Tuesday, April 7, 2009

ಮಳೆಗಾಲದಲ್ಲಿ ಮಲೆನಾಡು - ಸುಂದರ ಜಲಪಾತ.

"ಮಳೆಗಾಲ" ಅಂದೊಡನೆ ನೆನಪಾಗುವುದು ರಚ್ಚೆ ಹಿಡಿದಂತೆ ಸುರಿಯುವ ಮಳೆ, ಎಲ್ಲೆಲ್ಲೂ ಕೆಂಪು ನೀರು, ತುಂಬಿ ಹರಿಯುವ ಹಳ್ಳ, ಹೊಳೆ, ಹಚ್ಚ ಹಸಿರಿನ ಕಾಡು, ಮರ ಗಿಡಗಳು, ಜಲಪಾತ, ಹಿತವಾದ ಚಳಿ. ಇದು ನಮ್ಮೂರಿನ ಮಳೆಗಾಲದ ನಿತ್ಯ ಬದುಕು. ಪ್ರತಿ ವರ್ಷ ಮಳೆಗಾಲದಲ್ಲಿ ಒಂದೆರಡು ದಿನ ಕೆಲಸಕ್ಕೆ ರಜ ಹಾಕಿ, ಊರಲ್ಲಿ ಮಳೆಯ ಮಜ ಅನುಭವಿಸುವುದು ನನಗೆ ತುಂಬಾ ಇಷ್ಟ. ನಿಜವಾದ ಪ್ರಕೃತಿ ಸೌಂದರ್ಯ ಅಲ್ಲಿದೆ. ಚಿಕ್ಕವನಿದ್ದಾಗಿಂದ ಕಳೆದ ಮಳೆಗಾಲದ ದಿನಗಳು ಎಂದಿಗೂ ಮರೆಯಲು ಸಾಧ್ಯ ಇಲ್ಲ. ದಿನಗಟ್ಟಲೆ ಸುರಿಯುವ ಮಳೆಯಲ್ಲಿ ಛತ್ರಿ ಇದ್ದರೂ ಬೇಕಂತಲೇ ನೆನೆಯುತ್ತಿದ್ದಿದ್ದು, ಬಿಳಿ ಅಂಗಿಗೆ (ಯುನಿಫಾರ್ಮ್) ಎಷ್ಟು ಸಾಧ್ಯವೋ ಅಷ್ಟು ಕೆಸರು ಮೆತ್ತಿಕೊಂಡಿದ್ದು, ಅಪ್ಪನಿಂದ ಯಥೆಶ್ಚ ಬೈಗುಳ... (ಬಂಡೆ ಮೇಲೆ ಮಳೆ ಸುರಿದ ಹಾಗೆ..!!) ತುಂಬಿದ ಹೊಳೆ ನೋಡಲು ಹೋಗಿ, ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದು, ಸೀತಾಲಿ-ದಂಡೆ ಹೂವು, ಬಿಕ್ಕೆ ಹಣ್ಣು, ಚಳ್ಳೆ ಹಣ್ಣು, ಪಿಳ್ಳೆ ಹಣ್ಣು, ವಾರಗಟ್ಟಲೆ ಕರೆಂಟು ಇಲ್ಲದೆ ಕಳೆದ ದಿನಗಳು ಎಲ್ಲವು ಹಸಿರಾಗಿದೆ. ಈಗಲೂ ಮನೆಗೆ ಹೋದಾಗ ಸುಮ್ಮನೆ ದಿನಗಟ್ಟಲೆ ಮಳೆಯನ್ನೇ ನೋಡುತ್ತಾ ಕುಳಿತು ಬಿಡುತ್ತೇನೆ.ಇವೆಲ್ಲವನ್ನೂ ನಾನು ಅಗಾಗ ನನ್ನ ಸ್ನೇಹಿತರಲ್ಲಿ ಕೊರೆಯುತ್ತೇನೆ. ಹಾಗಾಗಿ ಕಳೆದ ಸಲ ಅವರನ್ನು ಊರಿಗೆ ಕರೆದೊಯ್ಯುವುದು ಅನಿವಾರ್ಯ ಆಗಿತ್ತು. ಹಾಗೆಯೆ ಅಲ್ಲಿನ ಸುತ್ತಮುತ್ತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಎಂದು ನಿರ್ಧರಿಸಿ ಜೂನ್ ೨೨ ಕ್ಕೆ ಊರಿಗೆ ಹೊರಟೆವು. ಮನೆಯಲ್ಲಿ ಬೆಳಗಿನ ಉಪಹಾರ ಮುಗಿಸಿ, ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಸಿದ್ದಾಪುರ ತಲುಪಿದೆವು. ಗೆಳೆಯ ಮಂಜು ನಮಗಾಗಿ ಮಾರುತಿ-ಒಮ್ನಿ ಯನ್ನು ಗೊತ್ತುಮಾಡಿದ್ದ. ಸಿದ್ದಾಪುರದಲ್ಲಿ ಸ್ವಲ್ಪ ಹಣ್ಣು, ಬಿಸ್ಕೆಟ್, ಕುರುಕುಲು, ಮಳೆಯಿಂದ ತಲೆಗೆ ರಕ್ಷಣೆ ಪಡೆಯಲು ಪ್ಲಾಸ್ಟಿಕ್ ಟೋಪಿ ಖರೀದಿಸಿದೆವು. ಅಲ್ಲಿಂದ ಹೊರಟು ಹೆಗ್ಗರಣಿ ಮಾರ್ಗವಾಗಿ ಉಂಚಳ್ಳಿ ಜಲಪಾತ ನೋಡಲು ಹೊರಟೆವು. ಬಿಡದೆ ಸುರಿಯುತ್ತಿದ್ದ ಮಳೆ, ತಂಪಾದ ವಾತಾವರಣ, ಹಸಿರು ಗದ್ದೆಗಳನ್ನು ನೋಡಿ ದೂದ್ ಉತ್ಸಾಹದಲ್ಲಿದ್ದ. ದಾರಿಯ ಮಧ್ಯೆ ಅಘನಾಶಿನಿ ನದಿಯ ಬ್ರಿಡ್ಜ್ ಸಿಗುತ್ತದೆ. ಹೆಚ್ಚಿನ ಮಳೆಯಿಂದಾಗಿ ಬ್ರಿಡ್ಜ್ ನ ಮೇಲೆ ನೀರು ಬಂದಿತ್ತು. ಕೆಂಪು ನೀರಿನ ತುಂಬಿ ಹರಿಯುವ ಅಘನಾಶಿನಿ ನಿಜಕ್ಕೂ ಭಯ ಹುಟ್ಟಿಸುತ್ತೆ. ಇಲ್ಲಿ ಹರಿಯುವ ನೀರು ಮುಂದೆ ಉಂಚಳ್ಳಿ ಜಲಪಾತವನ್ನು ಸ್ರಷ್ಟಿಸುವುದು. ಅಗಾಧ ನೀರು ಚಿಕ್ಕ ಕಣಿವೆ ಮೂಲಕ ಧುಮ್ಮಿಕ್ಕುವುದು ನಿಜಕ್ಕೂ ನಂಬಲಸಾಧ್ಯ...!!