ಫೆಬ್ರವರಿ ತಿಂಗಳು ಕಳೆಯುತ್ತಾ ಬಂದಿದ್ದರೂ ನಾವು ಯಾವುದೇ ಪ್ರವಾಸ ಅಥವಾ ಚಾರಣಕ್ಕೆ ಹೋಗಿರಲಿಲ್ಲ. ಎಲ್ಲರೂ ಕೆಲಸದಲ್ಲಿ ಭಾರಿ ಬ್ಯುಸಿ. ಆದರೂ ಚಾರಣಕ್ಕೆ ಹೋಗುವ ತುಡಿತ ದಿನೇ ದಿನೇ ಜಾಸ್ತಿ ಆಗುತ್ತಾ ಇತ್ತು. ಅಸಲು ಮೈ-ಕೈ ನೋಯಿಸಿಕೊಳ್ಳದೆ ತುಂಬಾ ದಿನಗಳೇ ಆಗಿತ್ತು. ಇದ್ದಕ್ಕಿದ್ದ ಹಾಗೆ ಅರವಿಂದ ಸಕಲೇಶಪುರದ ರೈಲು ಹಳಿಯ ಚಾರಣದ ಬಗ್ಗೆ ಹೇಳಿದ. ನಾನು ಇಂಟರ್ನೆಟ್ ನಲ್ಲಿ ಅಲ್ಲಿಯ ಫೋಟೋಗಳನ್ನು ನೋಡಿದ್ದೆ. ಗೂಡ್ಸ್ ರೈಲಿನ ಓಡಾಟ ಜಾಸ್ತಿ ಇದೆ ಎಂದೂ, ಬಿಸಿಲು ಜಾಸ್ತಿ ಹಾಗು ಹಸಿರು ಕಡಿಮೆ ಆಗಿದೆ ಎಂದೂ ಪ್ರಾಥಮಿಕ ವಿಚಾರಣೆ ಇಂದ ಗೊತ್ತಾಯಿತು. ದಿನ ಕಳೆದರೆ ಅಲ್ಲಿಗೆ ಹೋಗುವುದು ಸಾಧ್ಯವೇ ಇಲ್ಲ, ಏನಾದರೂ ಅಗಲಿ, ಹೊಟ್ಟೆ ಕರಗಿಸಲು ಅಲ್ಲಿಗೇ ಚಾರಣಕ್ಕೆ ಹೋಗೋಣ ಎಂದೂ ನಾನು ಹೇಳಿದೆ. ಅದರಂತೆ ಫೆಬ್ರವರಿ ೨೧ ರಾತ್ರಿ ಬೆಂಗಳೂರಿಂದ ಹೊರಡುವುದೆಂದು ತೀರ್ಮಾನಿಸಲಾಯಿತು. ನಾನು ಇಂಟರ್ನೆಟ್ ನಲ್ಲಿ ಜಾಲಾಡಿ ಉಪಯುಕ್ತ ಮಾಹಿತಿಯನ್ನ ಕಲೆ ಹಾಕಿದೆ. ಮಿತ್ರ ವಿನಾಯಕ ಭಟ್ ಅಲ್ಲಿನ ಬಗ್ಗೆ ತುಂಬಾ ವಿವರವಾಗಿ ಮಾಹಿತಿಯನ್ನು ಕೊಟ್ಟ. ಅವನು ೨ ಬಾರಿ ನಡೆದು ಬಂದಿದ್ದ..! ದಿನಾಂಕ ೨೧ ಶುಕ್ರವಾರ ಸಂಜೆ ನಾನು ಆಫೀಸ್ ಬಿಟ್ಟಾಗ ೮ ಗಂಟೆ..! ಉಳಿದವರು ಬೇಗ ಬಂದಿರಬಹುದು ಎಂದು ಊಹಿಸಿದವನಿಗೆ ನಿರಾಸೆ...ಎಲ್ಲರೂ ಲೇಟ್...! ದೂದ್ ಒಬ್ಬ ಬೇಗ ರೆಡಿ ಆಗಿದ್ದು ೯.೩೦ ಕ್ಕೆ ಮೆಜೆಸ್ಟಿಕ್ ಗೆ ಬರುತ್ತೇನೆಂದು ಹೇಳಿದ. ಸಂತು ಕೂಡ ಮೆಜೆಸ್ಟಿಕ್ ಗೆ ಬರುತ್ತೇನೆಂದು ಹೇಳಿದ್ದ. ದೂದ್, ೪ ಮಲಗುವ ಮ್ಯಾಟ್ ಅನ್ನು ಅವನ ಮಿತ್ರರಿಂದ ಎರವಲು ತಂದಿದ್ದ. ಅರವಿಂದ ಮತ್ತು ಬನವಾಸಿ ಊಟ ಮತ್ತು ತಿಂಡಿಯ ವ್ಯವಸ್ಥೆ ಮಾಡಿದರು...