Wednesday, May 20, 2009

ಸಾಗರ ಸುತ್ತ ಮುತ್ತ

ಸಾಗರದ ಜಾತ್ರೆಯನ್ನು ನೋಡಲು ಗೆಳೆಯರನ್ನು ಊರಿಗೆ ಕರೆದೊಯ್ದಿದ್ದೆ. ಜಾತ್ರೆಯ ಅಂದ ಸಂಜೆಯ ಮೇಲೆಯೇ. ಹಾಗಾಗಿ ದಿನದ ಸಮಯದಲ್ಲಿ ಸಾಗರದ ಸುತ್ತ ಮುತ್ತ ಇರುವ ಸುಂದರ ತಾಣಗಳಿಗೆ ಹೋಗಿದ್ದೆವು.ಸಾಗರದಿಂದ ನಾನು, ಡಿಂಗ, ಅರವಿಂದ, ದೂದ್ ಮತ್ತು ರಂಗ ನಮ್ಮ ಮಾರುತಿ-800 ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಹೊರಟೆವು.

ಹೊಳೆಬಾಗಿಲು : ಸಾಗರದಿಂದ ೨೫ ಕಿ.ಮೀ ದೂರದಲ್ಲಿರುವ ಶರಾವತಿ ನದಿಯ ಹಿನ್ನೀರು ಪ್ರದೇಶಕ್ಕೆ ಹೊಳೆಬಾಗಿಲು ಎಂದು ಹೆಸರು. ಸಾಗರ ಮತ್ತು ತುಮರಿ ಊರುಗಳಿಗೆ ಇದೇ ಸಂಪರ್ಕ ಕೊಂಡಿ. ನೂರಾರು ಎಕರೆ ಪ್ರದೇಶದಲ್ಲಿ ಎಲ್ಲೆಲ್ಲೂ ನೀರು.



ಲಾಂಚಿನಲ್ಲಿ ಬಸ್ಸು, ಕಾರು ಮತ್ತು ಜನರನ್ನ ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸಲಾಗುತ್ತದೆ.


ಸಣ್ಣ ಸಣ್ಣ ದ್ವೀಪದಂತೆ ಕಾಣುವ ಗುಡ್ಡಗಳು ಹೊಳೆಬಾಗಿಲಿನ ಸೌಂದರ್ಯಕ್ಕೆ ಕಾರಣ. ನೀರಿನ ಒಡಲಲ್ಲಿ ಅದೆಷ್ಟೋ ಊರು, ಮನೆ, ಕೇರಿಗಳು, ಅಗಾಧ ಕಾಡು ಮುಳುಗಿವೆ. ನೀರ ಮೇಲೆ ತೇಲುತ್ತಾ ಸುಮಾರು ೩ ಕಿ.ಮೀ ಸಾಗುವಾಗಿನ ಅನುಭವ ಸುಂದರ. ನಮ್ಮ ಕಾರನ್ನು ಹೊಳೆಬಾಗಿಲ ಈಚೆ ದಡದಲ್ಲಿ ನಿಲ್ಲಿಸಿ, ಲಾಂಚಿನಲ್ಲಿ ಹೊರಟೆವು. ಒಬ್ಬರಿಗೆ ೧ ರೂಪಾಯಿ ಚಾರ್ಜು...!!


ಸಿಗಂದೂರು : ಲಾಂಚಿಂದ ಇಳಿದು, ಬಸ್ಸು ಅಥವಾ ಜೀಪು ಹತ್ತಿ ಸಿಗಂದೂರಿಗೆ ಹೋಗಬಹುದು. ೩ ಕಿ.ಮೀ ರಸ್ತೆ ಸ್ವಲ್ಪ ದುರಸ್ತಿಯಲ್ಲಿದೆ. "ಸಿಗಂದೂರೆಶ್ವರಿ" ಅಮ್ಮನವರ ದೇವಸ್ಥಾನವು ಸುಂದರ ಪ್ರಕೃತಿಯ ಮಧ್ಯೆ, ದಟ್ಟ ಕಾನನದಲ್ಲಿದೆ. ತನ್ನ ಶಕ್ತಿಯಿಂದಲೇ ತುಂಬಾ ಪ್ರಸಿದ್ಧಿಯಾದ ಅಮ್ಮನವರ ದೇವಸ್ಥಾನದಲ್ಲಿ ದರ್ಶನ ಮುಗಿಸಿ, ಮಂಗಳಾರತಿ, ಪ್ರಸಾದ ಸ್ವೀಕರಿಸಿ ಅಲ್ಲಿಂದ ವಾಪಾಸು ಹೊಳೆಬಾಗಿಲಿಗೆ ಬಂದೆವು. ಹಿನ್ನೀರಿನ ತೀರದಲ್ಲಿ ಸ್ವಲ್ಪ ಸಮಯ ಕಳೆದೆವು. ಮನೆಯಿಂದ ತಂದಿದ್ದ ಕೋಡುಬಳೆ, ಅವಲಕ್ಕಿ ತಿಂದು ಸಾಗರಕ್ಕೆ ವಾಪಾಸು ಬಂದೆವು.

