Wednesday, February 10, 2010

ಕಾವೇರಿ ನದಿಯ ತೀರದ ವಿಹಾರಧಾಮ - ಭೀಮೇಶ್ವರಿ

ಅಂದು ಭಾನುವಾರ ೩೧ ಜನವರಿ, ಚುಮು ಚುಮು ಚಳಿಯಲ್ಲಿ ಬೇಗನೆ ಎದ್ದು ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ನಮ್ಮ ಆಫೀಸ್ ಕಡೆಗೆ ದೌಡಾಯಿಸಿದೆ. ಮೊದಲೇ ನಿಗದಿಯಾದಂತೆ ಎಲ್ಲ ಸಹೋದ್ಯೋಗಿಗಳು ಅಲ್ಲಿ ಬಂದು ಸೇರಿದ್ದರು. ೭.೪೦ಕ್ಕೆ ಸರಿಯಾಗಿ ೫೫ ಜನರನ್ನು ತುಂಬಿಕೊಂಡ ನಮ್ಮ ಬಸ್ಸು ಮೈಸೂರು ಕಡೆಯತ್ತ ಹೊರಟಿತು. ಎಲ್ಲರ ಮುಖದಲ್ಲಿ ಉತ್ಸಾಹ ತುಂಬಿ ತುಳುಕುತಿತ್ತು. ಆಫೀಸ್ ನಿಂದ ಮೊದಲ ಬಾರಿಗೆ ಪ್ರವಾಸಕ್ಕೆ ಹೊರಟಿದ್ದೆವು. ಮುಂಜಾನೆಯ ಶುಭಾಶಯ ವಿನಿಮಯ ನಂತರ ಲೋಕಾಭಿರಾಮ ಮಾತು ಹರಟೆ ಜೊತೆಗೆ ನಮ್ಮ ಪ್ರಯಾಣ ಸಾಗಿತು.


ಸರಿಯಾಗಿ ೯ ಗಂಟೆಗೆ ಕಾಮತ್ ಲೋಕರುಚಿ ಗೆ ಧಾಳಿ ಇಟ್ಟೆವು. ತಿಂಡಿಗೆ ಬಫೆ ವ್ಯವಸ್ಥೆ..! ಅಲ್ಲಿದ್ದಿದ್ದು ಕೊಟ್ಟೆ ಇಡ್ಲಿ, ವಡ, ಉಪ್ಪಿಟ್ಟು, ಕೆಸರಿಭಾತ್, ಅಕ್ಕಿ ರೊಟ್ಟಿ, ಹೋಳಿಗೆ, ತರತರದ ದೋಸೆ, ಪೊಂಗಲ್, ಬಾಳೆಹಣ್ಣು, ಪಪ್ಪಾಳೆ ಹಣ್ಣು ಹಾಗೂ ದ್ರಾಕ್ಷಿ ಹಣ್ಣಿನ ರಸ, ಕಾಫೀ ಮತ್ತು ಟೀ ಅಷ್ಟೇ...!! ಯಾವುದೇ ಅವಸರವಿಲ್ಲದೇ ಎಲ್ಲವನ್ನು ಮತ್ತೆ ಮತ್ತೆ ಹಾಕಿಸಿಕೊಂಡು ಭರ್ಜರಿ ಬ್ಯಾಟ್ಟಿಂಗ್ ಮಾಡಿದೆವು. ಬೆಳಿಗ್ಗೆ ಬೇಗನೆ ಎದ್ದಿದ್ದರಿಂದ ಚನ್ನಾಗಿ ಹಸಿವು ಕೂಡ ಆಗಿತ್ತು. ಈಗ ಎಲ್ಲರ ಮುಖದಲ್ಲಿ ಡಬಲ್ ಉತ್ಸಾಹ...!

