ಬೆಳಗಿನ ನಿರಂತರ ೧.೩೦ ತಾಸು ಆಹ್ಲಾದಕರ ಪ್ರಯಾಣದ ನಂತರ ಮಂಡ್ಯ ತಲುಪಿದೆವು. ಮಂಡ್ಯದ ಪಕ್ಕದ ಹಳ್ಳಿಯಲ್ಲಿ ನಮ್ಮ ಮಹೇಶ್ ಗೌಡ್ರ ಮನೆ ಇರುವುದು. ಸಣ್ಣ ಸಣ್ಣ ತೊರೆ, ಹಸಿರು ಬತ್ತದ ಗದ್ದೆ, ಕಬ್ಬಿನ ಹೊಲದ ಮಧ್ಯೆ ಸುಂದರ ಮನೆ. ಮಹೇಶನ ಮನೆಯಲ್ಲಿ ಪಲಾವ್ ತಿಂದು, ಕಾಫಿ ಕುಡಿದು ಹಾಗೆ ಸುತ್ತಲಿನ ಪರಿಸರದಲ್ಲಿ ಓಡಾಡಿದೆವು.
ಮಂಡ್ಯದಿಂದ ಹೊರಟು ಮಳವಳ್ಳಿ ಮಾರ್ಗವಾಗಿ ಶಿವನಸಮುದ್ರ ತಲುಪಿದಾಗ ೧೧ ಗಂಟೆ ಆಗಿತ್ತು. ಅಲ್ಲಿಯವರೆಗೂ ರಸ್ತೆ ಉತ್ತಮವಾಗಿದ್ದು, ಬೈಕ್ ಓಡಿಸಲು ತುಂಬಾ ಖುಷಿಯಾಗಿತ್ತು. ಮೊದಲು ಗಗನಚುಕ್ಕಿ ಜಲಪಾತದ ಬಳಿ ಬಂದೆವು.
ಮಳೆಗಾಲದ ಸಮಯವಾಗಿದ್ದರಿಂದ ಸುತ್ತಲು ಹಸಿರು ಹಾಗು ಹೆಚ್ಚಿನ ನೀರು ಜಲಪಾತದ ಸೌಂದರ್ಯವನ್ನು ಅದ್ಭುತವಾಗಿಸಿತ್ತು.


ಕಾವೇರಿ ನದಿಯು ಶಿವನಸಮುದ್ರದ ಬಳಿ ೨ ಕವಲಾಗಿ ಹರಿದು ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಸ್ಥಳಗಳಲ್ಲಿ ಆಳಕ್ಕೆ ಧುಮುಕಿ ಸುಂದರ ಜಲಪಾತದ ಸೃಷ್ಟಿಸಿ, ಮುಂದೆ ಒಂದಾಗಿ ಹರಿಯುತ್ತದೆ . ಈ ಎರಡು ಜಲಪಾತಗಳ ಅಂತರ ಸುಮಾರು ೩ ಕಿ.ಮೀ. ಗಗನಚುಕ್ಕಿ ವಿಶಾಲವಾಗಿದೆ, ಭರಚುಕ್ಕಿಯಲ್ಲಿ ನೀರಿನ ಸೆಳೆತ ಹೆಚ್ಚು. ಇದಕ್ಕೆ ಶಿಂಶಾ ಅಂತಲೂ ಹೆಸರಿದೆ. ಹಾಲು ಬಣ್ಣದ ಕಾವೇರಿ ಇಲ್ಲಿ ಮೈತುಂಬಿ ಹರಿಯುತಿದ್ದಳು..! ಇಲ್ಲಿನ ಸೌಂದರ್ಯ ಹುಚ್ಚೆದ್ದು ಕುಣಿಯುವಂತಾಗಿತ್ತು. ಇಲ್ಲಿ ಒಂದು ದರ್ಗಾ ಇದೆ. ದರ್ಗಾದ ಹಿಂಭಾಗದಿಂದ ಜಲಪಾತದ ಮೇಲ್ಭಾಗಕ್ಕೆ ಹೋಗಬಹುದು. ತೃಪ್ತಿಯಾಗುವಷ್ಟು ಸಮಯ ಜಲಪಾತವನ್ನು ವೀಕ್ಷಿಸಿ ಅಲ್ಲಿಂದ ಹೊರಟು ಭರಚುಕ್ಕಿ ಜಲಧಾರೆಯ ಬಳಿ ಬಂದೆವು.
ಇಲ್ಲಿ ಜಲಪಾತದ ಕೆಳಗೆ ನೀರಿನ ಸನಿಹಕ್ಕೆ ಹೋಗಬಹುದು. ಅದ್ಭುತವಾದ ವೀಕ್ಷಣೆ ಇಲ್ಲಿಂದ ಸಾಧ್ಯ..!! ಪ್ರವಾಸಿಗರನ್ನು ಸಾಗಿಸಲು ತೆಪ್ಪದ ವ್ಯವಸ್ಥೆಯು ಇತ್ತು...! ತೆಪ್ಪದ ಮೂಲಕ ನಾವೆಲ್ಲ ಜಲಪಾತದ ಬುಡಕ್ಕೆ ಹೋಗಿದ್ದೆವು..ಅದೊಂದು ಅವಿಸ್ಮರಣೀಯ ಅನುಭವ...! ಅಗಾಧ ಜಲಧಾರೆ..! ಅಷ್ಟೇ ಅಪಾಯವು ಹೌದು.. ! ಪ್ರಕೃತಿಯ ಮುಂದೆ ನಾವೆಲ್ಲಾ ತೃಣಕ್ಕೆ ಸಮಾನ ಅನ್ನಿಸಿತು..! ಹಸಿವಿನ ಅರಿವಿಲ್ಲದೆ ಸುಮಾರು ೩ ಗಂಟೆಗಳ ಕಾಲ ಜಲಪಾತದ ಸವಿಯನ್ನು ಅನುಭವಿಸಿದೆವು.
ಶಿವನಸಮುದ್ರದ ಸಹಜ ಸೌಂದರ್ಯ ಎಲ್ಲರನ್ನು ಬೇಗ ಮನಸೂರೆಗೊಳಿಸುತ್ತದೆ. ಅಲ್ಲಿನ ಹೋಟೆಲೊಂದರಲ್ಲಿ ಮಧ್ಯಾನ್ನದ ಊಟ ಮಾಡಿದೆವು. ಇಲ್ಲಿ ಊಟಕ್ಕೆ ಅಚ್ಚುಕಟ್ಟಾದ ಹೋಟೆಲಿನ ವ್ಯವಸ್ಥೆ ಇಲ್ಲ.
ಈ ಸುಂದರ ಸೇತುವೆಯ ಚಿತ್ರ ಗೆಳೆಯ ವಿನಾಯಕನ ಕೃಪೆ. ಇದು ಗಗನಚುಕ್ಕಿ ಮತ್ತು ಭರಚುಕ್ಕಿ ನಡುವಿನ ಹಾದಿಯಲ್ಲಿ ಸಿಗುವುದು. ಇಲ್ಲಿನ ಸುಂದರ ಪರಿಸರದಲ್ಲಿ ಅನೇಕ ಚಲನಚಿತ್ರಗಳ ಚಿತ್ರೀಕರಣ ನಡೆದಿದೆ..!!
ಶಿಂಶಾ ಊರಿನಲ್ಲಿ ಜಲವಿದ್ಯುತ್ ಸ್ಥಾವರ ಇದೆ. ಇದು ಏಷ್ಯ ಖಂಡದಲ್ಲಿಯೇ ಮೊದಲನೇ ಜಲವಿದ್ಯುತ್ ಸ್ಥಾವರ. ಇದರ ವೀಕ್ಷಣೆಗೆ ವಿಶೇಷ ಅನುಮತಿಯ ಅಗತ್ಯ ಇದೆ. ನಾವು ಹೊರಗಿನಿಂದಲೇ ಒಂದು ಸುತ್ತು ಹಾಕಿದೆವು. ಸ್ಥಾವರದಿಂದ ಬಂದ ನೀರು ಮುಂದೆ ಹರಿದು ಮೆಟ್ಟೂರು ಆಣೆಕಟ್ಟನ್ನು ಸೇರುತ್ತದೆ.
ಶಿಂಶಾದಿಂದ ಹೊರಟಾಗ ಸಣ್ಣಗೆ ಮಳೆ ಶುರುವಾಗಿತ್ತು. ಹಾಗೆಮಳೆಯಲ್ಲಿಯೇ ಸ್ವಲ್ಪ ದೂರ ಬೈಕನ್ನು ಓಡಿಸಿದೆವು, ಮಳೆಯು ಜಾಸ್ತಿ ಆದಾಗ ಅಲ್ಲಲ್ಲಿ ಸಿಗುತ್ತಿದ್ದ ಆಲೆಮನೆ, ಕೋಳಿ ಫಾರ್ಮ್ ನಲ್ಲಿ ಸ್ವಲ್ಪ ಹೊತ್ತು ನಿಂತಿದ್ದೆವು...!
ಮದ್ದೂರಿಗೆ ಬಂದು ವಡೆ ಚಪ್ಪರಿಸಿ, ಕಾಫಿ ಹೀರಿ ಬೆಂಗಳೂರಿನತ್ತ ಹೊರಟೆವು. ವಾಪಾಸು ಬರುವಾಗ ಅರವಿಂದ ಅವನ ಹ್ಯಾಂಡಿಕ್ಯಾಮ್ ನಲ್ಲಿ ಎಲ್ಲ ದೃಶ್ಯವನ್ನು ಸೆರೆಹಿಡಿಯುತಿದ್ದ.. !
ಈ ವರ್ಷ ಕೂಡ ಕಳೆದ ವರ್ಷದಂತೆಯೇ ಮಳೆ ಬರಲಿ....! ಮತ್ತೊಮ್ಮೆ ಜಲಪಾತ ಮೈದುಂಬಲಿ...!!