ಸಾಗರದಿಂದ ೧೫ ಕಿ.ಮೀ ದೂರ ಇರುವ ನನ್ನ ಅಜ್ಜನಮನೆ ಸುಂದರ ಹಳ್ಳಿ, ಮನೆಯ ಮುಂದೆ ಹಸಿರು ಅಡಿಕೆ ತೋಟ, ಸಣ್ಣ ಹೊಳೆ. ಮನೆಯ ಹಿಂಭಾಗ ಎತ್ತರದ ಬೆಟ್ಟ. ಅಲ್ಲಿ ಹೋದರೆ ಶರಾವತಿ ಹಿನ್ನೀರಿನ ದೃಶ್ಯ ಲಭ್ಯ. ಅಷ್ಟೇ ಸುಂದರ ಸೂರ್ಯಾಸ್ತ ಕೂಡ.



ಮನೆಯಿಂದ ಸೌತೆಕಾಯಿ, ಬಾಳೆಹಣ್ಣು, ಚಕ್ಕುಲಿ, ನೀರಿನ ಬಾಟಲ್ ತೆಗೆದುಕೊಂಡು ಗುಡ್ಡ ಹತ್ತಲು ಶುರು ಮಾಡಿದೆವು.ಮಧ್ಯಾನ್ನ ಪುಷ್ಕಳ ಊಟ ಮಾಡಿದ್ದರಿಂದ ಎಲ್ಲರೂ ಗುಡ್ಡ ಹತ್ತಲು ಸ್ವಲ್ಪ ಪ್ರಯಾಸ ಪಡಬೇಕಾಯಿತು. ಸುಮಾರು ಒಂದು ಗಂಟೆಯ ನಡಿಗೆ, ನಾವು ಬೆಟ್ಟದ ತುದಿ ತಲುಪಿದ್ದೆವು. ಸೂರ್ಯ ಮುಳುಗಲು ತಯಾರಿ ನಡೆಸುತಿದ್ದ.



ಸುಂದರ ಶರಾವತಿ ಕಣಿವೆಯ ದೃಶ್ಯ ಮನಸ್ಸಿಗೆ ಹಿತವಾಗಿತ್ತು. ತಂದಿದ್ದ ತಿನಿಸೆಲ್ಲವನ್ನು ಖಾಲಿ ಮಾಡುತ್ತಾ ಸೂರ್ಯಾಸ್ತ ದೃಶ್ಯವನ್ನು ಸವಿದೆವು. ತಣ್ಣಗಿನ ಗಾಳಿ, ಸುತ್ತಲ ಪರಿಸರ ನಮ್ಮೆಲ್ಲರನ್ನು ಮೈಮರೆಯುವಂತೆ ಮಾಡಿತ್ತು. ಕೇಸರಿ ಬಿಳಿ ಹಸಿರು ಹೋಲಿಕೆಯ ಚಿತ್ರ.


ಅಜ್ಜನಮನೆಯಲ್ಲಿ ರಾತ್ರಿಯ ಊಟ ಮಾಡಿ, ಸಾಗರ ಜಾತ್ರೆ ನೋಡಲು ಹೋದೆವು. ಜಾತ್ರೆಯಲ್ಲಿ ಅಂದು ಜನವೋ ಜನ..!ಜಾತ್ರೆಯಲ್ಲಿ ನೋಡುವುದನ್ನೆಲ್ಲ ನೋಡಿ, ತಿನ್ನುವುದನ್ನೆಲ್ಲ ತಿಂದು, ತಿರುಗಾಡಿ, ಜಾತ್ರೆಯ ಮಜ ಅನುಭವಿಸಿದೆವು.

ಗುಡವಿ ಪಕ್ಷಿಧಾಮ : ಸೊರಬ ಪಟ್ಟಣದ ಹತ್ತಿರ ಇರುವ ಗುಡವಿ ಪಕ್ಷಿಧಾಮ ಕರ್ನಾಟಕದ ಉತ್ತಮ ೫ ಪಕ್ಷಿಧಾಮಗಳಲ್ಲೊಂದು.ಪಕ್ಷಿ ವೀಕ್ಷಕರಿಗೆ ಇದು ಸ್ವರ್ಗ. ಮೇ ತಿಂಗಳಿಂದ, ಡಿಸೆಂಬರ್ ವರೆಗೆ ಸುಮಾರು ೧೯೦ ಕ್ಕೂ ವಿವಿಧ ಬಗೆಯ ಹಕ್ಕಿಗಳನ್ನು ಇಲ್ಲಿ ನೋಡಬಹುದು. ೭೫ ಹೆಕ್ಟೇರು ವಿಶಾಲ ಗುಡವಿ ಕೆರೆ, ವಿಶಾಲವಾದ ಮರಗಳು, ಕಾಡು ವಲಸೆ ಬರುವ ಹಕ್ಕಿಗಳಿಗೆ ನೆಮ್ಮದಿಯ ಆಶ್ರಯ ತಾಣ.