ಉಂಚಳ್ಳಿ ಜಲಪಾತ : ಇದಕ್ಕೆ "ಕೆಪ್-ಜೋಗ" ಅಂತಲೂ ಕರೆಯುತ್ತಾರೆ. ೧೦೦ ಅಡಿ ಆಳಕ್ಕೆ ಭೋರ್ಗರೆಯುತ್ತಾ ಹೆಚ್ಚಿನ ಶಬ್ದ ಮಾಡುವುದರಿಂದ ಈ ಹೆಸರು . ಮಳೆಗಾಲದಲ್ಲಿ ನೀರಿನ ಪ್ರಮಾಣ ಜಾಸ್ತಿ ಇರುವುದರಿಂದ ಕೆಳಗೆ ಇಳಿಯುವುದು ಅಸಾಧ್ಯ. ಹಾಗೆ ಭಯಾನಕ ಉಂಬಳ ಕಾಟ ಬೇರೆ... ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಜಲಪಾತ ವೀಕ್ಷಣೆ ಸೂಕ್ತ ಸಮಯ. ಉಂಚಳ್ಳಿ ಇಂದ ಹೊರಟು ಹೆಗ್ಗರಣಿ ಗೆ ಬಂದು ಸಂಜೆಯ ಲಘು-ಉಪಹಾರ ಮಾಡಿದೆವು. "ಮಿಸಳ್-ಬಾಜಿ" ಇಲ್ಲಿ ಫೇಮಸ್ ತಿಂಡಿ. ಆಗಲೇ ಕತ್ತಲಾಗುತ್ತಾ ಇದ್ದರಿಂದ ಅಲ್ಲಿಂದ ಹೊರಟು ಗೆಳೆಯ ಮಂಜು ನ ಮನೆಗೆ ಬಂದು ಉಳಿದೆವು. ಮರುದಿನ ಬೆಳಿಗ್ಗೆ ತಿಂಡಿಗೆ "ತೆಳ್ಳವು", ಚಟ್ನಿ, ಜೇನುತುಪ್ಪ, ತುಪ್ಪ. ಲೆಕ್ಕವಿಲ್ಲದಷ್ಟು ಬ್ಯಾಟ್ಟಿಂಗ್ ಮಾಡಿ ಅವರ ಮನೆಯಿಂದ ಹೊರಟಾಗ ಮಳೆ ತನ್ನ ಪ್ರಭಾವ ಹೆಚ್ಚಿಸಿತ್ತು. ಬೆಚ್ಚನೆಯ ರೈನ್-ಕೋಟ್ ಧರಿಸಿ, ಛತ್ರಿ ಹಿಡಿದು, ತಲೆಗೆ ಟೋಪಿ ಹಾಕಿಕೊಂಡು ಅರವಿಂದ ಮುಂದಿನ ಪ್ರಯಾಣಕ್ಕೆ ರೆಡಿ ಆಗಿದ್ದ. ನಮಗೆ ಗೈಡ್ ಆಗಿ ಮಂಜು ನ ತಮ್ಮ ವಿಶ್ವನಾಥ ನನ್ನು ಕರೆದುಕೊಂಡು ಅಲ್ಲಿಂದ ಹೊರಟು ಮಂಜಗುಣಿಗೆ ಹೋದೆವು. ಸಿರಸಿ-ಕುಮಟಾ ಹೆದ್ದಾರಿಯಲ್ಲಿ, ಸಿರ್ಸಿಯಿಂದ ಸುಮಾರು ೨೨ ಕಿ.ಮೀ ಹೋದರೆ "ಕೂರ್ಸೆ" ಎಂಬ ಊರು ಸಿಗುತ್ತದೆ. ಅಲ್ಲಿಂದ ಬಲಗಡೆಗೆ ತಿರುಗಿ ೫ ಕಿ.ಮೀ. ಹೋದರೆ "ಮಂಜಗುಣಿ" ವೆಂಕಟರಮಣ ಸ್ವಾಮಿ ದೇವಸ್ಥಾನ ಸಿಗುತ್ತದೆ. ಕಲ್ಲಿನ ದೇವಸ್ಥಾನ, ರಥ, ಸುಂದರ ಪುಷ್ಕರಣಿ ಇಲ್ಲಿನ ವಿಶೇಷ. ದೇವರ ಪ್ರಸಾದ "ಅತ್ರಾಸ" ತುಂಬಾ ಸವಿಯಾದುದು. ಸುಂದರ ಪುಷ್ಕರಣಿ ದಡದಲ್ಲಿ ಸುಮಾರು ಹೊತ್ತು ಕುಳಿತಿದ್ದೆವು. ಅಲ್ಲಿಂದ ಹೊರಟು "ಹೆಗಡೆಕಟ್ಟಾ" ಮಾರ್ಗವಾಗಿ " ಯಾಣ" ಕ್ಕೆ ಹೋದೆವು.
ಯಾಣ : ಯಾಣ ಸಿರಸಿ ಯಿಂದ ೨೫ ಕಿ.ಮೀ ದೂರದಲ್ಲಿದ್ದು ದಟ್ಟ ಪಶ್ಚಿಮ ಘಟ್ಟದ ಮಧ್ಯದಲ್ಲಿದೆ. ಇಲ್ಲಿನ ಭೈರವೇಶ್ವರ ಶಿಖರ ನೆಲದಿಂದ ೧೨೦ ಮೀಟರ್ ಹಾಗೂ ಮೋಹಿನಿ ಶಿಖರ ೯೦ ಮೀಟರ್ ಎತ್ತರದಲ್ಲಿದೆ. ಈ ಶಿಖರಗಳು ಕಪ್ಪು ಸುಣ್ಣದ ಕಲ್ಲಿಂದ ಮಾಡಲ್ಪಟ್ಟಿದ್ದು ಪುರಾಣದ ಕಥೆಯನ್ನು ಸಾರುತ್ತವೆ. ಸುಮಾರು ೩ ಮೀಟರ್ ಎತ್ತರದ ಗುಹೆಯ ಒಳಗಡೆ ಶಿವಲಿಂಗ ಇದೆ. ಶಿವನ ತಲೆಯಮೇಲೆ ಸದಾಕಾಲ ನೀರು ಬೀಳುತ್ತಾ ಇರುವುದರಿಂದ "ಗಂಗೊಧ್ಭವ" ಎಂದೂ ಪ್ರಸಿದ್ದಿಯಾಗಿದೆ. "ಭಸ್ಮಾಸುರ -ಮೋಹಿನಿ" ಪುರಾಣ ಪ್ರಸಿದ್ಧ ಕಥೆಯನ್ನು ಇಲ್ಲಿನ ಶಿಖರ ಸಾರುತ್ತದೆ. ಇಲ್ಲಿಂದಲೇ "ಚಂಡೀಹೊಳೆ" ಉಗಮವಾಗಿ ಮುಂದೆ ಅಘನಾಶಿನಿ ನದಿಯನ್ನು ಸೇರುತ್ತದೆ. ಇದು ಒಂದು ಅದ್ಭುತ ನಿಸರ್ಗ ವಿಸ್ಮಯಗಳಲ್ಲೊಂದು. ಯಾಣದ ಸೌಂದರ್ಯವನ್ನು ಕಣ್ಣು ತುಂಬಿಕೊಂಡು, ಭೈರವೇಶ್ವರ ನ ದರ್ಶನ ಮಾಡಿ, ಅಲ್ಲಿಂದ ಘಟ್ಟದ ಮಧ್ಯೆ ಸಾಗುವ ದಾರಿಯಲ್ಲಿ "ವಿಭೂತಿ" ಜಲಪಾತಕ್ಕೆ ಹೊರಟೆವು. ಯಾಣದಿಂದ ನೇರವಾಗಿ ಕುಮಟಕ್ಕೆ ಹೋಗುವ ದಾರಿಯಲ್ಲಿ ಸಾಗಿದರೆ " ವಿಭೂತಿ" ಜಲಪಾತ ಸಿಗುತ್ತದೆ. ಪಶ್ಚಿಮ ಘಟ್ಟವು ಜಲಪಾತಗಳಿಗೆ ಪ್ರಸಿದ್ದಿ. ಎಷ್ಟೋ ಜಲಪಾತಗಳು ಜನರಿಗೆ ಗೊತ್ತಾಗದೆ ದಟ್ಟ ಕಾನನದ ಮಧ್ಯೆ ಹುದುಗಿ ಹೋಗಿವೆ. ಇನ್ನು ಕೆಲವು ಕೇವಲ ಮಳೆಗಾಲಕ್ಕೆ ಮಾತ್ರ ಸೀಮಿತ. ಅಂತವುಗಳಲ್ಲಿ " ಬೆಳ್ಳುಳ್ಳಿ " ಜಲಪಾತವು ಒಂದು. ಬಳಕುವ ಜಲಪಾತದ ಸೌಂದರ್ಯವನ್ನು ನೋಡಿ ಅರವಿಂದ ಚಳಿಯನ್ನೂ ಲೆಕ್ಕಿಸದೆ ನೀರಿಗೆ ಇಳಿದು ಬಿಟ್ಟ. ತುಂಬಾ ಹೊತ್ತು ಧುಮುಕುವ ನೀರಲ್ಲಿ ಆಟ ವಾಡಿದ ನಂತರ ಸ್ವಲ್ಪ ಸಮಾಧಾನ ಆಗಿದ್ದ.ಮಳೆಗಾಲದಲ್ಲಿ ಬೆಟ್ಟದ ನೀರು ಕಲ್ಲಿನ ಮಧ್ಯೆ ಹರಿದು ಬಂದು ಸುಂದರ ಜಲಪಾತ ಸೃಷ್ಟಿಸುತ್ತೆ. ಬೆಳ್ಳನೆ ಹಾಲಿನ ಹಾಗೆ ಸುಂದರವಾಗಿ ಮೆಲ್ಲನೆ ಧುಮುಕುವ ಈ ಜಲಪಾತ ನಮಗೆಲ್ಲ ತುಂಬಾ ಇಷ್ಟವಾಯಿತು.ಇಲ್ಲಿನ ಸೌಂದರ್ಯಕ್ಕೆ ಮನಸೋತ ಕಿರಣ್ ನ ಹರ್ಷೋದ್ಘಾರ...!!!
ಎಲ್ಲರೂ ನೀರಲ್ಲಿ ಆಟ ಆಡಿ ಮುಂದೆ ಸಾಗಿದೆವು. ಕಿರಣ ಅರವಿಂದ ಮತ್ತು ಸುಹಾಸ - ಮಳೆಗೆ ಸಿದ್ಧವಾಗಿ ನಿಂತಿರುವುದು.ಯಾಣದಿಂದ ಸುಮಾರು ೧೦ ಕಿ ಮೀ. ವಡ್ಡಿ ಘಾಟ್ ಮೂಲಕ ಹೋದರೆ "ಮಾಬಗಿ" ಎಂಬ ಊರು ಸಿಗುತ್ತದೆ. ಅಲ್ಲಿ ವಾಹನವನ್ನು ನಿಲ್ಲಿಸಿ, ಅಲ್ಲಿಂದ ಮುಂದೆ ಕಾಲುನಡಿಗೆಯಲ್ಲಿ ವಿಭೂತಿ ಜಲಪಾತಕ್ಕೆ ಹೋಗಬೇಕು. ಇಲ್ಲಿಯೇ ನಮಗೆಲ್ಲ ಉಂಬಳದ ನಿಜವಾದ ಮಹಿಮೆ ಅರ್ಥ ಆಗಿದ್ದು. ಅಲ್ಲಿಯ ವರೆಗೆ ಉಂಬಳದ ಬಗ್ಗೆ ಅಷ್ತೊದ್ದು ತಲೆಕೆಡಿಸಿಕೊಂಡಿರದ ಎಲ್ಲರೂ ನಿಧಾನವಾಗಿ ನಡಿಯುತ್ತ ಇದ್ದೆವು. ಜಲಪಾತವನ್ನು ಸಮೀಪಿಸಿದಾಗ ವಿಶ್ವ ಒಂದು ಸಲ ಕಾಲನ್ನು ನೋಡಿಕೊಳ್ಳಿ ಅಂದ. ಅಯ್ಯೋ...!! ಒಬ್ಬಬ್ಬರ ಕಾಲಲ್ಲಿ ಬರೋಬ್ಬರಿ ೪೦-೫೦ ಉಂಬಳ ಇದ್ದವು. ಎಲ್ಲಿ ನೋಡಿದರೂ ಉಂಬಳ..ಉಂಬಳ...!!ಹೊಳೆಯ ಮಧ್ಯೆ ನೀರಿನ ರಭಸಕ್ಕೆ ನಿಂತು ಒಂದೊಂದಾಗಿ ಉಂಬಳ ತೆಗೆದು ನೀರಲ್ಲಿ ಬಿಡುತ್ತಿದ್ದೆವು.. ಅಂತೂ ಅವೆಲ್ಲವನೂ ತೆಗೆದು ಸಾಕಾಗಿ ಹೋಯಿತು... ಜಲಪಾತವನ್ನು ನೋಡುವ ಆಸೆ ಯಾರಿಗೂ ಉಳಿದಿರಲಿಲ್ಲ...!!
ವಿಭೂತಿ ಜಲಪಾತ : ಸಿರ್ಸಿ ಇಂದ ದೇವನಹಳ್ಳಿ, ಹೆಗಡೆಕಟ್ಟ ಮಾರ್ಗವಾಗಿ ಮತ್ತಿಘಟ್ಟ ತಲುಪಿ ಅಲ್ಲಿಂದ ವಡ್ಡಿ ಘಾಟ್ ಮೂಲಕ ೧೦ ಕಿ.ಮೀ. ಸಾಗಿದರೆ ಮಾಬಗೆ ಎಂಬ ಊರು ಸಿಗುತ್ತದೆ. ಮಾಬಗೆಯಲ್ಲೇ ಮಣ್ಣಿನ ರಸ್ತೆಯಲ್ಲಿ ೨ ಕಿಮಿ ಚಲಿಸಿ ನಂತರ ೨೦ನಿಮಿಷ ನಡೆದರೆ ಸುಂದರ ವಿಭೂತಿ ಜಲಧಾರೆಯ ದರ್ಶನ.ಸುಮಾರು ೧೦೦ ಅಡಿ ಎತ್ತರವಿರುವ ಜಲಧಾರೆ ಸಮೀಪ ತೆರಳುವುದು ಮಳೆಗಾಲದಲ್ಲಿ ಕಷ್ಟ. ಸ್ವಲ್ಪ ದೂರ ನಿಂತೇ ನೋಡಬೇಕಾಗಬಹುದು. ನೀರು ಧುಮುಕುವಲ್ಲಿ ನೀರಿಗಿಳಿಯುವುದು ಅಪಾಯ. ಸುತ್ತಮುತ್ತ ಸುಣ್ಣದ ಕಲ್ಲು ಇರುವುದರಿಂದ ಜಲಪಾತಕ್ಕೆ ಈ ಹೆಸರು. ಇಲ್ಲಿ ವರ್ಷಪೂರ್ತಿ ನೀರು ಇರುತ್ತದೆ. ಅರ್ಧ ಗಂಟೆ ಜಲಪಾತದ ಸೌಂದರ್ಯವನ್ನು ಸವಿದು ಅಲ್ಲಿಂದ ವಾಪಾಸ್ ಹೊರಟೆವು. ಹೋಗುವಾಗ ಒಂದೇ ಉಸಿರಿಗೆ ೧ ಕಿ.ಮೀ ಓಡಿ ಕಾರ್ ನ ಬಳಿ ಬಂದೆವು. ಅಷ್ಟು ವೇಗವಾಗಿ ಓಡಿದರು ೧೦ ಉಂಬಳ ಆಗಲೇ ನಮ್ಮ ಪಾದ ಸೇರಿದ್ದವು...!!ಗೆಳೆಯರೆಲ್ಲರಿಗೂ ಮಳೆಗಾಲದ ಅನುಭವ ಸ್ವಲ್ಪ ಹೆಚ್ಚಾಗಿಯೇ ಆಗಿತ್ತು..!!

