ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ವಿಳಂಬವಾಗಿ ಹೈದರಾಬಾದು ತಲುಪಿದೆ. ಗೆಳತಿಯ ಮನೆಯಲ್ಲಿ ಲಘು ಉಪಹಾರ, ಸಾಕಷ್ಟು ಮಾತು ಕತೆಯ ನಂತರ ಹೈದರಾಬಾದು ಸುತ್ತಲು ಹೊರಟೆವು. ಹೆಚ್ಚೇನು ವಿಶೇಷತೆ ಇಲ್ಲದ ನಗರದ ಅರ್ಧ ಭಾಗ ಸಾಫ್ಟವೇರ್ ಕಂಪೆನಿಗಳಿಂದ ತುಂಬಿದೆ. "ಬಿರಿಯಾನಿ-ಹೌಸ್" ರುಚಿಕಟ್ಟಾದ ಹೈದರಾಬಾದ್ ಬಿರಿಯಾನಿಗೆ ಫೇಮಸ್, ಪುಲ್ಲರೆಡ್ಡಿ ಅಂಗಡಿ ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯಗಳಿಗೆ ಪ್ರಸಿದ್ಧ. ಇದು ಬಿಟ್ಟರೆ ವರಟು ಜನ, ರಸ್ತೆ ಸಂಚಾರದ ನಿಯಮಗಳು ತಿಳಿದಿದ್ದರೂ ಅನುಸರಿಸುವ ವ್ಯವಧಾನ ಯಾರಿಗೂ ಇದ್ದ ಹಾಗೆ ಕಾಣುವುದಿಲ್ಲ. ಎಲ್ಲೆಂದರಲ್ಲಿ ಕಾಣಿಸುವುದು ಚಿತ್ರಮಂದಿರಗಳು. ಎಲ್ಲವೂ ಭರ್ತಿ..!
ನಗರದ ಮಧ್ಯ ಭಾಗದಲ್ಲಿರುವ ಮಹಾವಿಷ್ಟುವಿನ "ಬಿರ್ಲಾ ಮಂದಿರ" ಸುಂದರವಾದ ದೇವಾಲಯ. ಸಂಪೂರ್ಣ ಮಾರ್ಬಲ್ ನಿಂದ ಕಟ್ಟಿದ ದೇವಾಲಯದಲ್ಲಿ ಕ್ಯಾಮೆರಾ ಮತ್ತು ಮೊಬೈಲ್ ಫೋನುಗಳು ನಿಷಿದ್ಧ.
ಜನರಲ್ ಬಜಾರು ಹೆಣ್ಣು ಮಕ್ಕಳಿಗೆ ಪ್ರಿಯವಾದ ಜಾಗ. ಇಲ್ಲಿ ಅತಿ ಕಡಿಮೆ ಬೆಲೆಗೆ ಗುಣಮಟ್ಟದ ಡ್ರೆಸ್ ಮೆಟೀರಿಯಲ್ ಸಿಗುತ್ತದೆ.
ಚಾರ್-ಮಿನಾರ್ ಒಂದು ಅದ್ಭುತ ಶಿಲ್ಪಕಲೆ. ಇಸ್ಲಾಂ ಶೈಲಿಯ ಸುಂದರ ಕೆತ್ತನೆಗಳು, ೪ ಜನ ಪ್ರವಾದಿಗಳ ನೆನಪಿಗೋಸ್ಕರ ಕಟ್ಟಿದ ೪ ಕಂಬಗಳು ವಿಶಿಷ್ಟತೆಯನ್ನು ಸಾರುತ್ತವೆ.
ಮೊಹಮ್ಮದ್ ಕುತುಬ್ ಷಾ ಎಂಬುವನು ೧೫೯೧ ನೇ ಇಸವಿಯಲ್ಲಿ ಕಟ್ಟಿದ ಚಾರ್-ಮಿನಾರ್ ನ ಒಂದೊಂದು ಕಂಬಗಳು ಸುಮಾರು ೪೮.೭ ಮೀ ಎತ್ತರ ಇದೆ.
