Wednesday, February 25, 2009

ಹಳ್ಳಿ, ಮುಂಜಾನೆಯ ಇಬ್ಬನಿ ಮತ್ತು ನವಿಲು

ಶ್ರೀನಾಥ್ ಬಾವ ಮತ್ತು ಮನೀಷಾ ರ ಮದುವೆಗೆ ಅಂಥ ೨ ದಿನ ಆಫೀಸ್ ಗೆ ರಾಜ ಹಾಕಿ ಊರಿಗೆ ಹೋಗಿದ್ದೆ. ಬಾವನ ಮನೆ ಇರುವುದು ಲಿಂಗನಮಕ್ಕಿ ಹತ್ತಿರ ಅರಳಗೋಡು. ಶರಾವತಿ ಅಭಯಾರಣ್ಯದ ಒಂದು ಭಾಗವಾಗಿರುವ ಪುಟ್ಟ ಊರು. ದಟ್ಟಕಾಡು, ವಿವಿಧ ಜಾತಿಯ ದೊಡ್ಡ ದೊಡ್ಡ ಮರಗಳು, ಕಾಡು ಪ್ರಾಣಿಗಳು ಇಲ್ಲಿ ಸಾಮಾನ್ಯ. ಎಷ್ಟೊಂದು ಸಾರಿ ರಸ್ತೆಯಲ್ಲಿ ಕಾಡುಕೋಣಗಳು ಎದುರಾಗುವುದಿದೆ..! ಮನೆಯ ಎದುರು ಅಡಿಕೆ ತೋಟ. ಪಕ್ಕದಲ್ಲಿ ಭತ್ತದ ಗದ್ದೆ..ಭತ್ತದ ಕಾಳುಗಳನ್ನು ತಿನ್ನಲು ಕಾಡು ಕೋಳಿ, ನವಿಲು, ಪಾರಿವಾಳ, ಗುಬ್ಬಿ ಮುಂತಾದ ಹಕ್ಕಿಗಳು ಬರುತ್ತವೆ. ಒಮ್ಮೊಮ್ಮೆ ನವಿಲು ಮನೆಯಂಗಳಕ್ಕೆ ಬರುವುದೂ ಉಂಟು.

ಮದುವೆಯ ಗಲಾಟೆ ಮುಗಿದ ಮರುದಿನ ಮುಂಜಾನೆ ಸ್ವಲ್ಪ ಬೇಗನೆ ಎದ್ದು ಗದ್ದೆಯ ಕಡೆ ನವಿಲು ನೋಡಲು ಹೋಗಿದ್ದೆ. ಮುಂಜಾನೆಯ ಇಬ್ಬನಿ ಸುತ್ತಲಿನ ಪರಿಸರವನ್ನು ಮುತ್ತಿಕೊಂಡಿತ್ತು...ಅಲ್ಲಿ ನನಗೆ ಸೆರೆಸಿಕ್ಕ ಕೆಲವು ಛಾಯಾಚಿತ್ರಗಳು...

ನವಿಲಿನ ಈ ಚಿತ್ರಗಳನ್ನು ಗೆಳೆಯ ವಿನಾಯಕ ಭಟ್ ಸೆರೆಹಿಡಿದಿದ್ದು... ನನಗೆ ತುಂಬಾ ಇಷ್ಟವಾಗಿದ್ದರಿಂದ ಈ ಪೋಸ್ಟಿನಲ್ಲಿ ಸೇರಿಸಿದ್ದೇನೆ.

ಹೊಸ ಬಾಳಿಗೆ ಹೆಜ್ಜೆ ಇಟ್ಟಿರುವ ನವಜೋಡಿಗೆ ಶುಭವಾಗಲಿ.....

Tuesday, February 24, 2009

ಮಾವನ ಮನೆಯಲ್ಲಿ ಕಳೆದ ದಿನಗಳು...

