Wednesday, October 20, 2010

ಹೊಗೆನಕಲ್ ಜಲಪಾತ

ದಿನಾಂಕ : ಸೆಪ್ಟೆಂಬರ್ ೫, ೨೦೧೦
ಕಾರಿನಲ್ಲಿ : ನಾನು, ಅರವಿಂದ, ಸುಹಾಸ್, ದೀಪಕ್
ಕ್ರಮಿಸಿದ ದೂರ : ೨೭೦ ಕಿ.ಮೀ
ದಾರಿ : ಬೆಂಗಳೂರು -> ಎಲೆಕ್ಟ್ರೋನಿಕ್ ಸಿಟಿ -> ಹೊಸೂರು -> ಕೃಷ್ಣಗಿರಿ -> ಧರಂಪುರಿ -> ಹೊಗೆನಕಲ್

ಬೆಂಗಳೂರಿನವರಿಗೆ ತುಂಬಾ ಪರಿಚಯದ ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಜಾಗ ಅಂದರೆ ಥಟ್ಟನೆ ನೆನಪಾಗುವುದು ಹೊಗೆನಕಲ್ ಫಾಲ್ಸ್. ಬೆಂಗಳೂರಿಂದ ಸುಮಾರು ೧೩೦ ಕಿ.ಮೀ ದೂರ ಇರುವ ಈ ಜಲಪಾತಕ್ಕೆ "ಭಾರತದ ನಯಾಗರ" ಅಂತಲೂ ಕರೆಯುತ್ತಾರೆ. ಈ ಜಲಪಾತದ ಬಗ್ಗೆ ಹೆಚ್ಚಿನ ವಿವರ ಬರೆಯುವ ಅಗತ್ಯ ಇಲ್ಲ, ಅಂತರ್ಜಾಲದಲ್ಲಿ ಬೇಕಾದಷ್ಟು ಮಾಹಿತಿ ಸಿಗುತ್ತದೆ.


ಕಾವೇರಿ ನದಿಯು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಗೆನಕಲ್ ಎಂಬಲ್ಲಿ ಸುಂದರ ಜಲಪಾತ ಸೃಷ್ಟಿಸಿದೆ. ಸುಮಾರು ೧ ಕಿ.ಮೀ ಸುತ್ತಳತೆಯಲ್ಲಿ ಎಲ್ಲಿ ನೋಡಿದರೂ ಜಲಪಾತಗಳೇ ಕಾಣಸಿಗುತ್ತದೆ. ಸುಣ್ಣದ ಕಲ್ಲಿನ ಬಂಡೆಗಳ ಮಧ್ಯೆ ರಭಸವಾಗಿ ಧುಮ್ಮಿಕ್ಕುವ ಜಲಪಾತವು "ಹೊಗೆ" ಎದ್ದಂತೆ ಭಾಸವಾಗುವುದರಿಂದ ಹೊಗೆ-ನ-ಕಲ್ಲು ಎಂದು ಹೆಸರು ಬಂದಿರಬಹುದು. ಜಲಪಾತಕ್ಕೂ ಮೊದಲು ನದಿಯು ಕಾಡು, ಗುಡ್ಡಗಳನ್ನು ಬಳಸಿ ಬರುವುದರಿಂದ ಇಲ್ಲಿನ ನೀರು ಔಷಧಿಯುಕ್ತವಾಗಿರುತ್ತದೆ.
ಮಸ್ಸಾಜು ಸ್ನಾನ, ತೆಪ್ಪದಲ್ಲಿ ಜಲಪಾತದ ವೀಕ್ಷಣೆ ಇಲ್ಲಿನ ಪ್ರಮುಖ ಆಕರ್ಷಣೆ.

ಮಳೆಗಾಲದಲ್ಲಿ ಮೈದುಂಬಿಕೊಂಡಿರುವ ಜಲಪಾತದ ಸೌಂದರ್ಯದ ಬಗ್ಗೆ ಎರಡು ಮಾತಿಲ್ಲ. ಆದರೆ ಸುತ್ತಮುತ್ತಲ ಪರಿಸರ ಅಷ್ಟು ಸ್ವಚ್ಚವಾಗಿಲ್ಲ. ವಾರಾಂತ್ಯಗಳಲ್ಲಿ ಪ್ರವಾಸಿಗರಿಂದ ತುಂಬಿರುತ್ತದೆ. ಊರೊಳಗೆ ಒಂದೂ ಸಸ್ಯಾಹಾರಿ ಹೋಟೆಲ್ ಇಲ್ಲ. ಹಾಗಾಗಿ ಪ್ರವಾಸಿಗರು ಮನೆಯಿಂದ ಆಹಾರ ಕಟ್ಟಿಸಿಕೊಂಡು ಹೋಗುವುದು ಉತ್ತಮ.


