Tuesday, April 14, 2009

ಗೇರುಸೊಪ್ಪ ಮತ್ತು ಜೋಗ ಪ್ರವಾಸ.

ಶನಿವಾರ ದಿನಾಂಕ ೨೧ ಜೂನ್ ೨೦೦೮ ರಂದು ಊರಿನ ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಇತ್ತು. ಅದರ ನಿಮಿತ್ತ ಬಂದ ಗೆಳೆಯರು ಬಡಿಸುವುದರಿಂದ ಹಿಡಿದು, ತೊಳೆದಿದ್ದ ಪಾತ್ರೆಯನ್ನು ಒರೆಸಿ, ಅವರವರ ಮನೆಗೆ ಸಾಗಿಸುವ ಎಲ್ಲ ಕೆಲಸಗಳನ್ನು ಮಾಡಿದ್ದರು. ಮರುದಿನ ಭಾನುವಾರ ಬೆಳಿಗ್ಗೆ ತಿಂಡಿ ಆದನಂತರ ಅರವಿಂದ ಜೋಗ ನೋಡಬೇಕೆಂದು ಹೇಳಿದ. ಜೋಗದಲ್ಲಿ ಇನ್ನೂ ನೀರು ಬಂದಿಲ್ಲ, ಬರೀ ಬಂಡೆಗಳು ಅಂತ ಅಪ್ಪ ಹೇಳಿದರು. ಆದರೂ ಸುಮ್ಮನೆ ಕೂರುವ ಜಾಯಮಾನ ನಮ್ಮದಲ್ಲ. ಏನಾದರೂ ಒಂದು ಸಲ ನೋಡಿಯೇ ಬಿಡಬೇಕೆಂದು ತೀರ್ಮಾನಿಸಿ ಮನೆಯಿಂದ ಹೊರಟಾಗ ೧೧ ಗಂಟೆ ಆಗಿತ್ತು. ನಾನು, ಅರವಿಂದ, ಕಿರಣ, ಸುಹಾಸ ಮತ್ತು ನಮ್ಮ ಕಾರು. ಜೋಗ ಹೋಗುವ ರಸ್ತೆ ಉತ್ತಮವಾಗಿದ್ದು, ಡ್ರೈವಿಂಗ್ ನಲ್ಲಿ ಸಕತ್ ಮಜ ಇತ್ತು.


"ಮಾವಿನಗುಂಡಿ" ಯ ಹತ್ತಿರ ರಸ್ತೆಯ ಪಕ್ಕದಲ್ಲೇ ಚಿಕ್ಕದಾದ ಜಲಧಾರೆ ಇದೆ. ಮಳೆಗಾಲದಲ್ಲಿ ಸುಂದರವಾಗಿದ್ದ ಈ ಜಲಧಾರೆ ಈಗ ನೀರಿಲ್ಲದೆ ಸೊರಗಿತ್ತು.


ಮಾವಿನಗುಂಡಿಯಲ್ಲಿ ಟೀ ಕುಡಿದು ಅಲ್ಲಿಂದ ಜೋಗಕ್ಕೆ ಹೋಗುವ ಪ್ಲಾನ್ ಇದ್ದಿದ್ದು...ಆದರೆ ಜೋಗದಲ್ಲಿ ನೀರು ಕಡಿಮೆ ಇದ್ದದ್ದು ಅಲ್ಲಿ ಹೆಚ್ಚಿನ ಸಮಯ ಕಳೆಯಲು ಯಾರಿಗೂ ಇಷ್ಟ ಇರಲಿಲ್ಲ. ಆದ್ದರಿಂದ ಗೇರುಸೊಪ್ಪ ಡ್ಯಾಮ್ ನೋಡಲು ಹೋಗುವುದೆಂದು ತೀರ್ಮಾನಿಸಿ, ಕಾರನ್ನು ಅತ್ತ ತಿರುಗಿಸಿದೆ. ನುಣುಪಾದ ರಸ್ತೆ, ಇಕ್ಕೆಲಗಳಲ್ಲಿ ಹಸಿರು ಮರಗಳ ಘಟ್ಟ ಪ್ರದೇಶ, ದೂರದಲ್ಲಿ ಕಾಣುತಿದ್ದ ಜಲಧಾರೆ ಏಲ್ಲವೂ ಹೊಸ ಉತ್ಸಾಹ ತಂದಿತ್ತು.