ನನ್ನ ಸೋದರ ಮಾವನ ಮನೆ ಹೊಸನಗರದ ಹತ್ತಿರ "ಬಾಣಿಗಾ." ಎಂಬ ಪುಟ್ಟ ಹಳ್ಳಿಯಲ್ಲಿದೆ. ಬಸ್ಸಿಂದ ಇಳಿದು ೨ ಕಿ.ಮೀ. ಮರಳು ಮಿಶ್ರಿತ ಮಣ್ಣು ದಾರಿಯಲ್ಲಿ ನಡೆದರೆ ಸಿಗುವುದು "ಪತಂಜಲಿ". ಅಂದದೂರಿನ ಮನೆಗೆ ಚಂದದ ಹೆಸರು. ಮುಳುಗಡೆಯ ಪ್ರದೇಶ ಆದ್ದರಿಂದ ಮಳೆಗಾಲದಲ್ಲಿ ಮನೆಯ ಅಂಗಳದವರೆಗೂ ಶರಾವತಿ ನದಿಯ ಹಿನ್ನೀರು ಬರುತ್ತದೆ. ಕಾರ್-ಗದ್ದೆ (ಬೇಸಿಗೆಯಲ್ಲಿ ಹೊಳೆಯ ನೀರನ್ನ ಅವಲಂಬಿಸಿ ಬೆಳೆ ಬೆಳೆಯುವದು) ಅನಿವಾರ್ಯ. ಇಲ್ಲಿನ ಪರಿಸರ ನನಗೆ ತುಂಬಾ ಇಷ್ಟ. ಹಸಿರು ಗದ್ದೆ, ತೋಟ, ಹೂವಿನ ಗಿಡಗಳು, ಕಲ್ಲಿನ ದೇವಸ್ಥಾನ, ಕಾಡು ತುಂಬಾ ಸುಂದರ. ಚಿಕ್ಕವರಿದ್ದಾಗ ಹುಡುಗರೆಲ್ಲ ಸೇರಿ ಬೇಸಿಗೆ ರಜ ಕಳೆಯಲು ಬರುತ್ತಿದ್ದೆ ಇಲ್ಲಿಗೆ. ವಿಶಾಲವಾದ ಜಾಗ, ದಟ್ಟವಾದ ಕಾಡು, ಗುಡ್ಡ, ನೀರಲ್ಲಿ ಆಟಕ್ಕೆ ಮುಳುಗಡೆಯ ನೀರು, ಕ್ರಿಕೆಟ್ ಆಟಕ್ಕೆ ಗದ್ದೆ ಬಯಲು ನಮ್ಮಂತ ಪುಂಡು ಹುಡುಗರಿಗೆ ಹೇಳಿ ಮಾಡಿಸಿದ ಜಾಗ. ಮನೆಯ ಫಾರಂ ನಲ್ಲಿ ಮಾವು, ಸಪೋಟ, ಪಪ್ಪಾಳೆ, ಪೇರಳೆ ಹಣ್ಣುಗಳು ಬೇಸಿಗೆಯಲ್ಲಿ ಸಿಗ್ತಾ ಇದ್ವು. ದಣಿವಾದಾಗ ತೋಟದ ಎಳನೀರು. ಇವಲ್ಲದೆ ಬೆಟ್ಟದಲ್ಲಿ ಸಿಗುತಿದ್ದ ನೇರಳೆ, ಹುಳಿಮಾವಿನ ಹಣ್ಣು, ಹಲಸಿನ ಹಣ್ಣು, ಮುಳ್ಳಣ್ಣು, ಗೇರುಹಣ್ಣು ಇನ್ನು ಏನೇನೋ ಹಣ್ಣುಗಳು. ಮನೆಗಿಂತ ಬೆಟ್ಟದಲ್ಲಿ ಇರುತಿದ್ದಿದ್ದೆ ಜಾಸ್ತಿ. ಪ್ರತೀವರ್ಷ ರಜ ಶುರುವಾದ ಕೂಡಲೇ ನಮ್ಮ ಗ್ಯಾಂಗ್ ಇಲ್ಲಿಗೆ ಹಾಜರ್...!! ಹಾಗೆ ಸಣ್ಣ ಪುಟ್ಟ ಕೆಲಸವನ್ನು ನಾವು ಮಾಡ್ತಾ ಇದ್ದೆವು. ಮಾವಿನ ಕಾಯಿ ಕೀಳುವುದು, ಹಲಸಿನ ಹಪ್ಪಳ ಹಚ್ಚುವುದು, ತೋಟಕ್ಕೆ ನೀರು ಹಾಯಿಸುವುದು, ಹೊಳೆಯಲ್ಲಿ ಎಮ್ಮೆ ಮೈ ತೊಳೆಯುವದು....ನಮಗೆಲ್ಲ ಏನೋ ಹುರುಪು...:-)ಅತ್ತೆ ಮಾವ, ನಾವು ಏನೇ ಕಿತಾಪತಿ ಮಾಡಿದರೂ ಯಾವುದಕ್ಕೂ ಬಯ್ಯುತ್ತಿರಲಿಲ್ಲ..ಅದೇ ನಮಗೆ ಪ್ಲಸ್ ಪಾಯಿಂಟ್....! ನಾವು ಬರದಿದ್ದರೆ ಅವರಿಗೆ ಬೇಜಾರು...ಶ್ರಮಜೀವಿಗಳು, ದೇಶಪ್ರೇಮ, ಮನೆಯಲ್ಲಿ ಸ್ವದೇಶಿ ಉತ್ಪನ್ನಗಳ ಬಳಕೆ ಜಾಸ್ತಿ. ಬೆಂಗಳೂರು ಸೇರಿದಾಗಿಂದ ಮಾವನ ಮನೆಗೆ ಹೋಗುತಿದ್ದಿದ್ದು ಅಪರೂಪ, ಹೋದರೆ ಕೆಲವೇ ತಾಸುಗಳ ಮಟ್ಟಿಗೆ ಅಥವಾ ಒಂದು ದಿನದ ಮಟ್ಟಿಗೆ. ಹುಡುಗರು ಎಲ್ಲ ಸೇರಿಕೊಂಡು ಹೋಗಿ ತುಂಬಾ ವರ್ಷಗಳೇ ಆಗಿದೆ.

ಕಳೆದ ಅಕ್ಟೋಬರ್ ನಲ್ಲಿ ಬಾವನ ಮದ್ವೆ ಇತ್ತು. ಆಗ ನಮ್ಮ ಹಳೆಯ ಗ್ಯಾಂಗ್ ಎಲ್ಲ ಒಂದೆಡೆ ಸೇರಿಕೊಂಡಿದ್ವಿ. ಎಲ್ಲರೂ ಬಾಣಿಗಕ್ಕೆ ಹೋಗಿ, ಮತ್ತೆ ಹಳೆಯ ನೆನಪುಗಳ ಮಧ್ಯೆ, ಚಿಕ್ಕ ಹುಡುಗರಾಗಿ ಸೇರಿ ಆಟ ಆಡಿ, ತಿಂದುಂಡು, ತಿರುಗಿ, ೨ ದಿನಗಳನ್ನು ನಮ್ಮಿಷ್ಟದ ಹಾಗೆ ಕಳೆದ್ವಿ... ನೆನಪುಗಳು ಈಗಲೂ ಅತೀ ಸುಂದರ...!

