Tuesday, June 30, 2009

ಶಿವನಸಮುದ್ರ - ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ

ಕಾವೇರಿ ನದಿಯ ಪಾತ್ರದಲ್ಲಿ ಸಮೃದ್ಧವಾಗಿ ಮಳೆಯಾಗಿದ್ದರಿಂದ ಕಳೆದ ವರ್ಷ ಶಿವನಸಮುದ್ರ ಜಲಪಾತವು ನಿಜವಾದ ಸೌಂದರ್ಯವನ್ನು ತಳೆದಿತ್ತು. ಸರಕಾರದವರು "ಜಲಪಾತೋತ್ಸವ" ವನ್ನು ಕೂಡ ಆಚರಿಸಿದ್ದರು. ಇದೆ ಸಂದರ್ಭದಲ್ಲಿ (೦೯-೦೯-೨೦೦೭) ಶಿವನಸಮುದ್ರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ನಾವು ಕೂಡ ಪಾಲ್ಗೊಂಡಿದ್ದೆವು. ಒಟ್ಟು ೮ ಮಂದಿ, ೪ ಬೈಕ್. ನಾನು, ರಂಗ, ಅರವಿಂದ, ಮಹೇಶ, ಪ್ರಸನ್ನ, ಕಿರಣ್, ಸುಹಾಸ್ ಮತ್ತು ಸಂತೋಷ್, ೩ ಪಲ್ಸರ್ ಮತ್ತು ೧ ಡಿಸ್ಕೋವರ್ ನಲ್ಲಿ ಬೆಳಿಗ್ಗೆ ೭ ಗಂಟೆಗೆ ವಿಜಯನಗರದಿಂದ ಹೊರಟೆವು. ಕೆಂಗೇರಿಯಲ್ಲಿ ಸಂತು ಬೈಕ್ ನ ಇಂಜಿನ್ ಆಯಿಲ್ ಬದಲಾಯಿಸಿ, ಅಲ್ಲೇ ಟೀ ಕುಡಿದು ನಮ್ಮ ಪ್ರಯಾಣವನ್ನು ಚುರುಕುಗೊಳಿಸಿದೆವು.



ಬೆಳಗಿನ ನಿರಂತರ ೧.೩೦ ತಾಸು ಆಹ್ಲಾದಕರ ಪ್ರಯಾಣದ ನಂತರ ಮಂಡ್ಯ ತಲುಪಿದೆವು. ಮಂಡ್ಯದ ಪಕ್ಕದ ಹಳ್ಳಿಯಲ್ಲಿ ನಮ್ಮ ಮಹೇಶ್ ಗೌಡ್ರ ಮನೆ ಇರುವುದು. ಸಣ್ಣ ಸಣ್ಣ ತೊರೆ, ಹಸಿರು ಬತ್ತದ ಗದ್ದೆ, ಕಬ್ಬಿನ ಹೊಲದ ಮಧ್ಯೆ ಸುಂದರ ಮನೆ. ಮಹೇಶನ ಮನೆಯಲ್ಲಿ ಪಲಾವ್ ತಿಂದು, ಕಾಫಿ ಕುಡಿದು ಹಾಗೆ ಸುತ್ತಲಿನ ಪರಿಸರದಲ್ಲಿ ಓಡಾಡಿದೆವು.
ಮಂಡ್ಯದಿಂದ ಹೊರಟು ಮಳವಳ್ಳಿ ಮಾರ್ಗವಾಗಿ ಶಿವನಸಮುದ್ರ ತಲುಪಿದಾಗ ೧೧ ಗಂಟೆ ಆಗಿತ್ತು. ಅಲ್ಲಿಯವರೆಗೂ ರಸ್ತೆ ಉತ್ತಮವಾಗಿದ್ದು, ಬೈಕ್ ಓಡಿಸಲು ತುಂಬಾ ಖುಷಿಯಾಗಿತ್ತು. ಮೊದಲು ಗಗನಚುಕ್ಕಿ ಜಲಪಾತದ ಬಳಿ ಬಂದೆವು.


ಮಳೆಗಾಲದ ಸಮಯವಾಗಿದ್ದರಿಂದ ಸುತ್ತಲು ಹಸಿರು ಹಾಗು ಹೆಚ್ಚಿನ ನೀರು ಜಲಪಾತದ ಸೌಂದರ್ಯವನ್ನು ಅದ್ಭುತವಾಗಿಸಿತ್ತು.



