Monday, May 24, 2010

ವಾರಾಂತ್ಯಕ್ಕೆ ವಯನಾಡು

ತುಂಬಾ ದಿನಗಳ ನಂತರ ಬ್ಲಾಗ್ ಕಡೆಗೆ ತಲೆ ಹಾಕಿದ್ದೇನೆ, ಆಫೀಸ್ ಕೆಲಸ, ಗೆಳೆಯರ ಮದುವೆ, ಅಣ್ಣನ ಮಗಳ ನಿಶ್ಚಿತಾರ್ತ, ನೆಂಟರಿಷ್ಟರ ಮನೆ ಓಡಾಟ, ಅದು ಇದು ಅಂತಾನೆ ದಿನಗಳು ಕಳೆದು ಹೋದವು. ವರ್ಷದ ಆರಂಭದಲ್ಲಿ ಯೋಜಿಸಿದಂತೆ ತಿಂಗಳಿಗೆ ಕಡಿಮೆ ಎಂದರೂ ಒಂದಾದರೂ ಚಾರಣ ಮಾಡಬೇಕು ಅನ್ನುವ ಬಯಕೆ ಕಳೆದ ಮೂರು ತಿಂಗಳಿಂದ ಹಾಗೆಯೇ ಉಳಿದಿದೆ. ಪ್ರತೀ ವಾರಾಂತ್ಯವು ಏನಾದರು ಕೆಲಸ ನಿಗದಿಯಾಗಿರುತ್ತದೆ...! ಕಳೆದೊಂದು ವಾರದಿಂದ ಕೆಲಸದ ಒತ್ತಡ ಸ್ವಲ್ಪ ಕಡಿಮೆ ಆದಂತಿದೆ...! ಬ್ಲಾಗ್ ಕಡೆಗೆ ತಲೆ ಹಾಕಿ ನೆಮ್ಮದಿಯಾಗಿ ಎಲ್ಲರ ಪೋಸ್ಟುಗಳನ್ನು ಓದಲು ಸಾಧ್ಯವಾಗಿದೆ...! ಬೆಂಗಳೂರಿನಲ್ಲಿ ಕಳೆದೆರಡು ದಿನದಿಂದ ನಿರಂತರ ಮಳೆಯಾಗುತ್ತಿದೆ. ಹವಾಮಾನ, ತಂಪಾದ ವಾತಾವರಣ ಮತ್ತೆ ತಿರುಗಾಟಕ್ಕೆ ಹುರುಪು ನೀಡುತ್ತಿದೆ. ಹಾಗೆಯೇ ಹಿಂದಿನ ಪ್ರವಾಸದ ಅನುಭವ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಪ್ರೋತ್ಸಾಹ ಎಂದಿನಂತೆಯೇ ಇರಲಿ.

ಈ ವರ್ಷ ಬೇಸಿಗೆಯಲ್ಲಿ "ನಮ್ಮ ಬೆಂಗಳೂರು" ಅತೀ ಹೆಚ್ಚಿನ ಬಿಸಿಲು, ಸೆಖೆಗೆ ಬೆಂಡಾಗಿದೆ. ಈ ಬೇಸಿಗೆಯ ದಿನಗಳಲ್ಲಿ ವಾರಾಂತ್ಯ ಕಳೆಯುವುದು ಸ್ವಲ್ಪ ಕಷ್ಟ. ಹೊರಗಡೆ ಸುತ್ತಾಡಲು ಮನಸ್ಸು ಬಾರದು, ಮನೆಯೊಳಗಿದ್ದರೆ ತಾಳಲಾರದ ಸೆಖೆ, ಕರೆಂಟು ಕೂಡ ಇರುವುದಿಲ್ಲ. ಇಂತಹ ದಿನಗಳಲ್ಲಿ ಜಲಪಾತಕ್ಕೆ ಮೈಯೊಡ್ಡಿ ನಿಂತು ದಿನವಿಡೀ ಕಳೆಯುವುದು ಸ್ವರ್ಗದಷ್ಟು ಸುಖ. ಇಂತಹುದೇ ಆಲೋಚನೆಗಳೊಂದಿಗೆ ಕೇರಳದ 'ವಯನಾಡ್' ನತ್ತ ಮಾರ್ಚ್ ೧೩ ಬೆಳಗಿನ ಜಾವ ಸುಮಾರು ೬ ಗಂಟೆಯ ವೇಳೆ ಅರವಿಂದನ ಹೊಚ್ಚ ಹೊಸ ಸ್ವಿಫ್ಟ್ ಕಾರಿನಲ್ಲಿ ಹೊರಟೆವು. ದೂರದ ಪ್ರಯಾಣವು ಅಲ್ಲದ, ರಸ್ತೆ ಸಂಪರ್ಕವು ಉತ್ತಮವಾಗಿರುವ ವಯನಾಡ್ ವಾರಾಂತ್ಯಕ್ಕೆ ಅತೀ ಸೂಕ್ತವಾದ ಸ್ಥಳ.

