Wednesday, September 9, 2009

ಕುದುರೆಮುಖ ಚಾರಣ

ನಮ್ಮ ಬಹುದಿನಗಳ ಕುದುರೆಮುಖ ಚಾರಣ ಕನಸಿಗೆ ಚಾಲನೆ ಕೊಟ್ಟಿದ್ದು ಆನಂದ. ಹೆಂಡತಿ ಮತ್ತೆ ಮಗನನ್ನು ಊರಿಗೆ ಕಳುಹಿಸಿದ ತಕ್ಷಣ ನಮಗೆಲ್ಲಾ ಫೋನ್ ಮಾಡಿ, ಚಾರಣಕ್ಕೆ ಹೋಗೋಣ ಅಂತ ಹುರುಪಿಸಿದ. ಅನುಭವಿ ಕಿರಣ್ ಕುದುರೆಮುಖ ಚಾರಣದ ರೂಪು ರೇಷೆ ತಯಾರಿಸಿ, ಅಗತ್ಯ ಸಿದ್ಧತೆ ಮಾಡಿಕೊಂಡ. ಆಗಸ್ಟ್ ೨೮, ಶುಕ್ರವಾರ ರಾತ್ರಿ, ಟಾಟಾ ಸುಮೋದಲ್ಲಿ ಹಾಸ್ಯ, ಮಾತು, ಚೇಷ್ಟೆಯೊಂದಿಗೆ ನಮ್ಮ ಪ್ರಯಾಣ ಶುರುವಾಯಿತು.

ಅತ್ಯಂತ ಅನುಭವಿ ಡ್ರೈವರ್ 'ಶಫಿ' ಪ್ರಯಾಣದ ಆಯಾಸ ತಿಳಿಯದಂತೆ ನಮ್ಮನ್ನ ಶನಿವಾರ ಬೆಳಿಗ್ಗೆ ೬ ಗಂಟೆಗೆ "ಶ್ರಿಂಗೇರಿ" ಗೆ ಮುಟ್ಟಿಸಿದರು. ಅಗಾಗ ಬರುತ್ತಿದ್ದ ಮಳೆ, ಸಣ್ಣಗೆ ಚಳಿಗೆ, ಹಿತವಾದ ಕಾಫೀ ಬೆಚ್ಚನೆಯ ಅನುಭವ ನೀಡಿತ್ತು.ದೇವಸ್ಥಾನದ ವಸತಿ ಗೃಹದಲ್ಲಿ, ಸ್ನಾನ ಮುಗಿಸಿ, ಶಾರದಾಂಬೆಯ ದರ್ಶನಕ್ಕೆ ನಡೆದೆವು.

ಶಕ್ತಿ ದೇವತೆ ಶಾರದಾಂಬೆ, ಭಕ್ತಿ ಪೂರಕ ತೋರಣ ಗಣಪತಿ, ಪರಮ ಪೂಜ್ಯ ಗುರುಗಳ ದರ್ಶನ ಪಡೆದು, ಪ್ರಶಾಂತತೆಯ ತುಂಗೆಯ ತೀರದಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು.

ರಥಬೀದಿಯಲ್ಲಿನ ಹೋಟೆಲೊಂದರಲ್ಲಿ ಬಾಳೆ ಎಲೆಯಲ್ಲಿ ಬಡಿಸಿದ ಇಡ್ಲಿ-ವಡ, ಚಟ್ನಿ ತಿಂದು, ಇನ್ನೊದು ರೌಂಡು ಕಾಫಿ ಕುಡಿದು ಸಿರಿಮನೆ (ಕಿಗ್ಗ) ಜಲಪಾತಕ್ಕೆ ಹೊರಟೆವು.

ಶ್ರಿಂಗೇರಿಯಿಂದ ೮ ಕೀ.ಮೀ. ದೂರದ ಕಿಗ್ಗ ಊರಿನ, ಕಾನನದ ಮಧ್ಯೆ ಸುಂದರ ಸಿರಿಮನೆ ಜಲಪಾತ ಇದೆ. ಸುತ್ತಮುತ್ತಲಿನ ಭಾಗದಲ್ಲಿ ಚೆನ್ನಾಗಿ ಮಳೆಯಾಗಿದ್ದರಿಂದ ಜಲಪಾತ ಮೈದುಂಬಿ, ಸೌಂದರ್ಯ ಇಮ್ಮುಡಿಯಾಗಿತ್ತು.