ಅಲ್ಲಿಂದ ಮುಂದೆ ಹಾಡು, ಅಂತಾಕ್ಷರಿ, ನೃತ್ಯ ಕೇಕೆ, ಮೋಜಿನೊಂದಿಗೆ ನಮ್ಮ ಪ್ರಯಾಣ ಮುಂದುವರೆಯಿತು. ೧೦.೩೦ಕ್ಕೆ ಕಾವೇರಿ ನದಿಯ ತೀರದಲ್ಲಿರುವ ಭೀಮೆಶ್ವರಿ ಎಂಬ ನಿಸರ್ಗ ಧಾಮಕ್ಕೆ ತಲುಪಿದೆವು. ಬೆಂಗಳೂರಿಗೆ ತುಸು ದೂರದಲ್ಲಿರುವ ಭೀಮೆಶ್ವರಿ ವಾರಾಂತ್ಯ ಕಳೆಯಲು ಸೂಕ್ತವಾದ ಜಾಗ. ಜಂಗಲ್ ಲಾಡ್ಜಸ್ & ರಿಸಾರ್ಟ್ ನವರು ನಡೆಸುತ್ತಿರುವ ಈ ರೆಸೊರ್ಟಿನಲ್ಲಿ ಉಳಿದಂತೆ ಎಲ್ಲ ಅನುಕೂಲವೂ ಇದೆ. ಅವರವರ ಅಗತ್ಯಕ್ಕೆ, ಜೇಬಿನ ವೆಚ್ಚಕ್ಕೆ ತಕ್ಕಂತೆ ಐಷಾರಾಮಿ ಅನುಕೂಲಗಳನ್ನು ಪಡೆಯಬಹುದು.



ದಟ್ಟ ಕಾಡು, ನದಿ ತೀರ, ಸುಂದರ ಸ್ವಚ್ಛ ವಾತಾವರಣ. ಸ್ವಾಗತ ಪಾನೀಯ ಸೇವನೆ ನಂತರ ಸುತ್ತ ಮುತ್ತ ಎಲ್ಲ ಕಡೆ ಓಡಾಡಿದೆವು.



ಸ್ವಲ್ಪ ದಣಿವಾರಿಸಿಕೊಂಡು ಅಲ್ಲಿಯೇ ಹತ್ತಿರ ಇದ್ದ ವೀಕ್ಷಣಾ ಗೋಪುರಕ್ಕೆ ಚಾರಣ ಹೊರಟೆವು. ಬಿಸಿಲಿನ ಧಗೆ ಹೆಚ್ಚಿದ್ದರೂ ಎಲ್ಲರೂ ಉತ್ಸಾಹದಿಂದಲೇ ಹೆಜ್ಜೆ ಹಾಕುತಿದ್ದರು. ೧೦ ರಿಂದ ೧೨ ಜನರು ಚಾರಣವನ್ನು ಅರ್ಧಕ್ಕೆ ಮುಗಿಸಿದರು. ಇನ್ನೂ ಕೆಲವರು ದಾರಿ ತಪ್ಪಿಸಿಕೊಂಡು ಹಾಗೂ ಹೀಗೂ ಸ್ವಸ್ಥಾನ ತಲುಪಿಕೊಂಡರು. ಗೋಪುರ ತಲುಪಿದ ನಮಗೆ ನಿರಾಸೆಯಾಗಲಿಲ್ಲ.






ವೀಕ್ಷಣಾ ಗೋಪುರದಿಂದ ಕಾವೇರಿ ಕಣಿವೆ ದೃಶ್ಯ ಅದ್ಭುತವಾಗಿತ್ತು. ಅಂಕು ಡೊಂಕಾಗಿ ಹರಿಯುವ ನದಿ, ಛಳಿಗಾಲಕ್ಕೆ ಮಾಗಿ ಹಣ್ಣೆಲೆ ಉದುರುತಿದ್ದ ಕಾಡಿನ ಸುಂದರ ದೃಶ್ಯ, ತಣ್ಣಗೆ ಬೀಸುತಿದ್ದ ಗಾಳಿ ನಮ್ಮ ಆಯಾಸವನ್ನು ನೀಗಿಸಿತ್ತು.


ಅದೃಷ್ಟ ಇದ್ದರೆ ಕಾಡಾನೆಗಳ ವೀಕ್ಷಣೆ ಸಾಧ್ಯ. ನಮ್ಮ ಗುಂಪಿಗೆ ಯಾವುದೇ ಕಾಡು ಪ್ರಾಣಿ ಎದುರಾಗಲಿಲ್ಲ..!