ಅಲ್ಲಿಗೆ ಹೋದಾಗ ಮೊದಲು ಮಾಡಿದ ಕೆಲಸ ಅಂದ್ರೆ, ಅಟ್ಟಕ್ಕೆ ಹೋಗಿ ಏನೇನು ಹಣ್ಣು ಇದೆ ಅಂಥ ನೋಡಿದ್ದು. ಬಾಳೆಹಣ್ಣು, ಚಿಕ್ಕು ಇತ್ತು. ಹಾಗೆ ಎರಡೆರಡು ಹಣ್ಣನ್ನು ಹೊಟ್ಟೆಗಿಳಿಸಿದ್ವಿ. ಅತ್ತೆ "ಪಪ್ಪಾಳೆ ಹಣ್ಣು ಇದ್ದು ಹುಡುಗ್ರ" ಅಂದ್ರು. ಹುಂ ಸರಿ, ಅದೂ ಸ್ವಾಹ ಆಯಿತು. ತೋಟವನ್ನು ಒಂದು ರೌಂಡು ಹಾಕಿ, ಬೆಟ್ಟದ ಕಡೆ ಹೊರಟೆವು. ಅಲ್ಲಿ ಕೂಗಾಡಿ, ಜಿಗಿದಾಡಿ, ಮರ ಹತ್ತಿ, ನಮ್ಮ ಚಪಲ ತೀರಿಸಿಕೊಂಡೆವು..!ಮನೆಗೆ ಬಂದಾಗ ಅಕ್ಕ ಎಳೆ ಸೌತೆಕಾಯಿ ಉಪ್ಪು, ಸೂಜಿಮೆಣಸು, ವಾಟೆಹುಳಿ, ಕೊಬ್ಬರಿಎಣ್ಣೆ ರೆಡಿ ಮಾಡಿ ಇಟ್ಟಿದ್ದಳು... ೪ ಸೌತೆಕಾಯಿ ಖಾಲಿ ಆಗಿದ್ದೆ ಗೊತ್ತಾಗಲಿಲ್ಲ....!! ಒಳ್ಳೆ ಕಾಂಬಿನೆಷನ್ನು ಅದು..!!

ಅತ್ತೆಯ ಕೈತೋಟದ ಕುಸುಮಗಳು....
ಬಿಸಿಲು ಏರುತಿದ್ದ ಹಾಗೆ ಸ್ನಾನಕ್ಕೆ ಹಿನ್ನೀರಿನ ಕಡೆ ಹೊರಟೆವು. ಊಟಕ್ಕೆ ಕರೆಯುವ ವರೆಗೆ ಹೊಳೆಯಲ್ಲಿ ಈಜಾಡಿ, ಸ್ನಾನ ಮಾಡಿದ್ವಿ. ರಂಗ ಗದ್ದೆಯ ಏಡಿ ಒಂದನ್ನ ಹಿಡಿದು ಫೋಟೋ ತೆಗೆದಿದ್ದು. ಕೆಂಪಕ್ಕಿ ಅನ್ನ, ಗೊಜ್ಜು, ತಂಬುಳಿ, ನೀರ್ಗೊಜ್ಜು ಮಾಡಿದ್ರು ಅತ್ತೆ. ಜೊತೆಗೆ ಹಲಸಿನ ಕಾಯಿ ಹಪ್ಪಳ, ಸಂಡಿಗೆ...ಹೊಟ್ಟೆ ಬಿರಿಯುವಂತೆ ಊಟ ಮಾಡಿ ೨ ತಾಸು ಗಡದ್ದು ನಿದ್ದೆ ಮಾಡಿದ್ವಿ.ಸಂಜೆ ಜೋರಾಗಿಯೇ ಗುಡುಗು ಮಳೆ ಬಂದಿತ್ತು...ಹಸಿರಿನ ವಾತಾವರಣಕ್ಕೆ ಇನ್ನಷ್ಟು ಸೊಬಗು ಬಂದಿತ್ತು...