮಾಡಲು ಮನಸ್ಸಾಗದೆ, ಹಾಗೆ ಕಾವೇರಿ ದಡದಲ್ಲಿ ಸ್ವಲ್ಪ ಹೊತ್ತು ನೀರಲ್ಲಿ ಆಟ ಆಡಿದೆವು. ಅಲ್ಲಿನ ಸುಂದರ ಪರಿಸರ, ದಟ್ಟವಾದ ಕಾಡು, ರಭಸವಾಗಿ ಹರಿಯುವ ಕಾವೇರಿ ನಮಗೆ ಅತ್ಯಂತ ಇಷ್ಟವಾಯಿತು. ಮಳೆಗಾಲ ಆಗ ತಾನೆ ಕಳೆದಿದ್ದರಿಂದ ನದಿಯಲ್ಲಿ ನೀರು ತುಂಬಿತ್ತು.
"ರಿವರ್ ರಾಫ್ಟಿಂಗ್" ಇಲ್ಲಿನ ವಿಶೇಷ, ತುಂಬಿ ಹರಿಯುವ ನದಿಯಲ್ಲಿ, ತೇಲುತ್ತಾ, ರಭಸವಾದ ಇಳಿಜಾರಿನಲ್ಲಿ ಬೀಳುತ್ತಾ, ಕೊರಕಲು ನಡುವೆ ಬಿಳಿ ನೋರೆಯಂತಿದ್ದ ನೀರನ್ನು ಹಿಂದಿಕ್ಕುತ್ತ ರಾಫ್ಟಿಂಗ್ ಮಾಡುವುದು ಅತ್ಯಂತ ರೋಮಾಂಚನ....! ಸಿಂಪ್ಲಿ ಸೂಪರ್..! ನೀರಿನ ಮಧ್ಯೆ ಅಪಾಯಕಾರಿ ಸುಳಿಯ ಹತ್ತಿರ ಲೈಫ್- ಜಾಕೆಟ್ ಹಾಕ್ಕೊಂಡು ತುಂಬ ಸಮಯ ಈಜಿ ಮಜ ಮಾಡಿದ್ವಿ. ಅಂತು ಸಕತ್ ಥ್ರಿಲ್ಲಿಂಗು..!! ಸುಮಾರು ೧೫ ಕಿ.ಮೀ. ನದಿಯಲ್ಲಿ ರಾಫ್ಟಿಂಗ್ ಹೋಗಿದ್ವಿ...ಊಟ ಆದಮೇಲೆ ಸ್ವಲ್ಪ ಹೊತ್ತು ಜೋಕಾಲಿ ಮೇಲೆ ಮಲಗಿದ್ದು ಒಳ್ಳೆ ನಿದ್ದೆ ಬಂತು...ತಣ್ಣನೆಯ ಗಾಳಿ...ನಿಶ್ಯಬ್ದ ವಾತಾವರಣ...ಮರದ ನೆರಳು.
