Tuesday, February 24, 2009

ಮಾವನ ಮನೆಯಲ್ಲಿ ಕಳೆದ ದಿನಗಳು...

ನನ್ನ ಸೋದರ ಮಾವನ ಮನೆ ಹೊಸನಗರದ ಹತ್ತಿರ "ಬಾಣಿಗಾ." ಎಂಬ ಪುಟ್ಟ ಹಳ್ಳಿಯಲ್ಲಿದೆ. ಬಸ್ಸಿಂದ ಇಳಿದು ೨ ಕಿ.ಮೀ. ಮರಳು ಮಿಶ್ರಿತ ಮಣ್ಣು ದಾರಿಯಲ್ಲಿ ನಡೆದರೆ ಸಿಗುವುದು "ಪತಂಜಲಿ". ಅಂದದೂರಿನ ಮನೆಗೆ ಚಂದದ ಹೆಸರು. ಮುಳುಗಡೆಯ ಪ್ರದೇಶ ಆದ್ದರಿಂದ ಮಳೆಗಾಲದಲ್ಲಿ ಮನೆಯ ಅಂಗಳದವರೆಗೂ ಶರಾವತಿ ನದಿಯ ಹಿನ್ನೀರು ಬರುತ್ತದೆ. ಕಾರ್-ಗದ್ದೆ (ಬೇಸಿಗೆಯಲ್ಲಿ ಹೊಳೆಯ ನೀರನ್ನ ಅವಲಂಬಿಸಿ ಬೆಳೆ ಬೆಳೆಯುವದು) ಅನಿವಾರ್ಯ. ಇಲ್ಲಿನ ಪರಿಸರ ನನಗೆ ತುಂಬಾ ಇಷ್ಟ. ಹಸಿರು ಗದ್ದೆ, ತೋಟ, ಹೂವಿನ ಗಿಡಗಳು, ಕಲ್ಲಿನ ದೇವಸ್ಥಾನ, ಕಾಡು ತುಂಬಾ ಸುಂದರ. ಚಿಕ್ಕವರಿದ್ದಾಗ ಹುಡುಗರೆಲ್ಲ ಸೇರಿ ಬೇಸಿಗೆ ರಜ ಕಳೆಯಲು ಬರುತ್ತಿದ್ದೆ ಇಲ್ಲಿಗೆ. ವಿಶಾಲವಾದ ಜಾಗ, ದಟ್ಟವಾದ ಕಾಡು, ಗುಡ್ಡ, ನೀರಲ್ಲಿ ಆಟಕ್ಕೆ ಮುಳುಗಡೆಯ ನೀರು, ಕ್ರಿಕೆಟ್ ಆಟಕ್ಕೆ ಗದ್ದೆ ಬಯಲು ನಮ್ಮಂತ ಪುಂಡು ಹುಡುಗರಿಗೆ ಹೇಳಿ ಮಾಡಿಸಿದ ಜಾಗ. ಮನೆಯ ಫಾರಂ ನಲ್ಲಿ ಮಾವು, ಸಪೋಟ, ಪಪ್ಪಾಳೆ, ಪೇರಳೆ ಹಣ್ಣುಗಳು ಬೇಸಿಗೆಯಲ್ಲಿ ಸಿಗ್ತಾ ಇದ್ವು. ದಣಿವಾದಾಗ ತೋಟದ ಎಳನೀರು. ಇವಲ್ಲದೆ ಬೆಟ್ಟದಲ್ಲಿ ಸಿಗುತಿದ್ದ ನೇರಳೆ, ಹುಳಿಮಾವಿನ ಹಣ್ಣು, ಹಲಸಿನ ಹಣ್ಣು, ಮುಳ್ಳಣ್ಣು, ಗೇರುಹಣ್ಣು ಇನ್ನು ಏನೇನೋ ಹಣ್ಣುಗಳು. ಮನೆಗಿಂತ ಬೆಟ್ಟದಲ್ಲಿ ಇರುತಿದ್ದಿದ್ದೆ ಜಾಸ್ತಿ. ಪ್ರತೀವರ್ಷ ರಜ ಶುರುವಾದ ಕೂಡಲೇ ನಮ್ಮ ಗ್ಯಾಂಗ್ ಇಲ್ಲಿಗೆ ಹಾಜರ್...!! ಹಾಗೆ ಸಣ್ಣ ಪುಟ್ಟ ಕೆಲಸವನ್ನು ನಾವು ಮಾಡ್ತಾ ಇದ್ದೆವು. ಮಾವಿನ ಕಾಯಿ ಕೀಳುವುದು, ಹಲಸಿನ ಹಪ್ಪಳ ಹಚ್ಚುವುದು, ತೋಟಕ್ಕೆ ನೀರು ಹಾಯಿಸುವುದು, ಹೊಳೆಯಲ್ಲಿ ಎಮ್ಮೆ ಮೈ ತೊಳೆಯುವದು....ನಮಗೆಲ್ಲ ಏನೋ ಹುರುಪು...:-)ಅತ್ತೆ ಮಾವ, ನಾವು ಏನೇ ಕಿತಾಪತಿ ಮಾಡಿದರೂ ಯಾವುದಕ್ಕೂ ಬಯ್ಯುತ್ತಿರಲಿಲ್ಲ..ಅದೇ ನಮಗೆ ಪ್ಲಸ್ ಪಾಯಿಂಟ್....! ನಾವು ಬರದಿದ್ದರೆ ಅವರಿಗೆ ಬೇಜಾರು...ಶ್ರಮಜೀವಿಗಳು, ದೇಶಪ್ರೇಮ, ಮನೆಯಲ್ಲಿ ಸ್ವದೇಶಿ ಉತ್ಪನ್ನಗಳ ಬಳಕೆ ಜಾಸ್ತಿ. ಬೆಂಗಳೂರು ಸೇರಿದಾಗಿಂದ ಮಾವನ ಮನೆಗೆ ಹೋಗುತಿದ್ದಿದ್ದು ಅಪರೂಪ, ಹೋದರೆ ಕೆಲವೇ ತಾಸುಗಳ ಮಟ್ಟಿಗೆ ಅಥವಾ ಒಂದು ದಿನದ ಮಟ್ಟಿಗೆ. ಹುಡುಗರು ಎಲ್ಲ ಸೇರಿಕೊಂಡು ಹೋಗಿ ತುಂಬಾ ವರ್ಷಗಳೇ ಆಗಿದೆ.

