ಇಲ್ಲಿನ ಬೆಟ್ಟದ ರಸ್ತೆಯಲ್ಲಿ ಬೈಕು ಓಡಿಸುವುದು ಒಂದು ಅದ್ಭುತ ಅನುಭವ. ತುಂತುರು ಮಳೆಯಿಂದ ವಾತಾವರಣ ಕೂಡ ತಂಪಾಗಿತ್ತು. ನಾನು "ಶಿರಕವಚ"ವನ್ನು () ತೆಗೆದು ತಂಪಾದ ಗಾಳಿ, ಸುಂದರ ದೃಶ್ಯಗಳು, ಅಂಕು-ಡೊಂಕಾದ ರಸ್ತೆಯಲ್ಲಿ ಬೈಕ್ ಓಡಿಸುವ ಮಜವನ್ನು ಅನುಭವಿಸುತ್ತಿದ್ದೆ.
ಮಾರ್ಗ ಮಧ್ಯೆ ಎದುರಾಗುವ ಸುಂದರ ಸೇವಂತಿಗೆ ಹೂದೋಟ, ದ್ರಾಕ್ಷಿ, ದಾಳಿಂಬೆ ಹಣ್ಣಿನ ತೋಟಗಳು ಮನಸೂರೆಗೊಂಡವು. ಚಂದನೆಯ ಸೇವಂತಿಗೆ ತೋಟವಂತೂ ನಮ್ಮೆಲ್ಲರನ್ನು ಬಹಳವಾಗಿ ಆಕರ್ಷಿಸಿತ್ತು. ನಾವೆಲ್ಲ ಬೇರೆಯದೇ ಲೋಕದಲ್ಲಿದ್ದ ಹಾಗೆ ಅನ್ನಿಸಿತ್ತು. ತೋಟದಲ್ಲಿ ನಿಂತು ಫೋಟೋ ತೆಗೆಸಿಕೊಂಡು, ದ್ರಾಕ್ಷಿ ತೋಟದಲ್ಲಿ ತಾಜಾ ಹಣ್ಣುಗಳನ್ನು ತಿಂದೆವು.
ನಂದಿ ಬೆಟ್ಟ ಸದಾ ಕಾಲ ಪ್ರವಾಸಿಗರಿಂದ ತುಂಬಿರುತ್ತದೆ. ಸರ್ವ ಋತುಗಳೂ ಇಲ್ಲಿಗೆ ಭೇಟಿ ನೀಡಲು ಯೋಗ್ಯ. ಸಮುದ್ರ ಮಟ್ಟದಿಂದ ಸುಮಾರು ೧೫೦೦ ಮೀ ಎತ್ತರದಲ್ಲಿರುವ ನಂದಿ ಬೆಟ್ಟಕ್ಕೆ ನಂದಿ ದುರ್ಗ ಅಂತಲೂ ಹೆಸರಿದೆ. ಈ ಹೆಸರಿಗೆ ಕಾರಣ ಇಲ್ಲಿ ಬಂಡೆಗಳ ನಡುವೆ ಕಟ್ಟಲಾದ ಕೋಟೆ. ಅರ್ಕಾವತಿ ಮತ್ತು ಪಾಲಾರ್ ನದಿಗಳ ಉಗಮ ಸ್ಥಾನ.ಟಿಪ್ಪ ಸುಲ್ತಾನನು ತನ್ನ ಬೇಸಿಗೆಯ ದಿನಗಳನ್ನು ಕಳೆಯಲು ಇಲ್ಲಿಗೆ ಬರುತ್ತಿದ್ದ ಎಂದು ಹೇಳಲಾಗುತ್ತದೆ. ಟಿಪ್ಪು ಇಲ್ಲಿ ಅರಮನೆ ಮತ್ತು ಕೋಟೆ ಕಟ್ಟಿಸಿದ. ನಂತರ ಬ್ರಿಟಿಷರ ಕಾಲದಲ್ಲಿ ಇಲ್ಲಿ ಉದ್ಯಾನವನ ಮತ್ತು ಬಂಗಲೆಯನ್ನು ಕಟ್ಟಿಸಲಾಯಿತು. ಇಂದು ಇದೇ ಬಂಗಲೆ ಇಂದು ಸರಕಾರದ ವಸತಿ ಗೃಹವಾಗಿದೆ.