ಗ್ರಾಮ ಪಂಚಾಯತಿಯವರು ಇಲ್ಲಿ ಪ್ರವೇಶ ಶುಲ್ಕವನ್ನು ವಸೂಲಿ ಮಾಡುತ್ತಾರೆ. ಹಾಗೆಯೇ ಜಲಪಾತಕ್ಕೆ ಹೋಗಲು ಮೆಟ್ಟಿಲಿನ ಅನುಕೂಲ, ವೀಕ್ಷಣಾ ಗೋಪುರ, ಬಟ್ಟೆ ಬದಲಾಯಿಸಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಮಾಡಿದ್ದಾರೆ. ಅತೀ ಕಡಿಮೆ ಅಪಾಯದ ಈ ಜಲಪಾತದಲ್ಲಿ ನೀರಿನ ಹತ್ತಿರದವರೆಗೂ ಹೋಗಬಹುದು. ಸಾಕಷ್ಟು ಫೋಟೋ ತೆಗೆದು, ಜಲಪಾತದ ಸೌಂದರ್ಯವನ್ನು ನಾನಾ ವಿಧಗಳಲ್ಲಿ ಕಣ್ತುಂಬಿಕೊಂಡು, ನಾವೆಲ್ಲ ಮಳೆ-ಚಳಿಯನ್ನು ಲೆಕ್ಕಿಸದೆ ನೀರಿಗಿಳಿದೆವು.

ಜಲಪಾತಗಳ ನಿಜವಾದ ಸೌಂದರ್ಯ, ನೀರಿನ ಅಗಾಧತೆ ಗೋಚರಿಸುವುದೇ ಮಳೆಗಾಲದಲ್ಲಿ. ಸುತ್ತಲೂ ಕಾನನದ ಅಚ್ಚ ಬಿಳುಪಿನ ಸಿರಿಮನೆ ಜಲಪಾತ ಮನಸ್ಸನ್ನ ಸೂರೆಗೊಳಿಸುತ್ತದೆ.


ಧುಮ್ಮಿಕ್ಕುತ್ತಿದ್ದ ನೀರಿಗೆ ಬೆನ್ನು ಕೊಟ್ಟು ನಿಂತು, ಉಚಿತ ಮಸಾಜಿನ ಆನಂದ ಅನುಭವಿಸಿದೆವು. ನೀರಲ್ಲಿ ಆಟ ಆಡುತ್ತಿದ್ದವರಿಗೆ ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ಹಸಿವಿನಿಂದ ಕಂಗಾಲಾಗಿದ್ದ ಸುಹಾಸ್ ಆಗಲೇ ತಲೆನೋವು ಎಂದು ಸುಮೋದಲ್ಲಿ ಮಲಗಿಯಾಗಿತ್ತು. ಬೆಳಗಿನ ಉಪಹಾರವು ಅವನಿಗೆ ಸರಿಯಾಗಿರಲಿಲ್ಲ. ೨ ಗಂಟೆಯ ಹೊತ್ತಿಗೆ ಶ್ರಿಂಗೇರಿಗೆ ಬಂದು ಪಂಚೆ ಉಟ್ಟು, ಮಠದಲ್ಲಿ ಪ್ರಸಾದ ಭೋಜನ ಮುಗಿಸಿದೆವು.

ಮರುದಿನದ ಚಾರಣಕ್ಕೆಂದು ಸ್ವಲ್ಪ ಹಣ್ಣು, ಬ್ರೆಡ್, ಒಣ ದ್ರಾಕ್ಷಿ, ಗ್ಲೂಕೋಸ್ ಖರೀದಿಸಿ, ಕಳಸದ ಕಡೆಗೆ ಪ್ರಯಾಣ ಬೆಳೆಸಿದೆವು.

ಶೃಂಗೇರಿ-ಕಳಸದ ಮಾರ್ಗ ಅತ್ಯಂತ ಸುಂದರ. ಭದ್ರ ಮೀಸಲು ಅರಣ್ಯದಲ್ಲಿ ಈ ದಾರಿ ಸಾಗುತ್ತದೆ. ಸುತ್ತಲೂ ದಟ್ಟ ಹಸಿರು ಕಾಡು, ಬಿಟ್ಟೂ ಬಿಡದೆ ಸುರಿಯುವ ಮಳೆ, ಹಸಿರು ಹಾಸಿದಂತೆ ಕಾಣಿಸುವ ಗುಡ್ಡ, ದಾರಿಗುಂಟ ಸಾಗುವ ಭದ್ರ ನದಿ ನಮ್ಮನ್ನ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.

ಸೊಗಸಾದ ಊಟವಾದ ಮೇಲೂ ನಾವೆಲ್ಲಾ ಸ್ವಲ್ಪವೂ ಕಣ್ಣು ಮುಚ್ಚದೇ ಪ್ರಕೃತಿಯ ಸೊಬಗನ್ನ ಕಣ್ತುಂಬಿಕೊಳ್ಳುತ್ತಿದ್ದೆವು. ಎಸ್-ಕೆ ಬಾರ್ಡರ್ ನಲ್ಲಿ ಚಹಾ ಕುಡಿಯಲು ನಿಲ್ಲಿಸಿದೆವು. ಅಲ್ಲಿನ ವಾತಾವರಣ ಸಂಪೂರ್ಣ ಮಂಜಿನಿಂದ ಮುಚ್ಚಿತ್ತು.