ಕಳೆದ ಅಕ್ಟೋಬರ್ ನಲ್ಲಿ ಬಾವನ ಮದ್ವೆ ಇತ್ತು. ಆಗ ನಮ್ಮ ಹಳೆಯ ಗ್ಯಾಂಗ್ ಎಲ್ಲ ಒಂದೆಡೆ ಸೇರಿಕೊಂಡಿದ್ವಿ. ಎಲ್ಲರೂ ಬಾಣಿಗಕ್ಕೆ ಹೋಗಿ, ಮತ್ತೆ ಹಳೆಯ ನೆನಪುಗಳ ಮಧ್ಯೆ, ಚಿಕ್ಕ ಹುಡುಗರಾಗಿ ಸೇರಿ ಆಟ ಆಡಿ, ತಿಂದುಂಡು, ತಿರುಗಿ, ೨ ದಿನಗಳನ್ನು ನಮ್ಮಿಷ್ಟದ ಹಾಗೆ ಕಳೆದ್ವಿ... ನೆನಪುಗಳು ಈಗಲೂ ಅತೀ ಸುಂದರ...!

ಅಲ್ಲಿಗೆ ಹೋದಾಗ ಮೊದಲು ಮಾಡಿದ ಕೆಲಸ ಅಂದ್ರೆ, ಅಟ್ಟಕ್ಕೆ ಹೋಗಿ ಏನೇನು ಹಣ್ಣು ಇದೆ ಅಂಥ ನೋಡಿದ್ದು. ಬಾಳೆಹಣ್ಣು, ಚಿಕ್ಕು ಇತ್ತು. ಹಾಗೆ ಎರಡೆರಡು ಹಣ್ಣನ್ನು ಹೊಟ್ಟೆಗಿಳಿಸಿದ್ವಿ. ಅತ್ತೆ "ಪಪ್ಪಾಳೆ ಹಣ್ಣು ಇದ್ದು ಹುಡುಗ್ರ" ಅಂದ್ರು. ಹುಂ ಸರಿ, ಅದೂ ಸ್ವಾಹ ಆಯಿತು. ತೋಟವನ್ನು ಒಂದು ರೌಂಡು ಹಾಕಿ, ಬೆಟ್ಟದ ಕಡೆ ಹೊರಟೆವು. ಅಲ್ಲಿ ಕೂಗಾಡಿ, ಜಿಗಿದಾಡಿ, ಮರ ಹತ್ತಿ, ನಮ್ಮ ಚಪಲ ತೀರಿಸಿಕೊಂಡೆವು..!ಮನೆಗೆ ಬಂದಾಗ ಅಕ್ಕ ಎಳೆ ಸೌತೆಕಾಯಿ ಉಪ್ಪು, ಸೂಜಿಮೆಣಸು, ವಾಟೆಹುಳಿ, ಕೊಬ್ಬರಿಎಣ್ಣೆ ರೆಡಿ ಮಾಡಿ ಇಟ್ಟಿದ್ದಳು... ೪ ಸೌತೆಕಾಯಿ ಖಾಲಿ ಆಗಿದ್ದೆ ಗೊತ್ತಾಗಲಿಲ್ಲ....!! ಒಳ್ಳೆ ಕಾಂಬಿನೆಷನ್ನು ಅದು..!!

ಅತ್ತೆಯ ಕೈತೋಟದ ಕುಸುಮಗಳು....