Monday, March 9, 2009

ಸಕಲೇಶಪುರ ರೈಲು ಹಳಿಯ ಚಾರಣ - ಭಾಗ ೨

ಬ್ರಿಡ್ಜ್ ನ ಮೇಲೆ ಸಾಗುವ ರೈಲಿನ ಚಿತ್ರ....!! ಆಗ ನಾವು ಬ್ರಿಡ್ಜ್ ನ ಕೆಳಗಿದ್ದೆವು...

ಬಿಸಿಲು ನಿಧಾನವಾಗಿ ಹೆಚ್ಚಾಗುತ್ತಾ ಇತ್ತು. ಆಗಾಗ ನೆರಳಿನಲ್ಲಿ ವಿರಮಿಸಿಕೊಂಡು ನಾವು ಮುಂದೆ ಸಾಗಿದ್ದೆವು. ಚಾರ್ಮಾಡಿ ಘಟ್ಟದ ದ್ರಶ್ಯವಂತೂ ಅಧ್ಬುತವಾಗಿತ್ತು. ಅಲ್ಲಲ್ಲಿ ಸಿಗುತ್ತಿದ್ದ ಸಣ್ಣ ಸಣ್ಣ ಹಳ್ಳದಲ್ಲಿ ಬೇಸಿಗೆಯಲ್ಲೂ ಸಹ ನೀರು ಹರಿಯುತ್ತಿತ್ತು. ಝರಿಯ ನೀರು ತುಂಬಾ ಸಿಹಿಯಾಗಿತ್ತು. ದಾರಿಯುದ್ದಕ್ಕೂ ನೀರು ಸಿಗುವುದು ಮೊದಲೇ ಗೊತ್ತಿದ್ದರೆ ಮಣಭಾರದ ನೀರಿನ ಬಾಟಲ್ ಹೊತ್ತುಕೊಂಡು ಹೋಗುವುದು ತಪ್ಪುತ್ತಿತ್ತು.

ನಮಗೆ ಎದುರಾದದ್ದು ೬ ರೈಲುಗಳು. ಅಲ್ಲಿ ಸಿಗುತ್ತಿದ್ದ ಬ್ರಿಡ್ಜ್ ಗಳು ಒಂದಕ್ಕಿಂತ ಒಂದು ಅದ್ಭುತವಾಗಿತ್ತು. ಅಷ್ಟೇ ಅಪಾಯಕಾರಿ ಕೂಡ...ಸ್ವಲ್ಪ ಅಜಾಗರೂಕತೆ ತೋರಿದರೂ ೧೦೦-೨೦೦ ಅಡಿ ಕೆಳಕ್ಕೆ ಬೀಳುವುದು ಖಂಡಿತ. ಗೂಡ್ಸ್ ರೈಲುಗಳು ಆಗಾಗ ಬರುತ್ತಿರುತ್ತೆ. ಹಾಗಾಗಿ ಬ್ರಿಡ್ಜ್ ದಾಟುವಾಗ ಎಚ್ಚರ ಅಗತ್ಯ...ಸರಸರನೆ ಬ್ರಿಡ್ಜ್ ನ ದಾಟಿ ಬಿಡಬೇಕು..ಸುರಂಗದಲ್ಲಿ ನಡೆಯುವುದು ಸಕತ್ ಥ್ರಿಲ್ಲಿಂಗ್...ಟಾರ್ಚ್ ಇಲ್ಲದೆ ಸುರಂಗದಲ್ಲಿ ನಡೆಯಲು ಸಾಧ್ಯವಿಲ್ಲ... ನಮಗೆ ಸಿಕ್ಕ ಅತೀ ಉದ್ದದ ಸುರಂಗ ಅಂದರೆ ೭೫೦ ಮೀ. ಸುರಂಗದ ಒಳಗೆ ನಮಗೆ ರೈಲು ಸಿಗಲಿಲ್ಲ. ಅಲ್ಲಿ ಬಿಸಿಲಿನ ಧಗೆ ಇರುವುದಿಲ್ಲ, ಹಾಗಾಗಿ ಸ್ವಲ್ಪ ಫಾಸ್ಟ್ ಆಗಿ ನಡೆಯಲು ಸಾಧ್ಯ. ಸುರಂಗದ ಬಾಗಿಲಲ್ಲಿ ನಮ್ ಟೀಮ್. ನಾವು ಸುಮಾರು ೧೨ ಕಿ. ಮೀ. ನಡೆದಿದ್ದೆವು. ಸಂತು ಕಂಬಿಯ ಮಧ್ಯೆ ಕಾಲು ಸಿಕ್ಕಿಸಿಕೊಂಡು, ಕಾಲನ್ನು ಉಳುಕಿಸಿಕೊಂಡು ಬಿಟ್ಟ. ಅಲ್ಲಿಂದ ಅವನಿಗೆ ನಡೆಯಲು ಕಷ್ಟವಾಯಿತು. ಅಂತು ಇಂತೂ ಕಾಲೆಳೆದುಕೊಂಡು ಕುಂಟುತ್ತ ೩ ಗಂಟೆಯ ವರೆಗೆ ನಡೆಸಿದೆವು. ಅವನ ಪರಿಸ್ಥಿತಿ ತುಂಬಾ ಕಷ್ಟವಾಗಿತ್ತು, ಭಾರದ ಬ್ಯಾಗು, ಬಿಸಿಲು, ಒಂದು ಕಾಲು ಕುಂಟು... !! ಜಲ್ಲಿ ಕಲ್ಲಿನ ಮೇಲೆ ನಡೆಯಲು ಕಷ್ಟಪಡ್ತಾ ಇದ್ದ. ನಮ್ಮ ಗುರಿ ಇದ್ದಿದ್ದು "ಎಡಕುಮೇರಿ" ಎಂಬ ಸ್ಟೇಷನ್. ಇನ್ನೂ ಸುಮಾರು ೪ ಕಿ. ಮೀ. ಬಾಕಿ ಇತ್ತು. ಎಡಕುಮೇರಿ ಇಂದ ಸಕಲೇಶಪುರ - ಸುಬ್ರಮಣ್ಯ ಹೈವೇ ಸೇರಲು ಮತ್ತೂ ೪ ಕಿ. ಮೀ ನಡೆಯಬೇಕಿತ್ತು...ಅದನ್ನು ಕೇಳಿ ಸಂತು "ಉಸ್ಸಪ್ಪ" ಎಂದು ಮಲಗಿಬಿಟ್ಟ..! ನಮಗೆ ಸನಿಹದ ದಾರಿ ಹುಡುಕುವುದು ಅನಿವಾರ್ಯವಾಯಿತು.
ಅಲ್ಲಿಯೇ ಕೆಲಸ ಮಾಡುತಿದ್ದ "ಪುಟ್ಟಸ್ವಾಮಿ" ಎಂಬ ಪ್ರಚಂಡ ಆಸಾಮಿಯ ಬಳಿ ಹೈವೇ ಸೇರಲು ಬೇರೆ ದಾರಿ ಇದೆಯೇ ಅಂತ ಕೇಳಿದೆವು. ಆತ ಹತ್ತಿರದಲ್ಲಿಯೇ ಮರ ಸಾಗಿಸುವ ಲಾರಿ ಬರುತ್ತದೆ ಅದರಲ್ಲಿ ಹೋಗಬಹುದೆಂದು ತಿಳಿಸಿದ.. ನಮ್ಮ ಚಾರಣವನ್ನು ಅಲ್ಲಿಯೇ ಮೊಟಕುಗೊಳಿಸಿ ಅವನನ್ನೂ ಕರೆದುಕೊಂಡು ಕಾಡಿನ ದಾರಿಯಲ್ಲಿ ನಡೆದೆವು. ಗುಡ್ಡ ಹತ್ತಲು ಏದುಸಿರು ಬಿಡುತ್ತಾ, ಅಂತೂ ಇಂತೂ ಅವನು ಹೇಳಿದ ಜಾಗಕ್ಕೆ ಬಂದು ಸೇರಿದೆವು. ದಾರಿಯುದ್ದಕ್ಕೂ ಪುಟ್ಟಸ್ವಾಮಿ ವಟಗುಟ್ಟುತ್ತಲೇ ಇದ್ದ...!! ಬಹುಶ: ಮರದ ಬಾಯಿಯಾಗಿದ್ದರೆ ಒಡೆದೆ ಹೋಗುತ್ತಿತ್ತೇನೋ...!! ಪುಟ್ಟಸ್ವಾಮಿ ಫೋಟೋಕ್ಕೆ ಪೋಸು ಕೊಟ್ಟಿದ್ದು ಹೀಗೆ..