ವಯನಾಡ್ ಬಗ್ಗೆ ಒಂದಿಷ್ಟು :
ಕೇರಳ ರಾಜ್ಯದ ಉತ್ತರಕ್ಕಿದೆ ವಯನಾಡ್ ಜಿಲ್ಲೆ. ಮಲೆಯಾಳಂ ನಲ್ಲಿ "ವಯಲ್(ಅಕ್ಕಿ)" + "ನಾಡ್(ಪ್ರದೇಶ)", ಅಕ್ಕಿಯ ತವರೂರು ಎಂದರ್ಥ. ಪಶ್ಚಿಮ ಘಟ್ಟಗಳ ಸಾಲಿನ ತಪ್ಪಲಿನಲ್ಲಿ ಈ ಸುಂದರ ನಾಡಿದೆ. ಇಲ್ಲಿನ ಜಲಪಾತಗಳು, ಕಣಿವೆ, ಬೆಟ್ಟಗುಡ್ಡಗಳು, ಹಸಿರು ಕಾನನ ಎಲ್ಲವು ವಯನಾಡನ್ನು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಿದೆ. ಕಾಫಿ ಮತ್ತು ಟೀ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ. ಇಲ್ಲಿ ಕಾಫಿ ಮತ್ತು ಟೀ ಎಸ್ಟೇಟ್ ಗಳನ್ನೂ ಅಕ್ಕ-ಪಕ್ಕದಲ್ಲಿಯೇ ಕಾಣಬಹುದು. ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳೆಂದರೆ ಎಡಕಲ್ಲು ಗುಡ್ಡ, ಕುರ್ವ ದ್ವೀಪ, ದೇವಸ್ಥಾನಗಳು, ಬಾಣಸುರ ಆಣೆಕಟ್ಟು, ಮಾತುಂಗ & ವಯನಾಡ್ ಸಂರಕ್ಷಿತ ಅರಣ್ಯ, ಚಂಬ್ರ ಗುಡ್ಡ ಮತ್ತು ಇನ್ನು ಅನೇಕ..!

ಎಂದಿನಂತೆ ಮೈಸೂರು ರಸ್ತೆಯ ಕಾಮತ್ ಹೋಟೆಲಿನಲ್ಲಿ ರುಚಿಯಾದ ಉಪಹಾರ ಮುಗಿಸಿದೆವು. ಮೈಸೂರು - ನಂಜನಗೂಡು - ಗುಂಡ್ಲುಪೇಟೆ ಮಾರ್ಗವಾಗಿ ಸುಲ್ತಾನ್-ಭತೆರಿ ಕಡೆ ಸಾಗಿದೆವು. ಹಸಿರು ಮರೆಯಾಗಿದ್ದರು ತಂಪಾದ ಅರಣ್ಯ ಪ್ರದೇಶ, ಚಂದದ ದಾರಿ, ಯಾವುದಾದರು ಕಾಡು ಪ್ರಾಣಿ ಎದುರಾಗುವುದೆಂಬ ಕುತೂಹಲ. ಎಂದಿನಂತೆಯೇ ಈ ಸಲವೂ ನಿರಾಶೆ. ಸುಲ್ತಾನ್ ಭತೆರಿ ತಲುಪಿದಾಗ ೧೧ ಗಂಟೆ ಆಗಿತ್ತು. ಇದು ವಯನಾಡಿನ ಪ್ರಮುಖ ಪಟ್ಟಣ. ಪ್ರವಾಸಿಗರಿಗೆ ಬೇಕಾದ ಎಲ್ಲ ಅನುಕೂಲಗಳು ಇವೆ, ಇಲ್ಲಿಂದ ಸುತ್ತಮುತ್ತಲ ಪ್ರದೇಶಗಳಿಗೆ ಸುಲಭವಾಗಿ ಹೋಗಿಬರಬಹುದು. ಮೊದಲೇ ನಿರ್ಧರಿಸಿದಂತೆ ನೇರವಾಗಿ "ಮೀನಮಟ್ಟಿ" ಜಲಪಾತಕ್ಕೆ ತೆರಳಿದೆವು. ಇದು 'ಮೆಪ್ಪಾಡಿ' ಎಂಬ ಊರಿನ ಹತ್ತಿರ ಇದೆ.