ಹಸಿದಿದ್ದ ಎಲ್ಲರೂ ಮುಂದಿನ ಊಟವನ್ನು ನೆನೆಸಿಕೊಂಡು ವೇಗವಾಗಿಯೇ ನಡೆದು ರಿಸಾರ್ಟ್ ತಲುಪಿಕೊಂಡೆವು. ಪರವಾಗಿಲ್ಲ ಅನ್ನಬಹುದಾದ ಊಟ ಮುಗಿಸಿ ಮರದ ನೆರಳಿನಲ್ಲಿ ವಿರಮಿಸಿದೆವು. ಹರಟೆ, ವಿಶ್ರಾಂತಿ, ಜೋಕಾಲಿ, ಹಗ್ಗದ ವಿವಿಧ ಆಟ, ನದಿಯಲ್ಲಿ ಸ್ನಾನ, ನೀರಲ್ಲಿ ಆಟ ಅಂತ ಅವರವರ ಅಭಿರುಚಿಗೆ ತಕ್ಕಂತೆ ಸಮಯ ಕಳೆದೆವು.



ಅಲ್ಲಿಯವರೆಗೂ ನಮಗೆ ನದಿಯಲ್ಲಿನ ಅಪಾಯದ ಅರಿವು ಆಗಿರಲಿಲ್ಲ. ಅಲ್ಲಿನ ಸಹಾಯಕನೊಬ್ಬ ಬಂದು ನದಿಯಲ್ಲಿ ಸ್ನಾನ ಮಾಡುತ್ತಿದ್ದವರನ್ನು ಎಚ್ಚರಿಸಿದಾಗ ಅಪಾಯದ ಅರಿವಾದದ್ದು. ಬಂಡೆಗಳ ಮೇಲೆ ಮಲಗಿದ್ದ ಬೃಹತ್ ಮೊಸಳೆಗಳನ್ನು ನೋಡಿದಾಗ ನೀರಲ್ಲಿ ಇದ್ದವರು ಒಂದೇ ಉಸಿರಿಗೆ ದಡವನ್ನು ಸೇರಿದರು. ಬರಿಗಣ್ಣಿಗೆ ಬಂಡೆಯಂತೆ ಕಾಣುತಿದ್ದ ಮೊಸಳೆಗಳು ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಗೋಚರಿಸುತಿದ್ದವು. ಇಂತಹ ನೂರಾರು ಮೊಸಳೆಗಳು ಅಲ್ಲಿರುವುದು ಗೊತ್ತಾಯಿತು. ನಂತರ ಯಾರೂ ನದಿಯ ಹತ್ತಿರ ಸುಳಿಯಲಿಲ್ಲ.

ಕಬಡ್ಡಿ, ಹಗ್ಗ ಜಗ್ಗಾಟ, ಕುಂಟೆಬಿಲ್ಲೆ ಮೊದಲಾದ ಗ್ರಾಮೀಣ ಆಟಗಳನ್ನು ಆಡುತ್ತಾ ನಮ್ಮನ್ನು ಮರೆತಿದ್ದೆವು. ಗುಂಪಿನಲ್ಲಿ ಎಲ್ಲರೂ ಯಾವುದೇ ಬೇದಭಾವ ಇಲ್ಲದೇಒಂದಾಗಿ ಹುರುಪಿನಿಂದಲೇ ಎಲ್ಲ ಆಟವನ್ನು ಆಡಿದರು. ದೇಸೀಯ ಆಟಗಳ ಗಮ್ಮತ್ತೆ ಬೇರೆ..!


ನಂತರ ತೆಪ್ಪದಲ್ಲಿ ನೀರಿನ ಮೇಲೆ ತೇಲಿದೆವು. ಮೊದಲು ಮೊಸಳೆಗಳ ಬಗ್ಗೆ ಭಯ ಇತ್ತಾದರೂ, ಅವುಗಳಿಗೆ ನಮಗಿಂತ ಭಯ, ಮನುಷ್ಯರೇ ಹೆಚ್ಚು ಅಪಾಯ ಎಂದುಸಹಾಯಕ ತಿಳಿಸಿದ್ದರಿಂದ ಧೈರ್ಯವಾಗಿ ನೀರಿನ ಮಜ ಅನುಭವಿಸಿದೆವು. ಜೀವನದಲ್ಲಿ ಸ್ವಾತಂತ್ರವಾಗಿದ್ದ ಮೊಸಳೆಯನ್ನು ಇಷ್ಟು ಹತ್ತಿರದಿಂದ ನೋಡಿದ್ದು ನಾನು ಇದೆ ಮೊದಲ ಸಲ.