ಲಾರಿ ಬರುವುದು ಸ್ವಲ್ಪ ಸಮಯವಾಗುತ್ತದೆಂದು ಹೇಳಿದ. ಅಲ್ಲಿ ಸ್ವಲ್ಪ ಹೊತ್ತು ಮಲಗಿ ನಿದ್ದೆ ಮಾಡಿದೆವು...ಆ ಜಾಗ ತುಂಬಾ ಸುಂದರವಾಗಿತ್ತು... ಸುತ್ತಲೂ ಕಾಡು. ಚಂದದ ಚಾರ್ಮಾಡಿ ಘಟ್ಟ ಪ್ರದೇಶ.. !! ಅಲ್ಲಿಂದ ಮುಂದೆ ನಮ್ಮ ಪ್ರಯಾಣ ಲಾರಿಯಲ್ಲಿ ಸಾಗಿತು. ಲಾರಿಯಲ್ಲಿ "ಹೆತ್ತೂರು" ಎಂಬ ಹಳ್ಳಿಗೆ ತಲುಪಿದೆವು..ಅಲ್ಲಿಂದ ಸಕಲೇಶಪುರಕ್ಕೆ ಹೋಗುವ ಕೊನೇಯ ಬಸ್ಸು ಹೋಗಿಯಾಗಿತ್ತು...ಮಾರುತಿ ವ್ಯಾನ್ ಒಂದನ್ನು ಬಾಡಿಗೆಗೆ ಪಡೆದು "ಕೂಡುರಸ್ತೆ" ಗೆ ಬಂದೆವು.. ಅಲ್ಲಿಂದ ೧೦ ಕಿ. ಮೀ. ಬಸ್ಸಿನಲ್ಲಿ ಪ್ರಯಾಣಿಸಿ ಯಾವುದೂ ಊರಿಗೆ ಬಂದು ಸೇರಿದೆವು. ಅಲ್ಲಿಂದ ಬಾಡಿಗೆ ರಿಕ್ಷ ಒಂದನ್ನು ಪಡೆದು ಸಕಲೇಶಪುರಕ್ಕೆ ಬಂದಾಗ ೮.೩೦. ಸಕಲೇಶಪುರದಲ್ಲಿ ರೂಮ್ ಮಾಡಿ, ಪರೋಟ ಊಟಮಾಡಿ ಮಲಗಿದಾಗ ೯.೩೦. ಕಾಲುಗಳು ಆಗಲೇ ಡಾನ್ಸ್ ಮಾಡುತ್ತಿದ್ದವು... ಯಾರಿಗೂ ನಿಲ್ಲಲೂ ತ್ರಾಣ ಇರಲಿಲ್ಲ..:-) ಎತ್ತಿ ಬಿಸಾಕಿದರೂ ನಮಗೆ ಎಚ್ಚರ ಆಗುತ್ತಿರಲಿಲ್ಲ..ಅಂತಹ ಘಾಡ ನಿದ್ರೆ...!! ಹುರುಪಿನಿಂದ ಶುರುವಾಗಿ, ಸುಸ್ತು, ಪರದಾಟ ದಲ್ಲಿ ನಮ್ಮ ಚಾರಣ ಮುಗಿದಿತ್ತು...!!
ಕಾಲು ಉಳುಕಿಸಿಕೊಂಡ ಸಂತು...

