ಸೂರ್ಯಾಸ್ತ ಸಮಯದಲ್ಲಿ ಹಿತವಾದ ಕಾಫೀ ಕುಡಿದು, ಸುಂದರ ದೃಶ್ಯವನ್ನು ಕಣ್ತುಂಬಿಕೊಂಡೆವು. ನೆನಪಿನಲ್ಲಿ ಉಳಿಯುವಂತ ಸುಂದರ ದಿನವನ್ನು ಕಳೆದು, ಹಾಡು ಕೇಕೆ ಹಾಕುತ್ತಾ ಬಸ್ಸಿನಲ್ಲಿ ಬೆಂಗಳೂರಿನತ್ತ ಹೊರಟೆವು.
ಪ್ರಪಂಚ ಎಂಬ ಸಾಗರದಲ್ಲಿ ನೀನೊಂದು ಪುಟ್ಟ ಜೀವ.... ನಿನ್ನನ್ನೇ ನಂಬಿದ ನನ್ನೀ ಜೀವಕ್ಕೆ ನೀನೇ ಪ್ರಪಂಚ...!!! ವಿಶಾಲ ಪ್ರಪಂಚದಲ್ಲಿ ನನಗೆ ನಾನೇ ಕಾಣೆಯಾದೆ ಅನ್ನಿಸಿದಾಗ,ಯಾಂತ್ರಿಕತೆಯ ಧಾವಂತದಲ್ಲಿ ಮುಳುಗಿದಾಗ,ನೆನಪಿಸಿಕೊಳ್ಳುವದೇ ಈ ಪುಟ್ಟ ಪ್ರಪಂಚ.
Wednesday, February 10, 2010
ಕಾವೇರಿ ನದಿಯ ತೀರದ ವಿಹಾರಧಾಮ - ಭೀಮೇಶ್ವರಿ
ಸೂರ್ಯಾಸ್ತ ಸಮಯದಲ್ಲಿ ಹಿತವಾದ ಕಾಫೀ ಕುಡಿದು, ಸುಂದರ ದೃಶ್ಯವನ್ನು ಕಣ್ತುಂಬಿಕೊಂಡೆವು. ನೆನಪಿನಲ್ಲಿ ಉಳಿಯುವಂತ ಸುಂದರ ದಿನವನ್ನು ಕಳೆದು, ಹಾಡು ಕೇಕೆ ಹಾಕುತ್ತಾ ಬಸ್ಸಿನಲ್ಲಿ ಬೆಂಗಳೂರಿನತ್ತ ಹೊರಟೆವು.
Tuesday, December 29, 2009
ಸುಂದರ ಸಾಗರ
ಸಾಗರದ ನಮ್ಮ ಮನೆಯಲ್ಲಿ ಕಾಫೀ ಕುಡಿದು, ಹತ್ತಿರದಲ್ಲೇ ಇರುವ ಕೆಳದಿ ದೇವಸ್ಥಾನ ದರ್ಶನಕ್ಕೆ ಹೋದೆವು. ಸುಮಾರು 500 ವರ್ಷ ಹಳೆಯ ಕಲ್ಲಿನ ಸುಂದರ ದೇವಾಲಯ. "ಕೆಳದಿ" ಇದು ಕೆಳದಿ ಅರಸರ ರಾಜಧಾನಿ. ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮ ಕೆಳದಿ ಸಾಮ್ರಾಜ್ಯವನ್ನು ಆಳಿದರು. ಕೆಳದಿ ದೇವಾಲಯ ಮುಂಭಾಗ ಮರದ ಬೃಹತ್ ಕಂಬ, ನಾಡಹೆಂಚಿನ ಅರಮನೆಯಂತಿದೆ.
ಸುಂದರ ಹುಲ್ಲು ಹಾಸಿನ ಹೂದೋಟವನ್ನು ದಾಟಿ ಒಳಗೆ ಬಂದರೆ ಕಲ್ಲಿನ ಕೆತ್ತನೆಯ ದೇವಾಲಯ ದೃಶ್ಯ ಲಭ್ಯ.