ಸಂಜೆ ತಿಳಿಯಾದ ನೀರಿನಲ್ಲಿ ತೆಪ್ಪ ವಿಹಾರ ಇತ್ತು. ತೆಪ್ಪದಲ್ಲಿ ಸುಮಾರು ೧೦ ಕಿ.ಮೀ. ನದಿಯಲ್ಲಿ ಹೋಗಿದ್ದೆವು. ತೆಪ್ಪ ನಡೆಸುತ್ತಿದ್ದವನು ತುಂಬ ಚಾಕಚಕ್ಯತೆ ಇಂದ ತೆಪ್ಪ ನಡೆಸುತಿದ್ದ...ಆಮೇಲೆ ನಮಗೆ ತಿಳಿದಿದ್ದು ಅಲ್ಲಿ ಭಾರಿ ಸುಳಿ ಇರೋ ವಿಷ್ಯ...ಮೊದಲೇ ಹೇಳಿದ್ರೆ ನಾವು ಹೆದರಿಕೊಳ್ತಾ ಇದ್ದ್ವಿ ಅಂಥ ಹೇಳಿರಲಿಲ್ಲ.ಸ್ಟ್ರಾಂಗ್ ಟೀ ಕುಡಿದಾದ ಮೇಲೆ, ನಾವು ಮೀನು ಹಿಡಿಯಲು ಹೋದ್ವಿ. "ಮಹಶೀರ್" ಮೀನು ಇಲ್ಲಿನ ವಿಶೇಷ..ದೊಡ್ಡ ಗಾತ್ರದ ಮೀನನ್ನು ಹಿಡಿದು ತೂಕ ಮಾಡಿ ಮತ್ತೆ ನೀರಿಗೆ ಬಿಡುವುದು ಇಲ್ಲಿನ ಪ್ರಮುಖ ಆಕರ್ಷಣೆ. ನನಗೆ ಒಂದು ಸಣ್ಣ ಮೀನು ಸಿಕ್ಕಿತ್ತು...ತೂಕ ಮಾಡಲು ಹೋಗಲಿಲ್ಲ...! ಸುಂದರ ದಿನವನ್ನು ಕಳೆದು ಸವಿ ನೆನಪುಗಳೊಂದಿಗೆ ಅಲ್ಲಿಂದ ಹೊರಟೆವು. ಹಲಗೂರು-ಚನ್ನಪಟ್ಟಣ ಬಳಸಿ ಸೀದಾ ಬೆಂಗಳೂರಿಗೆ ವಾಪಾಸು ಬಂದಾಗ ರಾತ್ರಿ ೮ ಗಂಟೆ ಆಗಿತ್ತು.
ಭೀಮೇಶ್ವರಿ ಫಿಶಿಂಗ್ ಕ್ಯಾಂಪ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ನೋಡಿ
http://www.karnataka.com/tourism/bangalore/bheemeshwari.html
4 comments:
ಪ್ರಶಾಂತ್..
ಸೊಗಸಾದ ಫೋಟೊಗಳು..
ಸರಳ ಭಾಷೆಯ ನಿರೂಪಣೆ..
ಚೆನ್ನಾಗಿದೆ...
ಅಭಿನಂದನೆಗಳು...
ಪ್ರಶಾಂತ್,
ನಿಮ್ಮ ಲೇಖನವನ್ನು ಓದಿ ನಾನಗೂ ಫಿಶಿಂಗ್ ಕ್ಯಾಂಪ್ ಗೆ ಹೋಗಲು ಆಸೆಯಾಗುತ್ತಿದೆ.
ಚಿತ್ರಗಳು ಚೆನ್ನಾಗಿವೆ. ನಿಮ್ಮ ಪ್ರವಾಸ ಅನುಭವಗಳನ್ನು ಬರೆಯುತ್ತಿರಿ.
ಹಾಯ್ ಪ್ರಕಾಶಣ್ಣ,
ಬರವಣಿಗೆ ಮತ್ತು ಫೋಟೋಗಳು ಇಷ್ಟ ಆಗಿದ್ದಕ್ಕೆ ಥ್ಯಾಂಕ್ಸ್.
ನಿಮ್ಮ ಪ್ರೋತ್ಸಾಹ ಸಂತೋಷ ಮತ್ತೆ ಬರವಣಿಗೆಯ ಉತ್ಸಾಹ ತಂದಿದೆ..
ಅಗಾಗ ಬರುತ್ತಾ ಇರಿ.
-ವಂದನೆಗಳು
ಪ್ರಶಾಂತ್
ಹಾಯ್ ಮಲ್ಲಿಕಾರ್ಜುನ್ ಸರ್,
ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್. ಕಾವೇರಿ ಫಿಶಿಂಗ್ ಕ್ಯಾಂಪ್ ಗೆ ನೀವು ಭೇಟಿ ನೀಡಿದ್ದಲ್ಲಿ ಇನ್ನೂ ಸುಂದರ ಪ್ರಕೃತಿಯ ಚಿತ್ರಗಳನ್ನು ಸೆರೆಹಿಡಿಯುತ್ತೀರಿ..
ಬರುತ್ತಾ ಇರಿ.
-ವಂದನೆಗಳು
ಪ್ರಶಾಂತ್
Post a Comment