ಬಿಸಿಲು ಏರುತಿದ್ದ ಹಾಗೆ ಸ್ನಾನಕ್ಕೆ ಹಿನ್ನೀರಿನ ಕಡೆ ಹೊರಟೆವು. ಊಟಕ್ಕೆ ಕರೆಯುವ ವರೆಗೆ ಹೊಳೆಯಲ್ಲಿ ಈಜಾಡಿ, ಸ್ನಾನ ಮಾಡಿದ್ವಿ. ರಂಗ ಗದ್ದೆಯ ಏಡಿ ಒಂದನ್ನ ಹಿಡಿದು ಫೋಟೋ ತೆಗೆದಿದ್ದು. ಕೆಂಪಕ್ಕಿ ಅನ್ನ, ಗೊಜ್ಜು, ತಂಬುಳಿ, ನೀರ್ಗೊಜ್ಜು ಮಾಡಿದ್ರು ಅತ್ತೆ. ಜೊತೆಗೆ ಹಲಸಿನ ಕಾಯಿ ಹಪ್ಪಳ, ಸಂಡಿಗೆ...ಹೊಟ್ಟೆ ಬಿರಿಯುವಂತೆ ಊಟ ಮಾಡಿ ೨ ತಾಸು ಗಡದ್ದು ನಿದ್ದೆ ಮಾಡಿದ್ವಿ.ಸಂಜೆ ಜೋರಾಗಿಯೇ ಗುಡುಗು ಮಳೆ ಬಂದಿತ್ತು...ಹಸಿರಿನ ವಾತಾವರಣಕ್ಕೆ ಇನ್ನಷ್ಟು ಸೊಬಗು ಬಂದಿತ್ತು...ಬಿಸಿಯಾದ ಬೆಲ್ಲದ ಕಾಫಿ ಕುಡಿದು, ಹುರಿದ ಶೇಂಗ ತಿಂದ್ವಿ...ನಿಜ, ಏನಾದರು ಒಂದು ತಿಂತಾನೆ ಇರ್ತಿದ್ವಿ...!!ಮಳೆ ನಿಂತ ಮೇಲೆ ಅಲ್ಲಿಂದ ಸುಮಾರು ೨೦ ಕಿ.ಮೀ ಇದ್ದ "ರಾಮಚಂದ್ರಾಪುರ" ಮಠಕ್ಕೆ ಹೋಗಿದ್ವಿ. ಅಲ್ಲಿ ಕುಡಿದ ಕಷಾಯ ತುಂಬಾ ರುಚಿ ಆಗಿತ್ತು. ಅಲ್ಲಿನ ಗೋಶಾಲೆ ಒಮ್ಮೆ ನೋಡಲೇ ಬೇಕಾದ ಸ್ಥಳ. ಎಷ್ಟೊಂದು ಬಗೆಯ ದೇಶೀ ತಳಿಯ ಹಸುಗಳು, ಮಠದ ಆಶ್ರಯದಲ್ಲಿ ನೆಮ್ಮದಿಯ ಬದುಕನ್ನು ಕಂಡಿವೆ. ದೇಶೀ ಗೋವಿನ ತಳಿಗಳ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ. ಮುದ್ದು ಪುಟಾಣಿ ಕರುಗಳ ಜಿಗಿದಾಟ ಮನಸ್ಸಿಗೆ ಹಿತ.ಸಂಜೆಯ ನೀಲಾಕಾಶದ ಸೂರ್ಯಾಸ್ತ ನೋಡಿ ಅಲ್ಲಿಂದ ಮನೆಗೆ ಮರಳಿದೆವು.ಬೆಂಗಳೂರಿನ ಯಾಂತ್ರಿಕ ಜೀವನ ನಡೆದಿದೆ...ಮತ್ತೆ ಇದೇ ರೀತಿ ಎಲ್ಲರೂ ಸೇರುವುದು, ಬಾಣಿಗಕ್ಕೆ ಹೋಗುವುದು ಯಾವಾಗಲೋ..? ಜೀವನ ಎಲ್ಲ ಮಾವನ ಮನೆಯಲ್ಲಿಯೇ ಇರಬೇಕೆಂಬ ಬಯಕೆ....ಮಾವನಿಗೆ ಹೆಣ್ಣು ಮಕ್ಕಳಿಲ್ಲ...!!