ರಾಮೇಶ್ವರ, ವೀರಭದ್ರ, ಪಾರ್ವತಿ ದೇವಾಲಯ ಒಳಗೊಂಡ ಕೆಳದಿ ಸಂಕೀರ್ಣವೂ ಹೊಯ್ಸಳ ಮತ್ತು ದ್ರಾವಿಡ ಶೈಲಿಯಲ್ಲಿದೆ. ಪಾರ್ವತಿ ದೇವಸ್ಥಾನದ ಮೇಲ್ಛಾವಣಿಯೂ ಮರದ ಅದ್ಭುತ ಕೆತ್ತನೆಯಿಂದ ಒಳಗೊಂಡಿದೆ.
ಹಾಗೆಯೇ ವೀರಭದ್ರ ದೇವಸ್ಥಾನವು ಕಲ್ಲಿನ ಕೆತ್ತನೆಯಿಂದ ಮನಸೂರೆಗೊಳಿಸುತ್ತದೆ. ಇಲ್ಲಿನ ಇನ್ನೊಂದು ವಿಶೇಷ ಎಂದರೆ, ಒಂದೇ ಕಲ್ಲಿನಲ್ಲಿ ಕೆತ್ತಿದ ಸಂಗೀತ ಕಂಬ. ಈ ಕಂಬವನ್ನು ಮೇಲಿನಿಂದ ಕೆಲವರೆಗೆ ತಟ್ಟಿದಾಗ ಸಪ್ತಸ್ವರ ಬರುತ್ತದೆ. ಪ್ರವಾಸಿಗರು ಕಲ್ಲಿನಲ್ಲಿ ಕುಟ್ಟಿ ಕುಟ್ಟಿ ಈ ಕಂಬ ಶಿಥಿಲವಾಗಿದೆ.
ಸುಮಾರು ೧೦೦ ಎಕರೆ ವಿಸ್ತೀರ್ಣದ ಕೆಳದಿ ಕೆರೆಯು ರಾಣಿ ಚೆನ್ನಮ್ಮಾಜಿ ಕಾಲದಲ್ಲಿ ಕಟ್ಟಲ್ಪಟ್ಟಿದ್ದು. ಮಾಲಿನ್ಯದಿಂದ ಮುಕ್ತವಾಗಿರುವ ಸುಂದರ ಕೆರೆಯ ಪರಿಸರ, ಮನಮೋಹಕ ಸೂರ್ಯಾಸ್ತ ದೃಶ್ಯ, ಸಂಜೆಯ ಸೊಬಗನ್ನು ಇಮ್ಮುಡಿಗೊಳಿಸುತ್ತದೆ.
ಇಕ್ಕೇರಿಯ ಅಘೊರೇಶ್ವರ ದೇವಸ್ಥಾನ :- ಸಾಗರದಿಂದ ೩ ಕೀ ಮೀ ದೂರದಲ್ಲಿರುವ ಇಕ್ಕೇರಿ ಕೇಳದಿ ನಾಯಕರ ರಾಜಧಾನಿ ಆಗಿತ್ತು. ಮಣ್ಣು ಮರದಿಂದ ಕಟ್ಟಲ್ಪಟ್ಟ ಅರಮನೆಯಲ್ಲಿ ಕೆಳದಿ ರಾಜರು ರಾಜ್ಯಭಾರ ಮಾಡಿದರು. ಟಿಪ್ಪು ಸುಲ್ತಾನ್ ನಿಂದ ಆಕ್ರಮಣಕ್ಕೆ ಒಳಗಾದ ಮೇಲೆ ಇಕ್ಕೇರಿಯ ಅರಮನೆ ನಾಶವಾಯಿತು. ಈಗ ಉಳಿದಿರುವುದು ಕಲ್ಲಿನ ಕೆತ್ತನೆಯ ಅಘೊರೇಶ್ವರ ದೇವಾಲಯ.
ಇದು ಕರ್ನಾಟಕದಲ್ಲೇ ಅತೀ ಎತ್ತರ ಮೇಲ್ಛಾವಣಿಯ ಶಿವನ ದೇವಸ್ಥಾನ. ಇಲ್ಲಿನ ಶಿಲ್ಪಕಲೆಯು ಹೊಯ್ಸಳ ಮತ್ತು ವಿಜಯನಗರ ಮಾದರಿಯಲ್ಲಿದೆ. ಒಂದೇ ಕಲ್ಲಿನ ಬೃಹತ್ ನಂದಿ ವಿಗ್ರಹ ಅತೀ ಸುಂದರವಾಗಿದೆ.
ದ್ವಾರಪಾಲಕರು, ಕಂಬದ ಕೆತ್ತನೆ, ವಿಗ್ರಹ ಎಲ್ಲವೂ ಮನಮೋಹಕ. ಎತ್ತರದ ೧೬ ಕೈಗಳ ಶಿವನ ವಿಗ್ರಹ ಇಲ್ಲಿ ಇತ್ತು ಹಾಗೂ ಬಿಜಾಪುರ ಸುಲ್ತಾನರ ಆಕ್ರಮಣದಿಂದ ಆ ಸುಂದರ ವಿಗ್ರಹ ನಾಶವಾಗಿದೆ ಎಂದು ಅರ್ಚಕರು ವಿವರಿಸಿದರು.
ದೇವಸ್ಥಾನದ ಆವರಣದಲ್ಲಿ ಸುಂದರ ಪರಿಸರ, ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗಿದೆ.
ಹೊಳೆಬಾಗಿಲು :- ಸಾಗರದಿಂದ ೩೦ ಕೀ. ಮೀ ದೂರದ ಶರಾವತಿ ಹಿನ್ನೀರಿನ ಪ್ರದೇಶ. ಸಾಗರ ಮತ್ತು ತುಮರಿ ಪ್ರಾಂತ್ಯಕ್ಕೆ ಹೊಳೆಬಾಗಿಲು ಸಂಪರ್ಕ ಕೊಂಡಿ, ಪ್ರವಾಸಿ ತಾಣ.
ಒಂದು ದಡದಿಂದ ಇನ್ನೊಂದು ದಡಕ್ಕೆ ಪ್ರಯಾಣಿಕರನ್ನು, ವಾಹನಗಳನ್ನು ಸಾಗಿಸಲು ಸರಕಾರ ಲಾಂಚ್ನ ವ್ಯವಸ್ಥೆ ಮಾಡಿದೆ. ಒಂದು ಸಲಕ್ಕೆ ಒಂದು ಬಸ್ಸು, ೪-೫ ಕಾರು, ಸುಮಾರು ೧೦೦ ಜನರನ್ನು ಇದು ಸಾಗಿಸುತ್ತದೆ. ೩ ಕೀ. ಮೀ ನೀರಲ್ಲಿ ಲಾಂಚಿನ ಮೇಲೆ ಪ್ರಯಾಣಿಸುವುದು ಖುಷಿಯ ಅನುಭವ.
ಆಚೆಯ ದಡದಿಂದ ಸುಮಾರು ೩ ಕೀ. ಮೀ ದೂರದಲ್ಲಿ ಪ್ರಸಿದ್ಧ ಸಿಗಂದುರೇಶ್ವರಿ ದೇವಾಲಯ ಇದೆ.
ಕಲುಷಿತ ಬೆಂಗಳೂರಿಂದ ದೂರ, ಸುಂದರ ಎರಡು ದಿನಗಳನ್ನು ಕಳೆದ ಖುಷಿ ಸಹೋದ್ಯೋಗಿಗಳಿಗೆ.
Sunday, September 13, 2009
ಮತ್ತೊಮ್ಮೆ ಮಂಚನಬೆಲೆಗೆ
ಮಂಚನಬೆಲೆಯ ಸುಂದರ ಪರಿಸರ ಸಹಜವಾಗಿಯೇ ಇಷ್ಟ ಆಯಿತು. ಕಳೆದ ಬಾರಿ ಇದ್ದಕ್ಕೂ ಜಾಸ್ತಿ ಪ್ರಮಾಣ ನೀರಿತ್ತು. ಇನ್ನೊಂದು ಮುಖ್ಯ ಅಂಶ ಎಂದರೆ ಸುತ್ತಲಿನ ಪರಿಸರ ಪ್ಲಾಸ್ಟಿಕ್ ಮುಕ್ತವಾಗಿತ್ತು...! ಪಕ್ಕದಲ್ಲಿಯೇ ಮಿಲಿಟರೀ ಕ್ಯಾಂಪ್ ಇರುವುದರಿಂದ ಹೆಚ್ಚಿನ ಗಲಾಟೆ ಇರಲಿಲ್ಲ. ಬೈಕ್ ನಿಲ್ಲಿಸಿ ಸುತ್ತಲೂ ಓಡಾಡಿದೆವು. ಚಿಕ್ಕದಾಗಿ ಚೊಕ್ಕವಾಗಿರುವ ಮಂಚಾನಬೆಲೆ ಪರಿಸರ ವಾರಾಂತ್ಯ ಕಳೆಯಲಿಕ್ಕೆ ಅತ್ಯಂತ ಸೂಕ್ತ.