ಬಿಸಿಯಾದ ಬೆಲ್ಲದ ಕಾಫಿ ಕುಡಿದು, ಹುರಿದ ಶೇಂಗ ತಿಂದ್ವಿ...ನಿಜ, ಏನಾದರು ಒಂದು ತಿಂತಾನೆ ಇರ್ತಿದ್ವಿ...!!ಮಳೆ ನಿಂತ ಮೇಲೆ ಅಲ್ಲಿಂದ ಸುಮಾರು ೨೦ ಕಿ.ಮೀ ಇದ್ದ "ರಾಮಚಂದ್ರಾಪುರ" ಮಠಕ್ಕೆ ಹೋಗಿದ್ವಿ. ಅಲ್ಲಿ ಕುಡಿದ ಕಷಾಯ ತುಂಬಾ ರುಚಿ ಆಗಿತ್ತು. ಅಲ್ಲಿನ ಗೋಶಾಲೆ ಒಮ್ಮೆ ನೋಡಲೇ ಬೇಕಾದ ಸ್ಥಳ. ಎಷ್ಟೊಂದು ಬಗೆಯ ದೇಶೀ ತಳಿಯ ಹಸುಗಳು, ಮಠದ ಆಶ್ರಯದಲ್ಲಿ ನೆಮ್ಮದಿಯ ಬದುಕನ್ನು ಕಂಡಿವೆ. ದೇಶೀ ಗೋವಿನ ತಳಿಗಳ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ. ಮುದ್ದು ಪುಟಾಣಿ ಕರುಗಳ ಜಿಗಿದಾಟ ಮನಸ್ಸಿಗೆ ಹಿತ.ಸಂಜೆಯ ನೀಲಾಕಾಶದ ಸೂರ್ಯಾಸ್ತ ನೋಡಿ ಅಲ್ಲಿಂದ ಮನೆಗೆ ಮರಳಿದೆವು.ಬೆಂಗಳೂರಿನ ಯಾಂತ್ರಿಕ ಜೀವನ ನಡೆದಿದೆ...ಮತ್ತೆ ಇದೇ ರೀತಿ ಎಲ್ಲರೂ ಸೇರುವುದು, ಬಾಣಿಗಕ್ಕೆ ಹೋಗುವುದು ಯಾವಾಗಲೋ..? ಜೀವನ ಎಲ್ಲ ಮಾವನ ಮನೆಯಲ್ಲಿಯೇ ಇರಬೇಕೆಂಬ ಬಯಕೆ....ಮಾವನಿಗೆ ಹೆಣ್ಣು ಮಕ್ಕಳಿಲ್ಲ...!!

Wednesday, February 11, 2009

ಭೀಮೇಶ್ವರಿ ಫಿಶಿಂಗ್ ಕ್ಯಾಂಪ್

೨೧ ಸೆಪ್ಟೆಂಬರ್ ೨೦೦೮ ಭಾನುವಾರ, ಇಸ್ರೋ ಲೇಔಟ್ ಗೆ ಬಂದಾಗ ಬೆಳಿಗ್ಗೆ ೬ ಗಂಟೆ. ಅದಾಗಲೇ ಶಿಲ್ಪಾ ೨-೩ ಬಾರಿ ನನಗೆ ಫೋನ್ ಮಾಡಿದ್ದಳು. ನಾನು ಸರಿಯಾದ ಸಮಯಕ್ಕೆ ಅವಳ ಮನೆಗೆ ಬಂದೆ. ನವೀನ ಆಗಲೇ ರೆಡಿ ಆಗಿದ್ದ. ಮಾಮೂಲಾಗಿ ಬೆಳಿಗ್ಗೆ ಅಷ್ಟು ಬೇಗನೆ ಎದ್ದಿದ್ದು ಒಂದು ರೆಕಾರ್ಡ್. ನಾನು, ನವೀನ, ಶಿಲ್ಪಾ, ರೂಪ ನನ್ನ ಕಾರ್ ನಲ್ಲಿ ಇಸ್ರೋ ಲೇಔಟ್ ಬಿಟ್ಟಾಗ ೬.