2 comments:

Unknown said...

ಪ್ರಾಶಾಂತ್..

ತುಂಬಾ ಚೆನ್ನಾಗಿದೆ...

ಹಳ್ಳಿಯೆಂದರೆ ಸ್ವರ್ಗ ಅಲ್ಲವಾ..?
ಎಷ್ಟೊಂದು ಸುಂದರ ನಿಮ್ಮ ಮಾವನ ಮನೆ..!

ಹೊಟ್ಟೆಕಿಚ್ಚಾಯಿತು..

ಬಹಳ ಸುಂದರ ಫೋಟೊಗಳನ್ನು ಹಾಕಿದ್ದೀರಿ..

ಲೇಖನ, ಫೋಟೊ ಎರಡೂ ಇಷ್ಟವಾಯಿತು...

ಅಭಿನಂದನೆಗಳು

ಪಾಚು-ಪ್ರಪಂಚ said...

ಹಾಯ್ ಪ್ರಕಾಶಣ್ಣ...

ಲೇಖನ ಮತ್ತು ಫೋಟೋ ಇಷ್ಟ ಆಗಿದ್ದಕ್ಕೆ ತುಂಬಾ ಸಂತೋಷ.

ನಿಜ ಹಳ್ಳಿಯ ಪರಿಸರ, ಅಲ್ಲಿನ ವಾತಾವರಣ ತುಂಬಾ ಸುಂದರ ಅಲ್ದಾ.. ಮಳೆಗಾಲ ಮುಗಿದ ದಿನಗಳು ಇನ್ನಷ್ಟು ಸೊಬಗು. ಎಲ್ಲೆಲ್ಲೂ ಹಸಿರು. ಹಾಗೆ ಸುಮ್ಮನೆ ಕ್ಲಿಕ್ಕಿಸಿದರೂ ಫೋಟೋ ಚನ್ನಾಗಿಯೇ ಬತ್ತು.

ಧನ್ಯವಾದಗಳು.