ಕಾವೇರಿ ನದಿಯು ಶಿವನಸಮುದ್ರದ ಬಳಿ ೨ ಕವಲಾಗಿ ಹರಿದು ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಸ್ಥಳಗಳಲ್ಲಿ ಆಳಕ್ಕೆ ಧುಮುಕಿ ಸುಂದರ ಜಲಪಾತದ ಸೃಷ್ಟಿಸಿ, ಮುಂದೆ ಒಂದಾಗಿ ಹರಿಯುತ್ತದೆ . ಈ ಎರಡು ಜಲಪಾತಗಳ ಅಂತರ ಸುಮಾರು ೩ ಕಿ.ಮೀ. ಗಗನಚುಕ್ಕಿ ವಿಶಾಲವಾಗಿದೆ, ಭರಚುಕ್ಕಿಯಲ್ಲಿ ನೀರಿನ ಸೆಳೆತ ಹೆಚ್ಚು. ಇದಕ್ಕೆ ಶಿಂಶಾ ಅಂತಲೂ ಹೆಸರಿದೆ. ಹಾಲು ಬಣ್ಣದ ಕಾವೇರಿ ಇಲ್ಲಿ ಮೈತುಂಬಿ ಹರಿಯುತಿದ್ದಳು..! ಇಲ್ಲಿನ ಸೌಂದರ್ಯ ಹುಚ್ಚೆದ್ದು ಕುಣಿಯುವಂತಾಗಿತ್ತು. ಇಲ್ಲಿ ಒಂದು ದರ್ಗಾ ಇದೆ. ದರ್ಗಾದ ಹಿಂಭಾಗದಿಂದ ಜಲಪಾತದ ಮೇಲ್ಭಾಗಕ್ಕೆ ಹೋಗಬಹುದು. ತೃಪ್ತಿಯಾಗುವಷ್ಟು ಸಮಯ ಜಲಪಾತವನ್ನು ವೀಕ್ಷಿಸಿ ಅಲ್ಲಿಂದ ಹೊರಟು ಭರಚುಕ್ಕಿ ಜಲಧಾರೆಯ ಬಳಿ ಬಂದೆವು.


ಇಲ್ಲಿ ಜಲಪಾತದ ಕೆಳಗೆ ನೀರಿನ ಸನಿಹಕ್ಕೆ ಹೋಗಬಹುದು. ಅದ್ಭುತವಾದ ವೀಕ್ಷಣೆ ಇಲ್ಲಿಂದ ಸಾಧ್ಯ..!! ಪ್ರವಾಸಿಗರನ್ನು ಸಾಗಿಸಲು ತೆಪ್ಪದ ವ್ಯವಸ್ಥೆಯು ಇತ್ತು...! ತೆಪ್ಪದ ಮೂಲಕ ನಾವೆಲ್ಲ ಜಲಪಾತದ ಬುಡಕ್ಕೆ ಹೋಗಿದ್ದೆವು..ಅದೊಂದು ಅವಿಸ್ಮರಣೀಯ ಅನುಭವ...! ಅಗಾಧ ಜಲಧಾರೆ..! ಅಷ್ಟೇ ಅಪಾಯವು ಹೌದು.. ! ಪ್ರಕೃತಿಯ ಮುಂದೆ ನಾವೆಲ್ಲಾ ತೃಣಕ್ಕೆ ಸಮಾನ ಅನ್ನಿಸಿತು..! ಹಸಿವಿನ ಅರಿವಿಲ್ಲದೆ ಸುಮಾರು ೩ ಗಂಟೆಗಳ ಕಾಲ ಜಲಪಾತದ ಸವಿಯನ್ನು ಅನುಭವಿಸಿದೆವು.


ಶಿವನಸಮುದ್ರದ ಸಹಜ ಸೌಂದರ್ಯ ಎಲ್ಲರನ್ನು ಬೇಗ ಮನಸೂರೆಗೊಳಿಸುತ್ತದೆ. ಅಲ್ಲಿನ ಹೋಟೆಲೊಂದರಲ್ಲಿ ಮಧ್ಯಾನ್ನದ ಊಟ ಮಾಡಿದೆವು. ಇಲ್ಲಿ ಊಟಕ್ಕೆ ಅಚ್ಚುಕಟ್ಟಾದ ಹೋಟೆಲಿನ ವ್ಯವಸ್ಥೆ ಇಲ್ಲ.