೩೦ ಆಗಿತ್ತು. ನೈಸ್ ರೋಡ್ ಮುಂಜಾನೆಯ ಇಬ್ಬನಿ ಹೊದ್ದು ಮಲಗಿತ್ತು. ನೈಸ್ ರೋಡ್ ನಲ್ಲಿ ಒಂದೆರಡು ಮಾರ್ನಿಂಗ್ ಫೋಟೋ ತೆಗೆದು ಮೈಸೂರ್ ರೋಡ್ ನತ್ತ ನಮ್ಮ ಪ್ರಯಾಣ ಸಾಗಿತು.ಹೊಟ್ಟೆ ಚೂರು ಗುಟ್ಟತೊಡಗಿದಾಗ ಸರಿಯಾಗಿ "ಕಾಮತ್ ಉಪಹಾರ್" ಗೆ ಬಂದಿದ್ದೆವು. ಇಡ್ಲಿ-ವಡ, ಕೇಸರಿಬಾತ್ ತಿಂದು ಕಾಫಿ ಕುಡಿದಾಗ ಸ್ವಲ್ಪ ಸಮಾಧಾನ ಆಯಿತು. ಚಳಿಗಾಲದಲ್ಲಿ ಬೆಳಿಗ್ಗೆ ಒಂದು ಲಾಂಗ್ ಡ್ರೈವ್ ಮಾಡಿ, ಇಬ್ಬನಿ ಚಳಿಯಲ್ಲಿ, ಬಿಸ್ಸಿ ಬಿಸ್ಸಿ ಕಾಫಿ ಕುಡಿಯುವುದೇ ಆನಂದ...!! ನನಗೆ ಅನ್ನಿಸಿದ್ದು "ಜೀವನ ಎಷ್ಟು ಸುಂದರ...!!"ಅಲ್ಲಿಂದ ಹೊರಟು ಕನಕಪುರ ಮಾರ್ಗ ಹಿಡಿದೆವು. ಕಾರು ಸ್ವಲ್ಪ ನಿಧಾನ ಹೋಗುತ್ತಾ ಇರೋ ಹಾಗೆ ಅನ್ನಿಸ್ತ ಇತ್ತು. ಬಹುಶ: ರುಚಿಯಾದ ತಿಂಡಿ ತಿಂದು ೪ ಜನರ ಭಾರ ಜಾಸ್ತಿ ಆಗಿತ್ತೇನೋ..!!ಕನಕಪುರ ದಿಂದ ಮಳವಳ್ಳಿ ತಲುಪಿದಾಗಲೇ ನಮಗೆ ಗೊತ್ತಾಗಿದ್ದು ನಾವು ತಪ್ಪು ಮಾರ್ಗದಲ್ಲಿ ಬಂದಿದ್ದೇವೆ ಎಂದು. ಅಲ್ಲಿಗೆ ಸುಮಾರು ೧೧೦ ಕಿ.ಮೀ. ಬಂದಾಗಿತ್ತು. ರೆಸಾರ್ಟ್ ನ ಚೆಕ್-ಇನ್ ವೇಳೆ ೧೦ ಗಂಟೆ. ಆಗಲೇ ೯.