ತಲಾ ೩ ಚಪಾತಿ, ಚಟ್ನಿಪುಡಿ, ಜಾಮ್ ಬಾಟಲ್, ೧/೨ ಪೌಂಡು ಬ್ರೆಡ್ಡು, ೨ ಬನ್ನು, ೧ ಸೇಬು ಹಣ್ಣು, ೨ ಕಿತ್ತಳೆ, ೧ ಕೇಕು, ೨ ಬಿಸ್ಕತ್ತು ಪೊಟ್ಟಣ, ಚಿಪ್ಸ್, ಕೋಡುಬಳೆ, ಗ್ಲೂಕೋಸು ನಮ್ಮ ನಮ್ಮ ಬ್ಯಾಗು ಸೇರಿತು...!!ನಾನು, ಬನವಾಸಿ, ಅರವಿಂದ, ಅವನ ಮನೆಯಲ್ಲಿ ಊಟ ಮಾಡಿ ಮೂಡಲಪಾಳ್ಯ ಬಿಟ್ಟಾಗ ೧೧ ಗಂಟೆ..!! ಆಗಲೇ ದೂದ್ ಎಲ್ಲರಿಗೂ ಎರಡೆರಡು ಬಾರಿ ಫೋನ್ ಮಾಡಿದ್ದ...! ಯಾಕೋ ಗೊತ್ತಿಲ್ಲ ಪ್ರತೀ ಪ್ರವಾಸದಲ್ಲೂ ದೂದ್ ಗೆ ಹೀಗಾಗುತ್ತೆ..!! ಸುಮಾರು ೨ ತಾಸು ಮೆಜೆಸ್ಟಿಕ್ ನಲ್ಲಿ ನಮಗಾಗಿ ಕಾಯುತ್ತ ಕುಳಿತಿದ್ದ..ನಾನು ಎದುರು ಸಿಕ್ಕಾಗ ನನಗೆ ಹೇಳಿದ್ದು...." ಇನ್ನು ೫ ನಿಮಿಷ ನೋಡ್ತಾ ಇದ್ದೆ..ಬರಲಿಲ್ಲ ಅಂದಿದ್ದರೆ 'ಎಂಜಾಯ್ ಯುವರ್ ಟ್ರಿಪ್' ಅಂತ ಮೆಸೇಜ್ ಮಾಡಿ ಮನೆಗೆ ಹೋಗ್ತಾ ಇದ್ದೆ.." ಸಿಟ್ಟಿನಿಂದ ಅವನ ಮುಖ ಕೆಂಪಾಗಿತ್ತು...!! ನಾನು, ಬನವಾಸಿ, ಅರವಿಂದ, ಸಂತು, ದೂದ್ ರಾಜಹಂಸ ಬಸ್ಸಿನಲ್ಲಿ ಬೆಂಗಳೂರು ಬಿಟ್ಟಾಗ ೧೨ ಗಂಟೆ. ನಿದ್ದೆ ಮಾಡಿ, ಹಾಸನ ತಲುಪಿದಾಗ ಬೆಳಗಿನ ಜಾವ ೪.೩೦. ಅಲ್ಲಿಂದ ಧರ್ಮಸ್ಥಳಕ್ಕೆ ಹೋಗುವ ಬಸ್ಸಿಗೆ "ದೋಣಿಗಲ್" ಗೆ ರಿಕ್ವೆಸ್ಟ್ ಸ್ಟಾಪ್ ಕೇಳಿ ದೋಣಿಗಲ್ಲು ತಲುಪಿದಾಗ ೬ ಗಂಟೆ ಆಗಿತ್ತು. ಅಲ್ಲಿನ ಮಲೆಯಾಳಿ ಅಂಗಡಿಯಲ್ಲಿ ಟೀ ಕುಡಿದು ನಮ್ಮ ಚಾರಣವನ್ನು ಆರಂಭ ಮಾಡಿದ್ವಿ.
ಮುಂಜಾನೆಯ ತಂಪಾದ ವಾತಾವರಣ ಮನಸ್ಸಿಗೆ ಹಿತವಾಗಿತ್ತು.. ತುಂಬಾ ದಿನದ ನಂತರದ ಚಾರಣ ಎಲ್ಲರಲ್ಲೂ ಉತ್ಸಾಹ ತಂದಿತ್ತು. ರೈಲು ಹಳಿಯನ್ನು ಸೇರಲು ಕಾಫಿ ತೋಟದ ನಡುವೆ ನಡೆದು ಹೋದೆವು. ಮುತ್ತು ಪೋಣಿಸಿದ ಹಾಗೆ ಕಾಣುವ ಕಾಫಿ ಹೂವು ನಮ್ಮ ನಡಿಗೆಯನ್ನ ಸ್ವಲ್ಪ ನಿಧಾನವಾಗಿಸಿತ್ತು.