ಹನುಮನಗುಂಡಿ ಜಲಪಾತವನ್ನು ನೋಡಲಾಗದೆ ನಿರಾಸೆ ಆಗಿದ್ದ ನಮಗೆ, ಮುಂದೆ ರಸ್ತೆ ಅಂಚಿನಲ್ಲಿ ಸಿಕ್ಕ ಜಲಪಾತ ಸ್ವಲ್ಪ ಸಮಾಧಾನ ನೀಡಿತ್ತು.


ಬಾಳೆಕಲ್ಲಿನ "ವಜ್ರ" ಹೋಟೆಲೊಂದರಲ್ಲಿ ಮರುದಿನಕ್ಕೆ ಬೇಕಾಗುವಷ್ಟು ಚಪಾತಿ, ಚಟ್ನಿಪುಡಿ ಕಟ್ಟಿಸಿಕೊಂಡೆವು. ಹಾಗೆಯೇ ಉಂಬಳ ಕಾಟ ನಿಗ್ರಹಿಸಲು ನಶ್ಯ, ತಂಬಾಕಿನ ಎಲೆ, ಸುಣ್ಣ, ಬೇವಿನ ಎಣ್ಣೆ, ಮಳೆಯ ರಕ್ಷಣೆಗೆಂದು ಪ್ಲಾಸ್ಟಿಕ್ ಖರೀದಿಸಿದೆವು. ಸಮಯಕ್ಕೆ ಸರಿಯಾಗಿ ಜಗದೀಶ ತನ್ನ ಜೀಪಿನಲ್ಲಿ ಹಾಜರಾದ. ಬಾಳೆಕಲ್ಲಿಂದ ಮುಂದೆ ಮುಳ್ಳಾಡಿಗೆ ಜೀಪು ಬಿಟ್ಟರೆ ಬೇರೆ ಯಾವುದೇ ವಾಹನ ಹೋಗಲು ಸಾಧ್ಯವೇ ಇಲ್ಲ. ಅಲ್ಲಿನ ರಸ್ತೆಯಲ್ಲಿ ಜೀಪು ಓಡಿಸುವುದು ಒಂದು ಕಲೆಯೇ ಸರಿ. ಇನ್ನೇನು ಮಗುಚಿ ಬಿಟ್ಟಿತು ಅನ್ನುವಷ್ಟು ವಾಲುತಿತ್ತು. ನಮ್ಮಲ್ಲಿ ಯಾರೊಬ್ಬರಿಗೂ ಮಾತು ಹೊರಡುತ್ತಿರಲಿಲ್ಲ. ಅಕ್ಕ ಪಕ್ಕದಲ್ಲಿ ಪ್ರಪಾತ, ಮಧ್ಯೆ ಮಳೆಯಿಂದ ಕೆಸರಾದ ರಸ್ತೆ. ದೊಡ್ಡ ದೊಡ್ಡ ಕಲ್ಲುಗಳು..! ಅಕ್ಷರ ಉಸಿರು ಹಿಡಿದುಕೊಂಡು ಕುಳಿತಿದ್ದೆವು..!

ಮಂಜಪ್ಪ ಗೌಡರ ಆತ್ಮೀಯ ಆಥಿತ್ಯ ನಿಜಕ್ಕೂ ನೆನಪಲ್ಲಿ ಉಳಿಯುವಂತದ್ದು. ಸೊಗಸಾದ ಊಟ, ಬೆಂಕಿಯ ಸುತ್ತಲೂ ಕುಳಿತು ಹರಟೆ, ಗೌಡರ ಮಾತು, ಮತ್ತೊಂದು ಮಧುರವಾದ ಸಂಜೆ ನಮ್ಮದಾಗಿತ್ತು. ಹತ್ತಿರದಲ್ಲೆಲ್ಲೋ ಜಲಪಾತ ಇದೆ ಅಂತ ಅನ್ನಿಸುವಷ್ಟು ಜೋರಾಗಿ ಗೊರಕೆ ಹೊಡೆಯುತ್ತಿದ್ದ ಆನಂದ. ಅದು ಬಿಟ್ಟರೆ ನೆಮ್ಮದಿಯ ನಿದ್ರೆ..!