೩೦ ಆಗಿತ್ತು. ಕಾವೇರಿ ಫಿಶಿಂಗ್ ಕ್ಯಾಂಪ್ ಇರುವುದು ೨ ಕಡೆ. ಒಂದು " ಗಾಲಿಬೋರೆ ಫಿಶಿಂಗ್ ಕ್ಯಾಂಪ್", ಮಳವಳ್ಳಿ ಹತ್ತಿರ, ಮೇಕೆದಾಟು ಬಳಿ. ನಾವು ಹೋಗಬೇಕಿದ್ದದ್ದು "ಭೀಮೇಶ್ವರಿ ಫಿಶಿಂಗ್ ಕ್ಯಾಂಪ್", ಮುತ್ತತ್ತಿ ಹತ್ತಿರ. ಅಲ್ಲಿನ ಒಬ್ಬ ದನಕಾಯುವ ಹುಡುಗನ ಹತ್ತಿರ ಸರಿಯಾದ ದಾರಿ ಕೇಳಿ ಸಾತನೂರು ಮಾರ್ಗವಾಗಿ ಮುತ್ತತ್ತಿ ಗೆ ಹೊರಟೆವು.ಆಗಲೇ ಮನೆಯಿಂದ ಹೊರಟು ೫ ಗಂಟೆ ಆಗಿತ್ತು. ಎಲ್ಲರ ಮುಖದಲ್ಲೂ ಆತಂಕ, ದುಗುಡ, ಏನೋ ಸಂಕಟ...!ಭೀಮೇಶ್ವರಿ ಇನ್ನೂ ೧ ತಾಸಿನ ದಾರಿ....!! ವಿಪರೀತ "ಜಲಬಾಧೆ" .....!! ಎಲ್ಲೂ ಮುಕ್ತವಾಗಿ ಹೋಗುವ ಹಾಗು ಇರಲಿಲ್ಲ...!! ಪ್ರತೀ ನಿಮಿಷವೂ ಸಂಕಟ ಹೆಚ್ಚೆಚ್ಚು ಆಗುತ್ತಾ ಇತ್ತು...!! ಅಲ್ಲಿನ ರಸ್ತೆ ಹೊಂಡ-ಗುಂಡಿ, ತುಂಬಾ ಸ್ಪೀಡ್ ಆಗಿ ಕಾರು ಓಡಿಸುವ ಹಾಗೂ ಇಲ್ಲ...ಆಗಾಗ ದಾರಿಗಡ್ಡ ಸಿಗುತ್ತಿದ್ದ ದನಗಳ ಗುಂಪು...ನನ್ನ ಸಂಕಟ ಹೇಳ ತೀರದು...ನನಗೆ ಅನ್ನಿಸಿದ್ದು "ಜೀವನ ಎಷ್ಟೊಂದು ಕಷ್ಟ...!!!"
ಭೀಮೇಶ್ವರಿ ತಲುಪಿದಾಗ ೧೧ ಗಂಟೆ ಆಗಿತ್ತು. "ಸ್ವಾಗತ-ಪಾನೀಯ" (Welcome-Drink) ಲಿಂಬೆ ಹಣ್ಣಿನ ಶರಬತ್ತು ಕುಡಿದು ಸ್ವಲ್ಪ ದಣಿವಾರಿಸಿಕೊಂಡೆವು. ಅಲ್ಲಿನ ವಿಶ್ರಾಂತಿ ಗೃಹ ಚಿತ್ರ...ಅಲ್ಲಿ ಟ್ರೆಕ್ಕಿಂಗ್ ಮಾಡಲು ಮನಸ್ಸಾಗದೆ, ಹಾಗೆ ಕಾವೇರಿ ದಡದಲ್ಲಿ ಸ್ವಲ್ಪ ಹೊತ್ತು ನೀರಲ್ಲಿ ಆಟ ಆಡಿದೆವು. ಅಲ್ಲಿನ ಸುಂದರ ಪರಿಸರ, ದಟ್ಟವಾದ ಕಾಡು, ರಭಸವಾಗಿ ಹರಿಯುವ ಕಾವೇರಿ ನಮಗೆ ಅತ್ಯಂತ ಇಷ್ಟವಾಯಿತು. ಮಳೆಗಾಲ ಆಗ ತಾನೆ ಕಳೆದಿದ್ದರಿಂದ ನದಿಯಲ್ಲಿ ನೀರು ತುಂಬಿತ್ತು.