ರಸ್ತೆಯ ಪಕ್ಕದಲ್ಲಿ ಹರಿಯುತಿದ್ದ ಸಣ್ಣ ತೊರೆಯ ಬಳಿ ಕಾರು ನಿಲ್ಲಿಸಿ, ತಣ್ಣಗಿನ ನೀರಲ್ಲಿ ಸ್ವಲ್ಪ ಹೊತ್ತು ಆಟ ಆಡಿದೆವು. ಕಾಡಿನ ಒಳಗೆ ಸ್ವಲ್ಪ ದೂರ ನಡೆದೆವು. ಚಿಕ್ಕ ಚಿಕ್ಕ ನೀರಿನ ತೊರೆಗಳು, ಬಂಡೆಯ ನಡುವೆ ಹರಿದು ಬರುತ್ತಿದ್ದ ನೀರು ಏಲ್ಲವೂ ಮನಸ್ಸಿಗೆ ಹಿತವಾಗಿತ್ತು.



ಶರಾವತಿ ಕಣಿವೆ ದೃಶ್ಯವಂತೂ ಅದ್ಭುತವಾಗಿತ್ತು. ಅಪಾರ ವನ್ಯ ಸಂಪತ್ತನ್ನೂ, ಹಚ್ಚ ಹಸಿರಿನ ದಟ್ಟ ಕಾಡನ್ನು ಶರಾವತಿ ನದಿಯು ಸೀಳಿಕೊಂಡು ಹರಿಯುತ್ತಿದೆ. ೧೨ ವರ್ಷಗಳ ಹಿಂದೆ ಇಲ್ಲಿಗೆ ಒಮ್ಮೆ ಬಂದಿದ್ದು ನನಗೆ ನೆನಪಿದೆ. ಆಗ ಶರಾವತಿ ನದಿಯು ಆಳದಲ್ಲೆಲ್ಲೋ ಹರಿಯುತ್ತಿರುವಂತೆ ತೋರುತ್ತಿತ್ತು. ಆಗಿನ್ನೂ ಗೇರುಸೊಪ್ಪ ಡ್ಯಾಮ್ ಕಟ್ಟಿರಲಿಲ್ಲ. ಈ ಪ್ರದೇಶಕ್ಕೆ "ಕತ್ಲೆಕಾನು" ಅಂತಲೂ ಕರೆಯುತ್ತಾರೆ. ಸೂರ್ಯನ ಕಿರಣ ಇಲ್ಲಿನ ಕಾಡಿನ ನೆಲಕ್ಕೆ ತಾಗದಷ್ಟು ದಟ್ಟವಾದ ಕಾಡಿದೆ. ಹಾಗಾಗಿ ಈ ಹೆಸರು. ಎಷ್ಟೊಂದು ಬಗೆಯ ವನ್ಯಜೀವಿಗಳು, ಔಷಧಿ ಸಸ್ಯಗಳು.. ಇಲ್ಲಿನ ದಟ್ಟ ಕಾಡಿನ ಸೌಂದರ್ಯವನ್ನು ನೋಡಿಯೇ ತೀರಬೇಕು. " Western Ghats are always refreshing..."