ಭಾನುವಾರ ೫.೩೦ ಕ್ಕೆ ಎದ್ದು ನಾವು ಚಾರಣಕ್ಕೆ ರೆಡಿ ಆದೆವು. ಗೌಡ್ರು ತಿಂಡಿಗೆಂದು ಅಕ್ಕಿಯ ಕಡಬು, ಕಾಯಿ ಚಟ್ನಿ ಮಾಡಿದ್ದರು. ತಂದಿಟ್ಟಿದ್ದ ಅಷ್ಟೂ ಕಡಬನ್ನು ಖಾಲಿ ಮಾಡಿ, ಒಳ್ಳೆ ಕಾಫಿ ಕುಡಿದು ಮಾರ್ಗದರ್ಶಕ (ಗೈಡ್) ಜೊತೆ ಚಾರಣ ಪ್ರಾರಂಭ ಮಾಡಿದೆವುಮನೆಯ ಹಿಂಬದಿಯ ಚಿಕ್ಕ ಗುಡ್ಡವನ್ನು ಹತ್ತಿ ಇಳಿದಾಗಲೇ ಪಶ್ಚಿಮ ಘಟ್ಟಗಳ ಸಾಲು ಸಾಲು ಗೋಚರಿಸುತ್ತಿತ್ತು. ಕಣ್ಣಳತೆ ಉದ್ದಕ್ಕೂ ಎಲ್ಲೆಲ್ಲೊ ಹಸಿರೆ ಹಸಿರು. ಆಗ ತಾನೇ ಚಿಗುರುತಿದ್ದ ಹುಲ್ಲು ಹಾಸು, ಗುಡ್ಡಗಳನ್ನು ಬಾಚಿ ತಬ್ಬಿಕೊಂಡಂತೆ ಅನ್ನಿಸುತಿತ್ತು. ಪ್ರಕೃತಿಯನ್ನ ಅವಳ ಮಡಿಲಿನಲ್ಲಿಯೇ ಅನುಭವಿಸಿ ತೀರಬೇಕು..!! ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯ.

ಮಳೆಯು ಅಷ್ಟೇನೂ ತೊಂದರೆ ಕೊಡದ ಕಾರಣ ನಾವೆಲ್ಲ ಹುರುಪಿನಿಂದಲೇ ಹಳ್ಳ ಕೊಳ್ಳಗಳನ್ನು ದಾಟಿ, ಚಿಕ್ಕ ಚಿಕ್ಕ ಕಾಡನ್ನು ಬಳಸಿಕೊಂಡು ಮುಂದುವರೆದೆವು. ಅಲ್ಲಲ್ಲಿ ಹಾಳು ಬಿದ್ದ ಮನೆಗಳು, ಗದ್ದೆ ಮಾಡಲು ಹದ ಮಾಡಿದ ಜಾಗ ಎದುರಾಗುತ್ತದೆ. ಕಾಡುಪ್ರಾಣಿಗಳ ವಿಪರೀತ ಕಾಟ, ನಕ್ಸಲರ ಹಾವಳಿ, ಸಂಪರ್ಕಕ್ಕೆ ತುಂಬಾನೇ ದೂರವಾಗಿದ್ದ ಈ ಪ್ರದೇಶಗಳಲ್ಲಿ ವಾಸ ಮಾಡಲು ಬಂದವರು ಹಾಗೆಯೇ ತಿರುಗಿ ಹೋಗಿದ್ದಾರೆ ಎಂದು ನಮ್ಮ ಗೈಡ್ ತಿಳಿಸಿದ. ಅಷ್ಟರ ಮಟ್ಟಿಗೆ ಇಲ್ಲಿನ ಕಾಡು, ಗುಡ್ಡ, ವನ್ಯ ಸಂಪತ್ತು ಸುರಕ್ಷಿತವಾಗಿದೆ.

ಪ್ರಕೃತಿಯಲ್ಲಿ ಮುಳುಗಿ ಹೋಗಿದ್ದ ನಮಗೆ ವಿಪರೀತ ತುರಿಕೆ ಶುರು ಆದಾಗಲೇ ಉಂಬಳದ ನೆನಪಾಗಿದ್ದು. ಆಗ ಕಾಲನ್ನು ನೋಡಿಕೊಂಡಾಗ ಗೊತ್ತಾಗಿದ್ದು ಬರೋಬ್ಬರಿ ೨೦-೩೦ ಉಂಬಳ ಪ್ರತಿಯೊಬ್ಬರ ಕಾಲಿನಲ್ಲಿ. ಅದೆಷ್ಟು ರಕ್ತ ಹೀರಿ ಮಧ್ಯದಲ್ಲೇ ಉದುರಿ ಬಿದ್ದವೋ..? ಒಂದನ್ನು ತೆಗೆಯಲು ನಿಂತರೆ ಮತ್ತೆ ನಾಲ್ಕು ಹತ್ತುತ್ತಿದ್ದವು. ನಶ್ಯ, ತಂಬಾಕು ಹಚ್ಚಿ ನೋಡಿದ್ದಾಯಿತು, ಉಹುಂ.. ಹತ್ತಿದ್ದು ಬೇಗನೆ ಉದುರುತ್ತಿದವೇ ವಿನಃ ಹತ್ತದಂತೆ ತಡೆಯಲು ನಮ್ಮಿಂದಾಗಲಿಲ್ಲ.

ವಿಶೇಷ ಅಂದರೆ ಅಲ್ಲಿಯವನಾದ ನಮ್ಮ ಗೈಡ್ ಗೆ ಅವು ಹತ್ತುತ್ತಿರಲಿಲ್ಲ..! ಅವನ ರಕ್ತ ಅವಕ್ಕೆ ಹಳೆಯದ್ದಾಗಿರಬೇಕು. ಕೊನೆಗೆ ಅದೆಷ್ಟು ಹತ್ತುತ್ತವೋ ಹತ್ತಲಿ ಎಂದು ನಿರ್ಧರಿಸಿ ನಮ್ಮ ಪಾಡಿಗೆ ನಾವು ಚಾರಣ ಮುಂದುವರೆಸಿದೆವು.