ಈ ಸುಂದರ ಸೇತುವೆಯ ಚಿತ್ರ ಗೆಳೆಯ ವಿನಾಯಕನ ಕೃಪೆ. ಇದು ಗಗನಚುಕ್ಕಿ ಮತ್ತು ಭರಚುಕ್ಕಿ ನಡುವಿನ ಹಾದಿಯಲ್ಲಿ ಸಿಗುವುದು. ಇಲ್ಲಿನ ಸುಂದರ ಪರಿಸರದಲ್ಲಿ ಅನೇಕ ಚಲನಚಿತ್ರಗಳ ಚಿತ್ರೀಕರಣ ನಡೆದಿದೆ..!!
ಶಿಂಶಾ ಊರಿನಲ್ಲಿ ಜಲವಿದ್ಯುತ್ ಸ್ಥಾವರ ಇದೆ. ಇದು ಏಷ್ಯ ಖಂಡದಲ್ಲಿಯೇ ಮೊದಲನೇ ಜಲವಿದ್ಯುತ್ ಸ್ಥಾವರ. ಇದರ ವೀಕ್ಷಣೆಗೆ ವಿಶೇಷ ಅನುಮತಿಯ ಅಗತ್ಯ ಇದೆ. ನಾವು ಹೊರಗಿನಿಂದಲೇ ಒಂದು ಸುತ್ತು ಹಾಕಿದೆವು. ಸ್ಥಾವರದಿಂದ ಬಂದ ನೀರು ಮುಂದೆ ಹರಿದು ಮೆಟ್ಟೂರು ಆಣೆಕಟ್ಟನ್ನು ಸೇರುತ್ತದೆ.


ಶಿಂಶಾದಿಂದ ಹೊರಟಾಗ ಸಣ್ಣಗೆ ಮಳೆ ಶುರುವಾಗಿತ್ತು. ಹಾಗೆಮಳೆಯಲ್ಲಿಯೇ ಸ್ವಲ್ಪ ದೂರ ಬೈಕನ್ನು ಓಡಿಸಿದೆವು, ಮಳೆಯು ಜಾಸ್ತಿ ಆದಾಗ ಅಲ್ಲಲ್ಲಿ ಸಿಗುತ್ತಿದ್ದ ಆಲೆಮನೆ, ಕೋಳಿ ಫಾರ್ಮ್ ನಲ್ಲಿ ಸ್ವಲ್ಪ ಹೊತ್ತು ನಿಂತಿದ್ದೆವು...!
ಮದ್ದೂರಿಗೆ ಬಂದು ವಡೆ ಚಪ್ಪರಿಸಿ, ಕಾಫಿ ಹೀರಿ ಬೆಂಗಳೂರಿನತ್ತ ಹೊರಟೆವು. ವಾಪಾಸು ಬರುವಾಗ ಅರವಿಂದ ಅವನ ಹ್ಯಾಂಡಿಕ್ಯಾಮ್ ನಲ್ಲಿ ಎಲ್ಲ ದೃಶ್ಯವನ್ನು ಸೆರೆಹಿಡಿಯುತಿದ್ದ.. !

ಈ ವರ್ಷ ಕೂಡ ಕಳೆದ ವರ್ಷದಂತೆಯೇ ಮಳೆ ಬರಲಿ....! ಮತ್ತೊಮ್ಮೆ ಜಲಪಾತ ಮೈದುಂಬಲಿ...!!

Wednesday, June 17, 2009

ಸ್ವಾತಂತ್ರ್ಯ ಉದ್ಯಾನವನ

ಮೇ ೩೧, ಭಾನುವಾರ, ನಾನು ಅರವಿಂದ, ಸುಹಾಸ್ ಮತ್ತು ಕಿರಣ್ ಹಳೆಯ ಕಾರಾಗೃಹದಲ್ಲಿ ಒಂದು ಸಂಜೆಯನ್ನು ಕಳೆದೆವು...!
ಆಗಿನ ಕೇಂದ್ರ ಕಾರಗೃಹವೇ ಈಗ ಸುಂದರ ಸ್ವಾತಂತ್ರ್ಯ ಉದ್ಯಾನವನವಾಗಿದೆ...!