ಗೇರುಸೊಪ್ಪ ಡ್ಯಾಮ್ ನೋಡಲು ಅನುಮತಿ ಸಿಗದ ಕಾರಣ, ಅಲ್ಲಿಂದ ಹೊರಟು ಗೇರುಸೊಪ್ಪ ಊರಿನ ಕೊನೆಯಲ್ಲಿ ಹರಿಯುತ್ತಿದ್ದ ಶರಾವತಿ ನದಿಯ ಬಳಿಗೆ ಬಂದೆವು. ನದಿಯ ಈಚೆ ದಡದಲ್ಲಿ ಕಾರನ್ನು ನಿಲ್ಲಿಸಿ, ನೀರಲ್ಲಿ ಸುಮಾರು ಹೊತ್ತು ಆಟ ಆಡಿದೆವು. ಇಲ್ಲಿ ನೀರಿನ ಹರಿವು ರಭಸವಾಗಿದ್ದು, ನೀರಿನ ಆಳವು ಹೆಚ್ಚಿದೆ. ಸಹಜ ಸೌಂದರ್ಯ, ಸುತ್ತಲೂ ನೀರು, ತೆಂಗಿನ ಮರಗಳು, ದ್ವೀಪದಂತೆ ಅನ್ನಿಸುವ ಗೇರುಸೊಪ್ಪ ಬೇಗನೇ ಇಷ್ಟವಾಗುತ್ತದೆ. ಒಂದು ದಿನದ ಫ್ಯಾಮಿಲಿ ಪ್ರವಾಸಕ್ಕೆ ಕೂಡ ಯೋಗ್ಯವಾದ ಜಾಗ.




ನದಿಯ ಆಚೆ ದಡದಲ್ಲಿ " ಲಕ್ಷ್ಮೀ ವೆಂಕಟರಮಣ ಸ್ವಾಮೀ" ದೇವಸ್ಥಾನ ಇದೆ. ಅಲ್ಲಿಗೆ ಹೋಗಲು ನದಿಯನ್ನು ದೋಣಿಯ ಸಹಾಯದಿಂದ ದಾಟಬೇಕು. ದೋಣಿ ನಡೆಸುವವರು ಹಗಲು ಮತ್ತು ರಾತ್ರಿ ಕೂಡ ಪಾಳಿಯ ಪ್ರಕಾರ ಪ್ರಯಾಣಿಕರ ಸೇವೆಗೆ ಸಿದ್ಧರಿರುತ್ತಾರೆ. ಒಬ್ಬರಿಗೆ ಕೇವಲ ೧ ರೂಪಾಯಿ...! ಹಾಯಿ ದೋಣಿಯಲ್ಲಿ ನೀರಿನ ಸೆಳೆತಕ್ಕೆ ತೂಗುತ್ತ, ನದಿಯ ನೀರನ್ನು ಕೈಯಲ್ಲಿ ಚಿಮುಕಿಸುತ್ತಾ ಸಾಗುವಾಗ ಮನಸ್ಸಿಗೆ ನೆನಪಾಗುವುದು ಅದೇ ಹಾಡು...."ದೋಣಿ ಸಾಗಲಿ...ಮುಂದೆ ಹೋಗಲಿ"...!!



ಕಲ್ಲಿನದಲ್ಲದಿದ್ದರೂ ಸ್ವಲ್ಪ ಹಳೆಯ ಕಾಲದ ದೇವಸ್ಥಾನ, ಅರ್ಚಕರ ಆತಿಥ್ಯ ಮನಸ್ಸಿಗೆ ಹಿಡಿಸುತ್ತದೆ. ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ, ವಾಪಾಸು ನದಿಯ ದಡಕ್ಕೆ ಬಂದೆವು. ದೋಣಿಯು ಆಚೆ ದಡದಲ್ಲಿದ್ದರಿಂದ ಸ್ವಲ್ಪ ಹೊತ್ತು ಕಾಯಬೇಕಾಯಿತು. ಪ್ರಸಿದ್ಧ " ಬಂಗಾರಮಕ್ಕಿ ವೀರಾಂಜನೇಯ ಸ್ವಾಮಿ" ದೇವಸ್ಥಾನ ಇಲ್ಲಿಯೇ ಇರುವುದು. ಘಟ್ಟ ಪ್ರದೇಶದಲ್ಲಿ ದೂರದಲ್ಲಿ ಸುಂದರ ಜಲಪಾತ ಕಾಣಿಸುತ್ತದೆ. ಸಮೀಪಕ್ಕೆ ಹೋಗಲು ಸಾಧ್ಯವಿಲ್ಲದ್ದರಿಂದ ದೂರದಿಂದಲೇ ನೋಡಿ ಖುಷಿ ಪಡಬೇಕಾಯಿತು.