ಮೀನಮಟ್ಟಿ ಜಲಪಾತದ ಬಗ್ಗೆ : Meppaadi ಇಂದ ಊಟಿಗೆ ಹೋಗುವ ಮಾರ್ಗದಲ್ಲಿ ಈ ಜಲಪಾತ ಇದೆ. ಜಲಪಾತ ಇರುವ ಸ್ಥಳ ಕೇರಳ ಮತ್ತು ತಮಿಳುನಾಡು ಗಡಿ ಭಾಗ. ಕೇರಳದ ಅತೀ ದೊಡ್ಡ ಜಲಪಾತಗಳಲ್ಲಿ ಇದು ಒಂದು. ಸುಮಾರು ೩೦೦ ಮೀ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಮೀನಮಟ್ಟಿ ಅಂದರೆ "ಮೀನು ಈಜಲಾರದು" ಎಂದರ್ಥ. ಇಲ್ಲಿನ ನೀರಿನ ರಭಸಕ್ಕೆ ಮೀನುಗಳು ನೀರಿನ ವಿರುದ್ಧ ದಿಕ್ಕಿನಲ್ಲಿ ಈಜಲಾರವು. ಸುತ್ತಲೂ ಟೀ ಎಸ್ಟೇಟ್, ಹಸಿರಿನ ಕಣಿವೆ ಈ ಜಲಪಾತದ ಸೌಂದರ್ಯ ಇಮ್ಮುಡಿಗೊಳಿಸಿವೆ. ಜಲಪಾತದ ಸನಿಹ ಹೋಗಲು ಸ್ವಲ್ಪ ಕಷ್ಟದ ದಾರಿ ಆದ್ದರಿಂದ ಪ್ರವಾಸಿಗರು ಸ್ವಲ್ಪ ಕಡಿಮೆ.



ಪ್ರವೇಶ ಶುಲ್ಕ ನಿಗದಿತ ೩೦೦ ರೂಪಾಯಿ ಪಾವತಿಸಿ, ಒಬ್ಬ ಅನುಭವಿ ಮಾರ್ಗದರ್ಶಕನ ಜೊತೆ ಎಸ್ಟೇಟ್ ಮಧ್ಯೆ ಹೊರಟೆವು. ಹಚ್ಚ ಹಸಿರಿನ ಸಮತಟ್ಟಾದ ಟೀ ಎಸ್ಟೇಟ್ ಸೊಬಗನ್ನು ಸವಿಯುತ್ತ, ಅಲ್ಲಲ್ಲಿ ಫೋಟೋ ಕ್ಲಿಕ್ಕಿಸುತ್ತ ನಡೆದೆವು. ಸುಮಾರು ೧೦ ನಿಮಿಷ ನಡೆದ ಮೇಲೆ ಅಲ್ಲಿನ ನಿಜವಾದ ಕಷ್ಟದ ಅರಿವಾದದ್ದು. ಮುಂದಕ್ಕೆ ಒಮ್ಮೆಲೇ ಪ್ರಪಾತ, ಸಣ್ಣ ಕಾಲುದಾರಿ, ಇಳಿಜಾರು..! ಅಲ್ಲಲ್ಲಿ ಹಗ್ಗದ ಸಹಾಯದಿಂದ ಜಾಗರೂಕತೆಯಿಂದ ಇಳಿಯಬೇಕು.! ಸ್ವಲ್ಪ ಎಚ್ಚರ ತಪ್ಪಿದರೂ ಬದುಕುಳಿಯುವುದು ಕಷ್ಟ..! ಸಣ್ಣ ಮಟ್ಟಿನ ಸಾಹಸ ಚಾರಣವೇ ಸೈ. ಆದರೆ ಅಷ್ಟೇ ಮಜಾ ಬಂತು..!!