ತೆಪ್ಪದಲ್ಲಿ ಹುಟ್ಟುಹಾಕುವನಿಗೆ ಪ್ರತ್ಯೇಕ ಭಕ್ಷೀಸು ಕೊಟ್ಟು ಮೊಸಳೆ ಹೆಚ್ಚು ಇರುವ ಜಾಗಕ್ಕೆ ಹೋಗಿದ್ದೆ. ಸುಮಾರು ೧೦-೧೫ ಮೊಸಳೆಗಳು ಒಟ್ಟಿಗೆ ಇದ್ದವು. ನಮ್ಮನ್ನು ಕಂಡ ಕೂಡಲೇ ನೀರಿಗೆ ಇಳಿಯುತಿದ್ದವು. ಅವುಗಳ ಹಿಸ್‌ಸ್ಸ್ ಅನ್ನುವ ಶಬ್ದ ಕೂಡ ಕೇಳುತಿತ್ತು .ಅದೊಂದು ಅದ್ಭುತ ಅನುಭವ...!



ಇಲ್ಲಿನ ನದಿಯಲ್ಲಿ ಮಹಾಶೀರ್ ಅನ್ನುವ ಜಾತಿಯ ಮೀನು ಹೇರಳ. ಈ ಮೀನುಗಳು ೧೫ ಕೇಜಿ ವರೆಗೂ ಬೆಳೆಯುತ್ತವೆ. ಈ ಮೀನುಗಳನ್ನು ಹಿಡಿಯಲೆಂದೇ ಪ್ರವಾಸಿಗರು, ಹವ್ಯಾಸಿ ಮೀನುಗಾರರು ಇಲ್ಲಿಗೆ ಬರುತ್ತಾರೆ. ಹೆಚ್ಚು ತೂಕದ ದೊಡ್ಡ ಮೀನನ್ನು ಹಿಡಿದು, ದಾಖಲಿಸಿ ಪುನಃ ನೀರಿಗೆ ಬಿಡಲಾಗುತ್ತದೆ.

ನನಗೂ ಒಂದು ಸಣ್ಣ ಮೀನು ಸಿಕ್ಕಿತು, ಆದರೆ ಅದು ಮಹಾಶೀರ್ ಆಗಿರಲಿಲ್ಲ ...! ಹಾಗಾಗಿ ಅದನ್ನು ಮಾರ್ಗದರ್ಶಕ ನೀರಿಗೆ ಇಳಿಸುವುದನ್ನು ಬಿಟ್ಟು ಜೇಬಿಗೆ ಇಳಿಸಿದ.





ಸೂರ್ಯಾಸ್ತ ಸಮಯದಲ್ಲಿ ಹಿತವಾದ ಕಾಫೀ ಕುಡಿದು, ಸುಂದರ ದೃಶ್ಯವನ್ನು ಕಣ್ತುಂಬಿಕೊಂಡೆವು. ನೆನಪಿನಲ್ಲಿ ಉಳಿಯುವಂತ ಸುಂದರ ದಿನವನ್ನು ಕಳೆದು, ಹಾಡು ಕೇಕೆ ಹಾಕುತ್ತಾ ಬಸ್ಸಿನಲ್ಲಿ ಬೆಂಗಳೂರಿನತ್ತ ಹೊರಟೆವು.

15 comments:

Arvi said...

Excellent write up & nice pics Bhatta.
Nane pravasa madida anubhava aythu .. keep it up. Continue to write more n more blogs..

Cheers,
Arvi

Shweta said...

paachu anna,...

you are rocking now!!

ಸಾಗರದಾಚೆಯ ಇಂಚರ said...

ಪಾಪು-ಪ್ರಪಂಚ
ತುಂಬಾ ಸುಂದರ ಫೋಟೋಗಳು ಮತ್ತು ವಿವರಣೆ
ನಾವು ಹೋಗಬೇಕು ಅನಿಸ್ತ ಇದೆ

V.R.BHAT said...

chennagide, keep writing

shivu.k said...

ಪ್ರಶಾಂತ್ ಭಟ್,

ನಾನು ಇನ್ನೂ ಭೀಮೇಶ್ವರಿ ರೆಸಾರ್ಟ್ ನೋಡಿಲ್ಲ. ನಿಮ್ಮ ಚಿತ್ರ ಸಹಿತ ಲೇಖನವನ್ನು ನೋಡಿ ನನಗೂ ಹೋಗಬೇಕೆನಿಸಿದೆ.