ಮರುದಿನ ಭಾನುವಾರ, ೨೨ ನೆ ತಾರೀಕು. ಸ್ನಾನ, ತಿಂಡಿ ಮುಗಿಸಿದಾಗ ೯ ಗಂಟೆ. ಅಲ್ಲಿಂದ " ಮೂಕನಮನೆ ಅಬ್ಬಿ ಜಲಪಾತ" ಕ್ಕೆ ಬಾಡಿಗೆ ರಿಕ್ಷ ದಲ್ಲಿ ಹೊರಟೆವು. ಸಕಲೇಶಪುರದಿಂದ ಸುಬ್ರಮಣ್ಯ ರಸ್ತೆಯಲ್ಲಿ ೨೦ ಕಿ.ಮೀ ದೂರ ಸಾಗಿದರೆ "ಹೆತ್ತೂರು" ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ೪ ಕಿ. ಮೀ. ದೂರಕ್ಕೆ ಕೂಡುರಸ್ತೆ ಸಿಗುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿ "ಬ್ಯಾಡರಹಳ್ಳಿ" ಮುಖಾಂತರ ಹೋದರೆ "ಮೂಕನಮನೆ ಅಬ್ಬಿ ಜಲಪಾತ" ಅಂತ ಬೋರ್ಡ್ ಸಿಗುತ್ತದೆ. ಅಲ್ಲಿಂದ ಬಲಕ್ಕೆ ೧ ಕಿ. ಮೀ ಹೋದರೆ ಒಂದು ಮನೆ ಸಿಗುತ್ತದೆ.. ಆ ಮನೆಯ ಪಕ್ಕದಲ್ಲೇ ಇಳಿಜಾರಿನಲ್ಲಿ ಅಬ್ಬಿ ಜಲಪಾತ ಸಿಗುತ್ತದೆ. ಜಲಪಾತದ ತನಕ ವಾಹನದಲ್ಲಿ ಹೋಗಬಹುದು... !

ಜಲಪಾತ ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುತ್ತದೆ..ಅಂತರ್ಜಾಲದಲ್ಲಿ ಸಿಕ್ಕಿದ ಅಬ್ಬಿ ಜಲಪಾತದ ಮಳೆಗಾಲದ ವೈಭವದ ಫೋಟೋ. ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆ ಇತ್ತಾದರೂ ಮೈ-ಮನ ತಣಿಸುವಷ್ಟಿತ್ತು..! ಸುಮಾರು ೧೫ ಅಡಿ ಎತ್ತರದಿಂದ ನೀರು ಬೀಳುತ್ತದೆ. ನೀರಿನಲ್ಲಿ ಅಪಾಯ ಇಲ್ಲ. ದಟ್ಟ ಕಾಡಿನ ನಡುವೆ ಇರುವ ಜಲಪಾತ ಇನ್ನೂ ಪ್ರಪಂಚಕ್ಕೆ ಹೆಚ್ಚಿನ ಪರಿಚಯ ಆಗಿಲ್ಲ...ಪ್ಲಾಸ್ಟಿಕ್ ಹಾಗೂ ಇತರೆ ಮಧ್ಯದ ಬಾಟಲಿಗಳ ಸುಳಿವಿರಲಿಲ್ಲ...ಸ್ವಚ್ಛ ಪರಿಸರದ ಸುಂದರ ಜಲಪಾತ...!!

ನಮಗೆ ಇಲ್ಲೂ ಸಹ ಪರದಾಟ ತಪ್ಪಲಿಲ್ಲ...ದಾರಿಯಲ್ಲಿ ಸಿಕ್ಕವರನ್ನು ಕೇಳುತ್ತಾ, ಜಲಪಾತದ ದಾರಿಯ ಬೋರ್ಡ್ ಏನೂ ಸಿಕ್ಕಿತ್ತು...ಅಲ್ಲಿಂದ ಮುಂದೆ ಮಣ್ಣು ರಸ್ತೆಯಲ್ಲಿ ಸಾಗಿದಾಗ ದಾರಿ ಇದ್ದಕ್ಕಿದ್ದ ಹಾಗೆ ಕೊನೆಗೊಳ್ಳುತ್ತೆ...ಅಲ್ಲಿಯೇ ಹೊಳೆ ಇರುವುದು... ಆದರೆ ನಮಗೆ ಜಲಪಾತ ಸಿಗಲಿಲ್ಲ...ಸುಮಾರು ಹೊತ್ತು ಎಲ್ಲ ಕಡೆ ಹುಡುಕಿದರೂ ಜಲಪಾತದ ಶಬ್ದ ಕೂಡ ಕೇಳಿಸಲಿಲ್ಲ..ಅಲ್ಲಿನ ಮನೆಯಲ್ಲೂ ಯಾರೂ ಇರಲಿಲ್ಲ...ಅಕ್ಕಪಕ್ಕದಲ್ಲಿ ಜನರ ಸುಳಿವೇ ಇಲ್ಲ...!!.ಕೊನೆಗೆ ಅದೇ ನೀರಲ್ಲಿ ಆಟ ಆಡಿ ವಾಪಾಸ್ ಹೋಗುವ ನಿರ್ಧಾರಕ್ಕೆ ಬಂದಿದ್ದೆವು..ಎಲ್ಲರಲ್ಲೂ ನಿರಾಸೆ...:-( ಕೊನೇಯ ಪ್ರಯತ್ನ ಎಂಬಂತೆ ಅರವಿಂದ ಮತ್ತೆ ದೂದ್ ನೀರಿನ ಹರಿವು ಕಡೆ ಸಾಗಿದರು... ಅಲ್ಲಿ ಸಿಕ್ಕಿತ್ತು ಜಲಪಾತ...!! ಜಲಪಾತ ನೋಡಿದ ನಮಗೆ ನಿರಾಸೆ ಆಗಲಿಲ್ಲ. ಸಾಕಷ್ಟು ನೀರು ಇತ್ತು...ಅಚ್ಚ ಬಿಳುಪಿನ ಜಲಧಾರೆ..!




ನೀರಿನ ರಭಸಕ್ಕೆ ಮೈ-ಒಡ್ಡಿ ನಿಂತು ಪುಕ್ಸಟ್ಟೆ ಮಸಾಜ್ ಮಾಡಿಕೊಂಡ್ವಿ...ಹಿಂದಿನ ದಿನದ ನೋವೆಲ್ಲ ಮಾಯವಾಗಿತ್ತು...!! ಸುಮಾರು ೨ ತಾಸು ಅಲ್ಲಿನ ಶಾಂತ ಪರಿಸರದಲ್ಲಿದ್ದು ಅಲ್ಲಿಂದ ಹೊರಟು ಸಕಲೇಶಪುರಕ್ಕೆ ಬಂದು ರಿಕ್ಷ ಡ್ರೈವರ್ ಕೃಪೆ ಇಂದ ಅಪರೂಪದ "ಹಲಸಿನ ಕಾಯಿ ಹುಳಿ" ಊಟ ಮಾಡಿ ಬೆಂಗಳೂರು ಬಸ್ಸನ್ನು ಹಿಡಿದೆವು.
ನಮ್ಮ ಟೀಮ್ ನ ಫೋಟೋ....ನಾನು, ಸಂತು, ಅರವಿಂದ, ಕಿರಣ್ ಮತ್ತು ಸುಹಾಸ್.