ಸೂರ್ಯೋದಯದ ದೃಶ್ಯ..
ಸೂರ್ಯೋದಯದ ಸೊಬಗನ್ನು ಸವಿಯುತ್ತ, ಹಸಿರಿನ ಬದಿಯಲ್ಲಿ ಸಾಗುವ ರೈಲು ಹಳಿಯಲ್ಲಿ ನಡೆಯುವುದು ಚಾರಣದ ಮೊದಲ ಅನುಭವ. ಸುತ್ತಲೂ ಇರುವುದು ಚಾರ್ಮಾಡಿ ಘಟ್ಟ ಪ್ರದೇಶ. ಅಲ್ಲಿನ ನಡಿಗೆ ಮನಸ್ಸಿಗೆ ಹುರುಪು ತರುತ್ತದೆ. ಸ್ವಲ್ಪ ದೂರ ನಡೆದಾಗ ಸಿಕ್ಕಿದ್ದು ಮೊದಲ ಬ್ರಿಡ್ಜ್. ಸುಮಾರು ೫೦ ಅಡಿ ಆಳ.
ಅದನ್ನು ದಾಟುತ್ತಿದ್ದ ಹಾಗೆ ರೈಲಿನ ಶಬ್ದ ಕೇಳಿಸಿತು. ಹಿಂತಿರುಗಿ ನೋಡಿದರೆ ರೈಲು ಬ್ರಿಡ್ಜ್ ನ ಇನ್ನೊದು ತುದಿಯಲ್ಲಿ ಬರುತ್ತಾ ಇತ್ತು...!! ನಾವು ಸ್ವಲ್ಪ ನಿಧಾನ ಮಾಡಿದ್ರೆ, ಬ್ರಿಡ್ಜ್ ನ ಮಧ್ಯದಲ್ಲಿ ಇರುತ್ತಿದ್ವಿ..ಕೆಳಗೆ ಹಾರಿದರೆ ೫೦ ಅಡಿ ಆಳ...! ಸಕತ್ ತ್ರಿಲ್ಲಿಂಗು..ಅದನ್ನ ಅನುಭವಿಸಿಯೇ ತೀರಬೇಕು...ಇದು ಚಾರಣದ ಇನ್ನೊಂದು ಅನುಭವ.
ಜಲ್ಲಿ ಕಲ್ಲಿನ ಮಧ್ಯೆ ಭಾರದ ಬ್ಯಾಗನ್ನು ಹೊತ್ತು, ನಮ್ಮ ದೇಹ ತೂಕವನ್ನು ಬ್ಯಾಲೆನ್ಸ್ ಮಾಡಿಕೊಂಡು ನಡೆಯುವುದು ಮತ್ತೊಂದು ಅನುಭವ....! ೫ ಕಿ. ಮೀ. ನಡೆಯುವುದರಲ್ಲೇ ನಾವೆಲ್ಲ ಸುಸ್ತು...! ಅಲ್ಲಿಯವರೆಗೆ ಪ್ರಕೃತಿಯ ಮಧ್ಯೆ ನಮ್ಮನ್ನ ನಾವು ಮರೆತು ಬಿಟ್ಟಿದ್ವಿ...ಹೊಟ್ಟೆ ತನ್ನ ಇರುವಿಕೆಯನ್ನ ಹೇಳಿದಾಗ ನಮಗೆ ಸುಸ್ತಾಗಿದ್ದು ಅರಿವಿಗೆ ಬಂದಿದ್ದು...!ನಾವೆಲ್ಲ ಆಗಲೇ ಹಳಿಯನ್ನು ಬಿಟ್ಟು ಅದರ ಪಕ್ಕದಲ್ಲಿ ನಡೆಯಲು ಜಾಗ ಇದೆಯೋ ಅಂತ ಹುಡುಕುತ್ತ ಇದ್ವಿ..ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಹಳಿಯ ಪಕ್ಕದಲ್ಲೇ ನಡೆದಿದ್ದು...೯.೩೦ ಗಂಟೆಯಾ ಹೊತ್ತಿಗೆ ನಮಗೆ ಒಂದು ಹಳ್ಳ ಸಿಕ್ಕಿತು. ನೀರು ಕೂಡ ತುಂಬಾ ಶುದ್ಧವಾಗಿತ್ತು. ಅಲ್ಲಿಯೇ ಸ್ನಾನ ಮಾಡಿ, ಬೆಳಗಿನ ತಿಂಡಿ ತಿಂದ್ವಿ.
10 comments:
ಪ್ರಶಾಂತ್...
ಸುಂದರ ಫೋಟೊಗಳು..
ಚಂದವಾದ ನಿರೂಪಣೆ..