ಧನ್ಯವಾದಗಳು.

ಶರಶ್ಚಂದ್ರ ಕಲ್ಮನೆ said...

ಸುಂದರ ಫೋಟೋಗಳು... ನವಿರಾದ ನಿರೂಪಣೆ... ನನಗೂ ಭೀಮೇಶ್ವರಿ ನೋಡುವ ಆಸೆಯಾಗುತ್ತಿದೆ :)

ಪಾಚು-ಪ್ರಪಂಚ said...

Hi Arvi,

Thanks for your nice comments.

Keep visiting.

Regards
Prashanth Bhat

ಪಾಚು-ಪ್ರಪಂಚ said...

Dear Shwetha,

Journey is just started :-), as your expectations increased like my responsibility.

Thank you for your comment

Regards
Paachu

ಪಾಚು-ಪ್ರಪಂಚ said...

ಗುರು ಹೆಗಡೆ (ಸಾಗರದಾಚೆಯ ಇಂಚರ) ಅವರೇ,

ಸಹಜ ಸೌಂದರ್ಯದ ಭೀಮೆಶ್ವರಿ ಪ್ರಕೃತಿ ಬೇಗನೆ ಇಷ್ಟವಾಗುತ್ತದೆ. ಕೆಲಸದ ಒತ್ತಾದ ಮರೆತು ಎಲ್ಲರೂ ನಕ್ಕೂ ನಲಿಯುತ್ತಾ ದಿನವನ್ನು ಕಳೆದಿದ್ದು ಈ ಸಲದ
ವಿಶೇಷ.

ವಿವರಣೆ ಮತ್ತು ಫೋಟೋವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

-ಪ್ರಶಾಂತ್ ಭಟ್

ಪಾಚು-ಪ್ರಪಂಚ said...

ವಿ.ಆರ್.ಭಟ್ ಅವರೇ,

ಪಾಚುಪ್ರಪಂಚಕ್ಕೆ ಸ್ವಾಗತ. ನಿಮ್ಮ ಹಾರೈಕೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

ಹೀಗೆ ಬರುತ್ತಲಿರಿ.

-ಪ್ರಶಾಂತ್ ಭಟ್

ಪಾಚು-ಪ್ರಪಂಚ said...

ಶಿವು ಅವರೇ,

ಇದೇ ರೆಸೊರ್ಟಿಗೆ ನಾನು ಹೋಗುತ್ತಿರುವುದು ಇದು ಎರಡನೆಯ ಸಲ. ಇಲ್ಲಿನ ನದಿ ತೀರ, ಪಕ್ಷಿ ಸಂಕುಲ, ನದಿಯಲ್ಲಿನ ಮೊಸಳೆ ಎಲ್ಲವೂ ಗಮನ ಸೆಳೆಯುತ್ತವೆ.

ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು

-ಪ್ರಶಾಂತ್ ಭಟ್

ಪಾಚು-ಪ್ರಪಂಚ said...

ಶರತ್,

ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.
ಮಳೆಗಾಲ ಮುಗಿದ ದಿನಗಳು ಈ ರೆಸೊರ್ಟಿಗೆ ಭೇಟಿ ನೀಡಲು ಸೂಕ್ತ.

ಧನ್ಯವಾದಗಳು
ಪ್ರಶಾಂತ್ ಭಟ್

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

ಚಿನ್ಮಯ said...

Baraha mattu chitragalu tumba chennagive!
3 varsha mysoralli iddaru bheemeshwarige hogalu agillavalla anta eega bejaragtide!

ಪಾಚು-ಪ್ರಪಂಚ said...

ಚಿನ್ಮಯ ಅವರೇ,

ಪಾಚುಪ್ರಪಂಚಕ್ಕೆ ಸ್ವಾಗತ. ಮಳೆಗಾಲದ ನಂತರ ನವೆಂಬರ್ ತಿಂಗಳು ಭೀಮೇಶ್ವರಿ ತುಂಬಾ ಸುಂದರವಾಗಿರುತ್ತೆ, ಹಾಗೆಯೆ ಅಲ್ಲಿ ರಾಫ್ಟಿಂಗ್ ಕೂಡ ಇರುತ್ತೆ, ಈ ಸಮಯದಲ್ಲಿ ಹೋಗಿ ಬನ್ನಿ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

-ಪ್ರಶಾಂತ್