ಬೆಳಗಿನ ಉಪಹಾರ ಕೃಷ್ಣಗಿರಿ ಹೆದ್ದಾರಿಯಲ್ಲಿನ ಕಾಮತ್ ಹೋಟೆಲಿನಲ್ಲಿ ಮುಗಿಸಿದೆವು. ಹೊಸೂರು ಹೆದ್ದಾರಿಯು ಡ್ರೈವಿಂಗ್ ಗೆ ಉತ್ತಮವಾಗಿದ್ದು, ಡ್ರೈವಿಂಗ್ ಮಜಾ ಅನುಭವಿಸುತ್ತ ಹೊಗೆನಕಲ್ ತಲುಪಿದಾಗ ೧೦ ಗಂಟೆ. ಜಲಪಾತ ವೀಕ್ಷಣೆಗೆ ತೆಪ್ಪ ಅಗತ್ಯ ಇರುವುದರಿಂದ ತೆಪ್ಪದ ಮಾಲೀಕರಿಗೆ ಕೇಳಿದಷ್ಟು ಹಣ ಕೊಡುವುದು ಅನಿವಾರ್ಯ. ಹೇಗಿದ್ದರೂ ಪ್ರವಾಸಿಗರು ಇಲ್ಲಿಗೆ ಬಂದಮೇಲೆ ಜಲಪಾತ ನೋಡದೆ ಹಿಂದಿರುಗುವದಿಲ್ಲ ಎಂಬ ವಿಶ್ವಾಸ ಅವರದ್ದು. ತುಂಬಾ ಹೊತ್ತಿನ ಚೌಕಾಸಿಯ ನಂತರ ೧೩೦೦ ರುಪಾಯಿ ಇಂದ ೧೦೦೦ ರುಪಾಯಿಗೆ ಇಳಿಸಿದೆವು. ಬರಿಯ ಜಲಪಾತ ವೀಕ್ಷಣೆಗೆ ಒಂದು ಚಾರ್ಜು, ಅಲ್ಲಿ ಸ್ನಾನ ಸ್ವಲ್ಪ ಬಿಡುವಿಗೆ ಬೇರೆ ಚಾರ್ಜು..:-) ತುಸು ದುಬಾರಿ ಎನಿಸಿದರೂ ಜಲಪಾತದ ಅದ್ಭುತ ಸೌಂದರ್ಯ ಅದನ್ನು ಮರೆಸಿತು.

ಮೊದಲು ಕರ್ನಾಟಕ ಗಡಿಯಲ್ಲಿರುವ ಜಲಪಾತ ವೀಕ್ಷಿಸಿದೆವು, ಕಲ್ಲನ್ನು ಸೀಳಿಕೊಂಡು ವಿಸ್ತಾರವಾಗಿ ಧುಮುಕುವ ಈ ಜಲಪಾತ ಕಣ್ಣಿಗೆ ಹಬ್ಬ. ಮಳೆಗಾಲದ ನಂತರ ಸೌಂದರ್ಯ ಇಮ್ಮುಡಿಯಾಗಿತ್ತು. ನೀರಿನ ರಭಸ ಮೈ ಜುಮ್ಮೆನ್ನುವಂತಿತ್ತು. ಅನುಭವಿ ಮೀನುಗಾರರು ಈ ಜಲಪಾತದ ಕೊರಕಲಿನಲ್ಲಿ ಮೀನು ಹಿಡಿಯಲು ಇಳಿಯುತ್ತಾರೆ...!!!

ನಾವು ಅಲ್ಲಿಂದ ಹೊರಡುವ ಸೂಚನೆ ಕಾಣದಿದ್ದಾಗ, ತೆಪ್ಪದವ ಬಂದು ಹೊರಡುವಂತೆ ಸೂಚಿಸಿದ. ನದಿಯ ಆಳ ಕಡಿಮೆ ಇರುವಲ್ಲಿ, ಸ್ವಚ್ಛ ನೀರಿನ ಜಾಗದಲ್ಲಿ ನಾವು ಸ್ನಾನ ಮುಗಿಸಿದೆವು.

ಅಲ್ಲಿಂದ ಹೊರತು ತಮಿಳುನಾಡಿನ ಭಾಗದಲ್ಲಿರುವ ಜಲಪಾತಕ್ಕೆ ಬಂದೆವು. ನೀರು ಮೈಮೇಲೆ ಉಕ್ಕಿ ಬಂದಂತೆ ಭಾಸವಾಗುವ ಈ ಜಲಪಾತವನ್ನು ಹತ್ತಿರದಿಂದ ವೀಕ್ಷಿಸಬಹುದು. ಸುತ್ತಲೂ ಸಣ್ಣ ಸಣ್ಣ ಜಲಪಾತಗಳು, ನೀರಿನ ಅಗಾಧತೆ ಇಲ್ಲಿನ ವಿಶೇಷ. ಜಲಪಾತ ವೀಕ್ಷಣೆಗೆ ಸರಕಾರ ತೂಗುಸೇತುವೆ ಕೂಡ ನಿರ್ಮಿಸಿದೆ. ಬೇಸಿಗೆ ಕಾಲದಲ್ಲಿ ನೀರಿನ ಹರಿವು ಕಡಿಮೆ ಇದ್ದಾಗ ತೆಪ್ಪದಲ್ಲಿ ಜಲಪಾತದ ಬುಡಕ್ಕೆ ಹೋಗಲು ಸಾಧ್ಯ. ನೀರಿನ ರಭಸಕ್ಕೆ ವಿರುದ್ಧ ೫-೬ ಜನರನ್ನು ಕೂಡಿಸಿಕೊಂಡು ತೆಪ್ಪ ನಡೆಸುವನ ಚಾಕ-ಚಕ್ಯತೆ ಮೆಚ್ಚುವಂತದ್ದು.