ಇಳಿಜಾರಿನಲ್ಲಿ ಇದ್ದ, ತುಂಬಾನೇ ಜಾರುತ್ತಲಿದ್ದ ಕಲ್ಲಿನ ಮೇಲೆ ತಿಳಿಯದೆ ಕಾಲು ಇಟ್ಟ ಕಿರಣ ಪ್ರಪಾತಕ್ಕೆ ಬೀಳುತ್ತಲಿದ್ದ...! ಅವನ ಪುಣ್ಯ..ಮಧ್ಯೆ ಸಿಕ್ಕ ಮರಕ್ಕೆ ಅಡ್ಡಲಾಗಿ ಕಾಲು ಕೊಟ್ಟು, ಒಂದು ಬಂಡೆಯನ್ನು ಗಟ್ಟಿಯಾಗಿ ಹಿಡಿದುಕೊಂಡ. ನಮ್ಮಂತೆ ಚಾರಣಕ್ಕೆ ಬಂದಿದ್ದ ಇನ್ನೊದು ಗುಂಪಿನಲ್ಲಿದ್ದ ಅನುಭವಿಯೊಬ್ಬರು ಅತ್ಯಂತ ಜಾಗರೂಕತೆಯಿಂದ ಅವನನ್ನು ಮೇಲಕ್ಕೆತ್ತಿದರು..ಇಲ್ಲವಾದರೆ ಕುದುರೆಮುಖ ಕರಾಳ ಚಾರಣ ಆಗುತ್ತಿತ್ತು..


ಸತತ ಚಾರಣದ ನಂತರ ಕುದುರೆಮುಖ ಬೆಟ್ಟದ ತುತ್ತ ತುದಿ ತಲುಪಿದಾಗ ಮಧ್ಯಾನ್ನ ೧ ಗಂಟೆ ಆಗಿತ್ತು. ಅಲ್ಲಿನ ಸೊಬಗು ನಮ್ಮ ಎಲ್ಲ ನೋವನ್ನು ಮರೆಮಾಡಿತ್ತು. ಅದೊಂದು ಮರೆಯಲಾಗದ, ಅವಿಸ್ಮರಣೀಯ ಕ್ಷಣ. ಹುಚ್ಚರಂತೆ ಕುಣಿದಾಡಿದೆವು. ಎಲ್ಲರ ಬಾಯಲ್ಲೂ ಒಂದೇ ಉದ್ಘಾರ ''' ಅಬ್ಭಾ..ವಾಹ್..."

ಇಲ್ಲಿ ಮೋಡವು ಕೈಗೆ ಸಿಗುತ್ತಿತ್ತು. ಏನನ್ನೋ ಸಾಧಿಸಿದ ಸಮಾಧಾನ..! ಯಾರೊಬ್ಬರಿಗೂ ಅಲ್ಲಿಂದ ಹೊರಡಲು ಮನಸ್ಸೇ ಇರಲಿಲ್ಲ.

ಅಲ್ಲಿ ಉಗಮವಾಗಿದ್ದ ಸಣ್ಣ ಝರಿಯ ಬಳಿ ತಂದಿದ್ದ ಚಪಾತಿ, ಹಣ್ಣು ತಿಂದು ಸ್ವಲ್ಪ ಹೊತ್ತು ವಿರಮಿಸಿ ಇಳಿಯಲು ತೊಡಗಿದೆವು.ಮಳೆಗಾಲದಲ್ಲಿ ಚಾರಣದ ಸಮಯ ಹತ್ತುವುದಕ್ಕಿಂತ ಇಳಿಯುವುದೇ ಹೆಚ್ಚು ಕಷ್ಟ. ಇಳಿಯುವಾಗ ಒಬ್ಬಿಬ್ಬರ ಹೊರತಾಗಿ ಉಳಿದವರು ಅಲ್ಲಲ್ಲಿ ಬೀಳುತ್ತಲೇ ಇದ್ದರು..! ನಾವು ಕ್ರಮಿಸಿದ ಒಟ್ಟೂ ದೂರ ೨೨ ಕಿ,ಮೀ. ತೆಗೆದುಕೊಂಡ ಸಮಯ ೧೧ ಗಂಟೆಗಳು. ನಡೆದು ನಡೆದು ನಾವೆಷ್ಟು ಸುಸ್ತಾಗಿದ್ದೆವೆಂದರೆ, ಮನೆ ಬಂದು ನಾವು ನಿಂತರೂ ನಮ್ಮ ಕಾಲು ನಿಲ್ಲುತ್ತಲಿರಲಿಲ್ಲ...