Tuesday, March 3, 2009

ಸಕಲೇಶಪುರ ರೈಲು ಹಳಿಯ ಚಾರಣ..ಭಾಗ 1

೨೦೦೯ ನೇ ಇಸವಿಯ ಮೊದಲ ಚಾರಣ...ರೂಪುರೇಷೆ..
ಫೆಬ್ರವರಿ ತಿಂಗಳು ಕಳೆಯುತ್ತಾ ಬಂದಿದ್ದರೂ ನಾವು ಯಾವುದೇ ಪ್ರವಾಸ ಅಥವಾ ಚಾರಣಕ್ಕೆ ಹೋಗಿರಲಿಲ್ಲ. ಎಲ್ಲರೂ ಕೆಲಸದಲ್ಲಿ ಭಾರಿ ಬ್ಯುಸಿ. ಆದರೂ ಚಾರಣಕ್ಕೆ ಹೋಗುವ ತುಡಿತ ದಿನೇ ದಿನೇ ಜಾಸ್ತಿ ಆಗುತ್ತಾ ಇತ್ತು. ಅಸಲು ಮೈ-ಕೈ ನೋಯಿಸಿಕೊಳ್ಳದೆ ತುಂಬಾ ದಿನಗಳೇ ಆಗಿತ್ತು. ಇದ್ದಕ್ಕಿದ್ದ ಹಾಗೆ ಅರವಿಂದ ಸಕಲೇಶಪುರದ ರೈಲು ಹಳಿಯ ಚಾರಣದ ಬಗ್ಗೆ ಹೇಳಿದ. ನಾನು ಇಂಟರ್ನೆಟ್ ನಲ್ಲಿ ಅಲ್ಲಿಯ ಫೋಟೋಗಳನ್ನು ನೋಡಿದ್ದೆ. ಗೂಡ್ಸ್ ರೈಲಿನ ಓಡಾಟ ಜಾಸ್ತಿ ಇದೆ ಎಂದೂ, ಬಿಸಿಲು ಜಾಸ್ತಿ ಹಾಗು ಹಸಿರು ಕಡಿಮೆ ಆಗಿದೆ ಎಂದೂ ಪ್ರಾಥಮಿಕ ವಿಚಾರಣೆ ಇಂದ ಗೊತ್ತಾಯಿತು. ದಿನ ಕಳೆದರೆ ಅಲ್ಲಿಗೆ ಹೋಗುವುದು ಸಾಧ್ಯವೇ ಇಲ್ಲ, ಏನಾದರೂ ಅಗಲಿ, ಹೊಟ್ಟೆ ಕರಗಿಸಲು ಅಲ್ಲಿಗೇ ಚಾರಣಕ್ಕೆ ಹೋಗೋಣ ಎಂದೂ ನಾನು ಹೇಳಿದೆ. ಅದರಂತೆ ಫೆಬ್ರವರಿ ೨೧ ರಾತ್ರಿ ಬೆಂಗಳೂರಿಂದ ಹೊರಡುವುದೆಂದು ತೀರ್ಮಾನಿಸಲಾಯಿತು. ನಾನು ಇಂಟರ್ನೆಟ್ ನಲ್ಲಿ ಜಾಲಾಡಿ ಉಪಯುಕ್ತ ಮಾಹಿತಿಯನ್ನ ಕಲೆ ಹಾಕಿದೆ. ಮಿತ್ರ ವಿನಾಯಕ ಭಟ್ ಅಲ್ಲಿನ ಬಗ್ಗೆ ತುಂಬಾ ವಿವರವಾಗಿ ಮಾಹಿತಿಯನ್ನು ಕೊಟ್ಟ. ಅವನು ೨ ಬಾರಿ ನಡೆದು ಬಂದಿದ್ದ..! ದಿನಾಂಕ ೨೧ ಶುಕ್ರವಾರ ಸಂಜೆ ನಾನು ಆಫೀಸ್ ಬಿಟ್ಟಾಗ ೮ ಗಂಟೆ..! ಉಳಿದವರು ಬೇಗ ಬಂದಿರಬಹುದು ಎಂದು ಊಹಿಸಿದವನಿಗೆ ನಿರಾಸೆ...ಎಲ್ಲರೂ ಲೇಟ್...! ದೂದ್ ಒಬ್ಬ ಬೇಗ ರೆಡಿ ಆಗಿದ್ದು ೯.೩೦ ಕ್ಕೆ ಮೆಜೆಸ್ಟಿಕ್ ಗೆ ಬರುತ್ತೇನೆಂದು ಹೇಳಿದ. ಸಂತು ಕೂಡ ಮೆಜೆಸ್ಟಿಕ್ ಗೆ ಬರುತ್ತೇನೆಂದು ಹೇಳಿದ್ದ. ದೂದ್, ೪ ಮಲಗುವ ಮ್ಯಾಟ್ ಅನ್ನು ಅವನ ಮಿತ್ರರಿಂದ ಎರವಲು ತಂದಿದ್ದ. ಅರವಿಂದ ಮತ್ತು ಬನವಾಸಿ ಊಟ ಮತ್ತು ತಿಂಡಿಯ ವ್ಯವಸ್ಥೆ ಮಾಡಿದರು...ತಲಾ ೩ ಚಪಾತಿ, ಚಟ್ನಿಪುಡಿ, ಜಾಮ್ ಬಾಟಲ್, ೧/೨ ಪೌಂಡು ಬ್ರೆಡ್ಡು, ೨ ಬನ್ನು, ೧ ಸೇಬು ಹಣ್ಣು, ೨ ಕಿತ್ತಳೆ, ೧ ಕೇಕು, ೨ ಬಿಸ್ಕತ್ತು ಪೊಟ್ಟಣ, ಚಿಪ್ಸ್, ಕೋಡುಬಳೆ, ಗ್ಲೂಕೋಸು ನಮ್ಮ ನಮ್ಮ ಬ್ಯಾಗು ಸೇರಿತು...!!ನಾನು, ಬನವಾಸಿ, ಅರವಿಂದ, ಅವನ ಮನೆಯಲ್ಲಿ ಊಟ ಮಾಡಿ ಮೂಡಲಪಾಳ್ಯ ಬಿಟ್ಟಾಗ ೧೧ ಗಂಟೆ..!! ಆಗಲೇ ದೂದ್ ಎಲ್ಲರಿಗೂ ಎರಡೆರಡು ಬಾರಿ ಫೋನ್ ಮಾಡಿದ್ದ...! ಯಾಕೋ ಗೊತ್ತಿಲ್ಲ ಪ್ರತೀ ಪ್ರವಾಸದಲ್ಲೂ ದೂದ್ ಗೆ ಹೀಗಾಗುತ್ತೆ..!! ಸುಮಾರು ೨ ತಾಸು ಮೆಜೆಸ್ಟಿಕ್ ನಲ್ಲಿ ನಮಗಾಗಿ ಕಾಯುತ್ತ ಕುಳಿತಿದ್ದ..ನಾನು ಎದುರು ಸಿಕ್ಕಾಗ ನನಗೆ ಹೇಳಿದ್ದು...." ಇನ್ನು ೫ ನಿಮಿಷ ನೋಡ್ತಾ ಇದ್ದೆ..ಬರಲಿಲ್ಲ ಅಂದಿದ್ದರೆ 'ಎಂಜಾಯ್ ಯುವರ್ ಟ್ರಿಪ್' ಅಂತ ಮೆಸೇಜ್ ಮಾಡಿ ಮನೆಗೆ ಹೋಗ್ತಾ ಇದ್ದೆ.." ಸಿಟ್ಟಿನಿಂದ ಅವನ ಮುಖ ಕೆಂಪಾಗಿತ್ತು...!! ನಾನು, ಬನವಾಸಿ, ಅರವಿಂದ, ಸಂತು, ದೂದ್ ರಾಜಹಂಸ ಬಸ್ಸಿನಲ್ಲಿ ಬೆಂಗಳೂರು ಬಿಟ್ಟಾಗ ೧೨ ಗಂಟೆ. ನಿದ್ದೆ ಮಾಡಿ, ಹಾಸನ ತಲುಪಿದಾಗ ಬೆಳಗಿನ ಜಾವ ೪.೩೦. ಅಲ್ಲಿಂದ ಧರ್ಮಸ್ಥಳಕ್ಕೆ ಹೋಗುವ ಬಸ್ಸಿಗೆ "ದೋಣಿಗಲ್" ಗೆ ರಿಕ್ವೆಸ್ಟ್ ಸ್ಟಾಪ್ ಕೇಳಿ ದೋಣಿಗಲ್ಲು ತಲುಪಿದಾಗ ೬ ಗಂಟೆ ಆಗಿತ್ತು. ಅಲ್ಲಿನ ಮಲೆಯಾಳಿ ಅಂಗಡಿಯಲ್ಲಿ ಟೀ ಕುಡಿದು ನಮ್ಮ ಚಾರಣವನ್ನು ಆರಂಭ ಮಾಡಿದ್ವಿ.