ಗಂಟೆಗಳ ಕಾಲ ಜಲಧಾರೆಯನ್ನು ನೋಡಿ, ನಮ್ಮನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದ ತೆಪ್ಪದವನಿಗೆ ಧನ್ಯವಾದ ತಿಳಿಸಿ ನಾವು ವಾಪಸು ಹೊರಟೆವು.

ಅತಿ ಕಡಿಮೆ ಸಮಯದಲ್ಲಿ, ಆಯಾಸವಿಲ್ಲದೆ ಸುಂದರ ದಿನವನ್ನು ಕಳೆದ ನೆನಪಿನೊಂದಿಗೆ ಹೊಸೂರು ಹೆದ್ದಾರಿಯ ವಾಹನಗಳ ನಡುವೆ ನಾವೂ ತೂರಿಕೊಂಡೆವು.

12 comments:

Mahesh said...

ಅದ್ಭುತವಾದ ಲೋಕಕ್ಕೆ ಎಳೆದೊಯ್ದಿದ್ದಿರಿ. ತುಂಬಾ ಸುಂದರವಾದ ಅಷ್ಟೇ ಭಯಾನಕವಾದ ಸ್ಥಳ

ದೀಪಸ್ಮಿತಾ said...

ಸುಂದರ ಜಲಪಾತ ಇದು. ಒಳ್ಳೆ ಫೋಟೋಗಳು. ಆದರೆ ಪರಿಸರವನ್ನು ಸ್ವಚ್ಛವಾಗಿಟ್ಟಿಲ್ಲ ಎಂದು ನೀವು ಬರೆದಿದ್ದು ಸರಿ

Ambika said...

Superr!! Photos tumba tumba chennagive :)

ಮನಮುಕ್ತಾ said...

wow!! Beautiful photos..!!

Sumana said...

ತುಂಬಾ ಚೆನ್ನಾಗಿದೆ ನಿಮ್ಮ ಅನುಭವದ ಚಿತ್ರಣ. ನಮಗೂ ಈ ಜಾಗವನ್ನು ಈಗಲೇ ನೋಡಬೇಕೆನ್ನುವಂತಿದೆ ನಿಮ್ಮ ಫೋಟೋಸ್!!

ವಾಣಿಶ್ರೀ ಭಟ್ said...

nanangu hoguva aseyaaguttidde...

ಪಾಚು-ಪ್ರಪಂಚ said...

ಮಹೇಶ್,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

-ಪ್ರಶಾಂತ್

ಪಾಚು-ಪ್ರಪಂಚ said...

ದೀಪಸ್ಮಿತ,

ಫೋಟೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು, ಈ ಪ್ರದೇಶದಲ್ಲಿ ಪ್ರವಾಸಿಗರು ಹಾಗು ಭಕ್ತರು ಎಲ್ಲಾ ಕಾಲದಲ್ಲಿಯೂ ಇರುತ್ತಾರೆ, ಸಂಬಂಧ ಪಟ್ಟ ಇಲಾಖೆ ಸ್ವಚ್ಛತೆಗೆ ಇನ್ನು ಹೆಚ್ಚಿನ ಗಮನ ಕೊಡಬೇಕಿದೆ. ಗಡಿಭಾಗ ಕೂಡ ಒಂದು ಕಾರಣ ಇದ್ದೀತು.

ಪಾಚು-ಪ್ರಪಂಚ said...

ಕವಿತಾ,

ನಿಮ್ಮ ಮೆಚ್ಚುಗೆಯ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು.

ಪಾಚು-ಪ್ರಪಂಚ said...

ಮನಮುಕ್ತ,

ನಿಮ್ಮ ಮುಕ್ತ ಅಭಿಪ್ರಾಯಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ.

ಪಾಚು-ಪ್ರಪಂಚ said...

ಸುಮನ,

ಬೆಂಗಳೂರಿಗೆ ತುಂಬಾ ಹತ್ತಿರದ ಒಂದು ದಿನ ಪ್ರವಾಸಕ್ಕೆ ಯೋಗ್ಯ ಸ್ಥಳ, ನೀವು ಹೋಗಿ ಬನ್ನಿ.
ಥ್ಯಾಂಕ್ ಯು.

ಪಾಚು-ಪ್ರಪಂಚ said...

ವಾಣಿಶ್ರೀ ಭಟ್,

ಪಾಚುಪ್ರಪಂಚಕ್ಕೆ ಸ್ವಾಗತ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.