ಗೌಡರ ಮನೆಯಲ್ಲಿ ಬಿಸಿನೀರಿನ ಸ್ನಾನದ ನಂತರ ಸ್ವಲ್ಪ ಸಮಾಧಾನ ಎನಿಸಿತು. ಗೌಡರ ಸಹಕಾರಕ್ಕೆ ಆತ್ಮೀಯವಾಗಿ ಧನ್ಯವಾದ ತಿಳಿಸಿ, ಅಲ್ಲಿಂದ ಮತ್ತೆ ಜೀಪಿನಲ್ಲಿ ಬಾಳೆಕಲ್ಲಿಗೆ ಬಂದು, ಸುಮೋದಲ್ಲಿ ಬೆಂಗಳೂರಿನತ್ತ ಹೊರಟೆವು.

ಚಾರಣಿಗರು - (ನಿಂತವರು - ಎಡದಿಂದ ಬಲಕ್ಕೆ) ಆನಂದ, ಕಿರಣ್, ಅರವಿಂದ, ನಾನು, ಸುಹಾಸ್.

(ಕುಳಿತವರು) ಆದರ್ಶ, ಪ್ರಮೋದ, ಅಭಿರಾಮ್.

ತುಂಬಾ ದಿನಗಳ ನಂತರ ಇಂಥದ್ದೊಂದು ಸುಂದರ ಚಾರಣಕ್ಕೆ ಹೋದ ಖುಷಿ ಮನಸ್ಸಲ್ಲಿ ಮೂಡಿತು...

17 comments:

Unknown said...

Wow. ಸೂಪರ್ .. ನಂಗೂ ಹೋಗನ ಅಂತ ಕಾಣ್ತಾ ಇದ್ದು :)

shivu.k said...

ಪ್ರಶಾಂತ್,

ನಿಮ್ಮ ಕುದುರೆ ಮುಖ ಪ್ರವಾಸ ಹೇಗಿದೆಯೆಂದರೆ ನಾನು ನಿಮ್ಮ ಜೊತೆ ಇದ್ದು ಎಲ್ಲಾ ಕಣ್ಣಾರೆ ನೋಡಿ ಊಟ ತಿಂಡಿ ಎಲ್ಲವನ್ನೂ ಅನುಭವಿಸಿದಂತೆ ಆಯಿತು...ಸೊಗಸಾದ ಫೋಟೋಗಳು ಮತ್ತು ಮಾತುಗಳು...ಸೂಪರ್...

ನಿಮಗೆ ಕಾಮೆಂಟು ಹಾಕಿ ನಾನು ಈಗ ಮಡಿಕೇರಿಗೆ ಹೊರಟಿದ್ದೇನೆ. ಆರೆಂಜ್ ಕೌಂಟಿ ರಿಸಾರ್ಟ್‌ನವರಿಗೆ ಮಡಿಕೇರಿಯ ಕೆಲವು ಲ್ಯಾಂಡ್ಸೇಪುಗಳು, ಜನಜೀವನ, ಸಂಪ್ರಧಾಯಿಕ ಮತ್ತು ಪರಂಪರಿಕತೆ ಸಂಭಂದಿಸಿದಂತೆ ಫೋಟೋಗ್ರಫಿಯ ಆಸೈನ್‍ಮೆಂಟ್ ಕೊಟ್ಟಿದ್ದಾರೆ. ಹೋಗುವ ಮೊದಲು ಇಂಥಹ ಚಿತ್ರಲೇಖನಗಳು ಮನಸ್ಸಿಗೆ ಆಹ್ಲಾದವನ್ನು ತರುತ್ತವೆ....ಥ್ಗ್ಯಾಂಕ್ಸ್..

nadig.pramod said...

ಪ್ರಶಾಂತ ನಿಜಕ್ಕೂ ನಮ್ಮ ಚಾರಣವನ್ನು ತುಂಬಾ ಚೆನ್ನಾಗಿ ನಿರೂಪಿಸಿದ್ದಿಯ.
ಇದೊಂದು ಮರೆಯಲಾಗದ ಅವಿಸ್ಮರಣೀಯ ಟ್ರಿಪ್ . . .

Ittigecement said...

ಪ್ರಶಾಂತ್...

ಸೊಗಸಾದ ಫೋಟೊ ಲೇಖನ...
ನಾವೇ ಸುತ್ತಿ ಬಂದಂತಿತ್ತು...

ಸುಂದರವಾದ ಫೋಟೊಗಳು ಮನಸೂರೆಗೊಂಡವು...

ನಿಮ್ಮ ವಿವರಣೆ ಕ್ರಿಕೆಟ್ ಕಾಮೆಂಟರಿ ಥರಹ ಇತ್ತು...

ಕಿರಣ್ ಅವರಿಗೆ ನನ್ನ ಶುಭಾಶಯ ತಿಳಿಸಿಬಿಡಿ...

ಮನಮೋಹಕ ಫೋಟೊಗಳು,
ಅದಕ್ಕೆ ತಕ್ಕ ಟಿಪ್ಪಣೆಗಳಿಗೆ..