ಜಲಪಾತ ನೋಡಿದಾಗ ನಮ್ಮೆಲ್ಲ ಕಷ್ಟವು ಸಾರ್ಥಕ ಅನ್ನಿಸಿತು. ನಾವು ಏನನ್ನು ನಿರೀಕ್ಷಿಸಿದ್ದೆವೋ ಅದಕ್ಕಿಂತಲೂ ಹೆಚ್ಚಿನ ಸೌಂದರ್ಯದ ಜಲಪಾತ ಇದಾಗಿತ್ತು. ಬೇಸಿಗೆ ಕಾಲದಲ್ಲಿಯೂ ಇಷ್ಟರ ಮಟ್ಟಿನ ನೀರನ್ನು ನಿರೀಕ್ಷಿರಲಿಲ್ಲ..! ಹಾಲು ಬಿಳುಪಿನ ಸುಂದರ ಜಲಧಾರೆ ನಮ್ಮನ್ನ ಕಳೆದು ಹೋಗುವಂತೆ ಮಾಡಿತು. ಸುತ್ತಲೂ ಓಡಾಡಿಕೊಂಡು ಎಲ್ಲ ರೀತಿಯಲ್ಲೂ ಜಲಪಾತದ ಸೊಬಗನ್ನು ಕಣ್ಣತುಂಬಿಕೊಂಡೆವು. ಹೆಚ್ಚಿನ ತಡಮಾಡದೆ ನೀರಿಗೆ ಜಿಗಿದು ಮೈ-ಮನ ಹಗುರಾಗಿಸಿಕೊಂಡೆವು. ಮಧ್ಯಾನ್ನದ ಊಟದ ಹಸಿವನ್ನು ಮರೆತು ಸಾಯಂಕಾಲದ ತನಕ ನೀರಲ್ಲಿ ಆಟ ಆಡಿಕೊಂಡಿದ್ದೆವು. ಜಲಪಾತದ ಸೌಂದರ್ಯದ ಬಗ್ಗೆ ನಾನು ಹೆಚ್ಚಿಗೆ ಹೇಳಬೇಕಾಗಿಲ್ಲ.. ಈ ಕೆಳಗಿನ ಚಿತ್ರಗಳೇ ಅದನ್ನ ವರ್ಣಿಸುತ್ತವೆ..!


ಸಾಯಂಕಾಲ ೫ ಗಂಟೆಯ ವರೆಗೆ ತೃಪ್ತಿಯಾಗುವಷ್ಟು ಸಮಯ ಕಳೆದು, ಅಲ್ಲಿಯೇ ಇದ್ದ ಮೆಸ್ ಒಂದರಲ್ಲಿ ಊಟ ಮುಗಿಸಿದೆವು. ಅಲ್ಲಿನ ಮಸಾಲೆ ಮಜ್ಜಿಗೆ ಇನ್ನು ನೆನಪಿನಲ್ಲಿದೆ..ಅಷ್ಟು ರುಚಿಯಾಗಿತ್ತು. ಜಲಪಾತಕ್ಕೆ ಹೋಗುವ ಮುನ್ನ ಇಂತಿಷ್ಟು ಜನರಿಗೆ ಊಟ ಅಂತ ತಿಳಿಸಿ ಹೋದರೆ ವಾಪಾಸು ಬಂದಾಗ ಬಿಸಿ ಬಿಸಿ ಊಟ ತಯಾರಿಸಿ ಇಡುತ್ತಾರೆ. ಪ್ರವಾಸಿಗರೇ ಇಲ್ಲಿನವರಿಗೆ ಆದಾಯದ ಮೂಲ. ವಯನಾಡಿನಲ್ಲಿ 'WAIST ಬಿನ್'..!! ಕೂಡ ಇದೆ, ಯಾರಾದರು ಸೊಂಟ ಮುರಿದವರು ಇದನ್ನ ಉಪಯೋಗಿಸಬಹುದೇನೋ..!!

ಅಲ್ಲಿಂದ ಸುಮಾರು ೮ ಕಿ.ಮೀ ದೂರ ಇರುವ 'ಸನ್ಸೆಟ್ ಪಾಯಿಂಟ್' ಗೆ ತೆರಳಿದೆವು. ರಸ್ತೆಯ ಪರಿಸ್ಥಿತಿ ತುಂಬಾ ಹದಗೆಟ್ಟಿರುವುದರಿಂದ ಮತ್ತು ಎಲ್ಲಿಯೂ ಮಾರ್ಗಸೂಚಿ ಫಲಕ ಇಲ್ಲದಿರುವ ಕಾರಣ ೮ ಕಿ.ಮೀ ತಲುಪಲು ಮುಕ್ಕಾಲು ಗಂಟೆಯೇ ಬೇಕಾಯಿತು. ಪಶ್ಚಿಮ ಘಟ್ಟ ಬೆಟ್ಟಗಳು, ಹಸಿರು ಕಾನನ, ಕಡಿದಾಗ ಕಣಿವೆ, ಅಲ್ಲಿಯೇ ಹರಿಯುವ ನದಿ ಎಲ್ಲವೂ ನಯನಮನೋಹರ.