ನಮಗೂ ಹೋಗಿ ಬಂದಂತಿದೆ..
ಫೋಟೊ ಬಹಳ ಚೆನ್ನಾಗಿದೆ
ಮುಂದಿನ ಭಾಗಕ್ಕೆ ಕಾಯುವಂತೆ ಮಾಡಿದೆ...
ಅಭಿನಂದನೆಗಳು...
ಪ್ರಶಾಂತ್,
ನಿಮ್ಮ ಸಕಲೇಶಪುರ ರೈಲು ಹಳಿ ಚಾರಣ ಅದರ ವಿವರವನ್ನು ಇಂಚಿಂಚಾಗಿ ವರ್ಣಿಸಿದ್ದೀರಿ.....ನಾನು ನಿಮ್ಮ ಜೊತೆ ಇದ್ದೇನೇನೋ ಅನ್ನೋ ಅನುಭವವಾಗುತ್ತದೆ......ಇನ್ನೂ ಉಳಿದಿದ್ದನ್ನು ಬರೆಯಿರಿ...ಫೋಟೋ ತೋರಿಸಿರಿ..ಕಾಯುತ್ತಿರುತ್ತೇನೆ...
ಆಹಾಂ! ನನ್ನ ಬ್ಲಾಗಿನಲ್ಲಿ ಮನಸಾರೆ ನಗಲು ನಡೆದಾಡುವ ಭೂಪಟಗಳು ಬಂದಿವೆ...ನೋಡಬನ್ನಿ....ನೋಡಿ ನಕ್ಕು ಹೊಟ್ಟೆ ಹುಣ್ಣಾದರೇ ನಾನು ಜವಾಬ್ದಾರನಲ್ಲ.....
ಹಾಯ್ ಪ್ರಕಾಶಣ್ಣ,
ಚಾರಣದ ಕಥನ ಇಷ್ಟ ಆಗಿದ್ದಕ್ಕೆ ಥ್ಯಾಂಕ್ಸ್..!
ನಿಮ್ಮ ಪ್ರೋತ್ಸಾಹದ ಕಾಮೆಂಟ್ಸ್ ನನಗೆ ಹೆಚ್ಚಿನ ಉತ್ಸಾಹ ತಂದಿದೆ...
ಮುಂದಿನ ಭಾಗವನ್ನು ಬೇಗನೇ ಪೋಸ್ಟ್ ಮಾಡುವೆ..
ವಂದನೆಗಳು
ಪ್ರಶಾಂತ್ ಭಟ್
ಹಾಯ್ ಶಿವೂ ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಚಾರಣ ನಿಜಕ್ಕೂ ಅದ್ಭುತವಾಗಿತ್ತು.. ಅಲ್ಲಿನ ಸೊಬಗನ್ನು ನಿಮ್ಮ ಕ್ಯಾಮೆರಾ ಕಣ್ಣು ಇನ್ನೂ ಸುಂದರವಾಗಿ ಸೆರೆಹಿಡಿಯುತ್ತಿತ್ತು ಅಂತ ನನ್ನ ಭಾವನೆ.
ಪ್ರಶಾಂತ್ ಭಟ್
ಪ್ರಶಾಂತ್ ಅವರೆ,
ನನಗೂ ಚಾರಣಕ್ಕೆ ಹೋಗುವ ಆಸೆಯಾಗುತ್ತಿದೆ. ಇನ್ನೊಮ್ಮೆ ಹೋಗುವಾಗ ಹೇಳಿ ನಾನು, ಶಿವು ಬರುತ್ತೇವೆ.
ಮಲ್ಲಿಕಾರ್ಜುನ್ ಅವರೇ,
ನೀವು ನನ್ನೊಂದಿಗೆ ಚಾರಣಕ್ಕೆ ಬರುವುದಾದರೆ ತುಂಬಾ ಸಂತೋಷ...ಖಂಡಿತ ಮುಂದಿನ ಪ್ರವಾಸದ ಬಗ್ಗೆ ನಿಮಗೆ ಮುಂಚಿತವಾಗಿ ತಿಳಿಸುತ್ತೇನೆ.
ಥ್ಯಾಂಕ್ಸ್
ಪ್ರಶಾಂತ್ ಭಟ್
ಪಾಚು-ಪ್ರಪಂಚ ತುಂಬಾ ಚೆನ್ನಾಗಿದೆ
-ಧರಿತ್ರಿ
ಧರಿತ್ರಿ ಅವರೇ,
ಪಾಚು-ಪ್ರಪಂಚ ಕ್ಕೆ ಸ್ವಾಗತ.
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಥ್ಯಾಂಕ್ಸ್..!!
ಹೀಗೆ ಬರುತ್ತಿರಿ.
ವಂದನೆಗಳು
ಪ್ರಶಾಂತ್ ಭಟ್
Post a Comment