ಚೋಳ ಶೈಲಿಯ ಯೋಗ ನಂದೀಶ್ವರ ದೇವಸ್ಥಾನ, ಮಂಟಪ, ನಂದಿ, ನೆಹರು ಬಂಗಲೆ ಟಿಪ್ಪು ಡ್ರಾಪ್ ಇಲ್ಲಿನ ವಿಶೇಷತೆಗಳು.ಟಿಪ್ಪು ಸುಲ್ತಾನನು, ೬೦೦ ಅಡಿ ಎತ್ತರದಲ್ಲಿರುವ ಅಪಾಯ ಕಣಿವೆಯಿಂದ ಸೆರೆಹಿಡಿದ ಸೈನಿಕರನ್ನು ಕೆಳಕ್ಕೆ ತಳ್ಳಿ ಕೊಲ್ಲಿಸುತಿದ್ದ..ಅದಕ್ಕೆ ಟಿಪ್ಪು ಡ್ರಾಪ್ ಅಂತ ಹೆಸರು. ಕರ್ನಾಟಕ ತೋಟಗಾರಿಕೆ ಇಲಾಖೆಯು ಸುಂದರವಾದ ಉದ್ಯಾನವನ ಮತ್ತು ಮಕ್ಕಳ ಆಟದ ಮೈದಾನವನ್ನು ನಿರ್ಮಿಸಿದೆ.
3 comments:
ನಂದಿಬೆಟ್ಟ ನಮ್ಮೂರಿಗೆ ಹತ್ತಿರದಲ್ಲಿದೆ. ನೀವು ನಂದಿಬೆಟ್ಟದ ಮೇಲಿಂದ ತೆಗೆದಿರುವ ಇನ್ನೊಂದು ಬೆಟ್ಟದ ಹೆಸರು ಕಳವಾರಬೆಟ್ಟ(ಸ್ಕಂದಗಿರಿ). ನಿಮ್ಮ ಬ್ಲಾಗ್ ಪ್ರವಾಸಿಗರಿಗೆ, ನಿಸರ್ಗಪ್ರಿಯರಿಗೆ ಕೈಪಿಡಿಯಿದ್ದಂತೆ. ನಾವೂ ಬ್ಲಾಗ್ ಶೃಂಗಸಭೆ ನಡೆಸಿದ್ದೆವು ನಂದಿಬೆಟ್ಟದಲ್ಲಿ!!(http://dgmalliphotos.blogspot.com/2008_11_01_archive.html)
ಪ್ರಶಾಂತ ಭಟ್,
ನಂದಿ ಬೆಟ್ಟದ ನಿಮ್ಮ ಪ್ರವಾಸದ ವಿವರ ಮತ್ತು ಫೋಟೋಗಳು ತುಂಬಾ ಚೆನ್ನಾಗಿವೆ...ಬೆಳಿಗ್ಗೆ ಹೊರಟು ಸಂಜೆ ಹೊರಟು ಬಂದುಬಿಟ್ಟಿದೀರಿ....ಅಲ್ಲಿ ಒಂದು ರಾತ್ರಿ ಉಳಿದು ರಾತ್ರಿಯ ಸೊಬಗು ಮತ್ತು ಮುಂಜಾವಿನ ತಂಪನ್ನು ಅನುಭವಿಸಬೇಕು....
ನಾವು ಕಳೆದ ಆಕ್ಟೋಬರನಲ್ಲಿ ಅಲ್ಲಿಗೇ ಹೋಗಿದ್ದೇವು. ಅದ್ರ ಬಗ್ಗೆ ಬ್ಲಾಗಿನಲ್ಲಿ ಬರೆದಿದ್ದೇನೆ...ಸಾದ್ಯವಾದರೆ ನೋಡಿ...
http://chaayakannadi.blogspot.com/2008/11/blog-post_25.html
ಧನ್ಯವಾದಗಳು..
ಮಲ್ಲಿಕಾರ್ಜುನ್ / ಶಿವೂ ಅವರೇ,
ನಿಮ್ಮ ಬ್ಲಾಗ್ ನಲ್ಲಿ ನಂದಿ ಬೆಟ್ಟದ ಬಗ್ಗೆ ಓದಿದೆ..ತುಂಬಾ ಚೆನ್ನಾಗಿದೆ. ನಂದಿ ಬೆಟ್ಟದಲ್ಲಿ ಅಷ್ಟು ಸುಂದರ ಮುಂಜಾನೆ ಇರುತ್ತದೆಂದು ತಿಳಿದಿರಲಿಲ್ಲ..ಮುಂದೆಂದಾದರೂ ಪ್ಲಾನ್ ಮಾಡುತ್ತೇನೆ.
ನಿಮ್ಮ "ಬ್ಲಾಗ್ ಶೃಂಗಸಭೆ"...ಹ್ಹ ಹ್ಹ..ಸಕತ್ತಾಗಿದೆ..!
ಸುಂದರ ಪ್ರತಿಕ್ರಿಯೆಗೆ ಧನ್ಯವಾದ..
Post a Comment