ಸೂರ್ಯಾಸ್ತದ ದೃಶ್ಯದ ಸೊಬಗು, ನಿಶ್ಯಬ್ದ ವಾತಾವರಣ, ಹಕ್ಕಿಗಳ ಕಲರವ, ಒಂದು ಸುಂದರ ಸಂಜೆಯನ್ನು ಕಳೆದು ಕಲ್ಪೆಟ್ಟ ಎಂಬ ಪಟ್ಟಣಕ್ಕೆ ಬಂದು ಒಂದು ಲಾಡ್ಜ್ ಬುಕ್ ಮಾಡಿ, ಊಟ ಮುಗಿಸಿ ನಿದ್ದೆಗೆ ಶರಣಾದೆವು. ಭಾನುವಾರ ಬೇಗನೆ ಎದ್ದು, ಸ್ನಾನ ಕರ್ಮಾದಿಗಳನ್ನ ಮುಗಿಸಿ ತಿಂಡಿ ತಿಂದು ಚಂಬರ ಪರ್ವತ ಚಾರಣಕ್ಕೆ ಅಣಿಯಾದೆವು.

ಚಂಬರ ಪರ್ವತ ಬಗ್ಗೆ : ಸಮುದ್ರ ಮಟ್ಟಕ್ಕಿಂತ ೬೯೮೦ ಅಡಿ ಎತ್ತರ ಇರುವ ಚಬ್ಮರ ಪರ್ವತ ವಯನಾಡಿನ ಎತ್ತರದ ಪರ್ವತ. ಇದು ಮೆಪ್ಪಾಡಿ ಹತ್ತಿರ ಇದೆ. ಚಂಬರ ತುದಿಯವರೆಗಿನ ಚಾರಣಕ್ಕೆ ಪೂರ್ತಿ ೧ ದಿನ ಬೇಕು. ಚಾರಣಕ್ಕೆ ಇಲ್ಲಿನ ಅರಣ್ಯಾಧಿಕಾರಿಗಳ ವಿಶೇಷ ಪರವಾನಿಗೆ ಬೇಕು. ಪರವಾನಿಗೆ ಫೀಜು ಮತ್ತು ಒಬ್ಬ ಮಾರ್ಗದರ್ಶಿ ಸೇರಿ ಒಬ್ಬರಿಗೆ ೧೦೦ ರೂಪಾಯಿ. ಸಂಪೂರ್ಣ ವಯನಾಡು ಜಿಲ್ಲೆಯ ಸುಂದರ ದೃಶ್ಯಾವಳಿ ಇಲ್ಲಿನ ವಿಶೇಷತೆ. ಪರವಾನಿಗೆ ಪಡೆದು ರಾತ್ರಿ ಸಮಯ ಪರ್ವತದ ತುದಿಯಲ್ಲಿ ತಂಗಬಹುದು.

ಬೆಳಿಗ್ಗೆ ೯ ಗಂಟೆ ವೇಳೆಗೆ ಚಾರಣ ಪ್ರಾರಂಭಿಸಿದೆವು, ಇಲ್ಲಿನ ಚಾರಣದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಎಷ್ಟು ದೂರ ಪ್ರಯಾಣ, ಎಷ್ಟು ತಾಸು ಚಾರಣ ಎಂದು ಕೇಳಿದ್ದಕ್ಕೆ ಅಧಿಕಾರಿಯೊಬ್ಬರು ಕೇವಲ ೩ ತಾಸು ಅಂದಿದ್ದರು. ನೀರಿನ ಬಾಟಲಿ ಬಿಟ್ಟು ಬೇರಿನ್ನೇನೂ ಒಯ್ಯಲಿಲ್ಲ. ಹೇಗಿದ್ದರೂ ಮಧ್ಯಾನ್ನ ಒಳಗಡೆ ತಿರುಗಿ ಬರುವ ವಿಚಾರ ನಮ್ಮದು. ಎಲ್ಲೆಲ್ಲೂ ಹಸಿರಿನ ಎಸ್ಟೇಟ್ ಗಳು ಕಂಗೋಳಿಸುತಿದ್ದವು. ಬಿಸಿಲಿನ ಝಳ ಕೂಡ ಕಡಿಮೆ ಇತ್ತು. ಮಧ್ಯೆ ಮಧ್ಯೆ ನೀರಿನ ಝರಿ ಇದ್ದರಿಂದ ಅನುಕೂಲವಾಗಿತ್ತು. ಕಾಲುಗಳು ಬೇಗ ಬೇಗನೆ ಹೆಜ್ಜೆ ಹಾಕುತಿದ್ದವು. ೧೨ ಗಂಟೆ ವೇಳೆಗೆ ನಾವು ಸುಮಾರು ೫ ಕಿ ಮೀ ದೂರ ಚಾರಣ ಗೈದಿದ್ದೆವು. ಆಗಲೇ ಬಿಸಿಲು ನೆತ್ತಿಗೇರಿತ್ತು, ಕೈಕಾಲು ಸುಸ್ತಾಗತೊಡಗಿತ್ತು. ನಮ್ಮ ಗೈಡ್ ನ ಕೇಳಿದ್ದಕ್ಕೆ ತುದಿವರೆಗೆ ತಲುಪಲು ಇನ್ನು ೪ ಗಂಟೆ ನಡೆಯಬೇಕೆಂದು ಹೇಳಿದ.