ಅಭಿನಂದನೆಗಳು...

mahesh gowda said...

maga thumba super agi bardiddiya

ರಾಜೇಶ್ ನಾಯ್ಕ said...

ವ್ಹಾ! ಕುದುರೆಮುಖದ ಮಳೆಗಾಲದ ಚೆಲುವನ್ನು ತೋರಿಸಿದ್ದಕ್ಕೆ ಧನ್ಯವಾದ. ಮತ್ತೆ ಮತ್ತೆ ಚಿತ್ರಗಳನ್ನು ನೋಡಿದೆ. ತುಂಬಾ ಚೆನ್ನಾಗಿರುವ ಚಿತ್ರಗಳು.

Rakesh Holla said...

Very nice photos& article..
You people had great experience..
Keep on publishing..

ಯಜ್ಞೇಶ್ (yajnesh) said...

ಸರ್.. ಲೇಖನ ಮತ್ತು ಫೋಟೋಸ್ ಸೂಪರ್...

shridhar said...

ನಾವು ಹಿಂದನ ವರ್ಷ ಮಳೆಗಾಲ ಮುಗಿದ ಮೇಲೆ ಕುದುರೆಮುಖಕ್ಕೆ ಹೋಗಿದ್ದೆವು .. ನಿಮ್ಗಳದ್ದು ಬರಿ ೬-8 ಜನರ ಹುಡುಗರ ತಂಡ ..
ನಮ್ಮದು ಹಾಗಲ್ಲ .. ಸರಿ ಸುಮಾರು ೧೨+ ಮಂದಿ ಯಾವಾಗಲು .. ನಿಜವಾಗಿಯೂ ಉತ್ತಮ್ ಚಾರಣದ haaದಿ .. ಸುತ್ತಿ ಸುತ್ತಿ ಹೋಗುವ ರಸ್ತೆ .. ಮದ್ಯದಲ್ಲೊಂದಿಷ್ಟು ತೊರೆ ಆಯಾಸ ನಿಗಿಸಿಕೊಳ್ಳಲು ..
ಅಕ್ಟೋಬರ್ನಲ್ಲಿ ಒಂದು ಕಡೆ ಚಾರಣ ಹೋಗುವ ಪ್ಲಾನ್ ನಡೀತಾ ಇದೆ ನಮ್ಮ ತಂಡದಿಂದ ..ಸಾಧ್ಯತೆಗಳ ಪಟ್ಟಿ ಇನ್ನು ತಯಾರಿಲ್ಲ

ತುಂಬಾ ಸುಂದರವಾದ ಚಿತ್ರ ಬರಹ .. ಹೀಗೆ ಚಾರಣ ಮಾಡುತ್ತಿರಿ .. ಲೇಖನಗಳನ್ನು ಹಾಕುತ್ತಿರಿ ..

ವನಿತಾ / Vanitha said...

ಅಬ್ಬಬ್ಬಾ....೨೨ ಕಿ.ಮಿ..!!!!
ಚೆಂದದ, ಸುಂದರ ಚಿತ್ರ ಬರಹ..
enjoy many more hiking..

Unknown said...

Prashanth,Really super your writing skill,camera work.I appriciate it.

Arvi said...

Bhatta,
Charannakkintalu ninna sogasadaa blog atiyada khushi kottitu. ninna manogna shailiya baravanige yellara manassannu soore goluttade.
Keep writing.. dont ever stop...
mattomme.. amogha shailiiya chitrana mattu baravanige adakke hondidaantae yello atmiya nenapugalu.. AWESOME !!

cheers
Arvi

Abhi-83 said...

Good blog maga.Great going.

ಪಾಚು-ಪ್ರಪಂಚ said...

@ಶ್ರೀ,
ಆದಷ್ಟು ಬೇಗ ಹೋಗಿ ಬಾ, ಇದಕ್ಕಿಂತ ಹೆಚ್ಗೆ ಖುಷಿ ಆಗ್ತು.

@ಶಿವೂ ಅವರೇ,
ಕುದುರೆಮುಖದ ಪ್ರಕೃತಿಯ ಅನುಭವವೇ ಬೇರೆ. ಸಾಧ್ಯವಾದರೆ ಒಮ್ಮೆ ಹೋಗಿ ಬನ್ನಿ, ಅದ್ಭುತ ಚಿತ್ರಗಳನ್ನು ನಿಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಬಹುದು. ನಿಮ್ಮ ಆಸೈನ್‍ಮೆಂಟ್ ಗೆ ಆಲ್ ದಿ ಬೆಸ್ಟ್. ಬೇಗನೆ ನಿಮ್ಮ ಬ್ಲಾಗ್ ನಲ್ಲಿ ನೋಡುವಂತಾಗಲಿ.

@ಪ್ರಮೋದ್,
ನಿಜ ಪ್ರತಿಯೊಂದೂ ಹೆಜ್ಜೆಯೂ ಕಣ್ಣಿಗೆ ಕಟ್ಟಿದಂತಿದೆ. ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್.