ಮಂಚನಬೆಲೆ ಇಂದ ಹೊರಟು ರಾಮನಗರ ತಲುಪಿ ಅಲ್ಲಿಂದ ಮುಂದೆ ಮೈಸೂರು ಹೆದ್ದಾರಿ ಹಿಡಿದೆವು. ಕಾಮತ್ ಲೋಕರುಚಿ ನಲ್ಲಿ ಊಟಕ್ಕೆಂದು ನಿಲ್ಲಿಸಿದೆವು. ಕರಾವಳಿ ಮಾದರಿಯ ಅಕ್ಕಿರೊಟ್ಟಿ, ಮತ್ತು ಜೋಳದ ರೊಟ್ಟಿ, ಪತ್ರೊಡೇ, ರಾಗಿಮುದ್ದೆ ಊಟ ಗಡದ್ದಾಗಿ ಹೊಡೆದು, ಸಣ್ಣದಾಗಿ ಬೀಡಾ ಜಗಿದು ಸ್ವಲ್ಪ ಹೊತ್ತು ವಿರಮಿಸಿದೆವು. ಅಲ್ಲಿಂದ ಮುಂದೆ ೧೦ ಕೀ ಮೀ ಹೋದರೆ ಕಣ್ವ ಜಲಾಶಯ ಸಿಗುತ್ತದೆ. ಸ್ವಲ್ಪ ಮಟ್ಟಿಗೆ ಕಚ್ಚ ರಸ್ತೆಯಾದರೂ ಬೈಕ್ ಓಡಿಸಲು ಅಡ್ಡಿಯಿಲ್ಲ.
ಕಣ್ವ ಜಲಾಶಯದ ಬಗ್ಗೆ :ಕಣ್ವ ನದಿಗೆ ಅಡ್ಡಲಾಗಿ ೧೯೪೬ ರಲ್ಲಿ ಕಟ್ಟಲಾಯಿತು. ನೀರಾವರಿ ಮತ್ತು ಮೀನುಗಾರಿಕೆ, ತರಬೇತಿ ಇದರ ಮುಖ್ಯ ಉದ್ದೇಶ. ಇದು ಸುಮಾರು ೭೭೫ ಹೆಕ್ಟೇರು ಪ್ರದೇಶವನ್ನು ಆಕ್ರಮಿಸಿದೆ. ಕಣ್ವ ಋಷಿ ಈ ಪ್ರದೇಶದಲ್ಲಿ ತಪ್ಪಸ್ಸು ಮಾಡಿದ್ದರಿಂದ ಕಣ್ವ ನದಿ ಅಂತ ಹೆಸರು ಬಂತು. ಕಣ್ವ ನದಿಯು ಕಾವೇರಿ ನದಿಯ ಉಪನದಿ. ಸುಂದರ ಪ್ರವಾಸಿ ತಾಣ ಹಾಗೂ ಪಕ್ಷಿ ವೀಕ್ಷಕರ ತಾಣ.
ಸಂಜೆಯ ತಂಪಾದ ಗಾಳಿ, ಜನ ದಟ್ಟನೆ ಇಲ್ಲದ ಸುಂದರ ಕಣ್ವ ಜಲಾಶಯ, ನಮ್ಮಲ್ಲಿ ಹಳೆಯ ನೆನಪೆಲ್ಲವನ್ನು ಮತ್ತೆ ಮರಳುವಂತೆ ಮಾಡಿತ್ತು. ಮೊಗೆದಷ್ಟೂ ಮಾತನಾಡುವಷ್ಟು ವಿಷಯಗಳು ನಮ್ಮಲ್ಲಿ ಸುಳಿದಾಡಿದವು. ಎಷ್ಟೋ ಹೊತ್ತು ನಮ್ಮೆಲ್ಲ ಜಂಜಾಟವನ್ನು ಮರೆತು, ಹರಟೆ ನಗುವಿನಲ್ಲಿ ಮುಳುಗಿದ್ದೆವು.