ತಿಂಡಿ ತಿನಿಸನ್ನು ಕೂಡ ಕೊಂಡೊಯ್ದಿರಲಿಲ್ಲ. ಹೊಟ್ಟೆ ಬೇರೆ ತಾಳ ಹಾಕಲು ಶುರು ಆಯಿತು. ಎಲ್ಲರಲ್ಲೂ ತುದಿಯವರೆಗೆ ಚಾರಣ ಮುಂದುವರೆಸುವ ಯಾವುದೇ ಆಸಕ್ತಿ ಇರಲಿಲ್ಲ. ನಮ್ಮ ಗೈಡ್ ಗೆ ಬೇರೆ ಮಲಯಾಳಂ ಬಿಟ್ಟು ಬೇರೆ ಯಾವುದೇ ಭಾಷೆಯ ಗಂಧ ಗಾಳಿ ತಿಳಿದಿರಲಿಲ್ಲ. ಅವನಿಗೆ ಹೇಗೋ ಅರ್ಥ ಮಾಡಿಸಿದೆವು, ಚಾರಣ ಮೊಟಕುಗೊಳಿಸಿ ಹಿಂತಿರುಗೋಣ ಅಂತ. ಆದರೆ ಅವನು ಏನೋ ಹೇಳುತ್ತಲಿದ್ದ, ನಮಗೆ ಅರ್ಥ ಆಗಿದ್ದು ಇಷ್ಟೇ, ಮುಂದೆ ಸನಿಹದಲ್ಲಿ ಏನೋ ಇದೆ ಅದನ್ನು ನೋಡಿ ಹಿಂತಿರುಗಬಹುದು ಎಂದು.


ನಿಜಕ್ಕೂ ನಾವು ಹಿಂತಿರುಗಿದ್ದಾರೆ ಅದ್ಭುತವಾದ ದೃಶ್ಯವನ್ನು ಕಳೆದುಕೊಳ್ಳುತ್ತಿದ್ದೆವು. ಪ್ರಕೃತಿಯ ಸೋಜಿಗ ' ಹೃದಯ ಆಕಾರದ ಕೆರೆ', ಅದೂ ಸುಮಾರು ೬೫೦೦ ಅಡಿ ಎತ್ತರದಲ್ಲಿ ..!! ಕೆರೆಯ ನೀರು ಯಾವತ್ತಿಗೂ ಬತ್ತುವುದಿಲ್ಲ, ಇದು ಇಲ್ಲಿನ ಕಾಡು ಪ್ರಾಣಿಗಳಿಗೆ ಆಸರೆ ಅಂತ ಆತ ವಿವರಿಸಿದ.

ಸುತ್ತಲಿನ ದೃಶ್ಯವಂತೂ ಮನೋಹರವಾಗಿತ್ತು. ಅಲ್ಲಿಗೆ ಸ್ವಲ್ಪ ಹೊತ್ತು ವಿರಮಿಸಿಕೊಂಡು, ಮತ್ತೊಂದು ದಿನ ಪೂರ್ಣ ತಯಾರಿಯೊಂದಿಗೆ ತುದಿಯ ತನಕ ಚಾರಣಕ್ಕೆ ಬರುವುದೆಂದು ತೀರ್ಮಾನಿಸಿ ನಾವು ಹಿಂತಿರುಗಿದೆವು. ಮೆಪ್ಪಡಿ ಯಲ್ಲಿ ಕೇರಳ ಪರೋಟ ತಿಂದು, ಕಂಥನಪರ ಜಲಪಾತದತ್ತ ತೆರಳಿದೆವು.

ಕಂಥನಪರ ಜಲಪಾತ : ಉಳಿದೆಲ್ಲ ಜಲಪಾತಕ್ಕೆ ಹೋಲಿಸಿದರೆ ಇದು ಚಿಕ್ಕದು. ಮುಖ್ಯ ರಸ್ತೆಗೆ ತುಂಬಾ ಹತ್ತಿರದಲ್ಲಿರುವ ಈ ಜಲಪಾತ ಸುತ್ತ ಮುತ್ತಲ ಕಾಡು, ಬಂಡೆಗಲ್ಲಿನಿಂದ ಸುಂದರವಾಗಿ ಕಾಣಿಸುತ್ತದೆ. ಸುಮಾರು ೩೦ ಅಡಿ ಎತ್ತರದ ಜಲಪಾತ ಒಂದು ಸುಂದರ ಪಿಕ್ನಿಕ್ ತಾಣ.