ನಾವು ಇಲ್ಲಿಗೆ ಹೋದಾಗ ಕೊಕ್ಕರೆ, ನೀರು ಕಾಗೆ ಇನ್ನು ಕೆಲವು ಹಕ್ಕಿಗಳನ್ನು ಬಿಟ್ಟರೆ ಹೆಚ್ಚೇನು ಇರಲಿಲ್ಲ. ಕೆರೆಯಲ್ಲಿ ನೀರು ಕೂಡ ಕಡಿಮೆ ಆಗಿತ್ತು. ಇಲ್ಲಿನ ನಿರ್ಜನ ಪ್ರದೇಶದಲ್ಲಿ "ಜೋಡಿ-ಹಕ್ಕಿ" ಗಳು ಅಲ್ಲಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನವಾಗಿದ್ದವು.

ಕೆಳದಿ : ಕೆಳದಿ ನಾಯಕರ ರಾಜಧಾನಿ 'ಕೆಳದಿ'. ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮ ರ ಸುವರ್ಣಯುಗದ ಆಡಳಿತ ಕಂಡ ನಾಡು. ಇವರು ಕಟ್ಟಿಸಿದ ರಾಮೇಶ್ವರ ದೇವಾಲಯ ಹೊಯ್ಸಳ-ದ್ರಾವಿಡ' ಶೈಲಿಯಲ್ಲಿದೆ. ಸುಂದರ ಕೆತ್ತನೆಗಳು ಇಲ್ಲಿನ ಪ್ರಮುಖ ಆಕರ್ಷಣೆ. ಒಂದೇ ಕಲ್ಲಿನಲ್ಲಿ ಪಂಚವಾದ್ಯದ ವಿವಿಧ ಸ್ವರ ಹೊರಡಿಸುವ ವಿಶಿಷ್ಟ ಕಂಬ ಇಲ್ಲಿದೆ. ಸರಕಾರದವರು ಒಂದು ಮ್ಯೂಸಿಯಂ ಕಟ್ಟಿಸಿ, ಪುರಾತನ ಗ್ರಂಥ ಮತ್ತು ಅವಶೇಷಗಳನ್ನು ರಕ್ಷಿಸಿದ್ದಾರೆ.


ಹೊನ್ನೇಮರಡು : ಶರಾವತಿ ಹಿನ್ನೀರಿನ ಅದ್ಭುತ ತಾಣಗಳಲ್ಲಿ ಇದು ಒಂದು ಸ್ವಚ್ಛ ಪರಿಸರ, ಜನರ ಒಡನಾಟದಿಂದ ದೂರ, ಬಿದಿರಿನ ಪೊದೆಗಳು, ಹಕ್ಕಿಗಳ ಕಲರವ, ಕಣ್ಣಳತೆಯುದ್ದಕ್ಕೂ ನೀರು, ಮದ್ಯೆ ನಡುಗದ್ದೆಗಳು, ನೀರವ ಮೌನ..ಇದು ಹೊನ್ನೇಮರಡುವಿನ ಚಿತ್ರಣ...

ಸ್ವಾಮಿ ಮತ್ತು ನೋಮಿಟೋ ದಂಪತಿಗಳು ಕಟ್ಟಿದ ಕೂಸು, ಪ್ರವಾಸಿ ತಾಣ. ಇಲ್ಲಿ ಅನೇಕ ಬಗೆಯ ಪರಿಸರಕ್ಕೆ ಸಂಬಂಧಿಸಿದ ವಿಷಯಗಳು ಲಭ್ಯ. ಹಾಗೆ ಬೋಟ್ ರೈಡಿಂಗ್, ಸ್ವಿಮ್ಮಿಂಗ್ ಕ್ಯಾಂಪ್ ಎಲ್ಲದಕ್ಕೂ ಮುಂಚಿತವಾಗಿ ತಿಳಿಸಿರಬೇಕಾಗುತ್ತದೆ.

ಸಂಜೆ ತಂಪಾದ ಗಾಳಿಯಲ್ಲಿ, ನೀರವತೆಯಲ್ಲಿ ಮಿಂದೆದ್ದು, ಎಷ್ಟೋ ಹೊತ್ತಿನ ತನಕ ಪ್ರಪಂಚವನ್ನೇ ಮರೆತಿದ್ದೆವು. ಹೊಸ ಉತ್ಸಾಹದಿಂದ ಮತ್ತೊಮ್ಮೆ ಜಾತ್ರೆಯನ್ನ ತಿರುಗಲು ಸಾಗರದ ಕಡೆ ಹೊರಟೆವು.