ಚಾರ್-ಮಿನಾರಿನ ಸುತ್ತಲು ಇರುವ ಬೀದಿಗಳು ಹೈದರಾಬಾದ್ ಮುತ್ತಿಗೆ ಪ್ರಸಿದ್ಧ. ಅತಿ ಸುಂದರ ಮುತ್ತಿನ ಹಾರ, ಕಿವಿಯೋಲೆ ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ. ೧೫೦೦ ರೂಪಾಯಿ ಹಾರ ಚೌಕಾಸಿ ನಂತರ ೩೦೦ ಕ್ಕೆ ದೊರಕಿತು.
ಹೈದರಾಬಾದಿನ ಪ್ರಮುಖ ಆಕರ್ಷಣೆ "ರಾಮೋಜಿ ಫಿಲಂ ಸಿಟಿ". ನಗರದಿಂದ ೩೦ ಕಿ. ಮೀ ದೂರ ವಿಶಾಲವಾದ ೨೦೦೦ ಎಕರೆ ಪ್ರದೇಶದಲ್ಲಿ ಇರುವ ರಾಮೋಜಿ ಫಿಲಂ ಸಿಟಿಯು ಊಹೆಗೂ ನಿಲುಕದ ವಿಶಿಷ್ಟತೆಗಳ ಪ್ರಪಂಚ. ರಾಮೋಜಿ ರಾವ್ ಎಂಬ ದೂರದೃಷ್ಟಿಯ, ಪಕ್ಕಾ ವ್ಯವಹಾರಸ್ಥನ ಬುದ್ಧಿಯಿಂದ ಅರಳಿದ ಕಲಾಗಾರ. ಚಿತ್ರರಂಗಕ್ಕೆ ಏನೇನು ಬೇಕೋ ಅದೆಲ್ಲ ಇಲ್ಲಿ ಲಭ್ಯ. ಅರಮನೆಯಿಂದ ಹಿಡಿದು ಗುಡಿಸಲು ತನಕ , ವಿಮಾನ, ರೈಲ್ವೆ ನಿಲ್ದಾಣ, ಮೈಸೂರು ಬೃಂದಾವನ, ಜೈಲು, ವಿವಿಧ ತಂತ್ರಜ್ಞಾನ ಪಂಚತಾರಾ ಹೋಟೆಲು, ವಸತಿ ಗೃಹ, ಮಕ್ಕಳ ಆಟದ ಮೈದಾನ ಎಲ್ಲವೂ ಒಂದೇ ಸ್ಥಳದಲ್ಲಿ ಲಭ್ಯ.
ಮುಖದ್ವಾರ
ಸಂಚಾರಕ್ಕೆ, ಫಿಲಂ ಸಿಟಿಯ ದರ್ಶನಕ್ಕೆ ವಿಶೇಷವಾಗಿ ನಿರ್ಮಿಸಿದ ಬಸ್ಸು.
ಈ-ಟಿವಿ ಕಾರ್ಯವಾಹಿನಿಯ ಕೇಂದ್ರ ಕಚೇರಿ, ಇದು ನಿಜವಾದದ್ದು..!!
ಹುಸ್ಸೇನ್ ಸಾಗರ ಕೆರೆ. ಕೃತಕವಾಗಿ ನಿರ್ಮಿಸಿದ ಈ ಕೆರೆಯ ಮಧ್ಯದಲ್ಲಿ ಬುದ್ಧನ ವಿಗ್ರಹ ಇದೆ. ಇಲ್ಲಿ ಬೋಟಿಂಗ್ ವ್ಯವಸ್ಥೆಯೂ ಇದೆ. ಕೆರೆಯ ಸುತ್ತಲೂ ಇರುವ ಸುಂದರವಾದ ಉದ್ಯಾನವನವನ ಸಂಜೆಯ ವೇಳೆ ಕಳೆಯಲು ಸೂಕ್ತವಾದ ಜಾಗ.