ಚಾರಣದಿಂದ ಬೆಂಡಾಗಿದ್ದ ನಮಗೆ ಈ ಜಲಪಾತ ಹೆಚ್ಚಿನ ಖುಷಿ ಕೊಟ್ಟಿತು, ನೀರಲ್ಲಿ ಈಜಾಡಿ, ನೀರಿನ ರಭಸಕ್ಕೆ ಮೈಯೊಡ್ಡಿ ನಿಂತು ಆಹ್ಲಾದಕರ ಅನುಭವ ಪಡೆದೆವು. ಜನ ಜಂಗುಳಿ ಕಡಿಮೆ ಇದ್ದರಿಂದ ನಮಗೆ ಹೆಚ್ಚಿನ ಸಮಯ ಯಾವುದೇ ಅಡಚಣೆ ಇಲ್ಲದೆ ನೀರಲ್ಲಿ ಕಾಲ ಕಳೆಯುವುದು ಸಾಧ್ಯವಾಯಿತು.

ಸಂಜೆ ೫ ಗಂಟೆಯ ವರೆಗೆ ಇಲ್ಲಿದ್ದು ನಂತರ ಸುಲ್ತಾನ್ ಭಾತೆರಿಗೆ ಬಂದು ಟೀ ಕುಡಿದು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆವು. ಕೇರಳ ಕರ್ನಾಟಕ ಗಡಿಯನ್ನು ರಾತ್ರಿ ೮ ಗಂಟೆ ಇಂದ ಬೆಳಿಗಿನ ೬ ಗಂಟೆಯ ವರೆಗೆ ಕಾಡು ಪ್ರಾಣಿಗಳ ಸುರಕ್ಷತೆಗೋಸ್ಕರ ಮುಚ್ಚಲಾಗುತ್ತದೆ.

ಅಂತೂ ಎರಡು ದಿನ ಹೆಚ್ಚಿನ ಸಮಯ ನೀರಲ್ಲಿ ಕಳೆದು ಪೂರ್ತಿ ಫ್ರೆಶ್ ಆಗಿ, ಸುಂದರ ವಾರಾಂತ್ಯದ ನೆನಪುಗಳೊಂದಿಗೆ ಬೆಂಗಳೂರು ತಲುಪಿದಾಗ ಮಧ್ಯರಾತ್ರಿ. ಮರುದಿನದ ಕೆಲಸದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತ ನಿದ್ರೆಗೆ ಶರಣಾದೆವು.

13 comments:

shridhar said...

ಪಚ್ಚು ,..
ಸುಂದರ ಫೋಟೊಗಳೊಂದಿಗೆ .. ಉತ್ತಮ ನೀರೂಪಣೆ/ವಿವರಣೆ. ಚೆನ್ನಾಗಿದೆ.
ನನ್ನ ಬ್ಲೊಗ್ನಲ್ಲು ಸಹ ವಯನಾಡ್ ಪ್ರವಾಸದ ವಿವರಣೆ ಹಾಕಿದ್ದೇನೆ.

shivu.k said...

ವಾಹ್! ಸುಂದರ ಸೂಪರ್...ಒಂದಕ್ಕಿಂತ ಒಂದು ಚೆನ್ನ. ನಿಮ್ಮ ಪ್ರವಾಸ-ಚಾರಣ ಫೋಟೊಗಳು, ತುಂಬಾ ಚೆನ್ನಾಗಿವೆ.

ಪಾಚು-ಪ್ರಪಂಚ said...

ಶ್ರೀಧರ್ ಭಟ್,

Thank you sir , ವಯನಾಡು explore ಮಾಡದು ತುಂಬಾನೇ ಇದ್ದು ಅಲ್ದಾ.? ನಿನ್ನ ವಿವರಣೆ ಕೂಡ ಓದಿದ್ದಿ.
ಉಳಿದ places ನೋಡಲೇ ಮತ್ತೊಂದು ಸರಿ ಹೋಗಕು ಅಂತ ತೀರ್ಮಾನ ಮಾಡಿದ್ದಿ :-)

ಪಾಚು-ಪ್ರಪಂಚ said...

ಶಿವೂ ಸರ್,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಅಲ್ಲಿನ ಜಾಗಗಳು ಒಂದಕ್ಕಿಂತ ಒಂದು ಸುಂದರವಾಗಿದ್ದವು.
ಕುಟುಂಬ ಸಹಿತ ವಾರಾಂತ್ಯ ಕಳೆಯಲು ಅತೀ ಸೂಕ್ತ ಜಾಗ.

ಚಿನ್ಮಯ said...