ಅಲ್ಲಿಂದ ಹೊರಟು ಜೋಗ ಜಲಪಾತ ವೀಕ್ಷಣೆಗೆ ಬಂದೆವು. ಜೋಗ ಜಲಪಾತ ನೀರಿಲ್ಲದೆ ಸೊರಗಿತ್ತು. ಬರಿಯ ಬಂಡೆಗಳು. ಬ್ರಿಟಿಷ್ ಬಂಗ್ಲೆ ಯ ಕಡೆ ಹೋಗಿ ಜಲಪಾತದ ನೋಡಿದೆವು. ತಣ್ಣನೆಯ ಗಾಳಿ, ಆಗಾಗ ಬರುತ್ತಿದ್ದ ತುಂತುರು ಮಳೆ, "ಮುಂಗಾರುಮಳೆ" ದೃಶ್ಯವನ್ನು ನೆನಪಿಸಿತ್ತು. ಇಲ್ಲಿಂದ ಜಲಪಾತದ ವೀಕ್ಷಣೆ ಅದ್ಭುತವೂ ಅಷ್ಟೇ ಅಪಾಯವೂ ಆಗಿದೆ. ರಾಜ ಕವಲಿನ ಮೇಲ್ಭಾಗ ಬಗ್ಗಿ ಪ್ರಪಾತ ವೀಕ್ಷಿಸುವುದು ಅದ್ಭುತ ಅನುಭವ.



ನಿರಾಸೆಗೊಂಡ ಅರವಿಂದನಿಗೆ ಮಳೆಗಾಲದಲ್ಲಿ ಮತ್ತೊಮ್ಮೆ ವೈಭವದ ಜೋಗವನ್ನು ನೋಡಲು ಬರೋಣವೆಂದು ಭರವಸೆ ನೀಡಿದೆವು.




"ರಾಜ ಕಲ್ಲು" ವ್ಯೂ ಪಾಯಿಂಟ್ ಗೆ ಬಂದು ಸ್ವಲ್ಪ ಹೊತ್ತು ವಿರಮಿಸಿ, ಕುರುಕಲು ತಿನಿಸು ತಿಂದು, ವಾಪಾಸು ಮನೆಗೆ ಬಂದಾಗ ಸಂಜೆ ೫ ಗಂಟೆ ಆಗಿತ್ತು.
ಜೋಗದ ಹೋಟೆಲೊಂದರ ಮುಂದೆ ಅರಳಿದ್ದ ಸೂರ್ಯಕಾಂತಿ ಹೂ.

8 comments:

ರಾಜೇಶ್ ನಾಯ್ಕ said...

ಒಳ್ಳೆಯ ಟೈಮ್ ಪಾಸ್ ಪ್ರವಾಸ. ಗೇರುಸೊಪ್ಪಾದ ಶರಾವತಿ ಚಿತ್ರಗಳು ಗುಡ್.

ಪಾಚು-ಪ್ರಪಂಚ said...

ರಾಜೇಶ್ ಅವರೇ,

ನಿಜ, ಹಾಗೆ ಸುಮ್ಮನೆ ಹೋಗಿ ಬರಲು ಸೂಕ್ತವಾದ, ಸುಂದರ ಸ್ಥಳ.
ಫೋಟೋ ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್.

-ಪ್ರಶಾಂತ್ ಭಟ್

shivu.k said...

ಪ್ರಶಾಂತ್ ಭಟ್,

ಜೋಗ್ ಫೋಟೊಗಳು ಮತ್ತು ಅದರ ವಿವರಣೆ ತುಂಬಾ ಚೆನ್ನಾಗಿದೆ...
ನಾನು ಹೋಗಿ ತುಂಬಾ ದಿನವಾಗಿತ್ತು...ಮುಂದಿನ ಮುಂಗಾರಿನ ಸಮಯದಲ್ಲಿ ಹೋಗುವ ಮನಸ್ಸಾಗುತ್ತಿದೆ..

ಧನ್ಯವಾದಗಳು..

Ittigecement said...

ಪ್ರಶಾಂತ್...

ಸಕತ್ತಾಗಿದೆ......

ಜಲಪಾತದ ಮೇಲಿಂದ ಫೋಟೊ ನೋಡು ಜುಮ್ ಅನಿಸಿತು...!