"ರಿವರ್ ರಾಫ್ಟಿಂಗ್" ಇಲ್ಲಿನ ವಿಶೇಷ, ತುಂಬಿ ಹರಿಯುವ ನದಿಯಲ್ಲಿ, ತೇಲುತ್ತಾ, ರಭಸವಾದ ಇಳಿಜಾರಿನಲ್ಲಿ ಬೀಳುತ್ತಾ, ಕೊರಕಲು ನಡುವೆ ಬಿಳಿ ನೋರೆಯಂತಿದ್ದ ನೀರನ್ನು ಹಿಂದಿಕ್ಕುತ್ತ ರಾಫ್ಟಿಂಗ್ ಮಾಡುವುದು ಅತ್ಯಂತ ರೋಮಾಂಚನ....! ಸಿಂಪ್ಲಿ ಸೂಪರ್..! ನೀರಿನ ಮಧ್ಯೆ ಅಪಾಯಕಾರಿ ಸುಳಿಯ ಹತ್ತಿರ ಲೈಫ್- ಜಾಕೆಟ್ ಹಾಕ್ಕೊಂಡು ತುಂಬ ಸಮಯ ಈಜಿ ಮಜ ಮಾಡಿದ್ವಿ. ಅಂತು ಸಕತ್ ಥ್ರಿಲ್ಲಿಂಗು..!! ಸುಮಾರು ೧೫ ಕಿ.ಮೀ. ನದಿಯಲ್ಲಿ ರಾಫ್ಟಿಂಗ್ ಹೋಗಿದ್ವಿ...ಊಟ ಆದಮೇಲೆ ಸ್ವಲ್ಪ ಹೊತ್ತು ಜೋಕಾಲಿ ಮೇಲೆ ಮಲಗಿದ್ದು ಒಳ್ಳೆ ನಿದ್ದೆ ಬಂತು...ತಣ್ಣನೆಯ ಗಾಳಿ...ನಿಶ್ಯಬ್ದ ವಾತಾವರಣ...ಮರದ ನೆರಳು.
ಸಂಜೆ ತಿಳಿಯಾದ ನೀರಿನಲ್ಲಿ ತೆಪ್ಪ ವಿಹಾರ ಇತ್ತು. ತೆಪ್ಪದಲ್ಲಿ ಸುಮಾರು ೧೦ ಕಿ.ಮೀ. ನದಿಯಲ್ಲಿ ಹೋಗಿದ್ದೆವು. ತೆಪ್ಪ ನಡೆಸುತ್ತಿದ್ದವನು ತುಂಬ ಚಾಕಚಕ್ಯತೆ ಇಂದ ತೆಪ್ಪ ನಡೆಸುತಿದ್ದ...ಆಮೇಲೆ ನಮಗೆ ತಿಳಿದಿದ್ದು ಅಲ್ಲಿ ಭಾರಿ ಸುಳಿ ಇರೋ ವಿಷ್ಯ...ಮೊದಲೇ ಹೇಳಿದ್ರೆ ನಾವು ಹೆದರಿಕೊಳ್ತಾ ಇದ್ದ್ವಿ ಅಂಥ ಹೇಳಿರಲಿಲ್ಲ.ಸ್ಟ್ರಾಂಗ್ ಟೀ ಕುಡಿದಾದ ಮೇಲೆ, ನಾವು ಮೀನು ಹಿಡಿಯಲು ಹೋದ್ವಿ. "ಮಹಶೀರ್" ಮೀನು ಇಲ್ಲಿನ ವಿಶೇಷ..ದೊಡ್ಡ ಗಾತ್ರದ ಮೀನನ್ನು ಹಿಡಿದು ತೂಕ ಮಾಡಿ ಮತ್ತೆ ನೀರಿಗೆ ಬಿಡುವುದು ಇಲ್ಲಿನ ಪ್ರಮುಖ ಆಕರ್ಷಣೆ. ನನಗೆ ಒಂದು ಸಣ್ಣ ಮೀನು ಸಿಕ್ಕಿತ್ತು...ತೂಕ ಮಾಡಲು ಹೋಗಲಿಲ್ಲ...! ಸುಂದರ ದಿನವನ್ನು ಕಳೆದು ಸವಿ ನೆನಪುಗಳೊಂದಿಗೆ ಅಲ್ಲಿಂದ ಹೊರಟೆವು. ಹಲಗೂರು-ಚನ್ನಪಟ್ಟಣ ಬಳಸಿ ಸೀದಾ ಬೆಂಗಳೂರಿಗೆ ವಾಪಾಸು ಬಂದಾಗ ರಾತ್ರಿ ೮ ಗಂಟೆ ಆಗಿತ್ತು.
ಭೀಮೇಶ್ವರಿ ಫಿಶಿಂಗ್ ಕ್ಯಾಂಪ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ನೋಡಿ
http://www.karnataka.com/tourism/bangalore/bheemeshwari.html