@ಪ್ರಕಾಶಣ್ಣ,
ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿ ಆಯಿತು, "ಕ್ರಿಕೆಟ್ ಕಾಮೆಂಟರಿ ಥರಹ".. ಹ್ಹ ಹ್ಹ
ಕಿರಣ್ ಗೆ ನಿಮ್ಮ ಶುಭಾಶಯ ತಿಳಿಸಿದೆ, ಅವನು ಇನ್ನೂ ಅದರ ಶಾಕ್ ನಿಂದ ಹೊರಬಂದಿಲ್ಲ :-)

@ಗೌಡ್ರೆ,
ಥಾಂಕ್ ಯು. ನೀವು ಗೈರು ಹಾಜರಿ ಸ್ವಲ್ಪ ಬೇಸರ ಆಗಿತ್ತು.

@ರಾಜೇಶ್ ಅವರೇ,
ಮಳೆಗಾಲದಲ್ಲಿ ಚಾರಣ ನನಗೆ ತುಂಬಾನೇ ಇಷ್ಟ. ಎಲ್ಲೆಲ್ಲೂ ಹಸಿರೆ ಹಸಿರು. ಹೇಗೆ ಕ್ಲಿಕ್ಕ್ಕಿಸಿದರೂ ಚಂದನೆಯ ಚಿತ್ರ ಮನಸ್ಸಿಗೆ ಖುಷಿ ಕೊಡುತ್ತೆ.
ಫೋಟೋಗಳನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

@Rakesh,

your blog is also very nice.
It was a gr8 experience. Thanks you for your comments.


@ಯಜ್ಞೇಶ್,
ಹ್ವಾಯ್, ಥಾಂಕ್ ಯೂ ಸರ್.

@ಶ್ರೀಧರ್,
ಪಾಚು-ಪ್ರಪಂಚಕ್ಕೆ ಸ್ವಾಗತ. ಇಂಥಹ ಚಾರಣಕ್ಕೆ ಗುಂಪಾಗಿ ಹೋದರೇನೆ ಚಂದ. ಹಾದಿ, ತೊರೆ, ಝರಿ, ಹಸಿರು ಗುಡ್ಡಗಳು, ಸುತ್ತಿ ಬಳಸುವ, ಏದುಸಿರು ಬಿಟ್ಟು ಹತ್ತುವ ಗುಡ್ಡ, ಮಧ್ಯೆ ಕಾಡು ಎಲ್ಲವೂ ಅದ್ಭುತ ಅನುಭವ.
ನಿಮ್ಮ ಚಾರಣ ಯಶಸ್ವಿಯಾಗಲಿ, ಸಾಧ್ಯವಾದರೆ ನನಗೂ ತಿಳಿಸಿ.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

@ವನಿತಾ ಅವರೇ,
ಮೊದಲು ಅಷ್ಟೂ ದೂರ ಕ್ರಮಿಸುವ ವಿಚಾರ ಇರಲಿಲ್ಲ. ನಡೆಯುತ್ತಾ ಪ್ರತಿಯೊಂದೂ ಹಂತದಲ್ಲೂ ಅದ್ಭುತ ದೃಶ್ಯ ಎದುರಾಗುತ್ತಿದ್ದ ನಮಗೆ ತುತ್ತ ತುದಿ ಕ್ರಮಿಸದೆ ಇರಲಾಗಲಿಲ್ಲ.
Thank you for your wishes :-)

@ಆದರ್ಶ,
ಥ್ಯಾಂಕ್ಸ್ :-)

@ಆರ್ವಿ,
ಜಾಸ್ತಿ ಹತ್ತಿಸಬೇಡ ಗುರು. ಎಲ್ಲ ನಿಮ್ಮ ಪ್ರೋತ್ಸಾಹ ಅನ್ನೋದು ನೆನಪಿರಲಿ.

@ಅಭಿ,
ಆದಷ್ಟು ಬೇಗ ನಿನ್ನ ಅನುಭವವನ್ನೂ ಬರಿಯಪ್ಪ.

Shweta said...

Super Photos Sir!
nangu photograpy heli kodu please...
kep going !!!!!!

Cheers!

ಪಾಚು-ಪ್ರಪಂಚ said...

Hi Shwetha,

Thank you very much.

weekend class open maadiddi, bega join aagu :-)
Gurudakshine gottiddale :-)

Karthik said...

ಕುದುರೆಮುಖ ಚಾರಣಕ್ಕೆ ಆದ ಖರ್ಚು ಎಷ್ಟು ?
ನೀವು ರಾತ್ರಿ ಉಳಿದುಕೊಂಡ ಜಾಗ ಯಾವುದು ?
ಊಟ ತಿಂಡಿ ಹಾಗೂ ವಾಸ್ತವ್ಯಕ್ಕೆ ಆದ ಖರ್ಚು ಎಷ್ಟು ?