ಚಂದದ ಪ್ರವಾಸ ಕಥನ..
ಸುಂದರ ಫೋಟೋಗಳಿಗೆ

ಅಭಿನಂದನೆಗಳು...

ಪಾಚು-ಪ್ರಪಂಚ said...

ಶಿವೂ ಅವರೇ,

ನಾನು ಪ್ರತೀ ವರ್ಷ ಜೋಗಕ್ಕೆ ಹೋಗುತ್ತೇನೆ. ಮುಂಗಾರಿನಲ್ಲಿ ಜೋಗವನ್ನು ನೋಡಲೇಬೇಕು. ಅದರ ಫೋಟೋವನ್ನು ಮುಂದಿನ ಬ್ಲಾಗ್ ನಲ್ಲಿ ಬರೆಯುತ್ತೇನೆ.
ಈ ವರ್ಷ ಮುಂಗಾರಿನಲ್ಲಿ ಬನ್ನಿ, ಜೋಗ, ಉಂಚಳ್ಳಿ, ಬೆಳ್ಳುಳ್ಳಿ ಎಲ್ಲ ಜಲಪಾತಗಳಿಗೆ ಭೇಟಿ ನೀಡಬಹುದು.
ಲೇಖನ ಮತ್ತು ಫೋಟೋ ಮೆಚ್ಚಿದ್ದಕ್ಕೆ ಧನ್ಯವಾದಗಳು

-ಪ್ರಶಾಂತ್ ಭಟ್

ಪಾಚು-ಪ್ರಪಂಚ said...

ಪ್ರಕಾಶಣ್ಣ,

ಜೋಗದಲ್ಲಿ ಪ್ರತಿಯೊಂದು ವ್ಯೂ ಕೂಡ ಬೇರೆ ಬೇರೆ ಅನುಭವ ಕೊಡುತ್ತೆ. ಮುಂಗಾರುಮಳೆ ಚಿತ್ರದ ನಂತರ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಜಾಸ್ತಿ....ಬ್ರಿಟಿಷ್ ಬಂಗ್ಲೆ ಕಡೆಯಿಂದ ಬಗ್ಗಿ ಸೀದಾ ಪ್ರಪಾತವನ್ನು ನೋಡುವಾಗ ನಿಜಕ್ಕೂ ಜುಂ ಎನ್ನಿಸುತ್ತೆ. ಜೋಗದಲ್ಲಿ ಮುಂಗಾರುಮಳೆ ಸ್ಪಾಟ್ ತೋರಿಸುವ ಗೈಡ್ ಗಳು ತಯಾರಾಗಿದ್ದಾರೆ ಈಗ...!!!

ಪ್ರವಾಸ ಕಥನ, ಫೋಟೋ ಇಷ್ಟ ಆಗಿದ್ದಕ್ಕೆ ಪುಟ್ಟ ಥ್ಯಾಂಕ್ಸ್...!!

ಪ್ರಶಾಂತ್ ಭಟ್

ಮಲ್ಲಿಕಾರ್ಜುನ.ಡಿ.ಜಿ. said...

ಅದ್ಭುತ ದೃಶ್ಯಾವಳಿಗಳನ್ನು ನೋಡಿ ನನ್ನ ಮನಸ್ಸೂ ಸೂರ್ಯಕಾಂತಿಯಂತೆ ಅರಳಿತು. ಭೂದೃಶ್ಯಗಳು, ಫಾಲ್ಸ್, ಎಲ್ಲಾ ಅದ್ಭುತ. ನಿಮ್ಮ ಚಿತ್ರದ ಮೂಲಕ ನಮ್ಮನ್ನೂ ಸುತ್ತಾಡಿಸಿದ್ದಕ್ಕೆ ಧನ್ಯವಾದಗಳು.

ಪಾಚು-ಪ್ರಪಂಚ said...

ಮಲ್ಲಿಕಾರ್ಜುನ್ ಅವರೇ...

ಎಷ್ಟು ಚಂದದ ಪ್ರತಿಕ್ರಿಯೆಗೆ...!! ತುಂಬಾ ಇಷ್ಟ ಆಯಿತು...!!!
ಧನ್ಯವಾದಗಳು...!!.

-ಪ್ರಶಾಂತ್ ಭಟ್