ವಯನಾಡಿನ ಸಾಮಾನ್ಯ ಜಾಗಗಳಾದ ಎಡಕಲ್ಲು ಬೆಟ್ಟ (ಜಯಂತಿ ನೆನಪಿಗೆ ಬಂದರೆ ನನ್ನ ತಪ್ಪಲ್ಲ), ಪೋಕಟ ಕೆರೆ,ಜೈನ್ ದೇವಸ್ತಾನ ಬಿಟ್ಟ ಹಾಗೆ ಅನಿಸ್ತಾ ಇದ್ದು.
ಮತ್ತೊಮ್ಮೆ ಫೋಟೋ ಸಕತ್ ಇದ್ದು

ಪಾಚು-ಪ್ರಪಂಚ said...

ಚಿನ್ಮಯ್,

ಎರಡು ದಿನದಲ್ಲಿ ಪೂರ್ತಿ ವಯನಾಡು cover ಮಾಡೋದು ಕಷ್ಟ, ಎಡಕಲ್ಲು ಗುಗ್ಗ, ಕುರ್ವ ದ್ವೀಪ, ಪೋಕುಟ್ ಕೆರೆ ಎಲ್ಲದನ್ನು ನಾನು ಹಿಂದೊಮ್ಮೆ ಭೇಟಿಇತ್ತಾಗ ನೋಡಿದ್ದೆ.

ಫೋಟೋಸ್ ಮೆಚ್ಚಿದ್ದಕ್ಕೆ ಧನ್ಯವಾದಗಳು :-)

ರಾಜೇಶ್ ನಾಯ್ಕ said...

ಪ್ರಶಾಂತ್,

ಚೆನ್ನಾದ ಚಿತ್ರಗಳು. ೨ ಜಲಧಾರೆಗಳ ಚಿತ್ರಗಳು ಬಹಳ ಚೆನ್ನಾಗಿವೆ. ಜಲಧಾರೆಗಳ ನೀರಿನ ಮೂಲ ಶೋಲಾ ಕಾಡುಗಳಲ್ಲಿದ್ದಿರಬಹುದು, ಅದಕ್ಕೆ ನೀರಿನ ಪ್ರಮಾಣ ಹೆಚ್ಚು ಇದೆ. ಒಳ್ಳೆಯ ಪ್ರವಾಸ ಕಥನ.

ಪಾಚು-ಪ್ರಪಂಚ said...

ರಾಜೇಶ್,

ಅಲ್ಲಿನ ನದಿಯ ಬಗ್ಗೆ ಅದರ ಮೂಲದ ಬಗ್ಗೆ ಅಲ್ಲಿರುವ ಗಾರ್ಡ್ ಗೆ ತಿಳಿದಿಲ್ಲ, ನಿಮ್ಮ ಅಭಿಪ್ರಾಯ ನಿಜ, ಕೇರಳ - ತಮಿಳುನಾಡಿನ ಗಡಿಭಾಗದಲ್ಲೆಲ್ಲೋ ನದಿಯ ಮೂಲ ಇರಬಹುದು ದಟ್ಟ ಕಾನನ ಮಧ್ಯೆ.

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
-ಪ್ರಶಾಂತ್

ಸಾಗರದಾಚೆಯ ಇಂಚರ said...

ವಾವ್
ಏನು ಚೆನ್ನಾಗಿದೇರಿ ಸ್ಥಳ ಅದು
ತುಂಬಾ ಇಷ್ಟ ಆಯಿತು
ಒಮ್ಮೆ ಹೋಗ್ಬೇಕು
ಥ್ಯಾಂಕ್ಸ್ ರೀ ಹೇಳಿದ್ದಕ್ಕೆ
ಒಳ್ಳೆ ಫೋಟೋ

ಪಾಚು-ಪ್ರಪಂಚ said...

ಗುರು,

ಮೆಚ್ಚುಗೆಯ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್ :-)
ನಿಮ್ಮ ಪ್ರಯಾಣ ಸುಖಕರವಾಗಿರಲಿ.

Rakesh Holla said...

Very beautiful PLACE with nice writeup...

ಮನಮುಕ್ತಾ said...

ಮನಮೋಹಕ ಚಿತ್ರಗಳೊ೦ದಿಗೆ ಸು೦ದರ ವಿವರಣೆ...ತು೦ಬಾ ಚೆನ್ನಾಗಿದೆ.

Mohan B.S said...

ಪ್ರಶಾಂತ್ ರವರೆ ಲೇಖನ ತುಂಬಾ ಸೊಗಸಾಗಿದೆ ಜೊತೆಗೆ ನಿಮ್ಮ ಅನುಭವ ಕೂಡ.