ನಮ್ಮ ಬೆಂಗಳೂರಿನ ಹೃದಯಭಾಗದಲ್ಲಿರುವ ಕೇಂದ್ರ ಕಾರಾಗೃಹವನ್ನ ೧೮೬೫-೬೬ ರಲ್ಲಿಯೇ ಕಟ್ಟಲಾಯಿತು. ಸುಮಾರು ೨೧ ಎಕರೆ ಜಾಗದಲ್ಲಿ ವಾಚ್ ಟವರ್, ಬ್ಯಾರಕ್ ಗಳು, ಆಸ್ಪತ್ರೆ, ವರ್ಕ್-ಶಾಪ್ ಮೊದಲಾದ ಕಟ್ಟಡಗಳು ಇದ್ದವು. ಸದೃಢವಾದ ಎತ್ತರ ಗೋಡೆಯು ಇಡೀ ಪ್ರದೇಶವನ್ನು ಸುತ್ತುವರೆದಿದೆ.


ಈ ಕಾರಾಗೃಹವು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಿದಾಗ ಸರಕಾರದವರು ಇದನ್ನ ಉದ್ಯಾನವನವನ್ನಾಗಿ ಪರಿವರ್ತಿಸಿದರು. ೧೫ ಎಕರೆ ಸ್ವಾತಂತ್ರ್ಯ ಉದ್ಯಾನವನವನ್ನು ಸುಮಾರು ೧೭.೩೫ ಕೋಟಿ ರೂಗಳ ಮೊತ್ತದಲ್ಲಿ ನಿರ್ಮಿಸಲಾಗಿದೆ. ಲಂಡನ್ ನ ಹೈಡ್ ಉದ್ಯಾನವನದ ಮಾದರಿಯಲ್ಲಿ ೬ ಎಕರೆ ಪ್ರತ್ಯೇಕ ವಿಶಾಲವಾದ ಪ್ರದೇಶದಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ...ಇದರಿಂದ ನಗರ ಕೇಂದ್ರದಲ್ಲಿ ಪ್ರತಿಭಟನೆ ಮತ್ತು ಮೆರವಣಿಗೆ ಇಂದಾಗಿ ಸಂಚಾರ ಅಸ್ತವ್ಯಸ್ತ ಕಡಿಮೆ ಆಗಲಿದೆ..!!! :-)


ಉದ್ಯಾನವನದ ಮುಖ್ಯ ಉದ್ದೇಶ ನಗರದ ಹೃದಯ ಭಾಗದಲ್ಲಿ ಹಸಿರನ್ನು ಸೃಷ್ಟಿಸುವುದು. ಇಲ್ಲಿನ ವಾಸ್ತುಶಿಲ್ಪ ಅಧ್ಬುತವಾಗೆನು ಇಲ್ಲ. ಆದರೂ ಮನಸ್ಸಿಗೆ ಹಿಡಿಸುತ್ತದೆ. ಹಸಿರು ಮರಗಳು, ಹೂವಿನ ಗಿಡಗಳು, ಹಾಸು ಎಲ್ಲವು ಸುಂದರ. ಹಾಗೆಯೇ ಚಿಣ್ಣರಿಗೆ ಆಡಲು ಸಾಕಷ್ಟು ಸ್ಥಳಾವಕಾಶ ಇದೆ, ಅದಕ್ಕಾಗಿಯೇ ವಿಶೇಷ ಆಟಿಕೆಗಳೂ ಇದೆ. ಕೈದಿಗಳು ಇದ್ದ ಕೊಠಡಿಯನ್ನು ಹಾಗೆಯೇ ಇಡಲಾಗಿದೆ.. ವೀಕ್ಷಣಾ ಗೋಪುರ, ಸಮಾನಾಂತರ ಗೋಡೆ ವಿಶೇಷ ಆಸಕ್ತಿಯನ್ನು ಹುಟ್ಟಿಸುತ್ತದೆ. ರಂಗಮಂದಿರ ಸದುಪಯೋಗವಾದರೆ ಸುಂದರ ಸಂಜೆಯನ್ನ ಸೃಷ್ಟಿಸಬಹುದು...!! ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ.


ನಮ್ಮ ಬೆಂಗಳೂರಿನಲ್ಲೂ ಇಂತಹ ಸುಂದರ ವಿಶಾಲವಾದ ಹಸಿರು ತಾಣ ಇರುವುದು ಆಶ್ಚರ್ಯ. ಉಳಿದ ಉದ್ಯಾನವನದಂತೆ ಹಾಳಾಗುವ ಮೊದಲು ಒಮ್ಮೆ ಕುಟುಂಬ ಸಮೇತ ಹೋಗಿ ಬನ್ನಿ...!