ಮುಂಜಾನೆಯ ತಂಪಾದ ವಾತಾವರಣ ಮನಸ್ಸಿಗೆ ಹಿತವಾಗಿತ್ತು.. ತುಂಬಾ ದಿನದ ನಂತರದ ಚಾರಣ ಎಲ್ಲರಲ್ಲೂ ಉತ್ಸಾಹ ತಂದಿತ್ತು. ರೈಲು ಹಳಿಯನ್ನು ಸೇರಲು ಕಾಫಿ ತೋಟದ ನಡುವೆ ನಡೆದು ಹೋದೆವು. ಮುತ್ತು ಪೋಣಿಸಿದ ಹಾಗೆ ಕಾಣುವ ಕಾಫಿ ಹೂವು ನಮ್ಮ ನಡಿಗೆಯನ್ನ ಸ್ವಲ್ಪ ನಿಧಾನವಾಗಿಸಿತ್ತು.


ಸೂರ್ಯೋದಯದ ದೃಶ್ಯ..



ಸೂರ್ಯೋದಯದ ಸೊಬಗನ್ನು ಸವಿಯುತ್ತ, ಹಸಿರಿನ ಬದಿಯಲ್ಲಿ ಸಾಗುವ ರೈಲು ಹಳಿಯಲ್ಲಿ ನಡೆಯುವುದು ಚಾರಣದ ಮೊದಲ ಅನುಭವ. ಸುತ್ತಲೂ ಇರುವುದು ಚಾರ್ಮಾಡಿ ಘಟ್ಟ ಪ್ರದೇಶ. ಅಲ್ಲಿನ ನಡಿಗೆ ಮನಸ್ಸಿಗೆ ಹುರುಪು ತರುತ್ತದೆ. ಸ್ವಲ್ಪ ದೂರ ನಡೆದಾಗ ಸಿಕ್ಕಿದ್ದು ಮೊದಲ ಬ್ರಿಡ್ಜ್. ಸುಮಾರು ೫೦ ಅಡಿ ಆಳ.

ಅದನ್ನು ದಾಟುತ್ತಿದ್ದ ಹಾಗೆ ರೈಲಿನ ಶಬ್ದ ಕೇಳಿಸಿತು. ಹಿಂತಿರುಗಿ ನೋಡಿದರೆ ರೈಲು ಬ್ರಿಡ್ಜ್ ನ ಇನ್ನೊದು ತುದಿಯಲ್ಲಿ ಬರುತ್ತಾ ಇತ್ತು...!! ನಾವು ಸ್ವಲ್ಪ ನಿಧಾನ ಮಾಡಿದ್ರೆ, ಬ್ರಿಡ್ಜ್ ನ ಮಧ್ಯದಲ್ಲಿ ಇರುತ್ತಿದ್ವಿ..ಕೆಳಗೆ ಹಾರಿದರೆ ೫೦ ಅಡಿ ಆಳ...! ಸಕತ್ ತ್ರಿಲ್ಲಿಂಗು..ಅದನ್ನ ಅನುಭವಿಸಿಯೇ ತೀರಬೇಕು...ಇದು ಚಾರಣದ ಇನ್ನೊಂದು ಅನುಭವ.





ಜಲ್ಲಿ ಕಲ್ಲಿನ ಮಧ್ಯೆ ಭಾರದ ಬ್ಯಾಗನ್ನು ಹೊತ್ತು, ನಮ್ಮ ದೇಹ ತೂಕವನ್ನು ಬ್ಯಾಲೆನ್ಸ್ ಮಾಡಿಕೊಂಡು ನಡೆಯುವುದು ಮತ್ತೊಂದು ಅನುಭವ....! ೫ ಕಿ. ಮೀ. ನಡೆಯುವುದರಲ್ಲೇ ನಾವೆಲ್ಲ ಸುಸ್ತು...! ಅಲ್ಲಿಯವರೆಗೆ ಪ್ರಕೃತಿಯ ಮಧ್ಯೆ ನಮ್ಮನ್ನ ನಾವು ಮರೆತು ಬಿಟ್ಟಿದ್ವಿ...ಹೊಟ್ಟೆ ತನ್ನ ಇರುವಿಕೆಯನ್ನ ಹೇಳಿದಾಗ ನಮಗೆ ಸುಸ್ತಾಗಿದ್ದು ಅರಿವಿಗೆ ಬಂದಿದ್ದು...!ನಾವೆಲ್ಲ ಆಗಲೇ ಹಳಿಯನ್ನು ಬಿಟ್ಟು ಅದರ ಪಕ್ಕದಲ್ಲಿ ನಡೆಯಲು ಜಾಗ ಇದೆಯೋ ಅಂತ ಹುಡುಕುತ್ತ ಇದ್ವಿ..ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಹಳಿಯ ಪಕ್ಕದಲ್ಲೇ ನಡೆದಿದ್ದು...೯.೩೦ ಗಂಟೆಯಾ ಹೊತ್ತಿಗೆ ನಮಗೆ ಒಂದು ಹಳ್ಳ ಸಿಕ್ಕಿತು. ನೀರು ಕೂಡ ತುಂಬಾ ಶುದ್ಧವಾಗಿತ್ತು. ಅಲ್ಲಿಯೇ ಸ್ನಾನ ಮಾಡಿ, ಬೆಳಗಿನ ತಿಂಡಿ ತಿಂದ್ವಿ.

ಕಾಡಿನಿಂದ ಹರಿದು ಬರುವ ತಣ್ಣೀರಿನ ಸ್ನಾನದಿಂದ ಮನಸ್ಸು ಮತ್ತು ದೇಹ ಉಲ್ಲಾಸವಾಯಿತು. ಮುಂದಿನ ನಡಿಗೆಯನ್ನ ಉತ್ಸಾಹದಿಂದಲೇ ಮತ್ತೆ ಶುರುಮಾಡಿದ್ವಿ... ಅಲ್ಲಿಂದ ಮುಂದೆ ಇರುವುದೇ ನಡಿಗೆಯ ನಿಜವಾದ ಸಾಹಸ...!! ಸುಡು ಬಿಸಿಲು..! ಕಾದ ಜಲ್ಲಿ ಕಲ್ಲು..! ಒಟ್ಟು ೧೮ ಬ್ರಿಡ್ಜ್, ೧೭ ಸುರಂಗ..